ಶುಕ್ರವಾರ, ಡಿಸೆಂಬರ್ 6, 2019
21 °C
ಮತ್ತೆ ಮೂವರ ಬಂಧನ; 25 ಮಂದಿ ವಶಕ್ಕೆ

ದಕ್ಷಿಣ ಕನ್ನಡದಲ್ಲಿ ಕಟ್ಟೆಚ್ಚರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಿಣ ಕನ್ನಡದಲ್ಲಿ ಕಟ್ಟೆಚ್ಚರ

ಮಂಗಳೂರು: ಬಂಟ್ವಾಳ ತಾಲ್ಲೂಕಿನ ಕೈಕಂಬದಲ್ಲಿ ಶನಿವಾರ ನಡೆದ ಕಲ್ಲು ತೂರಾಟದಲ್ಲಿ ಭಾಗಿಯಾದ ಆರೋಪದ ಮೇಲೆ ಭಾನುವಾರ ಮತ್ತೆ ಮೂವರನ್ನು ಬಂಧಿಸಿರುವ ಪೊಲೀಸರು, 25 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಿದ್ದು,  ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಮುಂದಾದರೆ ಗುಂಡು ಹಾರಿಸುವಂತೆ ಐಜಿಪಿ ಪಿ. ಹರಿಶೇಖರನ್‌ ಸೂಚನೆ ನೀಡಿದ್ದಾರೆ.

ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆಯಿಂದ ಕಲ್ಲಡ್ಕದವರೆಗೆ ಪರಿಸ್ಥಿತಿ ಇನ್ನೂ ಶಾಂತವಾಗಿಲ್ಲ.

ಆರ್‌ಎಸ್‌ಎಸ್ ಕಾರ್ಯಕರ್ತ ಶರತ್‌ ಮಡಿವಾಳ ಶವಯಾತ್ರೆ ವೇಳೆ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಶನಿವಾರವೇ ಬಂಧಿಸಲಾಗಿತ್ತು. ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿತ್ತು. ಈ ಪೈಕಿ ಮೂವರನ್ನು ಭಾನುವಾರ ಬಂಧಿಸಲಾಯಿತು. ವಿಡಿಯೊ ದೃಶ್ಯಾವಳಿಗಳನ್ನು ಆಧರಿಸಿ ಭಾನುವಾರ ಬೆಳಿಗ್ಗೆಯಿಂದ ಹಲವು ತಂಡಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು,  25 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಾದ 13 ಜನರನ್ನೂ ಭಾನುವಾರ ಸಂಜೆ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಪಶ್ಚಿಮ ವಲಯ ಐಜಿಪಿ ಪಿ.ಹರಿಶೇಖರನ್‌, ‘ಶನಿವಾರ ಕಲ್ಲು ತೂರಾಟ ನಡೆದ ತಕ್ಷಣವೇ ಕಾರ್ಯಾಚರಣೆ ನಡೆಸಿ 10 ಆರೋಪಿಗಳನ್ನು ಬಂಧಿಸಲಾಗಿತ್ತು. ಭಾನುವಾರ ಮೂವರನ್ನು ಬಂಧಿಸಿದ್ದೇವೆ. 25 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಕಲ್ಲು ತೂರಾಟದಲ್ಲಿ ಭಾಗಿಯಾದ ಎಲ್ಲ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.’ ಎಂದರು.

ಉದ್ವಿಗ್ನ ಪರಿಸ್ಥಿತಿ: ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ಜಿಲ್ಲೆಯ ಬಹುಭಾಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆಯಿಂದ ಕಲ್ಲಡ್ಕದವರೆಗೆ ಸುಮಾರು 15 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಇನ್ನೂ ಉದ್ವಿಗ್ನ ಪರಿಸ್ಥಿತಿ ಇದೆ. ಈ ಪ್ರದೇಶದಲ್ಲಿ ಭಾನುವಾರ ವಾಹನ ಮತ್ತು ಜನರ ಸಂಚಾರ ಕಡಿಮೆ ಇತ್ತು. ಈ ವ್ಯಾಪ್ತಿಯ ಹಲವು ಕಡೆಗಳಲ್ಲಿ ವ್ಯಾಪಾರ ವಹಿವಾಟು ಎಂದಿನಂತಿರಲಿಲ್ಲ. ಐಜಿಪಿ ಮತ್ತು ದಕ್ಷಿಣ ಕನ್ನಡ ಎಸ್‌ಪಿ ಸಿ.ಎಚ್‌.ಸುಧೀರ್‌ಕುಮಾರ್ ರೆಡ್ಡಿ ಬಂಟ್ವಾಳದಲ್ಲೇ ಮೊಕ್ಕಾಂ ಹೂಡಿ, ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.

