ಭಾನುವಾರ, ಡಿಸೆಂಬರ್ 8, 2019
24 °C

ಸೀಟಿನ ಆಯ್ಕೆ: ಸಂಯಮವಿರಲಿ

Published:
Updated:
ಸೀಟಿನ ಆಯ್ಕೆ: ಸಂಯಮವಿರಲಿ

ಎಚ್‌.ಕೆ. ಶರತ್

ಎಂಜಿನಿಯರಿಂಗ್ ಓದಬೇಕೆನ್ನುವ ಆಕಾಂಕ್ಷೆ ಹೊಂದಿರುವವರು ಕಾಲೇಜುಗಳಿಗೆ ಪ್ರವೇಶ ಪಡೆಯುವ ಸಿದ್ಧತೆಯಲ್ಲಿದ್ದಾರೆ. ತಮ್ಮ ರ‍್ಯಾಂಕಿಂಗ್‌ಗೆ ಯಾವ್ಯಾವ ಕಾಲೇಜಿನಲ್ಲಿ ಯಾವ್ಯಾವ ಬ್ರ್ಯಾಂಚ್‌ ಸಿಗಬಹುದೆನ್ನುವ ಲೆಕ್ಕಾಚಾರವೂ ಹಲವರ ಮನಸ್ಸಿನಲ್ಲಿ ನಡೆಯುತ್ತಿರಬಹುದು. ಒಂದು ವೇಳೆ ಬಯಸಿದ ಕಾಲೇಜಿನಲ್ಲಿ ಸೀಟು ಸಿಗದೆ ಹೋದರೆ ಏನು ಮಾಡುವುದು?

ಮ್ಯಾನೇಜ್‌ಮೆಂಟ್ ಸೀಟಿಗೆ ಎಷ್ಟಾಗುತ್ತೆ ಎಂದು ವಿಚಾರಿಸುವುದೆ? ಅಥವಾ ಕೆಇಎ (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ಮೂಲಕ ಜರುಗುವ ಸೀಟು ಹಂಚಿಕೆ ಪ್ರಕ್ರಿಯೆಯ ಎಲ್ಲ ಸುತ್ತು ಮುಗಿಯುವವರೆಗೂ ಕಾಯುವುದೆ? ಹಾಗೆ ಕಾಯುತ್ತ ಕುಳಿತರೆ ನಮಗೆ ಬೇಕಿರುವ ಕಾಲೇಜಿನಲ್ಲಿ ಲಭ್ಯವಿರುವ ಮ್ಯಾನೇಜ್‌ಮೆಂಟ್ ಸೀಟುಗಳು ಖಾಲಿ ಆದರೆ ಏನು ಮಾಡುವುದು? ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರವನ್ನು ಅರಸುತ್ತಿರಬಹುದು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಿಇಟಿ ರ‍್ಯಾಂಕಿಂಗ್‌ಗೆ ಅನುಗುಣವಾಗಿ ಎಂಜಿನಿಯರಿಂಗ್ ಸೀಟು ಹಂಚಿಕೆ ಪ್ರಕ್ರಿಯೆ ನಡೆಸುವ ವೇಳೆ, ಈಗಷ್ಟೇ ಪಿಯು ಮುಗಿಸಿ ವೃತ್ತಿಪರ ಕೋರ್ಸ್‌ಗೆ ಪ್ರವೇಶ ಪಡೆಯುವ ಉತ್ಸಾಹದಲ್ಲಿರುವ ವಿದ್ಯಾರ್ಥಿಗಳು ಮತ್ತವರ ಪೋಷಕರ ಮನಸ್ಸಿನಲ್ಲಿ ಸುಳಿದಾಡುವ ಆತಂಕ ಮತ್ತು ತಳಮಳಕ್ಕೆ ಸೀಟು ಆಯ್ದುಕೊಂಡು ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆಯುವವರೆಗೂ ತೆರೆ ಬೀಳುವುದಿಲ್ಲ. ಈ ವೇಳೆ ಅವರೊಳಗೆ ಒಡಮೂಡುವ ಪ್ರಶ್ನೆಗಳಿಗೆ ಅವರಿವರಿಂದ ಸಿಗುವ ಹಲವು ಉತ್ತರಗಳಲ್ಲಿ ಯಾವುದು ನಂಬಲರ್ಹವೆಂದು ನಿರ್ಧರಿಸುವುದೂ ಸರಳವೇನಲ್ಲ.

ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರದಿಂದಾಗಿ ಇಂದಿಗೂ ಪರಿತಪಿಸುತ್ತಿರುವ ಸ್ನೇಹಿತನ ಉದಾಹರಣೆ ಬಹುಶಃ ಇಂದು ತಮ್ಮೊಳಗೆ ಹತ್ತಾರು ಪ್ರಶ್ನೆಗಳನ್ನಿಟ್ಟುಕೊಂಡು ಉತ್ತರ ಅರಸುತ್ತಿರುವ ವಿದ್ಯಾರ್ಥಿಗಳು ಹಾಗು ಪೋಷಕರಿಗೆ ಕಾದು ನೋಡುವ ತಾಳ್ಮೆ ಇರಲಿ ಎಂಬ ಪಾಠ ಬೋಧಿಸುವಂತಿದೆ.

ಹತ್ತು ವರ್ಷಗಳ ಹಿಂದೆ ಸಿಇಟಿಯಲ್ಲಿ 26 ಸಾವಿರದ ಆಸುಪಾಸಿನ ರ‍್ಯಾಂಕ್ ಪಡೆದಿದ್ದ ಸ್ನೇಹಿತ ಮತ್ತವನ ಪೋಷಕರು, ಈ ರ್‍ಯಾಂಕಿಂಗ್‌ಗೆ ಎಂಜಿನಿಯರಿಂಗ್ ಸೀಟು ಸಿಗಲಾರದೆಂದು ಭಾವಿಸಿ ಸಂಬಂಧಿಯೊಬ್ಬರ ಸಲಹೆ ಮೇರೆಗೆ ಖಾಸಗಿ ಕಾಲೇಜಿನಲ್ಲಿ ಮ್ಯಾನೇಜ್‌ಮೆಂಟ್ ಕೋಟಾ ಸೀಟು ಪಡೆದರು. ತಮ್ಮ ಬಳಿ ಹಣವಿರದ ಕಾರಣ ಬ್ಯಾಂಕಿನಲ್ಲಿ ಎರಡೂವರೆ ಲಕ್ಷ ರೂಪಾಯಿ ಶಿಕ್ಷಣ ಸಾಲ ಪಡೆದು ಕಾಲೇಜಿಗೆ ಹಣ ಪಾವತಿಸಿದರು. ಕಾಲೇಜು ಪ್ರಾರಂಭವಾದ ನಂತರ, ತನಗಿಂತ ಕೆಳಗಿನ ರ‍್ಯಾಂಕ್‌ ಪಡೆದವರೆಲ್ಲ ಸರ್ಕಾರಿ ಕೋಟಾದಡಿ ಸೀಟು ದಕ್ಕಿಸಿಕೊಂಡಿರುವುದು ತಿಳಿದು ನೊಂದುಕೊಳ್ಳುವ ಪರಿಸ್ಥಿತಿ ಎದುರಾಯಿತು.

ಬಂಧಿಯ ಮಾತು ಕೇಳದೆ, ತಾನು ಕೂಡ ಕೊನೆಯ ಸುತ್ತಿನವರೆಗೂ ಕೌನ್ಸಿಲಿಂಗ್‌ನಲ್ಲಿ ಪಾಲ್ಗೊಂಡಿದ್ದರೆ ಸರ್ಕಾರಿ ಕೋಟಾದಡಿ ಇದೇ ಕಾಲೇಜಿನಲ್ಲಿ ಸೀಟು ದಕ್ಕಿಸಿಕೊಳ್ಳಬಹುದಿತ್ತು ಎಂಬುದು ಮನದಟ್ಟಾಯಿತು. ಆಗಿರುವ ಎಡವಟ್ಟು ಸರಿಪಡಿಸಲಾಗದು ಎಂದುಕೊಂಡು, ಬಿ.ಇ. ಓದು ಮುಗಿಸಿದವನಿಗೆ ಆನಂತರವೂ ಸಂಬಳದ ರೂಪದಲ್ಲಿ ಅಗತ್ಯವಿರುವಷ್ಟು ಹಣ ಸಿಗುವ ಕೆಲಸ ದೊರೆಯದ ಕಾರಣ, ಶಿಕ್ಷಣದ ಸಾಲ ತೀರಿಸುವುದು ದುಸ್ತರವಾಗಿ ಬಡ್ಡಿ ಮೇಲೆ ಬಡ್ಡಿ ಬೆಳೆದು ಈಗಲೂ ತನ್ನ ದುಡಿಮೆಯ ಬಹುಪಾಲು ಹಣವನ್ನು ಸಾಲದ ಕಂತನ್ನು ಕಟ್ಟಲು ವಿನಿಯೋಗಿಸುತ್ತಿದ್ದಾನೆ. ಅಂದು ಸಂಬಂಧಿಯೊಬ್ಬರ ಮಾತಿಗೆ ಓಗೊಡ

ದಿದ್ದರೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಇಂದಿಗೂ ನಲುಗುವುದು ತಪ್ಪುತ್ತಿತ್ತೆಂದು ವಿಷಾದಿಸುತ್ತಾನೆ.

ಇದು ಇವನೊಬ್ಬನದೇ ಅಳಲಲ್ಲ. ಹೀಗೆ ದಾರಿ ತಪ್ಪಿಸುವವರ ಮಾರ್ಗದರ್ಶನ ಪಡೆದು, ಆನಂತರ ತಮ್ಮದು ವಿವೇಚನಾರಹಿತ ಆಯ್ಕೆ ಎಂಬುದು ಅರಿವಾಗಿ ಅತ್ತ ಇಟ್ಟ ಹೆಜ್ಜೆ ಹಿಂದಿಡಲಾಗದೆ ನೊಂದುಕೊಳ್ಳುವವರ ಪಟ್ಟಿಗೆ ಪ್ರತಿ ವರ್ಷವೂ ಮತ್ತೊಂದಿಷ್ಟು ಹೆಸರುಗಳ ಸೇರ್ಪಡೆಯಾಗುತ್ತದೆ.

