ಶನಿವಾರ, ಡಿಸೆಂಬರ್ 14, 2019
22 °C

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮಿಂಚುವ ಆಸೆ

ಜಿ. ಶಿವಕುಮಾರ Updated:

ಅಕ್ಷರ ಗಾತ್ರ : | |

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮಿಂಚುವ ಆಸೆ

ಹೋದ ವಾರ ಭುವನೇಶ್ವರದಲ್ಲಿ ನಡೆದಿದ್ದ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟ ಶ್ರೇಯ ಪಂಜಾಬ್‌ನ ಮನ್‌ಪ್ರೀತ್‌ ಕೌರ್‌ ಅವರದ್ದು.

ಪಟಿಯಾಲದ ಪ್ರತಿಭೆ ಮನ್‌ಪ್ರೀತ್‌ , ಭಾರತದ ಅಥ್ಲೆಟಿಕ್ಸ್‌ ಕ್ಷಿತಿಜದಲ್ಲಿ ಪ್ರಜ್ವಲಿಸುತ್ತಿದ್ದಾರೆ. ಮಹಿಳಾ ವಿಭಾಗದ ಶಾಟ್‌ಪಟ್‌ನಲ್ಲಿ ಅವರು ಅಂತರರಾಷ್ಟ್ರೀಯ ಕೂಟಗಳಲ್ಲಿ ಅನನ್ಯ ಸಾಧನೆ ಮಾಡಿ ಏಷ್ಯಾ ಎತ್ತರದಲ್ಲಿ ತ್ರಿವರ್ಣ ಧ್ವಜ ರಾರಾಜಿಸುವಂತೆ ಮಾಡಿದ್ದಾರೆ.

ಎಳವೆಯಲ್ಲಿಯೇ ಅಥ್ಲೆಟಿಕ್ಸ್‌ನಲ್ಲಿ ಅಪಾರ ಆಸಕ್ತಿ ಹೊಂದಿದ್ದ ಮನ್‌ಪ್ರೀತ್‌ ಮಿಂಚಿ ಮರೆಯಾಗುವ ನಕ್ಷತ್ರವಾಗಲಿಲ್ಲ. ಆರಂಭದ ದಿನಗಳಲ್ಲಿ ಅವರು 100 ಮೀಟರ್ಸ್‌ ಓಟದಲ್ಲಿ ವಿಶೇಷ ತರಬೇತಿ ಪಡೆದಿದ್ದರು. ಆದರೆ ಇದರಲ್ಲಿ ಮುಂದುವರಿಯಲಿಲ್ಲ. ಅಣ್ಣನ ಸಲಹೆಯ ಮೇರೆಗೆ ‘ಟ್ರ್ಯಾಕ್‌’ ತೊರೆದು ಶಾಟ್‌ಪಟ್‌ ಅಂಗಳಕ್ಕೆ ಕಾಲಿಟ್ಟರು.

2007ರಲ್ಲಿ ಸ್ಲೊವೇಕಿಯಾದಲ್ಲಿ ನಡೆದಿದ್ದ 5ನೇ ಐಎಎಎಫ್‌ ವಿಶ್ವ ಯೂತ್‌ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿದಿದ್ದ ಅವರು 9ನೇ ಸ್ಥಾನ ಗಳಿಸಿ ಭರವಸೆ ಮೂಡಿಸಿದ್ದರು. 2010ರಲ್ಲಿ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದರಿಂದ ಮೂರು ವರ್ಷಗಳ ಕಾಲ ಅಂಗಳದಿಂದ ದೂರ ಉಳಿದಿದ್ದರು. ದೀರ್ಘ ಬಿಡುವಿನ ನಂತರ ಮತ್ತೆ ಕಣಕ್ಕಿಳಿದಿದ್ದ ಮನ್‌ಪ್ರೀತ್‌ 2015ರಲ್ಲಿ ಹೊಸ ಮೈಲುಗಲ್ಲು ನೆಟ್ಟರು.

