ಭಾನುವಾರ, ಡಿಸೆಂಬರ್ 8, 2019
21 °C

ಮಂಗಳೂರಿನಲ್ಲಿ ಲಗೋರಿ ನೆನಪು

Published:
Updated:
ಮಂಗಳೂರಿನಲ್ಲಿ ಲಗೋರಿ ನೆನಪು

ಲಗೋರಿ ಎಂದಾಕ್ಷಣ ಬಾಲ್ಯದ ನೆನಪಿನ ಪುಟಗಳು ತೆರೆದುಕೊಳ್ಳುತ್ತವೆ. ಮನೆ ಅಂಗಳದ ಎದುರು, ಓಣಿಯಲ್ಲಿ ಕಲ್ಲು ಇಟ್ಟು ಗೆಳೆಯರೊಂದಿಗೆ ಲಗೋರಿ ಆಡಿದ, ಗೆದ್ದು ಕೇಕೆ ಹಾಕಿ ಸಂಭ್ರಮಿಸುವ ನೆನಪು ಮನದಾಳದಲ್ಲಿ ಉಕ್ಕಿ ಬರುತ್ತವೆ. ಇಂತಹ ಅಪರೂಪದ ಲಗೋರಿ ಆಟದ ಕ್ಷಣಗಳು ಈಚೆಗೆ ಮಂಗಳೂರಿನ ನೂರಾರು ಮಂದಿಯ ಮನ ಗೆದ್ದವು. ‘ಲಗೋರಿ ತುಳುನಾಡ್‌ ಕಪ್‌–2017’ ಮಂಗಳೂರಿನಲ್ಲಿ ಹಮ್ಮಿಕೊಂಡಿತ್ತು.  ಲಗೋರಿ ಆಟ ವೀಕ್ಷಣೆಗೆ ನೂರಾರು ಮಂದಿ ಮೈದಾನದ ಸುತ್ತಲೂ ಕಿಕ್ಕಿರಿದಿದ್ದರು.

ಕರಾವಳಿಯಲ್ಲಿ ಬ್ಯಾಡ್ಮಿಂಟನ್‌, ಈಜು, ಕ್ರಿಕೆಟ್‌ ಸಾಕಷ್ಟು ಜನಪ್ರಿಯ. ಇಂತಹ ಕ್ರೀಡೆಗಳಿಗೆ ಸಮನಾಗಿ ಲಗೋರಿ ಆಟದ ಬಗ್ಗೆ ಕರಾವಳಿ ಜನರಲ್ಲಿ ಜಾಗೃತಿ ಉಂಟು ಮಾಡುವ ಉದ್ದೇಶ ಆಯೋಜಕರದಾಗಿತ್ತು. ಲಗೋರಿ ಆಟ ಏನು ಎಂಬುದರ ಬಗ್ಗೆ ನಗರದ ಹೊಸ ಪೀಳಿಗೆಯ ಮಂದಿಗೆ ಗೊತ್ತಿಲ್ಲ. ಈ ಕುರಿತು ಜನರಲ್ಲಿ ಜಾಗೃತಿ ಉಂಟು ಮಾಡುವ ಉದ್ದೇಶದಿಂದ 20 ಲಗೋರಿ ತಂಡ ಕಟ್ಟಿ, ಸುಮಾರು 240ಕ್ಕೂ ಹೆಚ್ಚು ಆಟಗಾರರಿಗೆ ಮುಂಬೈ ಲಗೋರಿ ಫೆಡರೇಶನ್‌ನಿಂದ ತರಬೇತಿ ನೀಡಿ ಸಜ್ಜುಗೊಳಿಸಲಾಯಿತು.

ಹಿಂದೆ ರಾಜ್ಯದ ವಿವಿಧ ಜಿಲ್ಲೆಗಳ ತಂಡಗಳು ವಿವಿಧ ಕಡೆ ಲಗೋರಿ ಟೂರ್ನಿಗಳಲ್ಲಿ ಪಾಲ್ಗೊಳ್ಳುವಾಗ, ಕರಾವಳಿ ಭಾಗದಿಂದ ಯಾವುದೇ ತಂಡ ಅವಕಾಶ ಪಡೆಯದೇ ಇರುವುದು ಬೇಸರ ತರುತ್ತಿತ್ತು. ಈ ಕಾರಣವು ಆಯೋಜಕರು ‘ಲಗೋರಿ ತುಳುನಾಡು ಕಪ್‌’ ಟೂರ್ನಿ ಹಮ್ಮಿಕೊಳ್ಳುವುದಕ್ಕೆ ಪ್ರೇರೇಪಣೆ ನೀಡಿದ್ದು.



ಲಗೋರಿ ಕಲ್ಲುಗಳು

2018ರಂದು ಮೇ ತಿಂಗಳಿನಲ್ಲಿ ಮುಂಬೈಯಲ್ಲಿ ಲಗೋರಿ ವಿಶ್ವಚಾಂಪಿಯನ್‌ ಷಿಪ್‌ ಟೂರ್ನಿ ನಡೆಯಲಿದೆ. ಅದರ ಭಾಗವಾಗಿ ಮಂಗಳೂರಿನಲ್ಲಿಯೂ ರಾಜ್ಯ ಮಟ್ಟದ ಲಗೋರಿ ಟೂರ್ನಿ ನಡೆಸುವುದಕ್ಕೆ ಚಿಂತನೆ ನಡೆಸಲಾಗುತ್ತಿದೆ. ಬೇರೆ ಬೇರೆ ರಾಜ್ಯಗಳ ಲಗೋರಿ ತಂಡ ಮಂಗಳೂರಿಗೆ ಲಗ್ಗೆ ಇಡಲಿವೆ. ಇಲ್ಲಿಯೇ ಟೂರ್ನಿ ನಡೆದರೆ ಅದಕ್ಕೆ ಬೇಕಾಗುವ ಎಲ್ಲ ಸಿದ್ಧತೆ ಮಾಡಿಕೊಳ್ಳುವುದಕ್ಕೆ ಸಂಘಟಕರು ತಯಾರಿ ನಡೆಸಿದ್ದಾರೆ. ಇದೇ ರೀತಿ ಈಚೆಗೆ ವಿಜಯಪುರದಲ್ಲಿ ಕೂಡಾ ಲಗೋರಿ ಟೂರ್ನಿ ಹಮ್ಮಿಕೊಂಡು ಯಶಸ್ವಿಗೊಳಿಸಲಾಗಿತ್ತು.

