ಸೋಮವಾರ, ಡಿಸೆಂಬರ್ 16, 2019
18 °C

ಪ್ರೀತಿಗೆ ಭಾರತವೇ ಅಚ್ಚುಮೆಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರೀತಿಗೆ ಭಾರತವೇ ಅಚ್ಚುಮೆಚ್ಚು

ಅನುಪಮಾ ರಾಮಕೃಷ್ಣನ್

ಗುಳಿ ಕೆನ್ನೆಯ ಚೆಲುವೆ ಪ್ರೀತಿ ಜಿಂಟಾ ನೆನಪಿರಬೇಕಲ್ಲ. ನಟನೆಯ ಜತೆಗೆ ಕ್ರಿಕೆಟ್‌ ನಂಟನ್ನೂ ಹೊಂದಿರುವ ಈ ಚೆಲುವೆ ಈಗ ಮಹಿಳಾ ಸುರಕ್ಷತೆಯ ಕುರಿತು ಹೆಚ್ಚಿನ ಆಸ್ಥೆ ವಹಿಸುತ್ತಿದ್ದಾರೆ. ಸೌಂದರ್ಯದ ಜತೆಗೆ ಬುದ್ಧಿವಂತೆಯೂ ಆಗಿರುವ ಪ್ರೀತಿ, ತಮ್ಮ ಉದ್ಯಮಶೀಲತೆ ಮತ್ತು ಜಿಎಸ್‌ಟಿ ಬಗ್ಗೆಯೂ ಇಲ್ಲಿ ಮಾತನಾಡಿದ್ದಾರೆ.

* ನಿಮ್ಮೊಳಗಿನ ವಾಣಿಜ್ಯೋದ್ಯಮಿ ಬಗ್ಗೆ ಹೇಳಿ?

‘ದಿಲ್‌ ಸೇ’ ಸಿನಿಮಾಕ್ಕಾಗಿ ಪ್ರಶಸ್ತಿ ಪಡೆದಾಗ ಪತ್ರಕರ್ತರು ನನ್ನನ್ನು ಸಂದರ್ಶನ ಮಾಡಿದರು, ಹತ್ತು ವರ್ಷಗಳ ನಂತರ ಏನಾಗಬೇಕೆಂದು ಬಯಸುವಿರಿ ಎಂದು ಕೇಳಿದ್ದರು. ಆಗಲೇ ನಾನು ವಾಣಿಜ್ಯೋದ್ಯಮಿಯಾಗಿರುತ್ತೇನೆ ಎಂದು ಉತ್ತರಿಸಿದ್ದೆ. ನನಗೆ ಮೊದಲಿನಿಂದಲೂ ಉದ್ಯಮಿ ಆಗಬೇಕೆಂಬ ಬಯಕೆ ಇತ್ತು. ನಿಜ ಹೇಳಬೇಕೆಂದರೆ ನಟನಾ ಕ್ಷೇತ್ರಕ್ಕೆ ಬರುವ ಇರಾದೆಯೇ ನನಗಿರಲಿಲ್ಲ. ನಾನು ಕ್ರಿಮಿನಲ್ ಸೈಕಾಲಜಿ ವಿಷಯ ಓದುತ್ತಿದ್ದೆ. ನಟನೆಗೆ ಬಂದದ್ದು ಆಕಸ್ಮಿಕ. ಆದರೆ, ನಾನು ನನ್ನ ವೃತ್ತಿಯನ್ನು ಪ್ರೀತಿಸುತ್ತೇನೆ. ನಾನು ಏನೆಂಬುದನ್ನು ಈ ವೃತ್ತಿಯಲ್ಲಿ ಕಂಡುಕೊಂಡಿದ್ದೇನೆ. ನನ್ನ ವ್ಯಕ್ತಿತ್ವದಲ್ಲಿ ನಟನೆಯಷ್ಟೇ ಅಲ್ಲ ಹಲವು ಮಜಲುಗಳಿವೆ.

* ಈ ವರ್ಷ ಪೂರ್ತಿ ನೀವು ಬ್ಯುಸಿನಾ?

ಹೌದು. ಇಡೀ ವರ್ಷ ನಾನು ಬ್ಯುಸಿಯಾಗಿರುವೆ. ಸದ್ಯಕ್ಕೆ ನನ್ನ 'ಭೈಯ್ಯಾಜಿ ಸೂಪರ್ ಹಿಟ್’ ಸಿನಿಮಾ ತೆರೆ ಕಾಣಲಿದೆ. ಆದಾದ ಮೇಲೆ ಮಹಿಳೆಯರ ಸುರಕ್ಷತೆಯ ಕುರಿತ ಯೋಜನೆಯೊಂದರಲ್ಲಿ ಸಕ್ರಿಯಳಾಗುವೆ. ಇದರ ಬಗ್ಗೆಯಂತೂ ನನಗೆ ಅಪಾರ ಹುಮ್ಮಸ್ಸು ಇದೆ. 

* ಈ ಯೋಜನೆಗೆ ಏನು ಪ್ರೇರಣೆ?

ನನ್ನ ವೃತ್ತಿಯ ಭಾಗವಾಗಿ ನಾನು ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡಬೇಕೆಂದುಕೊಂಡಿರುವೆ. ಹಾಗಾಗಿ, ಇಂಥ ಯೋಜನೆಯೊಂದನ್ನು ಮಾಡುವ ಚಿಂತನೆ ಮೂಡಿತು. 

