ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೀಪದ ಅಂಗಳದಲ್ಲಿ ನಿರೀಕ್ಷೆಯ ಅಲೆಗಳು

Last Updated 9 ಜುಲೈ 2017, 19:30 IST
ಅಕ್ಷರ ಗಾತ್ರ

ಉಪಖಂಡದ ಕ್ರಿಕೆಟ್‌ಗೆ ಈಗ ಮರಳಿ ಅರಳುವ ಹೊತ್ತು ಬಂದಿದೆ. ವಿವಾದಗಳ ಬಿಸಿಯಲ್ಲಿ ಬಳಲಿರುವ ಭಾರತದ ಕ್ರಿಕೆಟ್ ಮತ್ತು ದಿಗ್ಗಜರ ಕೊರತೆ ಅನುಭವಿಸುತ್ತಿರುವ ದ್ವೀಪರಾಷ್ಟ್ರ ಶ್ರೀಲಂಕಾದ ಯುವ ಕ್ರಿಕೆಟಿಗರಿಗೆ ಭವಿಷ್ಯದ ದಿಕ್ಸೂಚಿಯಾಗುವ ಮಹತ್ವದ ಸರಣಿ ಈ ತಿಂಗಳು ಆರಂಭವಾಗಲಿದೆ.

ಜುಲೈ 21ರಿಂದ ಆರಂಭವಾಗಲಿರುವ ಸುದೀರ್ಘ ಸರಣಿಯಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿವೆ. ವಿಶ್ವದ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡದ ಎದುರು ಪೂರ್ಣ ಸರಣಿಗೆ ಲಂಕಾ ಆತಿಥ್ಯ ವಹಿಸಲಿದೆ. ಮೂರು ಟೆಸ್ಟ್, ಐದು ಏಕದಿನ ಮತ್ತು ಒಂದು ಟ್ವೆಂಟಿ–20 ಪಂದ್ಯಗಳು ನಡೆಯಲಿವೆ. ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದ ಹೀನಾಯ ಸೋಲು ಬಿಟ್ಟರೆ ಕಳೆದೆರಡು ವರ್ಷಗಳಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಕ್ರಿಕೆಟ್ ತಂಡದ ಸಾಧನೆಯು ಉತ್ತುಂಗದಲ್ಲಿಯೇ ಇದೆ.

ಸಟೆಸ್ಟ್, ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಯಶಸ್ಸಿನ ಮೈಲುಗಲ್ಲು ನೆಟ್ಟಿದೆ. ಕೌಶಲ್ಯಭರಿತ, ದಿಟ್ಟೆದೆಯ ಆಟಗಾರರು ಇರುವ ಭಾರತ ತಂಡದ ಎದುರು ಶ್ರೀಲಂಕಾದ ಯುವ ಪ್ರತಿಭೆಗಳು ಮಿಂಚಿದರೆ ಜಗದ ಗಮನ ಸೆಳೆಯುವುದು ಖಚಿತ. ಆದರೆ ಅದು ಸುಲಭವಲ್ಲ. ಏಕೆಂದರೆ ಅಂಕಿ ಅಂಶಗಳ ಮೇಲೆ ಕಣ್ಣಾಡಿಸಿದರೆ ಲಂಕಾ ತಂಡವು ಭಾರತಕ್ಕೆ ಯಾವುದೇ ರೀತಿಯಿಂದಲೂ ಸರಿಸಾಟಿಯಾಗಲು ಸಾಧ್ಯವಿಲ್ಲ.