ಕಬಡ್ಡಿಗೆ ಸಿಕ್ಕ ಬೆಂಬಲ ಲಗೋರಿಗೂ ಸಿಗಬೇಕು ಎನ್ನುವುದು ಸಂಘಟಕರ ಆಸೆ. ಅದು ಫಲ ನೀಡಿದೆ. ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಲಗೋರಿ ಟೂರ್ನಿ ವೀಕ್ಷಣೆಗೆ ಜನರ ದಂಡೆ ಬಂದಿತ್ತು. ಇನ್ನು ಪ್ರಾಯೋಜಕರು ಕೂಡಾ ತಂಡಗಳನ್ನು ಖರೀದಿ ಮಾಡಿರುವುದು ಸಂಘಟಕರಲ್ಲಿ ಉತ್ಸಾಹ ಮೂಡಿಸಿತ್ತು.

‘ಈ ಭಾಗದಲ್ಲಿ ಲಗೋರಿ ಆಯೋಜಿಸಿರುವುದು ಇದೇ ಮೊದಲು, ಜನ ಹಾಗೂ ಪ್ರಾಯೋಜಕರು ಯಾವ ರೀತಿ ನಮ್ಮನ್ನು ಸ್ವೀಕಾರ ಮಾಡುತ್ತಾರೆ ಎಂಬ ಸಣ್ಣದೊಂದು ಅಂಜಿಕೆ ಕಾಡಿದ್ದು ನಿಜ. ಆದರೆ ತುಳಿನಾಡಿನ ಜನ ಈ ಆಟಕ್ಕೆ ಬೆಂಬಲ ನೀಡಿದ್ದಾರೆ. ತಂಡಗಳ ಪಟ್ಟಿ ಬಿಡುಗಡೆ ಮಾಡುವ ವೇಳೆಯಲ್ಲಿಯೇ ಅದ್ಧೂರಿ ಬೆಂಬಲ ಸಿಕ್ಕಿತ್ತು. ಇನ್ನು ಟೂರ್ನಿ ನಡೆದ ಮೂರು ಅಂಕಣಗಳ ಸುತ್ತಲೂ ಜನ ಉತ್ತಮ ಸಂಖ್ಯೆಯಲ್ಲಿ ಸೇರಿದ್ದರು‘  ಎಂದು ಆಯೋಜಕ ದೀಪಕ್‌ ಗಂಗೂಲಿ ಖುಷಿಯಿಂದ ಹೇಳಿದರು.

ಲಗೋರಿ ಆಡುವ ನಿಯಮ ಆಧುನಿಕತೆ ಸ್ಪರ್ಶ ಪಡೆದುಕೊಂಡಿದೆ. ಮನೆಯ ಅಂಗಳದಲ್ಲಿ ಕಲ್ಲು ಗೋಪುರ ಮಾಡಿ ಕಲ್ಲಿನಿಂದ ಹೊಡೆಯುವ ಆಟ. ಆದರೆ ಲಗೋರಿ ಟೂರ್ನಿಗೆ ಫೆಡರೇಶನ್‌ ನಿಯಮ ರೂಪಿಸಿದೆ. ಕಲ್ಲಿನ ಗೋಪುರದ ಬದಲು ಫೈಬರ್‌ ಗೋಪುರ ನಿರ್ಮಿಸಲಾಗುತ್ತದೆ. ಕಲ್ಲಿನಿಂದ ಹೊಡೆಯುವ ಬದಲು ಚೆಂಡನ್ನು ಬಳಸಲಾಗುತ್ತಿದೆ.

ಒಟ್ಟು 12 ಆಟಗಾರರು, ಮೂವರು ಹೆಚ್ಚುವರಿ ಆಟಗಾರರು ಇರುತ್ತಾರೆ. ಆಡುವ ಆಟಗಾರರು ಮತ್ತು ನೋಡುವ ಜನರಿಗೆ ಎಲ್ಲಿಯೂ ಬೇಜಾರು ಆಗದ ರೀತಿ ನಿಯಮಗಳು ಇವೆ. 6ಜನ ಅಂಕಣದ ಹೊರಗೆ, 6 ಜನ ಅಂಕಣದ ಒಳಗೆ ನಿಂತಿರುತ್ತಾರೆ. ಹಳ್ಳಿಯಲ್ಲಿ ಆಡುವ ನಿಯಮಗಳು ಅಲ್ಪಸ್ವಲ್ಪ ಬದಲಾಗಿವೆ ಎಂದು ಅವರ ತಿಳಿಸಿದರು. ಸ್ವಸ್ತಿಕ್‌ ಲಗೋರಿ ಫ್ರೆಂಡ್ಸ್‌ ಪುಂಜಾಲಕಟ್ಟೆ ತಂಡವು ಲಗೋರಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿತು.

ಪ್ರತಿಕ್ರಿಯಿಸಿ (+)