ಸೋಮವಾರ, ಡಿಸೆಂಬರ್ 16, 2019
26 °C

ಭವಿಷ್ಯದ ತಾರೆ ಕೃಷ್ಣ ಪ್ರಿಯಾ...

ಮಾನಸ ಬಿ.ಆರ್. Updated:

ಅಕ್ಷರ ಗಾತ್ರ : | |

ಭವಿಷ್ಯದ ತಾರೆ ಕೃಷ್ಣ ಪ್ರಿಯಾ...

ಭಾರತದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯನ್ನು ಉತ್ತುಂಗಕ್ಕೆ ತಂದ ಶ್ರೇಯ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಅವರಿಗೆ ಸಲ್ಲುತ್ತದೆ. ಇವರ ನಂತರ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಈ ಕ್ರೀಡೆಯ ಭವಿಷ್ಯ ಇನ್ನೂ ಪ್ರಶ್ನಾರ್ಥಕವಾಗಿಯೇ ಉಳಿದಿದೆ.

ಜೂನಿಯರ್ ವಿಭಾಗದಲ್ಲಿ ಇತ್ತೀಚೆಗೆ ಮಿಂಚುತ್ತಿರುವ ಶ್ರೀ ಕೃಷ್ಣ ಪ್ರಿಯಾ ಕುದರವಳ್ಳಿ ಭವಿಷ್ಯದ ತಾರೆಯಾಗಿ ಹೊರಹೊಮ್ಮುವ ಸೂಚನೆ ನೀಡಿದ್ದಾರೆ. ಇದೇ ವಾರ ಚೀನಾ ತೈಪೆ ಗ್ರ್ಯಾನ್ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಈ ಆಟಗಾರ್ತಿ ಹೆಮ್ಮೆಯ ಸಾಧನೆ ಮಾಡಿದ್ದಾರೆ.ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 34ನೇ ಸ್ಥಾನದಲ್ಲಿರುವ ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಚೀನಾ ತೈಪೆಯ ಚಿಯಾಂಗ್‌ ಮಿ ಹುಯಿ ವಿರುದ್ಧ ಗೆದ್ದು ಪ್ರೀ ಕ್ವಾರ್ಟರ್‌ ತಲುಪಿದ್ದರು. ಆದರೆ ತೈಪೆಯ ಶಾವೊ ವುನ್ ಸಂಗ್ ಎದುರು ಸೋಲುವ ಮೂಲಕ ಕ್ವಾರ್ಟರ್‌ಫೈನಲ್‌ನಲ್ಲಿ ಆಡುವ ಅವಕಾಶ ಕಳೆದುಕೊಂಡರು.

ಈ ಟೂರ್ನಿಯಲ್ಲಿ ಕೃಷ್ಣ ಪ್ರಿಯಾ ಕ್ರಮಾಂಕ ಪಟ್ಟಿಯಲ್ಲಿ ತಮಗಿಂತ ಮೇಲಿನ  ಆಟಗಾರ್ತಿಯೊಂದಿಗೆ ಆಡಿದ ರೀತಿ ಅವರ ಮೇಲಿನ ವಿಶ್ವಾಸವನ್ನು ಇನ್ನಷ್ಟು ಗಟ್ಟಿಗೊಳಿಸಿದೆ.

ಹೈದರಾಬಾದ್‌ನ ಸೇಂಟ್ ಆ್ಯನ್ಸ್‌ ಕಾಲೇಜಿನಲ್ಲಿ ಪಿಯುಸಿ ಮಾಡಿರುವ ಕೃಷ್ಣ ಪ್ರಿಯಾ ಬ್ಯಾಡ್ಮಿಂಟನ್‌ ಅಭ್ಯಾಸವನ್ನು ಮೊದಲು ಮೊಹಮ್ಮದ್ ಅಲಿ ಅವರ ಬಳಿ ನಡೆಸಿದರು. ಬಳಿಕ ಫತೇ ಮೈದಾನ ಒಳಾಂಗಣ ಕ್ರೀಡಾಂಗಣದಲ್ಲಿರುವ ಕೋಚ್‌ ಎಸ್‌.ಎಮ್‌. ಆರಿಫ್‌ ಮತ್ತು ಗೋವರ್ಧನ್ ರೆಡ್ಡಿ ಅವರ ಬಳಿ ಈ ಕ್ರೀಡೆಯ ಆರಂಭಿಕ ಮಾರ್ಗದರ್ಶನ ಪಡೆದರು.

ಬಳಿಕ ಅವರು ಪುಲ್ಲೇಲ ಗೋಪಿಚಂದ್ ಅಕಾಡೆಮಿಗೆ ಸೇರಿಕೊಂಡರು. ಆರು ತಿಂಗಳ ಅಭ್ಯಾಸದ ಬಳಿಕ 2013ರಲ್ಲಿ ಹೈದರಾಬಾದ್‌ ಜಿಲ್ಲಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ 17 ಮತ್ತು 19 ವರ್ಷದೊಳಗಿನವರ ವಿಭಾಗಗಳೆರಡರಲ್ಲೂ ಚಾಂಪಿಯನ್ ಆದರು. ಇದು ಅವರ ವೃತ್ತಿಜೀವನದಲ್ಲಿ ದೊಡ್ಡ ಮಟ್ಟದ ತಿರುವು ನೀಡಿತು.

‘ಕಠಿಣ ಪರಿಶ್ರಮವನ್ನು ಮೈಗೂಡಿಸಿಕೊಂಡಿರುವ ಕೃಷ್ಣ ಪ್ರಿಯಾ ಎತ್ತರದ ಸಾಧನೆ ಮಾಡುವ ಹಾದಿಯಲ್ಲಿದ್ದಾರೆ. ಸೈನಾ, ಸಿಂಧು ಅವರ ಸಾಲಿನಲ್ಲಿ ನಿಲ್ಲುವ ಸಾಮರ್ಥ್ಯ ಅವರಿಗಿದೆ’ ಎಂದು ಈ ಟೂರ್ನಿಯ ಬಳಿಕ ಪುಲ್ಲೇಲ ಗೋಪಿಚಂದ್ ಅವರು ಭರವಸೆಯ ಮಾತುಗಳನ್ನಾಡಿದ್ದರು.

ಕೃಷ್ಣ ಪ್ರಿಯಾ ಈಗ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 79ನೇ ಸ್ಥಾನಕ್ಕೆ ಏರಿದ ಸಾಧನೆ ಮಾಡಿದ್ದಾರೆ. ರಿತುಪರ್ಣಾ ದಾಸ್, ತನ್ವಿ ಲಾಡ್‌, ರುತ್ವಿಕಾ ಶಿವಾನಿ ಗಾದ್ದೆ ಅವರ ಬಳಿಕ ಅಗ್ರ 100ರೊಳಗಿನ ಸ್ಥಾನ ಪಡೆದಿರುವ ಭಾರತದ ಆಟಗಾರ್ತಿ ಎಂಬ ಶ್ರೇಯ ಇವರಿಗೆ ಸಲ್ಲುತ್ತದೆ.

ಈ ಸಾಧನೆಯ ಹಾದಿಯಲ್ಲಿ ಅವರು ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. 2015 ಜೂನಿಯರ್ ಏಷ್ಯನ್ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2016ರಲ್ಲಿ ಕೇರಳದಲ್ಲಿ ನಡೆದ ಮಲಯಾಳ ಮನೋರಮಾ ಓಪನ್‌ನಲ್ಲಿ ಬೆಳ್ಳಿ ಗೆದ್ದರು. ಇದೇ ವರ್ಷ ಅಖಿಲ ಭಾರತ ಸೀನಿಯರ್ ರ್‍ಯಾಂಕಿಂಗ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಸಾಧನೆ ಮಾಡಿದ್ದಾರೆ.

ಪೆರುದಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲೂ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಜೂನಿಯರ್ ವಿಭಾಗದಲ್ಲಿ ಡಚ್ ಓಪನ್ ಹಾಗೂ ಜರ್ಮನ್ ಓಪನ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ.

ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ (ಪಿಬಿಎಲ್‌) ಹೈದರಾಬಾದ್ ಹಂಟರ್ಸ್‌ ತಂಡದಲ್ಲಿ ಆಡಿದ್ದಾರೆ.

‘ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವುದು ನನ್ನ ಜೀವನದ ಮಹತ್ವದ ಗುರಿ’ ಎಂದು ಹೇಳಿಕೊಂಡಿರುವ ಕೃಷ್ಣ ಪ್ರಿಯಾ ಅವರಿಗೆ ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಲಿನ್ ಡಾನ್ ಅವರೇ ಸ್ಪೂರ್ತಿಯಂತೆ..

‘ರಕ್ಷಣಾತ್ಮಕವಾಗಿ ಆಡುವುದು ನನ್ನ ಶಕ್ತಿ. ಅದರ ಜತೆ ಆಕ್ರಮಣಕಾರಿಯಾಗಿ ಆಡುವುದನ್ನು ಇನ್ನಷ್ಟು ಅಭ್ಯಾಸ ಮಾಡಬೇಕಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)