ಹೊಸ ಪ್ರತಿಭೆಗಳ ದಂಡು ಕಟ್ಟಿಕೊಂಡು ಕಣಕ್ಕಿಳಿಯಲಿರುವ ಅನುಭವಿ ಎಡಗೈ ಸ್ಪಿನ್ನರ್ ರಂಗನಾ ಹೆರಾತ್ ಅವರಿಗೂ ಈ ಸತ್ಯ ಗೊತ್ತಿದೆ. ಆದರೆ ಅಚ್ಚರಿಯ ಫಲಿತಾಂಶಗಳು ಕ್ರಿಕೆಟ್‌ ಲೋಕದ ದಿಕ್ಕನ್ನೇ ಬದಲು ಮಾಡಿದ ಉದಾಹರಣೆಗಳಿಗೂ ಕಮ್ಮಿಯಿಲ್ಲ. ಅಂತಹ ಆಘಾತ ನೀಡುವಲ್ಲಿ ಲಂಕಾ ಕೂಡ ಈ ಹಿಂದೆ ಹಲವು ಬಾರಿ ತನ್ನ ಛಾಪು ಮೂಡಿಸಿದೆ. ಚಾಂಪಿಯನ್ಸ್‌ ಟ್ರೋಫಿ ಲೀಗ್ ಹಂತದಲ್ಲಿ ಭಾರತಕ್ಕೆ ಸೋಲಿನ ಆಘಾತ ನೀಡಿದ್ದು ಮರೆಯಲು ಸಾಧ್ಯವೇ. 321 ರನ್‌ಗಳ ಗುರಿಯನ್ನು ಲೀಲಾಜಾಲವಾಗಿ ಮುಟ್ಟಿದ್ದ ಏಂಜೆಲೊ ಮ್ಯಾಥ್ಯೂಸ್ ಬಳಗವು ಗೆಲುವಿನ ಕೇಕೆ ಹಾಕಿತ್ತು.

ವಿರಾಟ್ ನಾಯಕತ್ವಕ್ಕೆ ಸವಾಲು
ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು ಹೀನಾಯ ಸೋಲು ಮತ್ತು ಮುಖ್ಯ ಕೋಚ್ ಅನಿಲ್ ಕುಂಬ್ಳೆ ರಾಜೀನಾಮೆ ವಿವಾದದಿಂದ ಬಹಳಷ್ಟು ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಕೊಹ್ಲಿ ಗುರಿಯಾಗಿದ್ದಾರೆ. ಇತ್ತೀಚೆಗೆ ವೆಸ್ಟ್ ಇಂಡೀಸ್‌ನಲ್ಲಿ ಏಕದಿನ ಸರಣಿಯನ್ನು ಕೊಹ್ಲಿ ಬಳಗವು 3–1ರಿಂದ ಗೆದ್ದುಕೊಂಡಿತ್ತು. ಕೊನೆಯ ಪಂದ್ಯದಲ್ಲಿ ಕೊಹ್ಲಿ ಶತಕ ಕೂಡ ಗಳಿಸಿದ್ದರು. ಆದರೆ ಇದರಿಂದ ಟೀಕಾಕಾರರು ಸಮಾಧಾನಗೊಂಡಿಲ್ಲ. ಹೋದ ತಿಂಗಳು ಆಫ್ಗಾನಿಸ್ತಾನದ ಎದುರು ಸೋತಿದ್ದ ವಿಂಡೀಸ್ ತಂಡವೇನೂ ಬಲಿಷ್ಠವಲ್ಲ. ಅದರ ವಿರುದ್ಧ ಗೆಲ್ಲುವುದು ದೊಡ್ಡ ಸಾಧನೆಯೇನೂ ಅಲ್ಲ ಎನ್ನುವ ವ್ಯಂಗ್ಯೋಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ಅದರಿಂದಾಗಿ ಶ್ರೀಲಂಕಾ ತಂಡದ ಎದುರಿನ ಸರಣಿಯು ವಿರಾಟ್‌ಗೆ ಸವಾಲಾಗುವುದು ಖಚಿತ. ಟೆಸ್ಟ್ ಶ್ರೇಷ್ಠಾಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡು ಮುಂದೆ ಸಾಗಲು ಈ ಸರಣಿಯಲ್ಲಿ ಗೆಲ್ಲುವುದು ಕೂಡ ಅವಶ್ಯಕ. 2015ರಲ್ಲಿ ಕೊನೆಯ ಬಾರಿ ಎರಡೂ ತಂಡಗಳು ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುಖಾಮುಖಿಯಾಗಿದ್ದವು. ಅಗ ಭಾರತ ತಂಡವು ಸರಣಿ ವಿಜಯ ಸಾಧಿಸಿತ್ತು. 2008ರಲ್ಲಿ ಶ್ರೀಲಂಕಾ ತಂಡವು ತನ್ನ ನೆಲದಲ್ಲಿ ಭಾರತದ ವಿರುದ್ಧ ಸರಣಿ ಗೆದ್ದಿತ್ತು. ಅದರ ನಂತರ ನಡೆದ ಸರಣಿಗಳಲ್ಲಿ ಗೆದ್ದಿಲ್ಲ.