‘ಫರಂಗಿಪೇಟೆಯಿಂದ ಕಲ್ಲಡ್ಕದವರೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ವಿಶೇಷ ಬಂದೋಬಸ್ತ್‌ ಯೋಜನೆ ರೂಪಿಸಲಾಗಿದೆ. ಈ ಪ್ರದೇಶವನ್ನು ಏಳು ವಲಯಗಳಾಗಿ ವಿಂಗಡಿಸಿದ್ದು, ಪ್ರತಿ ವಲಯಕ್ಕೂ ಒಬ್ಬ ಡಿವೈಎಸ್‌ಪಿ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ವಿಶೇಷ ಗಸ್ತು ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ಪ್ರಮುಖ ಸ್ಥಳಗಳಲ್ಲಿ ಶನಿವಾರವೇ 20 ಪೊಲೀಸ್‌ ತನಿಖಾ ಠಾಣೆಗಳನ್ನು ತೆರೆಯಲಾಗಿತ್ತು. ಭಾನುವಾರ ಆರು ಕಡೆ ಹೊಸದಾಗಿ ತನಿಖಾ ಠಾಣೆ ಆರಂಭಿಸಲಾಗಿದೆ. ಎಲ್ಲ ಬಗೆಯ ವಾಹನಗಳನ್ನು ತಡೆದು ತಪಾಸಣೆ ನಡೆಸಲು ಸೂಚಿಸಲಾಗಿದೆ’ ಎಂದು ಎಂದು ಐಜಿಪಿ ತಿಳಿಸಿದರು.

ಶನಿವಾರ ರಾತ್ರಿ ಉಳ್ಳಾಲ ಪೊಲೀಸ್‌ ಠಾಣೆ ವ್ಯಾಪ್ತಿಯ ಕುತ್ತಾರು ರಾಣಿಪುರದಲ್ಲಿ ಹಲ್ಲೆಗೊಳಗಾಗಿರುವ ಚಿರಂಜೀವಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ಘಟನೆಯ ಬಳಿಕ ಮಂಗಳೂರು ನಗರದಾದ್ಯಂತ ಪೊಲೀಸ್‌ ಗಸ್ತು ಹೆಚ್ಚಿಸಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಅನುಮಾನಾಸ್ಪದ ವಾಹನಗಳ ತಪಾಸಣೆಗೆ ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ.

ಸದಾನಂಗೌಡ, ಶೋಭಾ ವಿರುದ್ಧ ಕಿಡಿ– ಧರ್ಮಸ್ಥಳದಲ್ಲಿ ಪ್ರತಿಜ್ಞೆ ಮಾಡಿ: ಖಾದರ್ ಸವಾಲು (ಚಾಮರಾಜನಗರ ವರದಿ):  ‘ಬಂಟ್ವಾಳ ಘಟನೆ ವಿಚಾರದಲ್ಲಿ ನಮ್ಮಿಂದ ತಪ್ಪಾಗಿದೆ ಎಂದು ಆರೋಪಿಸುವ ವಿರೋಧಪಕ್ಷದವರು ಧರ್ಮಸ್ಥಳದ ದೇವರ ಮೇಲೆ ಪ್ರತಿಜ್ಞೆ ಮಾಡಲಿ. ಆಗ ಅದನ್ನು ಒಪ್ಪಿಕೊಳ್ಳುತ್ತೇವೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಡಾ.ಯು.ಟಿ.ಖಾದರ್‌ ಇಲ್ಲಿ ಭಾನುವಾರ ಸವಾಲು ಹಾಕಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಮಂಗಳೂರಿನಲ್ಲಿ ನಡೆಯುತ್ತಿರುವ ಘಟನೆಯನ್ನು ಕೆಲವರು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕೇಂದ್ರ ಸಚಿವ ಸದಾನಂದಗೌಡ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಇದು ಅವರ ಘನತೆಗೆ ತಕ್ಕುದ್ದಲ್ಲ’ ಎಂದು ಟೀಕಿಸಿದರು.