ಕೋಲ್ಕತ್ತದಲ್ಲಿ ನಡೆದಿದ್ದ ರಾಷ್ಟ್ರೀಯ ಮುಕ್ತ ಚಾಂಪಿಯನ್‌ಷಿಪ್‌ನಲ್ಲಿ ಅವರು 17.96 ಮೀಟರ್ಸ್‌ ದೂರ ಕಬ್ಬಿಣದ ಗುಂಡು ಎಸೆದು ಚಿನ್ನಕ್ಕೆ ಕೊರ ಳೊಡ್ಡಿದರು. ಇದರೊಂದಿಗೆ ಹರ್ಬಾನ್ಸ್‌ ಕೌರ್‌ ಅವರ ಹೆಸರಿನಲ್ಲಿದ್ದ 18 ವರ್ಷಗಳ ದಾಖಲೆಯೊಂದನ್ನು ಮೀರಿ ನಿಂತಿದ್ದರು. ಅವರ ಈ ಸಾಧನೆ ರಿಯೊ ಒಲಿಂಪಿಕ್ಸ್‌ಗೆ ರಹದಾರಿಯನ್ನೂ ಮಾಡಿ ಕೊಟ್ಟಿತ್ತು. ಇದು ಮನ್‌ಪ್ರೀತ್‌ ಅವರ ವೃತ್ತಿಬದುಕಿಗೆ ಹೊಸ ತಿರುವು ನೀಡಿತು.

2016ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಬಾರಿಗೆ ದೇಶವನ್ನು ಪ್ರತಿನಿಧಿ ಸಿದ್ದ ಮನ್‌ಪ್ರೀತ್‌ ಅವರು ಸಾಂಬಾ ನಾಡಿನಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಲು ವಿಫಲರಾದರು.

ಹೀಗಿದ್ದರೂ ಅವರು ಛಲ ಬಿಡಲಿಲ್ಲ. ಪ್ರತಿ ಸೋಲಿನಿಂದಲೂ ಹೊಸ ಪಾಠ ಕಲಿಯುತ್ತಾ ಸಾಗಿರುವ ಅವರು ಈ ವರ್ಷದ ಆರಂಭದಲ್ಲಿ ಚೀನಾದಲ್ಲಿ ನಡೆದಿದ್ದ ಏಷ್ಯನ್‌ ಗ್ರ್ಯಾನ್‌ ಪ್ರಿ ಟೂರ್ನಿ ಯಲ್ಲಿ 18.86 ಮೀಟರ್ಸ್‌ ಸಾಮರ್ಥ್ಯ ತೋರಿ ಚಿನ್ನ ಗೆದ್ದಿದ್ದ ಅವರು ತಮ್ಮ ಸಾಮರ್ಥ್ಯವನ್ನು ಜಗಜ್ಜಾಹೀರು ಮಾಡಿದ್ದರು.

ಈಗ ಏಷ್ಯಾ ಚಾಂಪಿಯನ್‌ಷಿಪ್‌ ನಲ್ಲೂ ಚಿನ್ನದ ಸಾಧನೆ ಮಾಡಿರುವ ಪಟಿಯಾಲದ ಅಥ್ಲೀಟ್‌ ವಿಶ್ವ ಚಾಂಪಿಯನ್‌ ಷಿಪ್‌ಗೆ ಅರ್ಹತೆ ಗಳಿಸಿದ್ದಾರೆ. ಈ ಕೂಟ ಮುಂದಿನ ತಿಂಗಳು ಲಂಡನ್‌ನಲ್ಲಿ ನಡೆಯಲಿದ್ದು, ಆಂಗ್ಲರ ನಾಡಿನಲ್ಲೂ ಮನ್‌ಪ್ರೀತ್‌ ಚಿನ್ನಕ್ಕೆ ಮುತ್ತಿಕ್ಕುವ ಕನಸು ಹೊತ್ತಿದ್ದಾರೆ.

ಪ್ರತಿಕ್ರಿಯಿಸಿ (+)