ಆದರೆ ವಿರಾಟ್ ನಾಯಕತ್ವದ ತಂಡದಲ್ಲಿ ಉತ್ತಮ ಲಯದಲ್ಲಿರುವ ಆಟಗಾರರಿದ್ದಾರೆ. ಹೋದ ವರ್ಷ ಭಾರತದಲ್ಲಿಯೇ ನಡೆದಿದ್ದ ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾ ಮತ್ತು ಆಸ್ಟ್ರೇಲಿಯಾ ಎದುರಿನ ಸರಣಿಗಳಲ್ಲಿ ಭಾರತ ತಂಡವು ಜಯ ಸಾಧಿಸಿತ್ತು. ಇದೀಗ ತವರಿನಿಂದ ಹೊರಗೆ ತನ್ನ ಸಾಮರ್ಥ್ಯ ಒರೆಗೆ ಹಚ್ಚಲು ಕಾದು ನಿಂತಿದೆ.

ಅದರಲ್ಲೂ ಸೀಮಿತ ಓವರ್‌ಗಳಲ್ಲಿ ಕ್ರಿಕೆಟ್‌ನಲ್ಲಿ ಸತತ ವೈಫಲ್ಯ ಅನುಭವಿಸಿರುವ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಮತ್ತೆ ಲಯ ಕಂಡುಕೊಳ್ಳಲು ಲಂಕಾದಲ್ಲಿ ಶತಾಯಗತಾಯ ಪ್ರಯತ್ನಿಸುವುದು ಖಚಿತ. ಉಪಖಂಡದ ಪಿಚ್‌ಗಳಲ್ಲಿ ಅವರ ಸಾಧನೆಯೂ ಉತ್ತಮವಾಗಿರುವುದರಿಂದ ಮತ್ತೊಮ್ಮೆ ಮುಂಚೂಣಿಗೆ ಬರುವ ಅವಕಾಶ ಇದೆ. ಅವರೊಂದಿಗೆ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ, ಯುವ ಚೈನಾಮೆನ್ ಬೌಲರ್ ಕುಲದೀಪ್ ಯಾದವ್, ಆಫ್‌ಸ್ಪಿನ್ನರ್ ಜಯಂತ್ ಯಾದವ್ ಕೂಡ ಅವಕಾಶಕ್ಕಾಗಿ ಹಾತೊರೆದಿದ್ದಾರೆ.

