ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಗೆ ಅಚ್ಚುಮೆಚ್ಚು ನೀವೇ ಅಲ್ಲವೇ?

Last Updated 9 ಜುಲೈ 2017, 19:30 IST
ಅಕ್ಷರ ಗಾತ್ರ

ನಮ್ಮ ಸಮಾಜದಲ್ಲಿ ತಂದೆ, ತಾಯಿಯ ನಂತರದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಲಾಗುತ್ತದೆ. ತಂದೆ–ತಾಯಿ–ಮಕ್ಕಳ ಮಧ್ಯದ ಸಂಬಂಧದ ನಂತರ ಅತಿ ಹೆಚ್ಚು ಗೌರವ ಇರುವುದು ಗುರು-ಶಿಷ್ಯ ಸಂಬಂಧಕ್ಕೇ...

ಮಕ್ಕಳೆ, ನೀವು ಶಾಲೆಯಲ್ಲಿ ಕಳೆಯುವ ಸಮಯವು ಜೀವನದಲ್ಲಿ ಅತ್ಯಮೂಲ್ಯವಾದುದು. ಆ ಅವಧಿ ನಿಮ್ಮ ಶೈಕ್ಷಣಿಕ, ಮಾನಸಿಕ ಹಾಗೂ ಸಾಮಾಜಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಿಮ್ಮ ಒಟ್ಟಾರೆ ವ್ಯಕ್ತಿತ್ವವನ್ನು ನಿಮ್ಮ ಶಾಲಾಜೀವನವೇ ನಿರ್ಧರಿಸುತ್ತದೆ. ಈ ಅವಧಿಯಲ್ಲಿ, ವರ್ಷದಲ್ಲಿ ಸುಮಾರು ಹತ್ತು ತಿಂಗಳ ಕಾಲ ಪ್ರತಿ ನಿತ್ಯ ಐದರಿಂದ ಏಳು ಘಂಟೆಗಳ ಕಾಲ ನೀವು ನಿಮ್ಮ ಶಿಕ್ಷಕರ ಸಂಪರ್ಕದಲ್ಲಿರುತ್ತೀರಿ ಅಲ್ಲವೇ? ಶಾಲಾ ಅವಧಿಯಲ್ಲಿ ಶಿಕ್ಷಕರೇ ನಿಮ್ಮ ಪೋಷಕರು.

ಈ ಒಂದು ಸಂದರ್ಭವನ್ನು ಸದುಪಯೋಗಪಡಿಸಿಕೊಂಡು ಶಿಕ್ಷಕರ ಅನುಭವ, ಸಾಮರ್ಥ್ಯಗಳ ನೆರವಿನಿಂದ ಭವಿಷ್ಯವನ್ನು ರೂಪಿಸಿಕೊಳ್ಳುವ ಸದವಕಾಶ ನಿಮ್ಮ ಕೈಯಲ್ಲೇ ಇದೆ. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ. ವಿದ್ಯಾರ್ಥಿಜೀವನದಲ್ಲಿ ನಿಮಗೆ ವಿವಿಧ ವಿಷಯಗಳನ್ನು ಬೋಧಿಸುವ ಶಿಕ್ಷಕರ ಜೊತೆಗೆ ಆತ್ಮೀಯವಾದ ಸಂಬಂಧವನ್ನು ಬೆಳೆಸಿಕೊಳ್ಳುವುದು. ನೀವು ಯಾವುದೇ ಶಿಕ್ಷಕರನ್ನು ಕೇಳಿ ನೋಡಿ, ಅವರು ಬೋಧಿಸುವ ಪ್ರತಿ ತರಗತಿಯಲ್ಲಿ ಅವರಿಗೆ ಅಚ್ಚುಮೆಚ್ಚಿನ ವಿದ್ಯಾರ್ಥಿ ಕನಿಷ್ಠ ಒಬ್ಬರಾದರೂ ಇರುತ್ತಾರೆ. ಅದು ನೀವೇ ಯಾಕಾಗಬಾರದು?

