ಶುಕ್ರವಾರ, ಡಿಸೆಂಬರ್ 6, 2019
17 °C
ಪ್ರಜ್ವಲ್ ಹೇಳಿಕೆ ಮುಜುಗರ ಉಂಟುಮಾಡಿದೆ, ಅವನನ್ನು ಕರೆದು ಎರಡು ತಾಸು ಬುದ್ಧಿವಾದ ಹೇಳಿದ್ದೇನೆ – ದೇವೇಗೌಡ

ಕುಮಾರಸ್ವಾಮಿ ನೇತೃತ್ವದಲ್ಲೇ ಮುಂದಿನ ಚುನಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಾರಸ್ವಾಮಿ ನೇತೃತ್ವದಲ್ಲೇ ಮುಂದಿನ ಚುನಾವಣೆ

ಬೆಂಗಳೂರು: ‘ಕುಮಾರಸ್ವಾಮಿ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ. ಈ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ’ ಎಂದು ಜಾತ್ಯತೀತ ಜನತಾದಳದ (ಜೆಡಿಎಸ್) ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದರು.

‘ಪ್ರಜ್ವಲ್ ರೇವಣ್ಣ ಹೇಳಿಕೆಯಿಂದ ಸ್ವಲ್ಪಮಟ್ಟಿಗೆ ಬೇಸರ ಮಾಡಿಕೊಂಡಿರುವ ಕುಮಾರಸ್ವಾಮಿ ಪಕ್ಷ ಮುನ್ನಡೆಸುವುದು  ಕಷ್ಟ ಎಂದು ನನ್ನ ಮುಂದೆ ಹೇಳಿದ್ದಾರೆ. ಇದು ನೋವಿನಲ್ಲಿ ಹೇಳಿರುವ ಮಾತು ಅಷ್ಟೆ. ಮುಂದಿನ ಚುನಾವಣೆಯ ನೇತೃತ್ವವನ್ನು ಅವರೇ ವಹಿಸಲಿದ್ದಾರೆ’ ಎಂದು  ಮಾಧ್ಯಮಗೋಷ್ಠಿಯಲ್ಲಿ ಭಾನುವಾರ ಹೇಳಿದರು.

‘ಪ್ರಜ್ವಲ್‌ನನ್ನು ಕರೆಸಿಕೊಂಡು ಸುಮಾರು ಎರಡು ತಾಸು ಮಾತನಾಡಿದ್ದೇನೆ. ತನ್ನ ತಪ್ಪಿನ ಅರಿವಾಗಿರುವ ಅವನು ನನ್ನ ಬಳಿ ಕ್ಷಮೆ ಕೇಳಿದ್ದಾನೆ. ಅಲ್ಲದೆ, ಕುಮಾರಸ್ವಾಮಿ ಬಳಿಯೂ ಕ್ಷಮೆ ಕೇಳುವುದಾಗಿ ಹೇಳಿದ್ದಾನೆ’ ಎಂದರು.

‘ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಚಿಕ್ಕಪ್ಪನ ನಿರ್ಣಯಕ್ಕೆ ವಿರುದ್ಧವಾಗಿ ಹೋಗುವುದಿಲ್ಲ ಎಂದೂ ಪ್ರಜ್ವಲ್ ಹೇಳಿದ್ದಾನೆ’ ಎಂದು ವಿವರಿಸಿದರು.

‘ಕಳೆದ ಲೋಕಸಭಾ ಚುನಾವಣೆಯಲ್ಲಿ ನನ್ನ ಗೆಲುವಿಗೆ ಪ್ರಜ್ವಲ್ ಶ್ರಮಿಸಿದ್ದ. ಬಳಿಕ ಯುವಕರ ತಂಡ ಕಟ್ಟಿಕೊಂಡು ರಾಜ್ಯದಾದ್ಯಂತ ಓಡಾಡಿದ್ದ. ಏನೋ ಕೆಟ್ಟ ಘಳಿಗೆ. ಆವೇಶದಲ್ಲಿ ಮಾತನಾಡಿದ್ದಾನೆ. ಇದನ್ನು ಮುಂದುವರಿಸುವುದು ಬೇಡ’ ಎಂದರು.