ಬ್ಯಾಟಿಂಗ್‌ನಲ್ಲಿ ಅನುಭವಿ ಮತ್ತು ಯುವ ಆಟಗಾರರು ಸಾಲುಗಟ್ಟಿದ್ದಾರೆ. ನಾಯಕ ಕೊಹ್ಲಿ ಆಸ್ಟ್ರೇಲಿಯಾ ಎದುರು ಟೆಸ್ಟ್ ಸರಣಿಯಲ್ಲಿ ಮಿಂಚಿರಲಿಲ್ಲ. ನಂತರ ಐಪಿಎಲ್‌ನಲ್ಲಿಯೂ ಲಯ ಕಂಡುಕೊಂಡಿರಲಿಲ್ಲ. ಆದರೆ, ಚಾಂಪಿಯನ್ಸ್‌ ಟ್ರೋಫಿಯಲ್ಲಿ ಅವರ ಬ್ಯಾಟ್‌ನಿಂದ ರನ್‌ಗಳು ಹರಿದಿದ್ದವು. ಆದರೆ, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ ಅವರ ಮೇಲೆ ಸಂಪೂರ್ಣ ವಿಶ್ವಾಸ ಇಡಬಹುದು. ಅವರಿಬ್ಬರೂ ಸತತವಾಗಿ ತಮ್ಮ ಕಾಣಿಕೆ ನೀಡುತ್ತಿರುವುದು ಸಮಾಧಾನಕರ ಸಂ. ಗತಿ. ಆದರೆ ಚಿಂತೆ ಇರುವುದು ಆರಂಭಿಕ ಜೋಡಿಯದ್ದು. ಕರ್ನಾಟಕದ ಕೆ.ಎಲ್. ರಾಹುಲ್ ಮತ್ತು ಮುಂಬೈನ ರೋಹಿತ್ ಶರ್ಮಾ ಇಬ್ಬರೂ ಗಾಯಗೊಂಡು ವಿಶ್ರಾಂತಿ ಪಡೆಯುತ್ತಿದ್ದಾರೆ. ಇಂಗ್ಲೆಂಡ್‌ನಲ್ಲಿ ಶಿಖರ್ ಧವನ್ ಉತ್ತಮವಾಗಿ ಆಡಿದ್ದರು. ಅತಿ ಹೆಚ್ಚು ರನ್ ಗಳಿಸಿದ್ದರು.

ರಾಹುಲ್ ಫಿಟ್‌ ಆದರೆ ಅವರ ಮತ್ತು ಧವನ್ ನಡುವೆ ಪೈಪೋಟಿ ಇರುವುದು ಖಚಿತ. ಟೆಸ್ಟ್‌ನಲ್ಲಿ ದೋನಿ ಆಡದೇ ಇರುವುದರಿಂದ ವಿಕೆಟ್‌ಕೀಪರ್– ಬ್ಯಾಟ್ಸ್‌ಮನ್ ವಋದ್ಧಿಮಾನ್ ಸಹಾ ಮೊದಲ ಆಯ್ಕೆಯಾಗಿರುವ ಸಾಧ್ಯತೆ ಇದೆ. ನಂತರ ಯುವ ಆಟಗಾರ ರಿಷಭ್ ಪಂತ್, ಅನುಭವಿ ದಿನೇಶ್ ಕಾರ್ತಿಕ್ ಮತ್ತು ಪಾರ್ಥಿವ್ ಪಟೇಲ್ ಅವರೂ ಅವರೂ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಮಧ್ಯಮವೇಗಿ ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಇಶಾಂತ್ ಶರ್ಮಾ, ಫಾರ್ಮ್‌ನಲ್ಲಿರುವ ಮೊಹಮ್ಮದ್ ಶಮಿ ಕೂಡ ದ್ವೀಪರಾಷ್ಟ್ರದ ಪಿಚ್‌ಗಳಲ್ಲಿ ಮಿಂಚುವ ಸಮರ್ಥರು. ಆದ್ದರಿಂದ ಭಾರತ ತಂಡವನ್ನು ಎದುರಿಸಲು ಆತಿಥೇಯ ತಂಡವು ವಿಶೇಷ ಯೋಜನೆ ಸಿದ್ಧಪಡಿಸಿಕೊಳ್ಳುವುದು ಅನಿವಾರ್ಯ.