ಒಂದು ವಿಷಯವನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಯಾವುದೇ ಹಂತದಲ್ಲಿ ನಿಮಗೆ ಬೋಧಿಸುವ ಶಿಕ್ಷಕರು ಸದಾ ನಿಮ್ಮ ಒಳಿತನ್ನೇ ಬಯಸುತ್ತಿರುತ್ತಾರೆ. ನಿಮ್ಮ ಅಭಿವೃದ್ಧಿಯೇ ಅವರ ಮುಖ್ಯ ಗುರಿಯಾಗಿರುತ್ತದೆ. ಈ ಒಂದು ಮನೋಭಾವ ಇರುವವರೇ ಸಾಮಾನ್ಯವಾಗಿ ಶಿಕ್ಷಕವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಬೇರೆ ಬೇರೆ ವೃತ್ತಿಯಲ್ಲಿ ಇರುವವರೂ ಶಿಕ್ಷಕವೃತ್ತಿಯನ್ನು ಬಹುವಾಗಿ ಇಷ್ಟಪಡುತ್ತಾರೆ. ನಮ್ಮ ಹಿಂದಿನ ರಾಷ್ಟ್ರಪತಿಗಳಾಗಿದ್ದ  ಅಬ್ದುಲ್ ಕಲಾಂ ಬಗ್ಗೆ ನೀವು ಕೇಳಿದ್ದೀರಿ. ವಿಜ್ಞಾನಿಯಾಗಿದ್ದಾಗಲೂ ಅವರು ಮಕ್ಕಳಿಗೆ ಪಾಠ ಮಾಡಲು ಇಷ್ಟಪಡುತ್ತಿದ್ದರು. ರಾಷ್ಟ್ರಪತಿ ಹುದ್ದೆಯಿಂದ ನಿವೃತ್ತರಾದ ಮೇಲೂ ಅವರು ಶಾಲೆಗಳಿಗೆ ಪಾಠ ಮಾಡಲು ಹೋಗುತ್ತಿದ್ದರು. ಅವರೊಬ್ಬ ವಿಜ್ಞಾನಿ, ರಾಷ್ಟ್ರಪತಿ ಎನ್ನುವುದಕ್ಕಿಂತ ‘ಕಲಾಂ ಮೇಷ್ಟ್ರು’ ಎಂದೇ ಹೆಚ್ಚು ಜನಪ್ರಿಯರಾಗಿದ್ದರು. ಹೀಗೆ, ಮಕ್ಕಳೊಡನೆ ಆತ್ಮೀಯವಾಗಿ ಬೆರೆಯುವುದೇ ಶಿಕ್ಷಕವೃತ್ತಿಯ ಪ್ರಮುಖ ಗುಣಲಕ್ಷಣ.

ನಿಮ್ಮ ಹಾಗೂ ನಿಮ್ಮ ಶಿಕ್ಷಕರ ಮಧ್ಯೆ ಉತ್ತಮ ಬಾಂಧವ್ಯ ಬೆಳೆಯುವುದು ಹೇಗೆ?
ವಿದ್ಯಾರ್ಥಿ ಹಾಗೂ ಶಿಕ್ಷಕರ ಮಧ್ಯೆ ಉತ್ತಮ ಬಾಂಧವ್ಯ ಬೆಳೆಯಲು ಪ್ರಮುಖವಾದುದು ಪರಸ್ಪರ ಸಂವಹನ. ನಿಮ್ಮ ಮತ್ತು ನಿಮ್ಮ ಶಿಕ್ಷಕರ ಮಧ್ಯೆ ತರಗತಿಯಲ್ಲಿ ನಡೆಯುವ ಪ್ರಶ್ನೋತ್ತರ ಹಾಗೂ ವಿಚಾರ ವಿನಿಮಯ ಇದಕ್ಕೆ ಸೂಕ್ತ ತಳಹದಿಯನ್ನು ಒದಗಿಸುತ್ತದೆ. ತರಗತಿಯಲ್ಲಿನ ಕಲಿಕಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ನೀವು ಪಾಲ್ಗೊಳ್ಳುವುದರಿಂದ ಇದು ಪ್ರಾರಂಭವಾಗುತ್ತದೆ. ತರಗತಿಯಲ್ಲಿ ಕಲಿಕೆಗೆ ಒಂದು ಉತ್ತಮ ವಾತಾವರಣವನ್ನು ನಿರ್ಮಿಸಿಕೊಡುತ್ತದೆ. ಶಿಕ್ಷಕರು ಬೋಧಿಸುತ್ತಿರುವ ವಿಷಯವನ್ನು ಕಿವಿಗೊಟ್ಟು ಕೇಳಿ.

