ಶುಕ್ರವಾರ, ಡಿಸೆಂಬರ್ 6, 2019
17 °C
ಸರಕುಗಳನ್ನು ಸಾಗಿಸುವುದರ ಮೇಲೆ ನಿಗಾ 

ಅಕ್ಟೋಬರ್‌ಗೆ ಇ–ವೇ ಬಿಲ್‌

ಪಿಟಿಐ Updated:

ಅಕ್ಷರ ಗಾತ್ರ : | |

ಅಕ್ಟೋಬರ್‌ಗೆ ಇ–ವೇ ಬಿಲ್‌

ನವದೆಹಲಿ: ಜಿಎಸ್‌ಟಿ ವ್ಯವಸ್ಥೆಯಡಿ, ₹50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ  ಸರಕುಗಳನ್ನು ಸಾಗಿಸುವ ಮುಂಚೆಯೇ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿರಬೇಕೆಂಬ ನಿಯಮ (ಇ–ವೇ ಬಿಲ್‌) ಅಕ್ಟೋಬರ್‌ ತಿಂಗಳಿನಿಂದ ಜಾರಿಗೆ ಬರಲಿದೆ.

ಸರಕುಗಳನ್ನು ರಾಜ್ಯದ ಒಳಗೆ ಮತ್ತು ರಾಜ್ಯದಿಂದ ರಾಜ್ಯಕ್ಕೆ ಸಾಗಿಸುವುದರ ಮೇಲೆ ನಿಗಾ ಇರಿಸಲು ಕರಡು ಇ–ವೇ ಬಿಲ್‌ ರೂಪಿಸಲಾಗಿದೆ. ಚೆಕ್‌ ಪೋಸ್ಟ್‌ಗಳ ಬದಲಿಗೆ ಈ ವ್ಯವಸ್ಥೆಯು ಜಾರಿಗೆ ಬರಲಿದೆ. ಈಗಾಗಲೇ 22 ರಾಜ್ಯಗಳು ಚೆಕ್‌ಪೋಸ್ಟ್‌ಗಳನ್ನು ರದ್ದುಪಡಿಸಿವೆ.

ಇ–ವೇ ಬಿಲ್‌ ವ್ಯವಸ್ಥೆ ಜಾರಿಗೆ ತರಲು ಕೆಲ ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ.  ಆದರೆ, ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳು ಇದನ್ನು ಬೆಂಬಲಿಸಿವೆ.   ಕೇಂದ್ರೀಕೃತ ಸಾಫ್ಟ್‌ವೇರ್  ಸಿದ್ಧಪಡಿಸಿದ ನಂತರ  ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಯಮಗಳ ಅನ್ವಯ, ಜಿಎಸ್‌ಟಿಎನ್‌  ಸಿದ್ಧಪಡಿಸುವ ಇ–ವೇ ಬಿಲ್‌, ಸರಕು ಕ್ರಮಿಸಬೇಕಾದ ದೂರ ಆಧರಿಸಿ 1 ರಿಂದ 20 ದಿನಗಳವರೆಗೆ ಊರ್ಜಿತವಾಗಿರುತ್ತದೆ.  ಕೆಲ ಸರಕುಗಳಿಗೆ ಸಂಬಂಧಿಸಿದ ಇ–ವೇ ಬಿಲ್‌ನ ಊರ್ಜಿತ ಅವಧಿಯನ್ನು ವಿಸ್ತರಿಸಲು ಜಿಎಸ್‌ಟಿ ಕಮಿಷನರ್‌ಗೆ ಅಧಿಕಾರ ಇರುತ್ತದೆ.

ಪೂರ್ವಭಾವಿ ಸಿದ್ಧತೆಗಳು ಪೂರ್ಣಗೊಂಡಿಲ್ಲದ ಮತ್ತು ನಿಯಮಗಳು ಅಂತಿಮಗೊಂಡಿಲ್ಲದ ಕಾರಣಕ್ಕೆ ಇದನ್ನು ಮೂರು ತಿಂಗಳ ಕಾಲ ಮುಂದೂಡಲಾಗಿದೆ. ಆಗಸ್ಟ್‌ 5ರಂದು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ  ಈ ವಿಷಯ ಚರ್ಚೆಗೆ ಬರಲಿದೆ.