ಮೂರು–ನಾಲ್ಕು ಸುತ್ತುಗಳಲ್ಲಿ ನಡೆಯುವ ಸೀಟು ಆಯ್ಕೆ ಪ್ರಕ್ರಿಯೆಯ ಮೊದಲ ರೌಂಡಿನಲ್ಲಿ ತಾವು ಬಯಸಿದ ಕಾಲೇಜಿನಲ್ಲಿ ಸೀಟು ಸಿಗದೆ ಹೋದರೆ ಆತಂಕಕ್ಕೆ ಒಳಗಾಗುವ ಎಷ್ಟೋ ಪೋಷಕರು ಹಾಗೂ ವಿದ್ಯಾರ್ಥಿಗಳು, ಕೊನೆಯ ಸುತ್ತಿನವರೆಗೂ ಕಾದು ನೋಡುವ ತಾಳ್ಮೆ ಕಳೆದುಕೊಂಡು ದುಬಾರಿ ಮೊತ್ತ ಬೇಡುವ ಮ್ಯಾನೇಜ್‌ಮೆಂಟ್ ಸೀಟುಗಳನ್ನು ಪಡೆಯಲು ಅಣಿಯಾಗಿ ಬಿಡುತ್ತಾರೆ.

ಮ್ಯಾನೇಜ್‌ಮೆಂಟ್ ಕೋಟಾದಡಿ ಲಭ್ಯವಿರುವ ಸೀಟುಗಳನ್ನು ಹಂಚಲು ಬೇಡಿಕೆ ಮತ್ತು ಲಭ್ಯತೆಯ ಮಾನದಂಡ ಅನುಸರಿಸುವ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತ ಮಂಡಳಿ, ತಮ್ಮ ಬಳಿ ಸಾಕಷ್ಟು ಸಂಖ್ಯೆಯ ಸೀಟುಗಳಿದ್ದರೂ ತುಂಬಾ ಡಿಮ್ಯಾಂಡ್ ಇದೆ. ಉಳಿದಿರುವುದು ಬೆರಳೆಣಿಕೆಯಷ್ಟು ಸೀಟುಗಳು ಮಾತ್ರವೆಂದು ತಿಳಿಸಿ, ಅದನ್ನೇ ಸತ್ಯವೆಂದು ಬಿಂಬಿಸಿ ಹೆಚ್ಚು ಡೊನೇಷನ್ ಪಡೆಯಲು ಮುಂದಾಗುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ. ಮ್ಯಾನೇಜ್‌ಮೆಂಟ್ ಸೀಟು ಕೊಡಿಸುವ ಮಧ್ಯವರ್ತಿಗಳನ್ನು ಮಾರ್ಗದರ್ಶಕರಾಗಿ ಸ್ವೀಕರಿಸಿ ಅವರು ಹೇಳುವುದೆಲ್ಲ ಸತ್ಯವೆಂದು ಭಾವಿಸುವುದು ತಪ್ಪು ನಿರ್ಧಾರಗಳಿಗೆ ದಾರಿಯಾಗಬಹುದಾದ ಸಾಧ್ಯತೆ ಇರುತ್ತದೆ.

ಕಾಲೇಜು ಮತ್ತು ಕೋರ್ಸುವಾರು ಲಭ್ಯವಾಗುವ ಹಿಂದಿನ ವರ್ಷಗಳ ‘cut off ರ‍್ಯಾಂಕ್‌’, ಪ್ರಸ್ತುತ ಎಂಜಿನಿಯರಿಂಗ್ ಶಿಕ್ಷಣದೆಡೆಗೆ ಇರುವ ಒಲವು ಮತ್ತು ಬೇಡಿಕೆಯ ಪ್ರಮಾಣ, ಸರ್ಕಾರಿ ಕೋಟಾದಡಿ ಲಭ್ಯವಿರುವ ಸೀಟುಗಳ ಸಂಖ್ಯೆ – ಹೀಗೆ ಎಲ್ಲ ಅಂಶಗಳನ್ನೂ ಪರಿಶೀಲಿಸಿ ಮುಂದಿನ ಆಯ್ಕೆಯನ್ನು ನಿರ್ಧರಿಸುವುದು ಸಮಯೋಚಿತ. ಕೆಇಎ ನಡೆಸುವ ಸೀಟು ಆಯ್ಕೆ ಪ್ರಕ್ರಿಯೆಯ ಅಂತಿಮ ಸುತ್ತಿನವರೆಗೂ ಕಾದು ನೋಡುವುದು ಸೂಕ್ತ.

ಪ್ರತಿಕ್ರಿಯಿಸಿ (+)