‘ಪ್ರತಿಪಕ್ಷದವರ ಆರೋಪಗಳಿಗೆ ಪ್ರತ್ಯಾರೋಪ ಮಾಡುವುದಿಲ್ಲ. ಇದು ಉತ್ತರ ನೀಡುವ ಸಮಯವಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಎಲ್ಲ ಧರ್ಮದ ಮುಖಂಡರ ಸಭೆ ನಡೆಸಿ ಶಾಂತಿ ನೆಲೆಸಲು ಕ್ರಮವಹಿಸಲಾಗುವುದು’ ಎಂದರು.

‘ಬೇರೆ ಬೇರೆ ಪ್ರಕರಣಗಳಲ್ಲಿ 2 ಇರಿತ ಹಾಗೂ 2 ಕೊಲೆಗಳು ನಡೆದಿವೆ. ನೈಜ ಆರೋಪಿಗಳು ಹಾಗೂ ಅವರಿಗೆ ಬೆಂಬಲ ನೀಡಿದವರನ್ನು ಪತ್ತೆಹಚ್ಚಿ ಕ್ರಮವಹಿಸಲು ಪೊಲೀಸ್‌ ಇಲಾಖೆಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಪೊಲೀಸರು ನೀಡುವ ವರದಿಯನ್ನು ಪರಿಶೀಲಿಸಿ, ಬಳಿಕ ಸಿಐಡಿ ತನಿಖೆ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ತಿಳಿಸಿದರು.

**

ಹಲ್ಲೆಗೆ ಮುಂದಾದರೆ ಗುಂಡು

‘ಪರಿಸ್ಥಿತಿ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಯಾರಾದರೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆಗೆ ಮುಂದಾದರೆ ಗುಂಡು ಹಾರಿಸಿ’ ಎಂದು ಪಶ್ಚಿಮ ವಲಯ ಐಜಿಪಿ ಪಿ.ಹರಿಶೇಖರನ್‌ ಪೊಲೀಸ್‌ ಅಧಿಕಾರಿಗಳಿಗೆ ಶನಿವಾರ ಸೂಚನೆ ನೀಡಿದ್ದಾರೆ.

ಬಂಟ್ವಾಳದಲ್ಲಿ ಶನಿವಾರ ಸಂಜೆ ಪೊಲೀಸ್‌ ಅಧಿಕಾರಿಗಳ ತುರ್ತು ಸಭೆ ನಡೆಸಿರುವ ಅವರು, ‘ನಿಮ್ಮ ಬಳಿ ಇರುವ ಶಸ್ತ್ರಾಸ್ತ್ರಗಳನ್ನು ಅನಿವಾರ್ಯ ಸಂದರ್ಭಗಳಲ್ಲಿ ಕಾನೂನಿನ ಪ್ರಕಾರ ಬಳಕೆ ಮಾಡಿ. ವಾಹನಗಳ ತಪಾಸಣೆ ಮತ್ತು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಯಾರಾದರೂ ಹಲ್ಲೆ ನಡೆಸಲು ಯತ್ನಿಸಿದರೆ ಗುಂಡು ಹಾರಿಸಿ’ ಎಂದು ಸೂಚಿಸಿದ್ದಾರೆ.

**

ಕೊಲೆಯತ್ನ ಪ್ರಕರಣ: ಮೂವರ ಬಂಧನ

ಮಂಗಳೂರಿನ ಅಡ್ಯಾರ್‌ ಪದವು ಬಳಿ ಶುಕ್ರವಾರ ಸಂಜೆ ಪೆಟ್ರೋಲ್‌ ಕೇಳುವ ನೆಪದಲ್ಲಿ ಬೈಕ್‌ ನಿಲ್ಲಿಸಿ ಕೇರಳದ ಮಲಪ್ಪುರಂ ನಿವಾಸಿಯಾಗಿರುವ ನಗರದ ಎಂಜಿನಿಯರಿಂಗ್‌ ಕಾಲೇಜೊಂದರ ವಿದ್ಯಾರ್ಥಿ ಮಹಮ್ಮದ್‌ ಸಾಜೀದ್‌ ಎಂಬುವವರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಗಾಯಗೊಳಿಸಿದ್ದ ಪ್ರಕರಣದಲ್ಲಿ ಮೂವರು ಯುವಕರನ್ನು ನಗರ ಅಪರಾಧ ಪತ್ತೆದಳದ (ಸಿಸಿಬಿ) ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಫರಂಗಿಪೇಟೆ ಸಮೀಪದ ಅರ್ಕುಳ ನಿವಾಸಿ ನಿತಿನ್‌ ಪೂಜಾರಿ (21), ಅಡ್ಯಾರ್‌ ಕಟ್ಟೆಯ ಕೆಂಜೂರು ನಿವಾಸಿ ಪ್ರಾಣೇಶ್‌ ಪೂಜಾರಿ (20) ಮತ್ತು ಪಡೀಲ್‌ ಸಮೀಪದ ಅಳಪೆ ಕಂಡೇವು ನಿವಾಸಿ ಕಿಶನ್‌ ಪೂಜಾರಿ (21) ಬಂಧಿತರು. ಈ ಪೈಕಿ ನಿತಿನ್‌ ಮತ್ತು ಪ್ರಾಣೇಶ್‌ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಹಿಂದೆಯೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್‌.ಸುರೇಶ್‌ ತಿಳಿಸಿದ್ದಾರೆ.

**

ಎಸ್‌ಡಿಪಿಐ, ಪಿಎಫ್‌ಐ ನಿಷೇಧಕ್ಕೆ ಆಗ್ರಹ

ಮಂಗಳೂರು: ‘ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕ ರಾಜ್ಯದ ವಿವಿಧೆಡೆ ಎಸ್‌ಡಿಪಿಐ ಮತ್ತು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯ ಕಾರ್ಯಕರ್ತರು ಸಂಘ ಪರಿವಾರದ ಕಾರ್ಯಕರ್ತರನ್ನು ಹತ್ಯೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿರುವ ದಕ್ಷಿಣ ಕನ್ನಡ ಸಂಸದ ನಳಿನ್‌ಕುಮಾರ್‌ ಕಟೀಲ್‌, ಈ ಎರಡೂ ಸಂಘಟನೆಗಳು ಮತ್ತು ಅವುಗಳ ಮೂಲ ಸಂಘಟನೆಯಾದ ನ್ಯಾಷನಲ್‌ ಡೆವಲಪ್‌ಮೆಂಟ್‌ ಫ್ರಂಟ್‌ ಅನ್ನು ನಿಷೇಧಿಸುವಂತೆ ಒತ್ತಾಯಿಸಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಭಾನುವಾರ ನವದೆಹಲಿಯಲ್ಲಿ ಗೃಹ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿರುವ ಸಂಸದರು, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಉದ್ವಿಗ್ನ ಪರಿಸ್ಥಿತಿ ಕುರಿತು ರಾಜ್ಯ ಸರ್ಕಾರದಿಂದ ವರದಿ ಪಡೆಯಬೇಕು. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಇರುವ ಬೆದರಿಕೆ ಬಗ್ಗೆಯೂ ಮಾಹಿತಿ ಪಡೆಯಬೇಕು’ ಎಂದು ಮನವಿ ಮಾಡಿದ್ದಾರೆ.

**

‘ಸಿ.ಎಂ ಹೊಣೆ’

ತಿಪಟೂರು:
‘ಚುನಾವಣೆ ಹತ್ತಿರ ಬರುತ್ತಿರುವಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕೋಮು ಗಲಭೆ ಸೃಷ್ಟಿಸುತ್ತಿದೆ. ಬಂಟ್ವಾಳದ ಆರ್‍ಎಸ್‍ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಹೊಣೆ’  ಬಿಜೆಪಿ  ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆ ಪೂರ್ವದಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸಿ ಲಾಭ ಪಡೆಯುವ ಹುನ್ನಾರ ಕಾಂಗ್ರೆಸ್ ಪಕ್ಷಕ್ಕಿದೆ.  ಆರ್‍ಎಸ್‍ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ನಿರಂತರ ಹಲ್ಲೆ ನಡೆಯುತ್ತಿವೆ. ರಾಜ್ಯದಲ್ಲಿ  25ಕ್ಕೂ ಹೆಚ್ಚು ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ’ ಎಂದು ದೂರಿದರು.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು,  ಮುಖ್ಯಮಂತ್ರಿಯೇ ನೇರ ಹೊಣೆ’ ಎಂದರು.

ಪ್ರತಿಕ್ರಿಯಿಸಿ (+)