* ನೀವು ಏನನ್ನು ಬದಲಾಯಿಸಲು ಬಯಸುವಿರಿ?

ನಿಮ್ಮ ಸುತ್ತಮುತ್ತಲಿನವರನ್ನು ಗಮನಿಸಿದರೆ, ಪ್ರತಿಯೊಬ್ಬರೂ ಬದಲಾವಣೆ ಮಾಡಲು ಬಯಸುವುದನ್ನು ನೋಡುತ್ತೀರಿ. ಆದರೆ, ಹೇಗೆ ಬದಲಾವಣೆ ಮಾಡಬೇಕೆಂದು ತಿಳಿದಿರುವುದಿಲ್ಲ. ನನಗೂ ಇದೇ ಪ್ರಶ್ನೆ ಎದುರಾಯಿತು. ಬದಲಾವಣೆ ಮಾಡಬೇಕು ನಿಜ. ಆದರೆ, ಹೇಗೆ ಬದಲಾಯಿಸಬೇಕು ಎಂಬುದನ್ನು ಅರಿತುಕೊಳ್ಳಲೇ ಐದು ವರ್ಷ ಹಿಡಿಯಿತು. ಆಗ ಹೊಳೆದದ್ದೇ ಮಹಿಳಾ ಸುರಕ್ಷತಾ ಯೋಜನೆ.

ಪ್ರತಿ ಮಹಿಳೆಯೂ ತನ್ನ ಕನಸುಗಳೊಂದಿಗೆ ಸ್ವಚ್ಛಂದವಾಗಿ ಬದುಕುವ ಇಚ್ಛೆ ಹೊಂದಿರುತ್ತಾಳೆ. ಮಹಿಳೆ ಯಾವಾಗಲೂ ಪುರುಷನೇ ನನ್ನನ್ನು ರಕ್ಷಿಸಬೇಕೆಂದು ಬಯಸುತ್ತಾಳೆ. ಆದರೆ, ಈಗ ಕಾಲ ಬದಲಾಗಿದೆ. ಮಹಿಳೆ ತನ್ನನ್ನು ತಾನೇ ರಕ್ಷಿಸಿಕೊಳ್ಳುವ ಕಾಲವಿದು. 

* ನೀವು ಒಂದು ಹಳ್ಳಿಯನ್ನು ದತ್ತು ತೆಗೆದುಕೊಂಡಿದ್ದೀರಿ...

ಹೌದು. ನಾನೊಂದು ಹಳ್ಳಿಯನ್ನು ದತ್ತು ಪಡೆದಿದ್ದೇನೆ. ನಮ್ಮ ತಂಡ ಆ ಹಳ್ಳಿಯಲ್ಲಿ ಒಂದು ಬಾವಿ ತೆಗೆದಿದೆ. ಅಷ್ಟೇ ಅಲ್ಲ ಅಲ್ಲೊಂದು ಅಣೆಕಟ್ಟೆಯನ್ನೂ ನಿರ್ಮಿಸಿದೆ. ನಿಜ ಹೇಳಬೇಕೆಂದರೆ ಇದು ನಾನು ಮಾಡುತ್ತಿರುವ ಸಣ್ಣ ಕೆಲಸ. 

* ನೀವು ಜಿಎಸ್‌ಟಿ ಪರವೋ, ವಿರೋಧವೋ?

ಜಿಎಸ್‌ಟಿ ಒಳ್ಳೆಯದೇ. ಮುಂದೆ ಇದರ ಪರಿಣಾಮವನ್ನು ಎಲ್ಲರೂ ಮನಗಾಣುತ್ತಾರೆ. ಆದರೆ, ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ಹೆಚ್ಚಿನ ಜಿಎಸ್‌ಟಿ ವಿಧಿಸಿರುವುದು ಬೇಸರದ ಸಂಗತಿ.* ನೀವೀಗ ಮದುವೆಯಾಗಿದ್ದೀರಿ. ಮುಂಬೈ ಮತ್ತು ಲಂಡನ್ ನಡುವೆ ಆಗಾಗ ಓಡಾಟ ಇದ್ದೇ ಇರುತ್ತೆ. ಭಾರತವನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಿ ಅನಿಸುತ್ತಾ?

ನಿಜ ಹೇಳಬೇಕೆಂದರೆ, ಮದುವೆಯಾದ ಮೇಲೆ ನಾನು ಲಂಡನ್‌ಗಿಂತ ಇಲ್ಲೇ ಹೆಚ್ಚು ವಾಸವಾಗಿದ್ದೇನೆ. ನಾನು ಭಾರತ ಬಿಟ್ಟುಹೋಗಲ್ಲ. ನಿಜ ಹೇಳಬೇಕೆಂದರೆ ನನ್ನ ಗಂಡನೂ ಇಲ್ಲಿಯೇ ಹೆಚ್ಚು ಸಮಯ ಕಳೆಯುವಂತೆ ಮಾಡಿದ್ದೇನೆ ಗೊತ್ತಾ?

ಪ್ರತಿಕ್ರಿಯಿಸಿ (+)