ಭಾನುವಾರ, ಡಿಸೆಂಬರ್ 8, 2019
25 °C

ಜಿಎಸ್‌ಟಿ ಅಳವಡಿಕೆಗೆ ಗಮನ: ತಗ್ಗಿದ ವ್ಯಾಪಾರ

Published:
Updated:
ಜಿಎಸ್‌ಟಿ ಅಳವಡಿಕೆಗೆ ಗಮನ: ತಗ್ಗಿದ ವ್ಯಾಪಾರ

ಬೆಂಗಳೂರು: ‘ವರ್ತಕರು ಜಿಎಸ್‌ಟಿ ಅಳವಡಿಕೆಗೆ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಇದರಿಂದ ಒಂದು ವಾರದಲ್ಲಿ ಅಂದಾಜು ಶೇ 50 ರಷ್ಟು ವ್ಯಾಪಾರ ಇಳಿಕೆ ಆಗಿದೆ’ ಎಂದು ಎಫ್‌ಕೆಸಿಸಿಯ ಎಪಿಎಂಸಿ ಸಮಿತಿ ಅಧ್ಯಕ್ಷ ರಮೇಶ್‌ ಚಂದ್ರ ಲಹೋಟಿ ಅವರು ಮಾಹಿತಿ ನೀಡಿದ್ದಾರೆ.

‘ಬ್ರ್ಯಾಂಡ್‌ ಮತ್ತು ಬ್ರ್ಯಾಂಡ್‌ ಅಲ್ಲದ ಸರಕುಗಳ ಬಗ್ಗೆ ಗೊಂದಲ ಬಗೆಹರಿದಿಲ್ಲ. ಕೆಲವು ವರ್ತಕರು ಬ್ರ್ಯಾಂಡ್‌ ಸರಕುಗಳ ಮಾರಾಟವನ್ನೇ ಕೈಬಿಟ್ಟಿದ್ದಾರೆ. ಅದಕ್ಕೆ ಪರ್ಯಾಯವಾಗಿ ಅದೇ ಮಾನದಂಡ ಇರುವಂತಹ ಸರಕುಗಳನ್ನು ತಂದು ಮಾರುತ್ತಿದ್ದಾರೆ. ಕೆಲವರು ಲೋಗೊ ಪ್ರಿಂಟ್‌ ಮಾಡದೆ, ಬರೀ ಹೆಸರನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ.

‘ಮಾರುಕಟ್ಟೆಗೆ ಹೊಸ ಸರಕುಗಳು ಬಂದಿಲ್ಲ. ಬ್ರ್ಯಾಂಡ್‌ ಸರಕುಗಳಿಗೆ ಶೇ 5 ರಷ್ಟು ತೆರಿಗೆ ಇರುವುದರಿಂದ ಮಾರಾಟಗಾರರು  ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಬ್ರ್ಯಾಂಡ್‌ ಅಲ್ಲದ ಸರಕುಗಳ ಮಾರಾಟಕ್ಕೆ ಯಾವುದೇ ಅಡ್ಡಿಯಾಗುತ್ತಿಲ್ಲ’ ಎಂದರು.

ಬೆಲೆ ನಿಗದಿ ಗೊಂದಲ: ಸರಕುಗಳಿಗೆ ಬೆಲೆ ನಿಗದಿಗೆ ಸಂಬಂಧಿಸಿದಂತೆ ವರ್ತಕರಲ್ಲಿರುವ ಗೊಂದಲ ಇನ್ನೂ ಬಗೆಹರಿದಿಲ್ಲ.

‘ಪ್ರತಿ ಸರಕಿಗೆ ಒಂದು ಎಚ್‌ಎಸ್‌ಎನ್‌ ಕೋಡ್‌ (Harmonized System of Nomenclature Code) ಇರುತ್ತದೆ. ಆದರೆ ಶೇ 25 ರಷ್ಟು ಸರಕುಗಳಿಗೆ ಎಚ್‌ಎಸ್‌ಎನ್‌ ಕೋಡ್‌ ಸಿಗುತ್ತಿಲ್ಲ. ಬೆಲೆ ಸಿಗುತ್ತಿಲ್ಲ. ಸರಕುಗಳಿಗೆ ವೈಜ್ಞಾನಿಕ ಹೆಸರು ನೀಡಿರುವುದರಿಂದ ಹುಡುಕುವುದು ಕಷ್ಟವಾಗುತ್ತಿದೆ. ಉದಾಹರಣೆಗೆ ಬೇಳೆಕಾಳಿಗೆ Dried Leguminous Vegetables ಎಂಬ ಹೆಸರಿದೆ. ಈ ಹೆಸರು ವರ್ತಕರಿಗೆ ಗೊತ್ತಿಲ್ಲ. ಹೀಗಾಗಿ ಅದಕ್ಕೆ ಎಚ್‌ಎಸ್‌ಎನ್‌ ಕೋಡ್‌ ಹುಡುಕಲು ಆಗದೇ ಬೆಲೆ ನಿಗದಿ ಮಾಡಲು ಆಗುತ್ತಿಲ್ಲ’ ಎಂದು ಆವರು ವರ್ತಕರು ಎದುರಿಸುತ್ತಿರುವ ಸಮಸ್ಯೆ ವಿವರಿಸಿದರು.

ಸರಕುಗಳು ಯಾವ ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ. ಬೆಲೆ ಎಷ್ಟು ಎನ್ನುವ ಬಗ್ಗೆ ಸುಲಭವಾಗಿ ಗೂಗಲ್‌ನಲ್ಲಿ ಮಾಹಿತಿ ಸಿಗುತ್ತದೆ. ಅಲ್ಲದೆ, ಜಾಹೀರಾತು ಸಹ ನೀಡಲಾಗುತ್ತಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ತಿಳಿಸಿದೆ.

ಪ್ರತಿಕ್ರಿಯಿಸಿ (+)