ನಮಗೆ ಯಾರು ಹಣ ಕೊಡುತ್ತಾರೆ: ‘ಕಾಂಗ್ರೆಸ್ ಪಕ್ಷ ವರಿಷ್ಠರಿಗೆ  ಹಣ ನೀಡಿರುವ ಬಗ್ಗೆ ಗೋವಿಂದರಾಜ್ ಡೈರಿಯಲ್ಲಿ ವಿವರ ಇದೆ. ನಾವೂ ಹಣ ಕೊಟ್ಟಿದ್ದೇವೆ ಎಂದು ಅನಂತಕುಮಾರ್ ಮತ್ತು ಯಡಿಯೂರಪ್ಪ ಮಾತನಾಡಿಕೊಂಡಿದ್ದು ಮಾಧ್ಯಮಗಳಲ್ಲೇ ಪ್ರಸಾರವಾಗಿದೆ. ಆದರೆ, ನಮ್ಮಂತಹ ಪಕ್ಷಕ್ಕೆ ಯಾರು ಹಣ ತಂದು ಕೊಡುತ್ತಾರೆ’ ಎಂದು ಪ್ರಶ್ನಿಸಿದ ದೇವೇಗೌಡ, ‘ಪಕ್ಷ ಸಂಘಟನೆ ಮಾಡಿ ಎಂದು ಯಾರಾದರೂ ಸೂಟ್‌ಕೇಸ್ ಕೊಟ್ಟರೆ ಸಂತೋಷದಿಂದ ಸ್ವೀಕರಿಸುತ್ತೇನೆ’ ಎಂದು ಲಘು ದಾಟಿಯಲ್ಲಿ ಪ್ರತಿಕ್ರಿಯಿಸಿದರು.

ಜುಲೈ 20ರಂದು ಮಹಿಳಾ ಸಮಾವೇಶ: ‘ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಲು ಇದೇ 20ರಂದು ನಗರದ ಅರಮನೆ ಮೈದಾನದಲ್ಲಿ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ದೇವೇಗೌಡ ಹೇಳಿದರು.

‘ಮೀಸಲಾತಿಗೆ ಒತ್ತಾಯಿಸಿ ಪಕ್ಷದ ಮಹಿಳಾ ಘಟಕದಿಂದ ಎಲ್ಲ ಜಿಲ್ಲೆಗಳಲ್ಲೂ ಆಂದೋಲನ ನಡೆಸಲಾಗುವುದು. ಬಳಿಕ ನಿಯೋಗವೊಂದನ್ನು ದೆಹಲಿಗೂ ಕಳುಹಿಸಲಾಗುವುದು’ ಎಂದು ಅವರು ಒತ್ತಾಯಿಸಿದರು.

**

ಅವಧಿ ಪೂರ್ವ ಚುನಾವಣೆ

ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಮಾಡಿಕೊಳ್ಳುತ್ತಿರುವ ಸಿದ್ಧತೆ ನೋಡಿದರೆ ಅವಧಿ ಪೂರ್ವ ಚುನಾವಣೆ ಎದುರಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಅದಕ್ಕೆ ತಕ್ಕಂತೆ ಜೆಡಿಎಸ್ ಕೂಡ ಅಣಿಯಾಗುತ್ತಿದೆ ಎಂದು ದೇವೇಗೌಡ ಹೇಳಿದರು.

‘ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮತ್ತು ಅವರ ಜೊತೆಗೆ ಕಳುಹಿಸಿರುವ ನಾಲ್ಕೈದು ಮಂದಿ ಪ್ರತಿ ಜಿಲ್ಲೆಯಲ್ಲೂ ಪ್ರವಾಸ ಮಾಡುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇವೆಲ್ಲವನ್ನೂ ನೋಡಿ ನಾವು ಸುಮ್ಮನೆ ಕೂರಲು ಬರುವುದಿಲ್ಲ’ ಎಂದರು. 

