ಬುಧವಾರ, ಡಿಸೆಂಬರ್ 11, 2019
25 °C

ನೀರಸಂಕಟ ಕರಗಿಸಲು ಮಾನವನಿರ್ಮಿತ ಮಂಜುಸ್ತೂಪ

Published:
Updated:
ನೀರಸಂಕಟ ಕರಗಿಸಲು ಮಾನವನಿರ್ಮಿತ ಮಂಜುಸ್ತೂಪ

-ಶ್ರೀ  ಪಡ್ರೆ

ದೊಡ್ಡದೊಡ್ಡ ಸಮಸ್ಯೆಗಳು ಒಮ್ಮೊಮ್ಮೆ ಶ್ರೀಸಾಮಾನ್ಯರಿಂದಲೂ ಪರಿಹಾರವಾಗುವುದಿದೆ. ನೀರ ಸಂಕಟವೂ ಇದಕ್ಕೆ ಹೊರ

ತಲ್ಲ. ಪ್ರಾಮಾಣಿಕ ಕಳಕಳಿ ಹೊಂದಿದ ವ್ಯಕ್ತಿಗಳು ಸಮಸ್ಯಾ ಪರಿಹಾರದ್ದೇ ಚಿಂತೆಯಲ್ಲೇ ಮಗ್ನರಾಗಿದ್ದರೆ ಸಾಕು. ಅಕಸ್ಮಾತ್ತಾಗಿ ‘ಯುರೇಕಾ’ ಎಂದು ಉದ್ಗರಿಸುವ ಚಿನ್ನದ ಕ್ಷಣ ಬರುವುದಿದೆ.

ಅದು ಮೇ ತಿಂಗಳ ಕಡು ಬೇಸಿಗೆ. ಲಡಾಖಿನ ಪಟ್ಟಣ ಫೇಯಲ್ಲಿ ತರುಣರೊಬ್ಬರು ಕಾರು ಓಡಿಸುತ್ತಿದ್ದರು. ಥಟ್ಟೆಂದು ಕಣ್ಣಿಗೆ ಬಿದ್ದದ್ದು ಸೇತುವೆಯ ಕೆಳಗಿನ ಮಂಜುಗಡ್ಡೆ. ಹಿಮಾಲಯದ ಮಂಜುಪರ್ವತ ಇರುವುದು ಇನ್ನೂ ಎಷ್ಟೋ ಮೇಲೆ. ಇಷ್ಟು ತಗ್ಗಿನಲ್ಲೂ ಮಂಜುಗಡ್ಡೆ ಕಂಡು ಯುವಕ ದಂಗಾ

ದರು. ‘ಓ! ನೆರಳಿದ್ದರೆ ಇಲ್ಲೂ ಮಂಜುಗಡ್ಡೆ ತಯಾರಾಗುತ್ತದೆ’ ಅಂದುಕೊಂಡರು. ಕಾರು ಮುಂದಕ್ಕೋಡಿತು; ಮನಸ್ಸು ಮಾತ್ರ ಆ ಮಂಜುಗುಡ್ಡೆಗೇ ಅಂಟಿಕೊಂಡಿತು.

ಲಡಾಖ್ ಸಮುದ್ರಮಟ್ಟದಿಂದ ಮೂರೂವರೆ ಸಾವಿರ ಮೀಟರ್ ಎತ್ತರದ ಚಳಿ ಮರುಭೂಮಿ. ಮೇಲಿನಿಂದ ಹಿಮ ಕರಗಿ ಬಂದರಷ್ಟೇ ಇಲ್ಲಿ ನೀರು ಲಭ್ಯ. ಕೃಷಿಗೆ ಏಪ್ರಿಲ್ - ಮೇ ತಿಂಗಳಲ್ಲಿ ನೀರು ಬೇಕು. ಪ್ರಾಕೃತಿಕವಾಗಿ ಕರಗಿ ಇಳಿಯುವ ನೀರು ಯಾವಾಗಲೂ ಲೇಟ್ ಲತೀಫ. ಇದರಿಂದಾಗಿ ಇಲ್ಲಿ ಬದುಕೇ ದುಸ್ತರ. ಆದಾಯಮಾರ್ಗಕ್ಕೆ ಕತ್ತರಿ. ಇದಕ್ಕೇನು ದಾರಿ?

ಅಪೂರ್ವ ಮಂಜುಗಡ್ಡೆಯಲ್ಲೇ ಮನಸ್ಸು ನೆಟ್ಟ ತರುಣ, ಸೋನಮ್ ವಾಂಗ್ ಚುಕ್  ಸಾಮಾಜಿಕ ಕಾರ್ಯಕರ್ತರು. ಕೃತಕ ಹಿಮಗಡ್ಡೆ  -ಆರ್ಟಿಫಿಶಿಯಲ್ ಗ್ಲೇಶಿಯರ್ಸ್ – ನಿರ್ಮಿಸುವುದು ಈ ಭಾಗಕ್ಕೆ ಹೊಸದಲ್ಲ. ನಾರ್ಫೆಲ್ ಚೆವಾಂಗ್ ಈ ಅನುಶೋಧನೆಯ ಪಿತೃ. ದಶಕಗಳ ಹಿಂದೆ ಇಂಥ ಹಲವು ಹಿಮಗಡ್ಡೆ ಎಬ್ಬಿಸಿದ್ದರು. ಆದರೆ ಅವನ್ನು ನಿರ್ಮಿಸಿದ ಜಾಗ ಇನ್ನೂ ಎತ್ತರದ್ದು. ಹೋಗಿ ಬರಲೂ ಕಷ್ಟ; ವೆಚ್ಚವೂ ಹೆಚ್ಚು.

ನಾರ್ಫೆಲರ ಅಡಿಪಾಯದ ಮೇಲೆ ಸೋನಮ್ ಅವರ ವಿಜ್ಞಾನ ಮನದಲ್ಲೇ ಗೋಪುರ ಕಟ್ಟತೊಡಗಿತು. ಬಿಸಿಲಿನ ಝಳ ಹೆಚ್ಚಿಲ್ಲದಲ್ಲಿ ಮಂಜು ಬೇಗ ಕರಗದು. ಸಾಕಷ್ಟು ಚಿಂತನಮಂಥನದಿಂದ ಹುಟ್ಟಿಕೊಂಡ ಪರಿಕಲ್ಪನೆಯೇ ಮಂಜು ಸ್ತೂಪ. ಟಿಬೆಟನ್ನರ ಧಾರ್ಮಿಕ ರಚನೆ ಸ್ತೂಪದಾಕಾರ ಮಂಜು ಕಾದಿಡಲೂ ಸೂಕ್ತ ಅನಿಸಿತು. ಚಳಿಗಾಲದಲ್ಲಿ ಪೈಪಿನಲ್ಲಿ ನೀರು ತಂದು ಚಿಮುಕಿಸಿದರೆ ಮಂಜುಗೋಪುರ ‘ಕಟ್ಟಬಹುದು’ ಎಂಬ ಹೊಳಹು ಗಟ್ಟಿಯಾಯಿತು. 2013ರಲ್ಲಿ ನಡೆಸಿದ ಮೊದಲ ಪ್ರಯೋಗವೇ ಗೆದ್ದಿತು. ಮಂಜುಸ್ತೂಪದ ಕೊಡುಗೆ – ಹಿಮಾಲಯದಿಂದ ಹಿಮ ಕರಗಿ ನೀರು ಈ ಭಾಗಕ್ಕೆ ತಲಪುವ ಎಷ್ಟೋ ಮೊದಲೇ ಕರಗಿ ನೀರೂಡುವುದು.

ಈ ವರೆಗೆ ಈ ಮಂದಿ ನಾಕು ಮಂಜುಸ್ತೂಪ ಕಟ್ಟಿದ್ದಾರೆ. ಇದಕ್ಕೆ ಸರಕಾರದಿಂದ ಚಿಕ್ಕಾಸೂ ಕೇಳಿಲ್ಲ. ಊರ ಮಂದಿ ವೆಚ್ಚಕ್ಕೆ, ಕೆಲಸಕ್ಕೆ ಹೆಗಲು ಕೊಟ್ಟಿದ್ದಾರೆ. ತಯಾರಾಗುವ  ಮಂಜುಸ್ತೂಪ ಮಕ್ಕಳ ಕೈಯ ಐಸ್ ಕ್ಯಾಂಡಿಯಂತೆ ಮೆಲ್ಲಮೆಲ್ಲನೆ ದ್ರವವಾಗುತ್ತದೆ. ಹರಿದಿಳಿದ ನೀರನ್ನು ಟಾಂಕಿಯಲ್ಲಿ ತುಂಬಿ ಬಳಸುತ್ತಾರೆ.

ಸೋನಮ್ ಶಿಕ್ಷಣ ಸುಧಾರಕರೂ ಹೌದು. ಇವರ ಸೆಸ್ಮೋಲ್ ಶಾಲೆ ಹತ್ತನೆ ಕ್ಲಾಸಿನಲ್ಲಿ ಸೋತವರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದೆ. ಸ್ತೂಪ ಕರುಣಿಸುವ ನೀರನ್ನು ಹನಿಹನಿಯಾಗಿ ಉಣಿಸಿ ಇವರು ಐದುಸಾವಿರ ಗಿಡ ನೆಟ್ಟು ಬೆಳೆಸುತ್ತಿದ್ದಾರೆ. ಮೂರು ವರ್ಷ ಹಿಂದೆ ನೆಟ್ಟ ಬಹುತೇಕ ವಿಲ್ಲೋ ಮತ್ತು ಪೋಪ್ಲಾರ್ ಗಿಡಗಳೂ ಬದುಕಿವೆ. ‘ಸ್ತೂಪ ನಿರ್ಮಿಸುವ ತಾಣದಿಂದ ತಗ್ಗಿನಲ್ಲಿ ಸಾವಿರ ಎಕ್ರೆಯಷ್ಟು ಮರುಭೂಮಿ ಇದೆ. ಸ್ತೂಪ ನಿರ್ಮಾಣ ಮಾಡುತ್ತಾ ಮಾಡುತ್ತಾ ಅಲ್ಲಿ ಗಿಡ ಬೆಳೆಸುವ, ಬದುಕು ಕಟ್ಟುವ ಕೆಲಸ ಸಾಧ್ಯವಾದೀತು’ ಎನ್ನುತ್ತಾರೆ ಸೋನಮ್ ಅವರ ಸಂಸ್ಥೆಯ ಕಾರ್ಯಕರ್ತ ದಿಲೀಪ್ ಜೈನ್.

ಚಳಿಗಾಲದಲ್ಲಿ, ಡಿಸೆಂಬರ್  ಸುಮಾರಿಗೆ ನಿರ್ಮಿಸುವ ಸ್ತೂಪ ಮರುತಿಂಗಳೇ ಕರಗತೊಡಗುತ್ತದೆ. ಮೂರು -ನಾಕು ತಿಂಗಳು ದಿನಾಲೂ ನೀರೊಸರುತ್ತದೆ. ಆಯಕಟ್ಟಿನ ಜಾಗಗಳಲ್ಲಿ ಮಂಜುಸ್ತೂಪ ರಚಿಸಿ ಕೃಷಿಗೂ ನೀರು ಒದಗಿಸಿಕೊಳ್ಳಬಹುದು. ಇಂಥ ಪ್ರಯತ್ನಗಳೂ ಲಡಾಖಿನಲ್ಲಿ ಆರಂಭವಾಗಿವೆ.

ಐಸ್ ಸ್ತೂಪದ ಕತೆ ಕೇಳಿ ಸ್ವಿಟ್ಜರ್ಲೆಂಡ್  ಸರಕಾರ ಸೋನಮ್ ರನ್ನು ಅಲ್ಲಿಗೆ ಆಹ್ವಾನಿಸಿತು. ಸೆಸ್ಮೋಲ್ ಪ್ರತಿನಿಧಿಯೊಬ್ಬರು ಅಲ್ಲಿಗೆ ಹೋಗಿ ಸ್ತೂಪ ನಿರ್ಮಿಸಿಕೊಟ್ಟಿದ್ದಾರೆ. ಸ್ವಿಟ್ಜರ್ಲೆಂಡ್ ಇದನ್ನು ಪ್ರವಾಸಿ ಆಕರ್ಷಣೆಯಾಗಿ ಬಳಸಿದೆ. ಆ ಸರಕಾರ ಸ್ತೂಪನಿರ್ಮಾಣವನ್ನು ಹೆಚ್ಚಿಸುವ ಉಮೇದಿನಲ್ಲಿದೆಯಂತೆ.

ಐಸ್ ಸ್ತೂಪದ ಸಾಧನೆ ಸೋನಮ್ ವಾಂಗ್ ಚುಕ್ ಅವರಿಗೆ ಹಲವು ಪ್ರತಿಷ್ಠಿತ ಅಂಗೀಕಾರಗಳನ್ನು ತಂದುಕೊಟ್ಟಿದೆ. ಅಶೋಕ ಅಂತಾರಾಷ್ಟ್ರೀಯ ಸಂಸ್ಥೆಯ ಫೆಲೋಶಿಪ್, ವೀಕ್ ಸಾಪ್ತಾಹಿಕದ ‘ವರ್ಷದ ವ್ಯಕ್ತಿ’, ಸ್ಯಾಂಕ್ಚುರಿ ಏಷ್ಯಾನಿಯ ತಕಾಲಿಕದ ‘ಗ್ರೀನ್ ಟೀಚರ್’ ಪ್ರಶಸ್ತಿ, ಸಿ ಎನ್ ಎನ್ ಐ ಬಿ ಎನ್ ವಾಹಿನಿಯ ‘ಇಂಡಿಯನ್ ರಿಯಲ್ ಹೀರೋ’ ಪ್ರಶಸ್ತಿ, ರೋಲೆಕ್ಸ್ ಪ್ರಶಸ್ತಿ ಇತ್ಯಾದಿ.

ಸ್ತೂಪ ನಿರ್ಮಾಣದಲ್ಲಿ ಸ್ವಯಂ ಸೇವಕರಾಗಲು ಬಯಸಿ ವಿದೇಶಗಳಿಂದಲೂ ಹಲವರು  ಸಂಪರ್ಕಿಸುತ್ತಿದ್ದಾರೆ. ಕಳೆದ ವರ್ಷದ ಒಂದು ಸ್ತೂಪ ತಂಡದ ಹತ್ತು ಮಂದಿಯಲ್ಲಿ ಒಬ್ಬರು ಅಮೆರಿಕದವರು, ಇನ್ನೊಬ್ಬರು ಯುರೋಪಿನವರು, ಮೂರನೆಯ ವ್ಯಕ್ತಿ ಚೆನ್ನೈಯವರು. ಸುದ್ದಿ ನವಮಾಧ್ಯಮ

ಯುಗದಲ್ಲಿ ಜಗತ್ತಿಡೀ ಹಬ್ಬಲು ಇನ್ನೇನು ಬೇಕು? ‘ಸ್ತೂಪ ನಿರ್ಮಿಸಲು ನನಗೊಂದು ಅವಕಾಶ ಕೊಡಿ’ ಎನ್ನುವ ಬೇಡಿಕೆಗಳು ಹೆಚ್ಚಾಗಿವೆ. ನೀರು ತರಲು ಇವರಿಗೆ ಮೂರು ಕಿಲೋಮೀಟರ್ ಉದ್ದ, ಎಂಟು ಇಂಚಿನ ಹೆಚ್ ಡಿ ಪಿ ಇ ಪೈಪನ್ನು ಜೈನ್ ಇರಿಗೇಶನ್ ಕಂಪೆನಿ ಕೊಡಮಾಡಿದೆ. ಇದರ ಮೌಲ್ಯ ಒಂದು ಕೋಟಿ ರೂಪಾಯಿ. ‘ಇದೊಂದು ಜೀವಿತಕಾಲದ ಬಂಡವಾಳ ಹೂಡಿಕೆ. ಮುಂದಿನ ವರ್ಷ ಇನ್ನೂ ಹೆಚ್ಚು ನಿರ್ಮಿಸಬೇಕೆಂದಿದೆ. ಅದೆಷ್ಟೋ ವರ್ಷಗಳ ಕಾಲ ನಾವು ಸ್ತೂಪ ನಿರ್ಮಿಸುತ್ತಾ ಹೋಗಬಹುದು’ ಎನ್ನುತ್ತಾರೆ ದಿಲೀಪ್ ಜೈನ್.

ಸ್ತೂಪ ಎಬ್ಬಿಸಲು ಒಂದಷ್ಟು ಪೂರ್ವ ತಯಾರಿ ಮಾಡಬೇಕು. ಮರದ ಗೋಪುರದ ಹಂದರ ಮಾಡಿ, ಮಧ್ಯದಿಂದ ಪೈಪನ್ನು ಮೇಲಕ್ಕೆ ತೂರಿ ನೀರು ಚಿಮುಕಿಸಬೇಕು. ಮಂಜುಸ್ತೂಪ ಏರುತ್ತಾ ಹೋದಂತೆ ಪೈಪನ್ನೂ ಮೇಲೇರಿಸಬೇಕು.

ನೆಟ್ಟ ಗಿಡಗಳಿಗೆ ಜೀವ ಕೊಡುವ, ಕೃಷಿಗೆ ಸಕಾಲಕ್ಕೆ ನೀರು ಪೂರೈಸುವ ಮಂಜುಸ್ತೂಪ ಲಡಾಖ್ ವಾಸಿಗಳ ಆಶಾಕಿರಣವಾಗಿದೆ. ಕಂಗೆಟ್ಟ ಬದುಕನ್ನು ಪುನಃ ಕಟ್ಟಿಕೊಳ್ಳುವ ಆಸೆ ಚಿಗುರಿಸಿದೆ. ಕೃತಕ ಮಂಜುರಾಜಿಯ ಬ್ರಹ್ಮ ನಾರ್ಫೆಲ್ ಚೆವಾಂಗ್, ಮಂಜುಸ್ತೂಪದ ಸೃಷ್ಟಿಕರ್ತ ಸೋನಮ್ ವಾಂಗ್ ಚೆಕ್ – ಇಬ್ಬರೂ ಲಡಾಖ್ ಹೊಸ ಕನಸು ಕಾಣಲು ಕಾರಣರಾಗಿದ್ದಾರೆ.

ಸೆಸ್ಮೋಲ್ (SECMOL) ಕಚೇರಿ ಲೆಹ್  (+91) 1982 252421 / wangchuk@hial.co.in

ಪ್ರತಿಕ್ರಿಯಿಸಿ (+)