ಶುಕ್ರವಾರ, ಡಿಸೆಂಬರ್ 6, 2019
17 °C

ಅಭಿನೇತ್ರಿಯಾಗುವ ಅದಿತಿ ಕನಸು

Published:
Updated:
ಅಭಿನೇತ್ರಿಯಾಗುವ ಅದಿತಿ ಕನಸು

ಸಂದರ್ಶನ: ರಮ್ಯಾ ಕೆದಿಲಾಯ

* ಈ ಕ್ಷೇತ್ರ ಆಕರ್ಷಿಸಿದ್ದು ಹೇಗೆ?

ನಾನು ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಆಕಸ್ಮಿಕ. ಎಂಜಿನಿಯರಿಂಗ್‌ ಮತ್ತು ಎಂಬಿಎ ಮುಗಿಸಿ ದಾವಣಗೆರೆಯಿಂದ ಇಂಟರ್ನ್‌ಷಿಪ್‌ಗಾಗಿ ಬೆಂಗಳೂರಿಗೆ ಬಂದವಳು ನಾನು. ‘ಗುಂಡ್ಯನ ಹೆಂಡ್ತಿ’ ಧಾರಾವಾಹಿಯ ಆಡಿಷನ್‌ನಲ್ಲಿ ಭಾಗವಹಿಸಿ ಆಯ್ಕೆಯಾದೆ. ಹೀಗೆ ವೃತ್ತಿ ಜೀವನ ಬೇರೆಯೇ ತಿರುವು ಪಡೆಯಿತು.

* ಧಾರಾವಾಹಿ ಮತ್ತು ಸಿನಿಮಾದಲ್ಲಿ ಯಾವ ಕ್ಷೇತ್ರ ಉತ್ತಮ?

ನಟನೆಯ ಕ್ಷೇತ್ರವೇ ಅದ್ಭುತವಾದುದು. ಆದರೆ ಸಿನಿಮಾ ಮತ್ತು ಧಾರಾವಾಹಿ ಎರಡೂ ನನ್ನ ಪಾಲಿಗೆ ಒಂದೇ. ಚಿತ್ರೀಕರಣವಾಗಲಿ, ಪ್ರಸಾರವಾಗಲಿ ಸಮಯದ ವ್ಯತ್ಯಾಸವಿದೆಯೇ ಹೊರತು ಬೇರೇನೂ ಇಲ್ಲ.

* ‘ನಾಗಕನ್ನಿಕೆ’ ಧಾರಾವಾಹಿ ಬಗ್ಗೆ ತಿಳಿಸಿ?

ನಾಗಕನ್ನಿಕೆ ಧಾರಾವಾಹಿ ರಾಮ್‌ಜೀ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಸಿನಿಮಾದ ರೀತಿಯಲ್ಲೇ ಚಿತ್ರೀಕರಣವಾಗಿರುವುದು ಇದರ ವಿಶೇಷ. ಸಿನಿಮಾದಷ್ಟೇ ಅದ್ದೂರಿಯಾಗಿದೆ. ಧಾರಾವಾಹಿ ಅಂದಾಗ ಬೇಡವೆಂದು ಹೇಳಿದೆ. ಆದರೆ ಅದರ ಕಥೆ ಹಾಗೂ ರಾಮ್‌ಜೀ ನಿರ್ದೇಶನ ಅಂತ ತಿಳಿದಾಗ ಒಪ್ಪಿಕೊಂಡೆ.

* ನಾಗಕನ್ನಿಕೆ ಧಾರಾವಾಹಿ ಹಿಂದಿ ಭಾಷೆಯ ರಿಮೇಕ್ ಅಲ್ಲವೇ?

ರಿಮೇಕ್ ಹೌದು. ಅದರೆ ಕನ್ನಡಕ್ಕೆ ಬೇಕಾದ ಹಾಗೆ ಬದಲಾವಣೆ ಮಾಡಿಕೊಳ್ಳಲಾಗಿದೆ. ಹಿಂದಿ ಧಾರಾವಾಹಿಯ ಎದುರು ಸ್ಪರ್ಧೆ ಮಾಡುವುದು ಬಹುದೊಡ್ಡ ಸವಾಲು.

* ‘ಧೈರ್ಯಂ’ ಸಿನಿಮಾದಲ್ಲಿ ನಟಿಸಿದ್ದಿರಿ. ಹೇಗಿತ್ತು ಅನುಭವ?

ಧೈರ್ಯಂ ನನ್ನ ಮೊದಲ ಸಿನಿಮಾ. ಅಜಯ್ ರಾವ್‌ ಹೀರೊ. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡಿದ ಖುಷಿ ಇದೆ. ಒಬ್ಬ ನಟಿಗೆ ಒಳ್ಳೆಯ ತಂಡ ಸಿಗುವುದೂ ಅದೃಷ್ಟವೇ. ನಾನು ಆ ವಿಷಯದಲ್ಲಿ ಅದೃಷ್ಟ ಮಾಡಿದ್ದೇನೆಂದು ಅನಿಸುತ್ತದೆ.

* ಬೇರೆ ಹವ್ಯಾಸಗಳು?

ಕವಿತೆಗಳನ್ನು ಬರೆಯುತ್ತೇನೆ. ಪುಸ್ತ ಓದುತ್ತೇನೆ. ಎಸ್. ಎಲ್. ಭೈರಪ್ಪನವರ ಪುಸ್ತಕಗಳು ಅಚ್ಚುಮೆಚ್ಚು.

* ನೀವು ನಟಿಸಲು ಬಯಸುವ ಕನಸಿನ ಪಾತ್ರ?

ಇಂತಹುದೇ ಪಾತ್ರ ಮಾಡಬೇಕೆಂಬ ಆಸೆ ಇಲ್ಲ. ಪ್ರತಿ ಬಾರಿಯೂ ವಿಭಿನ್ನ ಪಾತ್ರದಲ್ಲಿ ನಟಿಸಬೇಕು ಎಂಬ ಆಸೆ ಇದೆ. ಚಂದದ ನಟಿಗಿಂತ ಒಳ್ಳೆಯ ಅಭಿನೇತ್ರಿ ಅನಿಸಿಕೊಳ್ಳಬೇಕೆಂಬ ಬಯಕೆ. ಪೌರಾಣಿಕ ಪಾತ್ರಗಳೆಂದರೆ ಹೆಚ್ಚು ಇಷ್ಟ.

* ನಿಮ್ಮ ನೆಚ್ಚಿನ ನಟ ಹಾಗೂ ನಟಿ ಯಾರು?

ಯಾರೂ ಇಲ್ಲ. ಎಲ್ಲರ ಸಿನಿಮಾ ನೋಡುತ್ತೇನೆ. ಡಾ. ರಾಜ್‌ಕುಮಾರ್‌ ಅವರ ದೊಡ್ಡ ಅಭಿಮಾನಿ ನಾನು. ಇಂದಿನ ಎಲ್ಲಾ ನಟರೂ ಇಷ್ಟ. ನಟಿಯರಲ್ಲೂ ಅಷ್ಟೇ ಎಲ್ಲರೂ ಇಷ್ಟ. ಆದರೆ ರಾಧಿಕಾ ಪಂಡಿತ್ ಅಂದ್ರೆ ಅಪಾರ ಗೌರವವಿದೆ.

* ನಟನೆಗೆ ನಿಮ್ಮ ಮನೆಯಲ್ಲಿ ಪ್ರೋತ್ಸಾಹ ಹೇಗಿದೆ?

ನನ್ನ ತಂದೆ, ತಾಯಿ ಹಾಗೂ ಕುಟುಂಬದವರ ಪ್ರೋತ್ಸಾಹ ಬಹಳಷ್ಟಿದೆ. ನಾನು ಧಾರಾವಾಹಿ ಮಾಡಲು ಹಿಂಜರಿದಾಗ ಪ್ರೋತ್ಸಾಹ ನೀಡಿದವರೇ ತಂದೆ-ತಾಯಿ. ಅವರು ಹೆಮ್ಮೆಪಡೋ ಕೆಲಸ ಮಾಡಿದ್ದೇನೆ ಅನ್ನೋ ತೃಪ್ತಿ ಇದೆ.

*ಈ ಕ್ಷೇತ್ರಕ್ಕೆ ಬಂದ ಬಳಿಕ ನಿಮ್ಮ ಜೀವನದಲ್ಲಿ ಏನಾದರೂ ಬದಲಾವಣೆಯಾಗಿದೆಯೇ?

ನನ್ನಲ್ಲಿ ಬದಲಾವಣೆ ಅಂತ ಏನೂ ಆಗಿಲ್ಲ. ಜೀವನಶೈಲಿ ಬದಲಾಗಿದೆ. ಹಿಂದೆ ನೂರು ರೂಪಾಯಿಯ ಸುಗಂಧದ್ರವ್ಯ ಖರೀದಿಸುತ್ತಿದ್ದವಳು ಈಗ ಐನೂರು ರೂಪಾಯಿಗಳ ಸುಗಂಧದ್ರವ್ಯ ಖರೀದಿಸುತ್ತಿದ್ದೇನೆ ಅದೇ ಬದಲಾವಣೆ.

* ಇಷ್ಟದ ಆಹಾರ?

ಚಪಾತಿ ಬಹಳ ಇಷ್ಟ. ಅದರ ಜೊತೆ ಹಣ್ಣು ತರಕಾರಿ ಸೇವಿಸುತ್ತೇನೆ.

* ಮೆಚ್ಚಿನ ಸ್ಥಳ?

ಹೈದರಾಬಾದ್, ಬೆಂಗಳೂರು ಬಿಟ್ಟರೆ ಬೇರೆಲ್ಲೂ ಹೋಗಿಲ್ಲ. ಬೆಂಗಳೂರೇ ನನ್ನ ಫೇವರಿಟ್. ಹಾಗೆ ಹೋಗಬೇಕೆಂದಿದ್ದರೆ ಮದುವೆಯ ಬಳಿಕ ಯುರೋಪ್ ಪ್ರವಾಸ ಕೈಗೊಳ್ಳಬೇಕು ಅಂತ ಆಸೆ ಇದೆ.

*ಹೊಸ ಸಿನಿಮಾಗಳ ಆಫರ್ ಬಂದಿದೆಯೇ?

ಹೌದು ಬಂದಿದೆ. ಆದರೆ ಯಾವ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಸಂಪೂರ್ಣವಾಗಿ ಧಾರಾವಾಹಿಯಲ್ಲೇ ತೊಡಗಿಸಿಕೊಂಡಿದ್ದೇನೆ. ಅದಾದ ಬಳಿಕ ಕಥೆ ಕೇಳಿ ಸಿನಿಮಾ ಒಪ್ಪಿಕೊಳ್ಳುವೆ. 

ಪ್ರತಿಕ್ರಿಯಿಸಿ (+)