ಲಂಕಾ ತಂಡಕ್ಕೆ ಅಗ್ನಿಪರೀಕ್ಷೆ
ವಿಶ್ವಶ್ರೇಷ್ಠ ತಂಡಗಳಿಗೆ ಸೆಡ್ಡು ಹೊಡೆದ ಖ್ಯಾತಿ ಲಂಕಾ ತಂಡಕ್ಕೆ ಇದೆ. ಇತಿಹಾಸದ ಪುಟಗಳ ಮೇಲೆ ಕಣ್ಣಾಡಿಸಿದರೆ ದಿಗ್ಗಜರ ದಂಡು ಈ ಪುಟ್ಟ ದೇಶದಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ತಂಡದ ಸಾಧನೆ ತಋಪ್ತಿಕರವಾಗಿಲ್ಲ. ಅದರಲ್ಲೂ ಕುಮಾರ ಸಂಗಕ್ಕಾರ ಮತ್ತು ತಿಲಕರತ್ನೆ ದಿಲ್ಶಾನ್ ಅವರ ವಿದಾಯದ ನಂತರ ತಂಡವು ತಲೆಯೆತ್ತಿ ನಿಲ್ಲಲು ಹರಸಾಹಸಪಡುತ್ತಿದೆ. ಹೋದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಸೋತಿದ್ದ ಲಂಕಾ ತಂಡವು ನಂತರ ಬಾಂಗ್ಲಾದಲ್ಲಿ 1–1ರಿಂದ ಸರಣಿ ಸಮ ಮಾಡಿಕೊಂಡಿತ್ತು. ಆದರೆ ನಿಗದಿಯ ಓವರ್‌ಗಳ ಕ್ರಿಕೆಟ್‌ನಲ್ಲಿ ತಕ್ಕಮಟ್ಟಿಗೆ ಉತ್ತಮ ಸಾಧನೆ ಮಾಡುತ್ತಿದೆ.

ದಿಮುತ ಕರುಣಾರತ್ನೆ, ಉಪುಲ್ ತರಂಗಾ, ಕುಶಾಲ ಮೆಂಡಿಸ್, ದಿನೇಶ್ ಚಾಂಡಿಮಲ್, ಅಸೆಲಾ ಗುಣರತ್ನೆ, ನಿರೋಷನ್ ಡಿಕ್ವೆಲಾ, ದಿಲ್ರುವಾನ್ ಪೆರೆರಾ, ಸುರಾಂಗ ಲಕ್ಮಲ್, ಧನುಷ್ಕಾ ಗುಣತಿಲಕ (ಆಫ್‌ಸ್ಪಿನ್ನರ್), ವನಿಂದು ಹಸರಂಗಾ (ಲೆಗ್‌ಸ್ಪಿನ್ನರ್), ಲಕ್ಷಣ್ ಸಂದಕನ್ (ಚೈನಾಮನ್) ಅವರಲ್ಲಿ ಪ್ರತಿಭೆಯಿದೆ. ಹೋರಾಟದ ಛಲವಿದೆ. ತಮ್ಮ ಸಾಮರ್ಥ್ಯ ಪಣಕ್ಕೊಡ್ಡಲು ಈ ಸರಣಿ ವೇದಿಕೆಯಾಗಲಿದೆ. ಅರ್ಜುನ್ ರಣತುಂಗಾ, ಸನತ್ ಜಯಸೂರ್ಯ, ಕಲುವಿತರಣ, ಮುತ್ತಯ್ಯ ಮುರಳೀಧರನ್, ಮಾರ್ವನ್ ಅಟಪಟ್ಟು, ಮಾಹೇಲ ಜಯವರ್ಧನೆ, ಅರವಿಂದ ಡಿಸಿಲ್ವಾ, ಚಮಿಂದಾ ವಾಸ್ ಅವರಂತಹ ದಿಗ್ಗಜರ ಸಾಲಿಗೆ ಸೇರುವ ಅವಕಾಶ ಈ ಯುವಪ್ರತಿಭೆಗಳಿಗೆ ಇದೆ. 

