ಬುಧವಾರ, ಡಿಸೆಂಬರ್ 11, 2019
24 °C

ಹಲ್ಲಿಗಳ ನಡವಳಿಕೆಯಲ್ಲಿ ಮಾನವನ ಹಸ್ತಕ್ಷೇಪ

Published:
Updated:
ಹಲ್ಲಿಗಳ ನಡವಳಿಕೆಯಲ್ಲಿ ಮಾನವನ ಹಸ್ತಕ್ಷೇಪ

ನಗರೀಕರಣವು ಕೈಗಾರೀಕರಣದೊಂದಿಗೆ ಕೈಜೋಡಿಸಿ ಇಡೀ ಪ್ರಪಂಚವನ್ನು ರೂಪಾಂತರಿಸಿದೆ. ಉತ್ತಮ ಭವಿಷ್ಯದ ಹುಡುಕಾಟದಲ್ಲಿ ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುವ ಜನರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಹೀಗಾಗಿ ನಗರಗಳ ಭೂಪ್ರದೇಶದಲ್ಲಿ, ನಮ್ಮ ಜೀವನದ ಗುಣಮಟ್ಟದಲ್ಲಿ ತ್ವರಿತ ಬದಲಾವಣೆ ಕಂಡು ಬರುತ್ತಿದೆ. ನಮ್ಮ ಮೇಲೆ ಪರಿಣಾಮ ಬೀರಿದ ಹಾಗೆಯೇ ಇದು ನಮ್ಮ ಸಹವರ್ತಿ ಜೀವಿಗಳ ಮೇಲೂ ಪ್ರಭಾವ ಬೀರಿದೆ.

ಪ್ರಾಧ್ಯಾಪಕ ಥಾಕರ್ ಮತ್ತು ಅನುರಾಧಾ ಅವರು  ‘ದಕ್ಷಿಣ ಭಾರತೀಯ ರಾಕ್ ಆಗಾಮ’ (ಸಾಮೊಫಿಲಸ್ ಡೋರ್ಸಲಿಸ್) ಬಗ್ಗೆ ಅಧ್ಯಯನ ನಡೆಸಿದಾಗ, ನಮ್ಮ ಜೀವನಶೈಲಿ, ಭೂಪ್ರಾದೇಶಿಕ ಬದಲಾವಣೆಗಳು ಅವುಗಳ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದರ ಪರಿಚಯವಾಯಿತು. ನಮ್ಮ ಮನೆಗಳ ಸುತ್ತಮುತ್ತ ಸಾಮಾನ್ಯವಾಗಿ ಕಂಡುಬರುವ, ‘ಓತಿಕ್ಯಾತ’ಗಳೆಂದೇ ಪರಿಚಿತವಾಗಿರುವ ಈ ಹಲ್ಲಿಗಳು, ದಕ್ಷಿಣಭಾರತದಲ್ಲಿನ ಅರೆ ಶುಷ್ಕ ಪ್ರದೇಶಗಳು ಮತ್ತು ಉಪನಗರದ ಪ್ರದೇಶಗಳಲ್ಲಿ ಕಂಡುಬರುತ್ತವೆ.  ಜನವಸತಿ ಕಡಿಮೆಯಿರುವ ಹಳ್ಳಿಗಾಡುಗಳಲ್ಲಿ, ಕಲ್ಲುಬಂಡೆಗಳ ಮೇಲೆ ಪೊದೆಸಸ್ಯದ ನಡುವೆ ಇವುಗಳನ್ನು ಕಾಣಬಹುದು. ಸಂತಾನವೃದ್ಧಿ ಕಾಲದಲ್ಲಿ ಗಂಡುಹಲ್ಲಿಗಳಲ್ಲಿ ಎದ್ದುಕಾಣುವಂತಹ ಸುಂದರ ಬಣ್ಣಗಳ ಬೆಳವಣಿಗೆಯಾಗುತ್ತದೆ. ಇದು ಈ ಹಲ್ಲಿಗಳ ವೈಶಿಷ್ಟ್ಯ.

ಥಾಕರ್ ಮತ್ತು ಅನುರಾಧಾ ನಡೆಸಿದ ಇತ್ತೀಚಿನ ಅಧ್ಯಯನಗಳಲ್ಲಿ,‘ರಾಕ್ ಅಗಾಮಾ’ಗಳ ಬಗ್ಗೆ ಕೆಲವು ಮುಖ್ಯ ಸಂಗತಿಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇವು ತಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಬಣ್ಣಗಳನ್ನು ಬಳಸಿ ಸಂವಹನ ನಡೆಸುವ ಬಗೆ, ಅಪಾಯದಿಂದ ತಪ್ಪಿಸಿಕೊಳ್ಳಲು ಬಳಸುವ ತಂತ್ರಗಳು, ಇವುಗಳ ವಾಸಸ್ಥಾನದ ಬಳಕೆ - ಇವೆಲ್ಲಾ ಅಂಶಗಳ ಮೇಲೆ ನಗರೀಕರಣದ ಪ್ರಭಾವವನ್ನು ಕಂಡುಕೊಳ್ಳುವ ಪ್ರಯತ್ನ ಇವರದ್ದಾಗಿದೆ.

ಸಂಶೋಧಕರು ಈ ಅಧ್ಯಯನಕ್ಕಾಗಿ  ಗ್ರಾಮೀಣ ಮತ್ತು ನಗರಪ್ರದೇಶಗಳಿಂದ, ಜೀವಂತ ಗಂಡು ಮತ್ತು ಹೆಣ್ಣುಹಲ್ಲಿಗಳನ್ನು ಅವುಗಳ ಸಂತಾನವೃದ್ಧಿ ಕಾಲದಲ್ಲಿ ವಶಪಡಿಸಿಕೊಂಡರು. ಈ ಹಲ್ಲಿಗಳನ್ನು ಅವುಗಳ ಆವಾಸಸ್ಥಾನಕ್ಕೆ ಹೋಲುವಂತಹ ಪ್ರಯೋಗಾಲಯದ ಪರಿಸ್ಥಿತಿಗಳನ್ನು ತಯಾರಿಸಿ, ಇರಿಸಿದರು. ಇವುಗಳ ದೇಹದಲ್ಲಿ ಎದ್ದುತೋರುವ ಬಣ್ಣಗಳಲ್ಲಾಗುವ ಬದಲಾವಣೆಗಳು ಮತ್ತು ಇವುಗಳ ನಡವಳಿಕೆಯನ್ನು ಹೋಲಿಸಿ ಅಭ್ಯಸಿಸಲಾಯಿತು.  ವಿವಿಧ ಸಾಮಾಜಿಕ ಪರಿಸ್ಥಿತಿಗಳಲ್ಲಿ ಅಂದರೆ, ಗಂಡು ಹಲ್ಲಿಗಳು ಪರಸ್ಪರ ಸಂವಹನ ನಡೆಸಿದಾಗ, ಹೆಣ್ಣು - ಗಂಡು ಹಲ್ಲಿಗಳು ಪರಸ್ಪರ ಸಂವಹನ ನಡೆಸಿದಾಗ ಅಷ್ಟೇ ಅಲ್ಲದೆ, ಒಬ್ಬಂಟಿಯಾಗಿರುವಾಗ ಬಣ್ಣಗಳ ಬದಲಾವಣೆ ಮತ್ತು ನಡವಳಿಕೆಯನ್ನು ಗಮನಿಸಲಾಯಿತು.

ಸಾಮಾಜಿಕ ಸಂವಹನದ ಸಮಯದಲ್ಲಿ, ದೇಹದ ಬಣ್ಣಗಳಲ್ಲಾಗುವ ಬದಲಾವಣೆಯನ್ನು ಅಧ್ಯಯನ ಮಾಡಲು, ಸಂಶೋಧಕರು ಹಲ್ಲಿಗಳ ದೇಹದ ಎಲ್ಲಾ ಪಾರ್ಶ್ವಗಳಲ್ಲಿ ಬಣ್ಣದ ಪ್ರತಿಫಲನವನ್ನು ಅಳೆದಿದ್ದಾರೆ. ಇದಕ್ಕಾಗಿ ಒಂದು ಶೋಧಕವನ್ನು ಹಲ್ಲಿಗಳ ದೇಹಕ್ಕೆ ಅಂಟಿಸಿ, ಅದನ್ನು ರೋಹಿತಮಾಪಕಕ್ಕೆ ಜೋಡಿಸಿದ್ದಾರೆ. ಸಂಶೋಧಕರು ಅಧ್ಯಯನದ ಸಲುವಾಗಿ ಹಲ್ಲಿಗಳನ್ನು ಮುಟ್ಟುತ್ತಿದ್ದರೆ, ಅವು ನೈಸರ್ಗಿಕವಾಗಿ ಸಂವಹನ ನಡೆಸಲು ಸಾಧ್ಯವಾಗುವುದಿಲ್ಲ ಮತ್ತು ಅಧ್ಯಯನದ ಆಶಯ ನೀರಿನಲ್ಲಿ ಹೋಮ. ಹಾಗಾಗಿ, ಸುಲಭವಾಗಿ ಒಯ್ಯಬಹುದಾದ ರೋಹಿತಮಾಪಕದ ಚೀಲವನ್ನು ಹೊತ್ತ ಹಲ್ಲಿಗಳು, ಸಂಶೋಧಕರ ಇರುವಿನ ಅರಿವಿಲ್ಲದೆ ನಿರ್ಭಿಡೆಯಿಂದ ಇತರೆ ಹಲ್ಲಿಗಳೊಂದಿಗೆ ಸಂವಹನ ನಡೆಸಬಹುದಾಗಿದೆ.

ಎಷ್ಟು ಪ್ರತಿಶತ ಬೆಳಕು ಪ್ರತಿಫಲನವಾಗುತ್ತದೆ ಎಂಬುದನ್ನು ಅಳೆದು, ಅದರ ಆಧಾರದ ಮೇಲೆ, ಹಲ್ಲಿಯ ದೇಹದಿಂದ ಪ್ರತಿಫಲಿಸುವ ನಿರ್ದಿಷ್ಟ ತರಂಗಾಂತರದ ಬೆಳಕಿನ ಪ್ರಮಾಣವನ್ನು ಸಂಶೋಧಕರು ಅಳೆದಿದ್ದಾರೆ; ಇದರಿಂದ ಬೆಳಕಿನ ತೀವ್ರತೆಯನ್ನೂ ಕಂಡುಕೊಂಡಿದ್ದಾರೆ.

ಗಂಡುಹಲ್ಲಿಗಳು ಪ್ರಣಯ ವರ್ತನೆಯನ್ನು ಪ್ರದರ್ಶಿಸುವ ಸಲುವಾಗಿ ಹೆಣ್ಣು ಹಲ್ಲಿಗಳೊಂದಿಗೆ ಸಂವಹನ ನಡೆಸುವ ಸಂದರ್ಭದಲ್ಲಿ, ಅವುಗಳ ದೇಹದ ಮೇಲ್ಬದಿಯ ಹಳದಿ ಪಟ್ಟಿಯು ಕಿತ್ತಳೆ/ಕೆಂಪು ಬಣ್ಣಕ್ಕೆ ಬದಲಾಗುತ್ತದೆ ಮತ್ತು ಎರಡೂ ಪಾರ್ಶ್ವದಲ್ಲಿರುವ ಪಟ್ಟಿಯು ಕಿತ್ತಳೆಬಣ್ಣದಿಂದ ಕಪ್ಪುಬಣ್ಣಕ್ಕೆ ಬದಲಾಗುತ್ತದೆ. ಇತರ ಗಂಡುಹಲ್ಲಿಗಳೊಂದಿಗೆ ಸಂವಹನ ನಡೆಸುವ ಸಮಯದಲ್ಲಿ, ಆಕ್ರಮಣಶೀಲ ನಡವಳಿಕೆಯನ್ನು ಪ್ರದರ್ಶಿಸುವ ಸಲುವಾಗಿ ದೇಹದ ಮೇಲ್ಬದಿಯ ಪಟ್ಟಿಯು ಪ್ರಕಾಶಮಾನವಾದ ಹಳದಿ ಮತ್ತು ಪಾರ್ಶ್ವದ ಪಟ್ಟಿಗಳು ಪ್ರಕಾಶಮಾನವಾದ ಕಿತ್ತಳೆಬಣ್ಣಕ್ಕೆ ಬದಲಾಗುತ್ತವೆ. ಸಾಮಾನ್ಯ ಪರಿಸ್ಥಿತಿಗಳಲ್ಲಿ, ತಮ್ಮ ನೈಸರ್ಗಿಕ ಆವಾಸಸ್ಥಾನವಾದ ಕಲ್ಲುಗಳ ಮಾದರಿಯಂತೆ ಇವುಗಳ ದೇಹವು ಕಂದುಬಣ್ಣದಲ್ಲಿರುತ್ತವೆ.

ಸಂಶೋಧಕರು, ಡಿಜಿಟಲ್ ವೀಡಿಯೊಗ್ರಫಿ ಮತ್ತು ಛಾಯಾಗ್ರಹಣವನ್ನು ಬಳಸಿ, ಬಣ್ಣ ಬದಲಾವಣೆಯ ವೇಗವನ್ನು ಅಳೆದರು. ಇದರಿಂದ ತಿಳಿದುಬಂದದ್ದೆಂದರೆ, ಪ್ರಣಯದ ವರ್ತನೆಯ ಸಮಯಕ್ಕಿಂತಾ ಆಕ್ರಮಣಶೀಲ ನಡವಳಿಕೆಯ ಸಮಯದಲ್ಲಿ ಬಣ್ಣಬದಲಾವಣೆಯು ಹೆಚ್ಚು ವೇಗವಾಗಿತ್ತು. ಅಷ್ಟೇ ಅಲ್ಲದೆ, ಸಂಶೋಧಕರು ಗ್ರಾಮೀಣ ಮತ್ತು ನಗರದ ಹಲ್ಲಿಗಳ ನಡುವೆ ನಿರ್ದಿಷ್ಟ ವ್ಯತ್ಯಾಸಗಳನ್ನು ಗಮನಿಸಿದ್ದಾರೆ; ಗ್ರಾಮೀಣ ಗಂಡು ಹಲ್ಲಿಗಳು  ನಗರದ ಗಂಡು ಹಲ್ಲಿಗಳಿಗಿಂತಾ ಪ್ರಣಯದ ವರ್ತನೆಯಲ್ಲಿ ಹೆಚ್ಚಿನ ತೀವ್ರತೆಯುಳ್ಳ ಬಣ್ಣಬದಲಾವಣೆಯನ್ನು ತೋರಿಸಿವೆ. ಗಂಡುಹಲ್ಲಿಗಳ ನಡುವಣ ಸಾಮಾನ್ಯ ಸಂವಹನದಲ್ಲಿ ಗ್ರಾಮೀಣ ಹಲ್ಲಿಗಳು ವೇಗವಾಗಿ ಬಣ್ಣಬದಲಾಯಿಸುವುದು ಕಂಡುಬಂದಿದೆ.

ಸಂಶೋಧಕರ ಪ್ರಕಾರ, ಬಣ್ಣ ಬದಲಾವಣೆಯ ತೀವ್ರತೆಯು ಗಂಡುಹಲ್ಲಿಯ ಗುಣಮಟ್ಟದ ಸಂಕೇತ ಮತ್ತು ಬಣ್ಣಬದಲಾವಣೆಯ ವೇಗವು ಪುರುಷ ಪ್ರಾಬಲ್ಯದ ಸಂಕೇತ. ತಮ್ಮ ಅಳಿದುಳಿದ ಆವಾಸ ಸ್ಥಾನಗಳಲ್ಲಿ ಹೆಚ್ಚುತ್ತಿರುವ ಜನಸಂದಣಿ ಮತ್ತು ನಗರದಲ್ಲಿ ವಾಸಿಸಲು ಎದುರಿಸಬೇಕಾದ ಒಟ್ಟಾರೆ ಒತ್ತಡದ ಪರಿಣಾಮದಿಂದ ಬಹುಶಃ ಬೆಂಗಳೂರಿನ ಹಲ್ಲಿಗಳು, ಸಾಮಾಜಿಕ ಸಂವಹನದಲ್ಲಿ ತಮ್ಮ ಬಣ್ಣಗಳನ್ನು ಬದಲಾಯಿಸುವ ವೇಗವು ತಗ್ಗಿದೆ ಮತ್ತು ಬಣ್ಣವು ಗಾಢತೆಯನ್ನು ಕಳೆದುಕೊಳ್ಳುತ್ತಿದೆ.

ನಗರೀಕರಣದ ಕಾರಣದಿಂದಾಗಿ ಮಾನವ ಚಟುವಟಿಕೆಗಳು ಹಲ್ಲಿಗಳ ಪಾರುಗಾಣಿಕಾ ತಂತ್ರಗಳ ಮೇಲೆ ಹೇಗೆ ಪರಿಣಾಮ ಬೀರಿವೆ ಎಂಬುದರ ಬಗ್ಗೆ ಅಧ್ಯಯನದ ಎರಡನೆಯ ಭಾಗವು ಕೇಂದ್ರೀಕೃತವಾಗಿತ್ತು ಹಳ್ಳಿಗಳಿಗಿಂತಾ ನಗರದ ಪರಿಸರವು ವಿಭಿನ್ನವಾಗಿದ್ದು, ಸಂಕೀರ್ಣವಾಗಿದೆ. ನಗರಗಳಲ್ಲಿ ಹಲ್ಲಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಡಗುದಾಣಗಳು ಲಭ್ಯವಿದ್ದು, ಮಾನವನ ಇರುವನ್ನು ಅವು ಅಭ್ಯಾಸ ಮಾಡಿಕೊಂಡುಬಿಟ್ಟರೆ, ನಗರಕ್ಕೆ ಹೊಂದಿಕೊಳ್ಳುವುದು ಸುಲಭವೇ; ಇದೇ ಕಾರಣದಿಂದ, ಗ್ರಾಮೀಣಹಲ್ಲಿಗಳು ನಗರದ ಹಲ್ಲಿಗಳಿಗಿಂತಾ ಬೇಗನೇ ತಪ್ಪಿಸಿಕೊಳ್ಳುವ ತಯಾರಿ ನಡೆಸಿದವು.

ಭೂಮಿಯನ್ನು ‘ಶಾಂತ ನೈಸರ್ಗಿಕ ಪ್ರದೇಶಗಳು’ ಮತ್ತು ‘ಮಾನವ ಪ್ರಾಬಲ್ಯದ ಪ್ರದೇಶಗಳು’ ಎಂದು ವಿಂಗಡಿಸಲಾಗಿಲ್ಲ. ಒಂದರೊಂದಿಗೆ ಮತ್ತೊಂದು ಹಾಸುಹೊಕ್ಕಾಗಿದೆ. ನಾವು ನಗರಗಳನ್ನು ವಿಸ್ತರಿಸುತ್ತಾ ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ಮಾನವ ಬಳಕೆಗೆ ಅನುಗುಣವಾಗಿ ಪರಿವರ್ತಿಸುತ್ತಿರುವುದರಿಂದ, ವೇಗವಾಗಿ ನೂರಾರು ಪ್ರಭೇದಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಹಾಗಾಗಿ, ಈ ಹಲ್ಲಿಯು ಬೆಂಗಳೂರಿನಂತಹ ನಗರಕ್ಕೆ ಹೊಂದಿಕೊಂಡು ಬದುಕುತ್ತಿರುವುದರ ಹಿಂದಿನ ಮರ್ಮವನ್ನು ಅರ್ಥಮಾಡಿಕೊಂಡರೆ, ಅವುಗಳೊಂದಿಗೆ ನಮ್ಮ ಸಹಬಾಳ್ವೆ ಸುಲಭವಾಗುತ್ತದೆ.

–ಗುಬ್ಬಿ ಲ್ಯಾಬ್ಸ್‌

(ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿರುವ ಸಾಮಾಜಿಕ ಉದ್ಯಮ)

ಪ್ರತಿಕ್ರಿಯಿಸಿ (+)