ಸೋಮವಾರ, ಡಿಸೆಂಬರ್ 9, 2019
26 °C
ಅರಣ್ಯ ಇಲಾಖೆ ಅಧಿಕಾರಿಗಳ ತರಾಟೆ, ಪ್ರತಿ ವರ್ಷ ನೆಡುವ ಕೋಟಿಗಟ್ಟಲೆ ಗಿಡ ಎಲ್ಲಿ ಹೋದವು?

ಬೆಂಗಳೂರು ಬಿಟ್ಟು ಕಾಡಿಗೆ ಹೋಗಿ: ಸಿ.ಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ಬಿಟ್ಟು ಕಾಡಿಗೆ ಹೋಗಿ: ಸಿ.ಎಂ

ಬೆಂಗಳೂರು: ‘ಅರಣ್ಯ ಇಲಾಖೆ ಅಧಿಕಾರಿಗಳು ಬೆಂಗಳೂರು ಬಿಟ್ಟು ಕಾಡಿನಲ್ಲೆ ಹೆಚ್ಚು ಕಾಲ ಇರಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಏರ್ಪಡಿಸಿದ್ದ ವನ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಅಧಿಕಾರಿಗಳು ಅರಣ್ಯ ಭವನದಲ್ಲಿ ಕುಳಿತು ಕಾಡು ಉಳಿಸುತ್ತೇವೆ ಎಂದರೆ ಆಗುವುದಿಲ್ಲ. ಇವರು ಹೆಚ್ಚಾಗಿ ಎಲ್ಲಿರುತ್ತಾರೆ ಎಂಬುದನ್ನು ಸಚಿವ ರಮಾನಾಥ ರೈ  ಗಮನಿಸಬೇಕು’ ಎಂದು  ಹೇಳಿದರು.

‘ನಮ್ಮ ತಪ್ಪಿನಿಂದಾಗಿ ರಾಜ್ಯದ ಕೆಲವು ಕಡೆ ಕಾಡಿಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಯಿತು. ಮುಂಜಾಗ್ರತೆ ವಹಿಸಿದ್ದರೆ ಅನಾಹುತ ತಪ್ಪಿಸಬಹುದಿತ್ತು’ ಎಂದರು.

‘ಪರಿಸರ ಸಮತೋಲನದಲ್ಲಿ ಇರಬೇಕೆಂದರೆ ಒಟ್ಟು ಭೌಗೋಳಿಕ ಪ್ರದೇಶದಲ್ಲಿ  ಮೂರನೇ ಒಂದು ಭಾಗ ಅರಣ್ಯ ಇರಬೇಕು. ಆ ಲೆಕ್ಕದಲ್ಲಿ ಕರ್ನಾಟಕದಲ್ಲಿ ಕನಿಷ್ಠ 65,000 ಚದರ ಕಿ.ಮೀ ವಿಸ್ತೀರ್ಣದಷ್ಟು ಕಾಡು ಇರಬೇಕು. ಆದರೆ ಈಗ 38,000 ಚದರ ಕಿ.ಮೀ ಮಾತ್ರ ಅರಣ್ಯ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರತಿ ವರ್ಷ 6 ಕೋಟಿಯಿಂದ 8 ಕೋಟಿ ಗಿಡ ನೆಡುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಆದರಲ್ಲಿ ಎಷ್ಟು ಗಿಡ ಮರವಾಗಿ ಬೆಳೆದವು ಎಂಬ ಲೆಕ್ಕ ಯಾರ ಬಳಿಯೂ ಇಲ್ಲ. ಹೀಗಾದರೆ ಅರಣ್ಯ ಪ್ರದೇಶ ಹೆಚ್ಚಾಗುವುದು ಹೇಗೆ’ ಎಂದು ಪ್ರಶ್ನಿಸಿದರು.

ಡಾ. ರಾಜಕುಮಾರ್‌ ನಟಿಸಿರುವ ಗಂಧದ ಗುಡಿ ಚಲನಚಿತ್ರದಲ್ಲಿ ಮರಗಳ್ಳರು,  ಚರ್ಮಕ್ಕಾಗಿ ಪ್ರಾಣಿಗಳನ್ನು ಕೊಲ್ಲುವವರ ಬಗ್ಗೆ ವಿಶೇಷವಾಗಿ ತೋರಿಸಲಾಗಿದೆ. ಅಂತವರು ಈಗಲೂ ಇದ್ದಾರೆ. ಅಧಿಕಾರಿಗಳು ಹೆಚ್ಚು ಜಾಗೃತಿ ವಹಿಸಬೇಕು  ಎಂದು ಸಲಹೆ ನೀಡಿದರು.

‘ಅರಣ್ಯ ಪ್ರಮಾಣ ಜಾಸ್ತಿ ಆಗಿದೆ’

‘ಕರ್ನಾಟಕದಲ್ಲಿ 28,900 ಹೆಕ್ಟೇರ್‌ನಷ್ಟು ಅರಣ್ಯ ಜಾಸ್ತಿಯಾಗಿದೆ ಎಂದು ಡೆಹ್ರಾಡೂನ್‌ನ ಸಂಶೋಧನಾ ಸಂಸ್ಥೆಯೊಂದು ವರದಿ ನೀಡಿದೆ’ ಎಂದು ಅರಣ್ಯ ಸಚಿವ ರಮಾನಾಥರೈ ಹೇಳಿದರು.

ಅರಣ್ಯ ರಕ್ಷಣೆ ಕಾಯ್ದೆ ಜಾರಿಗೆ ಬಂದ ನಂತರ 25,000 ದಿಂದ 30,000 ಹೆಕ್ಟೇರ್‌  ಅರಣ್ಯ ಪ್ರದೇಶ ಅನ್ಯ ಉದ್ದೇಶಕ್ಕೆ ಬಳಕೆ ಆಗುವುದು ತಪ್ಪಿದೆ ಎಂದರು.

ಅರಣ್ಯ ಇಲಾಖೆಗೆ ಗರಿಷ್ಠ ಲಾಭ ತಂದುಕೊಟ್ಟಿರುವ ವರ್ಷ ಇದಾಗಿದೆ. ₹ 780 ಕೋಟಿ ಆದಾಯ ಗಳಿಸಿರುವುದು ಇದೇ ಮೊದಲು ಎಂದೂ ಅವರು ತಿಳಿಸಿದರು.

ಖಾಲಿ ಕುರ್ಚಿ ನೋಡಿ ಸಿ.ಎಂ ಗರಂ

ವನಮಹೋತ್ಸವ ಕಾರ್ಯಕ್ರಮದಲ್ಲಿ ಖಾಲಿ ಕುರ್ಚಿಗಳನ್ನು ಕಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೆಳಿಗ್ಗೆ 10ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ, 12ರ ಸುಮಾರಿಗೆ ಆರಂಭವಾಯಿತು.  ಆದರೂ ಬಹುತೇಕ ಕುರ್ಚಿಗಳು ಖಾಲಿ ಇದ್ದವು. ವೇದಿಕೆ ಏರಿ ಸಭಿಕರತ್ತ ನೋಡಿದ ಮುಖ್ಯಮಂತ್ರಿ, ಜನರು ಇಲ್ಲದಿರುವುದನ್ನು ಗಮನಿಸಿದರು. ಪಕ್ಕದಲ್ಲೆ ಇದ್ದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್. ಸುಗಾರ ಅವರ ವಿರುದ್ಧ  ಹರಿಹಾಯ್ದರು.

ಪ್ರತಿಕ್ರಿಯಿಸಿ (+)