ಹೊಸ ಕೋಚ್ ನೇಮಕ
ಶ್ರೀಲಂಕಾ ಎದುರಿ ಸರಣಿಯಲ್ಲಿ ಭಾರತ ತಂಡಕ್ಕೆ ನೂತನ ಮುಖ್ಯ ಕೋಚ್ ಮಾರ್ಗದರ್ಶನ ನೀಡುವುದು ಬಹುತೇಕ ಖಚಿತವಾಗಿದೆ. ಜುಲೈ 10ರಂದು ಮುಖ್ಯ ಕೋಚ್ ನೇಮಕಕ್ಕೆ ಸಂದರ್ಶನ ನಡೆಯಲಿದೆ. ರವಿಶಾಸ್ತ್ರಿ, ವೀರೇಂದ್ರಸೆಹ್ವಾಗ್, ಟಾಮ್ ಮೂಡಿ, ರಿಚರ್ಡ್ ಪೈಬಸ್, ಲಾಲ್‌ಚಂದ್ ರಜಪೂತ್, ಕರ್ನಾಟಕದ ದೊಡ್ಡಗಣೇಶ್ ಅವರು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಎರಡು ವರ್ಷಗಳ ಹಿಂದೆ .ಭಾರತ ತಂಡವು ಶ್ರೀಲಂಕಾ ಪ್ರವಾಸಕ್ಕೆ ಹೋದಾಗ ರವಿಶಾಸ್ತ್ರಿ ತಂಡದ ನಿರ್ದೇಶಕರಾಗಿದ್ದರು.

ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿ.ವಿ.ಎಸ್. ಲಕ್ಷ್ಮಣ್ ಅವರು ಇರುವ ಕ್ರಿಕಟ್ ಸಲಹಾ ಸಮಿತಿಯು ಸಂದರ್ಶನ ನಡೆಸಲಿದೆ. ನಂತರವಷ್ಟೇ ಫಲಿತಾಂಶ ಹೊರಹೊಮ್ಮಲಿದೆ.

ಹೋದ ತಿಂಗಳು ಲಂಡನ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ನಂತರ ಅನಿಲ್ ಕುಂಬ್ಳೆ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ‘ವಿರಾಟ್ ಕೊಹ್ಲಿ ಅವರ ಭಿನ್ನಾಭಿಪ್ರಾಯದಿಂದಾಗಿ ನಿರ್ಗಮಿಸುತ್ತಿದ್ದೇನೆ’ ಎಂದು ಕುಂಬ್ಳೆ ಪ್ರಕಟಿಸಿದ್ದರು. ಅದರಿಂದಾಗಿ ವಿವಾದದ ಬಿರುಗಾಳಿ ಎದ್ದಿತ್ತು. ಆ ನಂತರ ವೆಸ್ಟ್ ಇಂಡೀಸ್‌ ಪ್ರವಾಸಕ್ಕೆ ತಂಡವು ತೆರಳಿತ್ತು. ಆದರೆ ಮುಖ್ಯ ಕೋಚ್ ಇಲ್ಲದೇ ಆಡಿತ್ತು.

ಹೋದ ಗುರುವಾರ ಬಿಸಿಸಿಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಜೊಹ್ರಿ ಅವರು ಜಮೈಕಾಗೆ ತೆರಳಿ ಕೋಚ್ ನೇಮಕದ ಕುರಿತು ಕೊಹ್ಲಿ ಅವರಿಂದ ಸಲಹೆ ಪಡೆದುಕೊಂಡಿದ್ದರು.