ರಾಷ್ಟ್ರೀಯ ಮಾಹಿತಿ ಕೇಂದ್ರವು, ಜಿಎಸ್‌ಟಿಎನ್‌ ನೆರವಿನೊಂದಿಗೆ ಈ ವ್ಯವಸ್ಥೆ ಅಭಿವೃದ್ಧಿಪಡಿಸುತ್ತಿದೆ.

ಸರಕುಗಳನ್ನು ಸಾಗಿಸುವವರು ತಮ್ಮ ಜತೆ ಸರಕುಪಟ್ಟಿ ಪೂರೈಕೆ ಬಿಲ್‌ ಅಥವಾ ಇ–ವೇ ಬಿಲ್‌ ಹೊಂದಿರಬೇಕು.  ತೆರಿಗೆ ಅಧಿಕಾರಿಗಳು ಮಾರ್ಗಮಧ್ಯೆ ತಪಾಸಣೆ ನಡೆಸುವ ಅಧಿಕಾರ ಹೊಂದಿರುತ್ತಾರೆ.

ಜಿಎಸ್‌ಟಿ ಬೇಹುಗಾರಿಕೆ ಪಡೆಗೆ ಹೊಸ ಮುಖ್ಯಸ್ಥ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿ  ತಪ್ಪಿಸಿಕೊಳ್ಳುವುದನ್ನು ತಡೆಯುವ ಬೇಹುಗಾರಿಕೆ ಪಡೆಗೆ (ಜಿಎಸ್‌ಟಿಐ)  ಜಾನ್‌ ಜೋಸೆಫ್‌ ಅವರನ್ನು ಮಹಾ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ವೆಂಕಯ್ಯ  ನಾಯ್ಡು ಭರವಸೆ: ‘ಸರಳ  ತೆರಿಗೆ ವ್ಯವಸ್ಥೆ ಜಿಎಸ್‌ಟಿ ಜಾರಿಗೆ ಬಂದ ದಿನದಿಂದ ಜನರು ಸಂತಸಗೊಂಡಿದ್ದಾರೆ.   ಹೊಸ ತೆರಿಗೆ ಬಗ್ಗೆ ಇರುವ ಯಾವುದೇ ಬಗೆಯ ಗೊಂದಲಗಳನ್ನು ಸರ್ಕಾರ ದೂರ ಮಾಡಲಿದೆ’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ  ವೆಂಕಯ್ಯ ನಾಯ್ಡು  ಅಭಿಪ್ರಾಯಪಟ್ಟಿದ್ದಾರೆ.

ಕೆಲ ತೆರಿಗೆ ದರಗಳನ್ನು ಕಡಿಮೆ ಮಾಡಬೇಕು ಎನ್ನುವ ಹಕ್ಕೊತ್ತಾಯ ಕೇಳಿ ಬರುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯಾವುದೂ ಪರಿಪೂರ್ಣವೂ ಅಲ್ಲ, ಅಂತಿಮವೂ ಅಲ್ಲ. ಸರ್ಕಾರ ಖಂಡಿತವಾಗಿಯೂ ಬದಲಾವಣೆ ತರಲಿದೆ’ ಎಂದು ಭರವಸೆ ನೀಡಿದ್ದಾರೆ.

**

ಜಿಎಸ್‌ಟಿ ತುಂಬ ಸರಳ ತೆರಿಗೆ ವ್ಯವಸ್ಥೆಯಾಗಿದ್ದು, ದೇಶದಾದ್ಯಂತ ಅದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಜನ ಸಂಭ್ರಮಪಡುತ್ತಿದ್ದಾರೆ

-ವೆಂಕಯ್ಯ ನಾಯ್ಡು, ಕೇಂದ್ರ ಸಚಿವ

ಪ್ರತಿಕ್ರಿಯಿಸಿ (+)