ಕರ್ನಾಟಕದಲ್ಲಿ ಮಹಾಘಟಬಂಧನ ಸಾಧ್ಯವಿಲ್ಲ. ಆದರೆ ಮುಂದಿನ ವಿಧಾನಸಭಾ ಚುನಾವಣೆಗೆ ಹೊಂದಾಣಿಕೆ ಮಾಡಿಕೊಳ್ಳಲು ಕಮ್ಯುನಿಸ್ಟ್ ಪಕ್ಷ ಮುಂದೆ ಬಂದಿದೆ. ಅವರ ಜೊತೆ ಸೀಟು ಒಪ್ಪಂದ ಮಾಡಿಕೊಳ್ಳಲಾಗುವುದು. ಬಿಎಸ್‌ಪಿ ಮುಂದೆ ಬಂದರೆ 

ಅವರೊಂದಿಗೂ ಸೀಟು ಹೊಂದಾಣಿಕೆಗೆ ಸಿದ್ಧ ಎಂದು ದೇವೇಗೌಡ ಹೇಳಿದರು.

**

‘ಪ್ರಜ್ವಲ್‌ ಹೇಳಿಕೆ ಹಿಂದೆ ಸಂಚು’

ಹಾಸನ: ಜೆಡಿಎಸ್‌ನಲ್ಲಿ ‘ಸೂಟ್‌ಕೇಸ್‌ ರಾಜಕಾರಣ’ದ ಬಗ್ಗೆ ಮುಖಂಡ ಪ್ರಜ್ವಲ್‌ ರೇವಣ್ಣ ನೀಡಿರುವ ಹೇಳಿಕೆ ಹಿಂದೆ ಕೆಲವು ರಾಜಕೀಯ ನಾಯಕರ ಸಂಚು ಅಡಗಿದೆ. ರಾಜ್ಯದಲ್ಲಿ ಪಕ್ಷದ ಏಳಿಗೆ ಸಹಿಸದೆ ಈ ರೀತಿ ಹೇಳಿಸಿದ್ದಾರೆ ಎಂದು ಶಾಸಕ ಎಚ್‌.ಡಿ.ರೇವಣ್ಣ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಅಲ್ಲಿ ನನ್ನ ಮಗ ಏನು ಹೇಳಿದ್ದಾನೆ ಎಂದು ನನಗೆ ಗೊತ್ತಿದೆ. ಪಕ್ಷ ಸಂಘಟನೆ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಮಾತನಾಡಿರುವುದನ್ನು ಏಕೆ ತೋರಿಸಿಲ್ಲ? ಹೀಗೆ ಮಾಡುವುದರಿಂದ ನಮ್ಮ ಕುಟುಂಬ ಅಥವಾ ಪಕ್ಷವನ್ನು ಏನು ಮಾಡಲು ಸಾಧ್ಯವಿಲ್ಲ. ಅದು ಅವರಿಗೆ ಶ್ರೇಯಸ್ಸು ಅಲ್ಲ’ ಎಂದು ತಿಳಿಸಿದರು.

‘ಮಧ್ಯಾಹ್ನ 2.30 ಗಂಟೆಗೆ ಕಾರ್ಯಕ್ರಮ ಮುಗಿದಿದ್ದು, ಆಗಲೇ ಏಕೆ ಪ್ರಸಾರ ಮಾಡಲಿಲ್ಲ’ ಎಂದು ಪ್ರಶ್ನಿಸಿದರು.

ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ತೆಗೆದುಕೊಳ್ಳುವ ತೀರ್ಮಾನಗಳೇ ಅಂತಿಮ. ಎಲ್ಲರೂ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿದ್ದು, ಈ ಸಂಬಂಧ ಈಗಾಗಲೇ ವರಿಷ್ಠರು ಪ್ರಜ್ವಲ್‌ ಅವರಿಂದ ಸ್ಪಷ್ಟನೆ ಕೇಳಿದ್ದಾರೆ’ ಎಂದು ಹೇಳಿದರು.

**

ಪಕ್ಷದಲ್ಲಿ ಒಬ್ಬ ಕಾರ್ಯಕರ್ತನಾಗಿ ಇರು ಎಂದರೆ ಇರುತ್ತೇನೆ, ಹೋಗು ಎಂದು ಚಿಕ್ಕಪ್ಪ ಹೇಳಿದರೆ ಹೊರಗೆ ಹೋಗುವುದಾಗಿಯೂ ಪ್ರಜ್ವಲ್‌ ನನ್ನ ಬಳಿ ಹೇಳಿದ್ದಾನೆ

–ಎಚ್‌.ಡಿ. ದೇವೇಗೌಡ,

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ

ಪ್ರತಿಕ್ರಿಯಿಸಿ (+)