ಮುಖ್ಯಾಂಶಗಳು
* 6ಕ್ಕೆ962 ಡಿಕ್ಲೆರ್ಡ್: ಶ್ರೀಲಂಕಾ ತಂಡವು ಭಾರತದ ವಿರುದ್ಧ ಟೆಸ್ಟ್‌ನಲ್ಲಿ ಗಳಿಸಿರುವ ಅತ್ಯಧಿಕ ಮೊತ್ತ 1997ರಲ್ಲಿ ಕೊಲಂಬೊದ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿತ್ತು.
* 9ಕ್ಕೆ726 ಡಿಕ್ಲೆರ್ಡ್: ಭಾರತ ತಂಡವು ಶ್ರೀಲಂಕಾ ಎದುರು ದಾಖಲಿಸಿದ ಗರಿಷ್ಠ ಮೊತ್ತ. ಮುಂಬೈನಲ್ಲಿ 2009ರಲ್ಲಿ ನಡೆದಿದ್ದಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಈ ಮೊತ್ತ ದಾಖಲಾಗಿತ್ತು.
* 7ಕ್ಕೆ414: ಭಾರತ ತಂಡವು ಶ್ರೀಲಂಕಾ ಎದುರು ಏಕದಿನ ಕ್ರಿಕೆಟ್‌ನಲ್ಲಿ (2009–ರಾಜ್‌ಕೋಟ್) ಪೇರಿಸಿದ್ದ ಅತ್ಯಧಿಕ ಮೊತ್ತ.
* 8ಕ್ಕೆ411: ಶ್ರೀಲಂಕಾ ತಂಡವು ಭಾರತದ ಎದುರು ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿದ್ದ ಅತ್ಯಧಿಕ ಮೊತ್ತ (2009–ರಾಜ್‌ಕೋಟ್)
* 5ಕ್ಕೆ215: ಶ್ರೀಲಂಕಾ ತಂಡವು ಟ್ವೆಂಟಿ–20 ಕ್ರಿಕೆಟ್‌ನಲ್ಲಿ ದಾಖಲಿಸಿದ್ದ ಗರಿಷ್ಠ ಸ್ಕೋರ್ (ನಾಗಪುರ–2009)
*   4ಕ್ಕೆ211: ಭಾರತ ತಂಡವು ಟ್ವೆಂಟಿ–20 ಕ್ರಿಕೆಟ್‌ನಲ್ಲಿ ದಾಖಲಿಸಿದ್ದ ಗರಿಷ್ಠ ಸ್ಕೋರ್ (ಮೊಹಾಲಿ–2009)
* 340 ರನ್ ಗಳಿಸಿದ್ದ ಶ್ರೀಲಂಕಾದ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯ ಅವರು ಭಾರತದ ಎದುರು ತ್ರಿಶತಕ ದಾಖಲಿಸಿದ ಲಂಕಾದ ಏಕೈಕ ಬ್ಯಾಟ್ಸ್‌ಮನ್

ಸರಣಿಯ ವೇಳಾಪಟ್ಟಿ
2 ಅಭ್ಯಾಸ ಪಂದ್ಯಗಳು: ಜುಲೈ 21 ಮತ್ತು 22
3 ಟೆಸ್ಟ್‌ಗಳು: ಜುಲೈ 26 ರಿಂದ 30. ಸ್ಥಳ: ಕ್ಯಾಂಡಿ, ಆಗಸ್ಟ್‌ 4 ರಿಂದ 8 ಸ್ಥಳ; ಗಾಲ್. ಆಗಸ್ಟ್ 12 ರಿಂದ 16 , ಸ್ಥಳ: ಕೊಲಂಬೊ
5 ಏಕದಿನ ಪಂದ್ಯಗಳು: ಆ 20 (ಕೊಲಂಬೊ), ಆ.24 (ದಂಬುಲಾ), ಆ. 27 (ಪಲೆಕಲ್), ಆ. 30 (ಪಲೆಕಲ್), ಸೆ 3 (ಕೊಲಂಬೊ)
1 ಟ್ವೆಂಟಿ–20: ಸೆ 6 (ಕೊಲಂಬೊ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT