ಬುಧವಾರ, ಡಿಸೆಂಬರ್ 11, 2019
25 °C

ಮಹಾರಾಷ್ಟ್ರದಲ್ಲಿ ಕೆಲಸಕ್ಕೆ ಸೇರಿದ್ದ ಜುನೈದ್ ಖಾನ್ ಕೊಲೆ ಆರೋಪಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮಹಾರಾಷ್ಟ್ರದಲ್ಲಿ ಕೆಲಸಕ್ಕೆ ಸೇರಿದ್ದ ಜುನೈದ್ ಖಾನ್ ಕೊಲೆ ಆರೋಪಿ

ಫರಿದಾಬಾದ್: ಈದ್ ಹಬ್ಬದ ಸಂದರ್ಭದಲ್ಲಿ ಶಾಪಿಂಗ್ ಮುಗಿಸಿ ರೈಲಿನಲ್ಲಿ ಮನೆಗೆ ಮರಳುತ್ತಿದ್ದ ಜುನೈದ್ ಖಾನ್ ಎಂಬ ಬಾಲಕನನ್ನು ಗೋಮಾಂಸ ಸಾಗಿಸುತ್ತಿದ್ದಾನೆಂದು ಆರೋಪಿಸಿ ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಯನ್ನು ಮಹಾರಾಷ್ಟ್ರದಲ್ಲಿ ಶನಿವಾರ ಬಂಧಿಸಲಾಗಿದೆ. ದೆಹಲಿ–ಹರಿಯಾಣ ಮಾರ್ಗದಲ್ಲಿ ರೈಲಿನಲ್ಲಿ ಜುನೈದ್ ಖಾನ್‌ನನ್ನು ಹತ್ಯೆ ಮಾಡಲಾಗಿತ್ತು.

ಕೃತ್ಯ ಎಸಗಿದ ಬಳಿಕ ಪರಾರಿಯಾಗಿದ್ದ ಆರೋಪಿಯು ಮಥುರಾ ಮತ್ತು ವೃಂದಾವನದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದ. ಬಳಿಕ ಮಹಾರಾಷ್ಟ್ರದಲ್ಲಿರುವ ಸಂಬಂಧಿಕರನ್ನು ಸಂಪರ್ಕಿಸಿದ್ದು, ಅವರ ನರೆವಿನಿಂದ ಧುಲೆ ಎಂಬಲ್ಲಿ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೃತ್ಯ ಎಸಗುವುದಕ್ಕೂ ಮುನ್ನ ಆತ ದೆಹಲಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂದೂ ಪೊಲೀಸರು ತಿಳಿಸಿದ್ದಾರೆ.

ಮರಣದಂಡನೆಗೆ ಆಗ್ರಹ: ಆರೋಪಿಗೆ ಮರಣದಂಡನೆ ವಿಧಿಸಬೇಕು ಎಂದು ಜುನೈದ್ ಖಾನ್ ಕುಟುಂಬದವರು ಆಗ್ರಹಿಸಿದ್ದಾರೆ. ‘ಆರೋಪಿಗೆ ಮರಣದಂಡನೆ ವಿಧಿಸುವಂತೆ ಮತ್ತು ಇನ್ನುಳಿದ ಆರೋಪಿಗಳನ್ನು ಬಂಧಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ. ಇಂಥ ಘಟನೆಗಳು ಪ್ರತಿದಿನ ದೇಶದ ಪ್ರತಿಯೊಂದು ಕಡೆಯಲ್ಲಿ ನಡೆಯುತ್ತಿದೆ. ನಾವು ಭೀತಿಯಿಂದಲೇ ಜೀವನ ಮಾಡುವಂತಾಗಿದೆ’ ಎಂದು ಜುನೈದ್‌ನ ತಂದೆ ಜಲಾಲುದ್ದೀನ್ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)