ಅವರ ತಲ್ಲೀನತೆಗಾಗಲೀ, ಏಕಾಗ್ರತೆಗಾಗಲೀ ಭಂಗ ತರಬೇಡಿ. ತರಗತಿಯಲ್ಲಿ ಶಿಸ್ತಿಗೆ ಪ್ರಾಮುಖ್ಯವನ್ನು ನೀಡಿ. ಶಿಕ್ಷಕರೊಂದಿಗಿನ ನಿಮ್ಮ ವರ್ತನೆ ಇಡೀ ತರಗತಿಗೆ ಮಾದರಿಯಾಗುವಂತಿರಲಿ. ಶಿಕ್ಷಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ. ತಪ್ಪಾದರೂ ಪರವಾಗಿಲ್ಲ, ತಿದ್ದುತ್ತಾರೆ. ಹಾಗೆಯೇ ವಿಷಯದ ಬಗ್ಗೆ ನಿಮ್ಮ ಸಂದೇಹಗಳನ್ನೂ ಕೇಳಿ ಪರಿಹರಿಸಿಕೊಳ್ಳಿ.

ಈ ವಿಷಯದಲ್ಲಿ ನಿಮ್ಮಲ್ಲಿ ಹಿಂಜರಿಕೆಯಾಗಲೀ, ಕೀಳರಿಮೆಯಾಗಲೀ ಬೇಡ. ಯಾವುದೇ ವಿಷಯದ ಬಗ್ಗೆ ನಿಮ್ಮ ಆಸಕ್ತಿ, ಕುತೂಹಲವನ್ನಾಗಲೀ, ನಿಮ್ಮ ಸಂದೇಹವನ್ನಾಗಲೀ ಅದುಮಿಟ್ಟುಕೊಳ್ಳಬೇಡಿ. ತರಗತಿಯಲ್ಲಿ ಪ್ರಶ್ನೆ ಕೇಳಲು ಮುಜುಗರವಾದರೆ, ಸಂಬಂಧಿಸಿದ ಶಿಕ್ಷಕರನ್ನು ಅವರ ಕೊಠಡಿಯಲ್ಲಿ ಭೇಟಿ ಮಾಡಿ ಸಂದೇಹಗಳನ್ನು ಬಗೆಹರಿಸಿಕೊಳ್ಳಿ. ಎಲ್ಲ ಸಂದರ್ಭಗಳಲ್ಲಿ ವಿಧೇಯತೆ ಹಾಗೂ ವಿನಯವನ್ನು ರೂಢಿಸಿಕೊಳ್ಳಿ. ನಿಮ್ಮ ಹಾಗೂ ನಿಮ್ಮ ಶಿಕ್ಷಕರ ಮಧ್ಯೆ ಇಂಥ ಸಂವಹನ ಹೆಚ್ಚಾದಷ್ಟೂ ನಿಮ್ಮ ಬಾಂಧವ್ಯ ವೃದ್ಧಿಯಾಗುತ್ತಹೋಗುತ್ತದೆ. ‌

ತರಗತಿಗೆ ಸಂಬಂಧಿಸಿದಂತೆ ಶಿಕ್ಷಕರು ನಿಮಗೆ ನೀಡುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ. ನಿಮ್ಮ ನಾಯಕತ್ವದ ಗುಣಗಳನ್ನು ಅಥವಾ ಸಂಘಟನಾ ಸಾಮರ್ಥ್ಯವನ್ನು ನಿರೂಪಿಸಬಹುದಾದ ಯಾವುದೇ ಅವಕಾಶಗಳನ್ನು ನಿರಾಕರಿಸಬೇಡಿ. ಕ್ಲುಪ್ತಕಾಲದಲ್ಲಿ ನಿಮ್ಮ ಕ್ಲಾಸ್ ವರ್ಕ್ ಅಥವಾ ಹೋಮ್ ವರ್ಕ್‌ಗಳನ್ನು ಶಿಕ್ಷಕರ ಪರಿಶೀಲನೆಗೆ ಸಲ್ಲಿಸಿ. ತರಗತಿಯ ಶುಚಿತ್ವಕ್ಕೆ ಗಮನ ಕೊಡಿ. ಶಿಕ್ಷಕರು ಸೂಚಿಸುವ ಗುಂಪು ಚಟುವಟಿಕೆಗಳಲ್ಲಿ ಭಾಗವಹಿಸಿ. ಶಾಲಾ ಮಟ್ಟದಲ್ಲಿ ಹಾಗೂ ಅಂತರಶಾಲಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಿ. ನಿಮ್ಮ ಇಂಥ ಒಂದೊಂದು ನಡವಳಿಕೆಯೂ ಶಿಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತದೆ. ನಿಮ್ಮ ಹಾಗೂ ಅವರ ಮಧ್ಯೆ ಬಾಂಧವ್ಯ ಹೆಚ್ಚಿಸುವುದಕ್ಕೆ ಕಾರಣವಾಗುತ್ತದೆ.

ನಿಮ್ಮ ಶಿಕ್ಷಕರಲ್ಲಿ ವಿಶ್ವಾಸ ಇಡಿ‌
ನಿಮ್ಮ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಜೊತೆಗೆ ನಿಮ್ಮ ಅಧ್ಯಯನಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಚರ್ಚಿಸಿ. ಅದು ನಿಮ್ಮ ಪಾಠಕ್ಕೆ ಪೂರಕವಾದ ವಿಷಯಗಳಿರಬಹುದು ಅಥವಾ ನೀವು ಪಾಲಿಸುತ್ತಿರುವ ಅಧ್ಯಯನ ವಿಧಾನವಿರಬಹುದು. ನಿಮ್ಮ ಓದುವ ವಿಧಾನದ ಬಗ್ಗೆ ನಿಮಗಿರುವ ಸಂದೇಹ ಮತ್ತು ಆತಂಕಗಳನ್ನು ಅವರೊಡನೆ ಹಂಚಿಕೊಳ್ಳಿ. ಶಾಲೆಯಲ್ಲಿ ನಿಮಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗುತ್ತಿದ್ದರೆ ಅದನ್ನು ನಿಮ್ಮ ನಂಬಿಕೆಯ ಶಿಕ್ಷಕರ ಗಮನಕ್ಕೆ ತನ್ನಿ. ಸೂಕ್ತವಾದ ಪರಿಹಾರಗಳನ್ನು ಅವರಿಂದ ಪಡೆದುಕೊಳ್ಳಿ. ನಿಮ್ಮ ಶೈಕ್ಷಣಿಕ ಪ್ರಗತಿಯ ಬಗ್ಗೆ ಅವರೊಡನೆ ಆಗಾಗ್ಗೆ ಚರ್ಚಿಸಿ. ನಿಮ್ಮ ಶಿಕ್ಷಕರನ್ನು ನಿಮ್ಮ ಆಪ್ತ ಸಮಾಲೋಚಕರೆಂದು ಪರಿಗಣಿಸಿ. ನಿಮ್ಮ ಒಳಿತನ್ನೇ ಸದಾ ಬಯಸುವ ಶಿಕ್ಷಕರು ಖಂಡಿತ ನಿಮಗೆ ನಿರಾಸೆ ಮಾಡುವುದಿಲ್ಲ. ಬದಲಿಗೆ, ನೀವು ಅವರಲ್ಲಿ ಇಟ್ಟಿರುವ ವಿಶ್ವಾಸಕ್ಕೆ ಅವರು ಹೆಮ್ಮೆ ಮತ್ತು ಸಂತೋಷ ಪಡುತ್ತಾರೆ.

ನಿಮ್ಮ ಹಾಗೂ ನಿಮ್ಮ ಶಿಕ್ಷಕರ ಮಧ್ಯೆ ಬೆಳೆಯುವ ಇಂಥ ಬಾಂಧವ್ಯ ಪರಸ್ಪರ ಪೂರಕವಾಗಿರಬೇಕು. ಅದು ಒಂದು ಇತಿಮಿತಿಗೆ ಒಳಪಟ್ಟಿರಬೇಕು. ಈ ಬಾಂಧವ್ಯವು ರಚನಾತ್ಮಕವಾಗಿದ್ದಷ್ಟೂ ಅದು ನಿಮ್ಮ ಮೇಲೆ ಬೀರುವ ಪ್ರಭಾವ ಗಾಢವಾಗುತ್ತ ಹೋಗುತ್ತದೆ. ನಿಮ್ಮ ವಿದ್ಯಾರ್ಥಿಜೀವನದ ಎಲ್ಲ ಕ್ಷೇತ್ರಗಳಲ್ಲಿ ನೀವು ಏಳಿಗೆಯನ್ನು ಸಾಧಿಸುವುದಕ್ಕೆ ನೆರವಾಗುತ್ತದೆ. ಅಷ್ಟೇ ಅಲ್ಲ, ಅಂಥ ಶಿಕ್ಷಕರ ಪ್ರಭಾವ ನಿಮ್ಮ ಮುಂದಿನ ಜೀವನದ ಉದ್ದಕ್ಕೂ ನಿಮಗೆ ಸ್ಫೂರ್ತಿ ಹಾಗೂ ಪ್ರೇರಣಾದಾಯಕವಾಗಿರುತ್ತದೆ. ನಿಮ್ಮ ಮೇಲೆ ಅಂಥ ಪ್ರಭಾವ ಬೀರಿದ ಶಿಕ್ಷಕರನ್ನು ನೀವು ನಿಮ್ಮ ಜೀವನಪರ್ಯಂತ ನೆನಪಿಟ್ಟುಕೊಳ್ಳುತ್ತೀರಿ.

ಶಾಲೆ ಬಿಟ್ಟ ಮೇಲೂ ಸಂಪರ್ಕವಿಟ್ಟುಕೊಳ್ಳಿ 
ನೀವು ಅಧ್ಯಯನದ ಮುಂದಿನ ಹಂತಕ್ಕೆ ಹೋಗಲು ಶಾಲೆ ಬಿಡುವ ಸಂದರ್ಭ ಒದಗಿ ಬರುತ್ತದೆಯಲ್ಲವೆ? ಆಗ ಯಾವುದೇ ಕಾರಣಕ್ಕೆ ನಿಮ್ಮ ಹಿಂದಿನ ಶಿಕ್ಷಕರ ಜೊತೆಗಿನ ಸಂಪರ್ಕವನ್ನು ಕಡಿದುಕೊಳ್ಳಬೇಡಿ. ಅವರೊಂದಿಗಿನ ನಿಮ್ಮ ಬಾಂಧವ್ಯವನ್ನು ಉಳಿಸಿಕೊಳ್ಳಿ. ಕನಿಷ್ಠ ವರ್ಷಕೊಮ್ಮೆಯಾದರೂ ಅವರನ್ನು ಭೇಟಿ ಮಾಡಿ. ನಿಮ್ಮ ಸಾಧನೆಗಳನ್ನು ಅವರೊಡನೆ ಹಂಚಿಕೊಳ್ಳಿ. ಈ ನಿಮ್ಮ ಭೇಟಿ ಅವರಲ್ಲಿ ಉಂಟುಮಾಡುವ ಸಂತಸಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಎಂಬುದನ್ನು ನೀವು ಮನಗಾಣುತ್ತೀರಿ. ಉನ್ನತವಾದ ಸಾಧನೆಯನ್ನು ಮಾಡಿರುವ ತಮ್ಮ ವಿದ್ಯಾರ್ಥಿಗಳ ಬಗ್ಗೆ ಅತ್ಯಂತ ಹೆಮ್ಮೆಯಿಂದ ‘ನನ್ನ ಶಿಷ್ಯ’ ಎಂದು ಎಲ್ಲ ಕಡೆ ಹೇಳಿಕೊಳ್ಳುವವರು ನಿಮ್ಮ ಶಿಕ್ಷಕರೇ!

ಬಾಂಧವ್ಯವೃದ್ಧಿಯಲ್ಲಿ ಶಿಕ್ಷಕರ ಪಾತ್ರ
ನಮ್ಮ ಸಮಾಜದಲ್ಲಿ ತಂದೆ, ತಾಯಿಯರ ನಂತರದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಲಾಗುತ್ತದೆ. ತಂದೆ–ತಾಯಿ–ಮಕ್ಕಳ ಮಧ್ಯದ ಸಂಬಂಧದ ನಂತರ ಅತಿ ಹೆಚ್ಚು ಗೌರವ ಇರುವುದು ಗುರು-ಶಿಷ್ಯ ಸಂಬಂಧಕ್ಕೇ. ಇಂದಿಗೂ ಉಳಿದು ಬಂದಿರುವ ಈ ಸಂಪ್ರದಾಯವನ್ನು ಬೆಳೆಸಿ ಪೋಷಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು.

ತಾವು ಬೋಧಿಸುವ ಪ್ರತಿಯೊಂದು ತರಗತಿಯಲ್ಲಿರುವ ತಮ್ಮ ವಿದ್ಯಾರ್ಥಿಯ ಪರಿಚಯ ಶಿಕ್ಷಕರಿಗೆ ಇರುವುದು ಅವಶ್ಯಕ. ಯಾವುದೇ ವಿದ್ಯಾರ್ಥಿಯನ್ನು ಉದ್ದೇಶಿಸಿ ಮಾತನಾಡಬೇಕಾದರೆ, ಆ ವಿದ್ಯಾರ್ಥಿಯ ಹೆಸರಿನಿಂದ ಕರೆದರೆ ಆತ್ಮೀಯತೆ ಬಹು ಬೇಗ ಬೆಳೆಯುತ್ತದೆ. ಎಲ್ಲ ಮಕ್ಕಳನ್ನು ಸಮಾನದೃಷ್ಟಿಯಿಂದ ನೋಡಬೇಕು. ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಶಿಕ್ಷಕರ ನಡವಳಿಕೆ ತರಗತಿಯ ಎಲ್ಲ ವಿದ್ಯಾರ್ಥಿಗಳ ಜೊತೆ ಒಂದೇ ರೀತಿಯಲ್ಲಿ ಇರುವುದು ಅತ್ಯವಶ್ಯ.

ಶಿಕ್ಷಕರ ನಡವಳಿಕೆಗಳು ಅವರ ವಿದ್ಯಾರ್ಥಿಗಳಿಗೆ ಮಾದರಿಯಾಗುವಂತಿರಬೇಕು. ಶಿಕ್ಷಕರ ಮಾತು, ಕೃತಿಗಳು ಯಾವುದೇ ಋಣಾತ್ಮಕ ಸಂದೇಶಗಳನ್ನು ನೀಡಬಾರದು. ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಬಹು ದೊಡ್ಡದು. ವಿದ್ಯಾರ್ಥಿಗಳೊಂದಿಗೆ ಮಧುರ ಬಾಂಧವ್ಯ ಬೆಳೆಸಿಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳ ಬಗ್ಗೆ ಸಹಾನುಭೂತಿಯೂ ಶಿಕ್ಷಕರಾದವರಿಗೆ ಇರಬೇಕಾಗುತ್ತದೆ.‌‌‌‌‌‌‌

ಮನಶ್ಶಾಸ್ತ್ರದ ಪ್ರಕಾರ, ವಿದ್ಯಾರ್ಥಿಯ ಜೊತೆಗಿನ ಶಿಕ್ಷಕರ ಬಾಂಧವ್ಯ ಅವನ ಮೇಲೆ ಶಿಕ್ಷಕರು ಹಾಕುವ ’ಒತ್ತಡ’ ಹಾಗೂ ಮಾಡುವ ‘ಮೇಲ್ವಿಚಾರಣೆ’ಯನ್ನು ಅವಲಂಬಿಸಿರುತ್ತದೆ. ಒತ್ತಡ ಹೆಚ್ಚಾಗಿ ಮೇಲ್ವಿಚಾರಣೆ ಕಡಿಮೆಯಾದರೆ ವಿದ್ಯಾರ್ಥಿಗೆ ಶಿಕ್ಷಕರ ಮೇಲಿನ ವಿಶ್ವಾಸ ಕುಂದುತ್ತದೆ. ಒತ್ತಡ ಕಡಿಮೆಯಾಗಿ ಮೇಲ್ವಿಚಾರಣೆ  ಹೆಚ್ಚಾದಾಗ ಮಾತ್ರ ವಿದ್ಯಾರ್ಥಿಗೆ ಶಿಕ್ಷಕರ ಮೇಲಿನ ವಿಶ್ವಾಸ ವೃದ್ಧಿಯಾಗುತ್ತದೆ. ಬಾಂಧವ್ಯ ಉತ್ತಮಗೊಳ್ಳುತ್ತದೆ. ಅಂಥ ಒಂದು ವಾತಾವರಣವನ್ನು ತರಗತಿಯಲ್ಲಿ ಶಿಕ್ಷಕರು ನಿರ್ಮಿಸಿಕೊಂಡಲ್ಲಿ ಅವರ ವೃತ್ತಿಜೀವನ ಸುಗಮವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT