ಬುಧವಾರ, ಡಿಸೆಂಬರ್ 11, 2019
20 °C

ವೀಸಾ: ನೆರವು ಕೋರಿದ ಪಾಕ್ ಮಹಿಳೆ

ಪಿಟಿಐ Updated:

ಅಕ್ಷರ ಗಾತ್ರ : | |

ವೀಸಾ: ನೆರವು ಕೋರಿದ  ಪಾಕ್ ಮಹಿಳೆ

ಇಸ್ಲಾಮಾಬಾದ್‌: ಕ್ಯಾನ್ಸರ್‌ಗಾಗಿ ಭಾರತದಲ್ಲಿ ಚಿಕಿತ್ಸೆ ಪಡೆಯಲು ತಮಗೆ ವೀಸಾ ಸೌಲಭ್ಯ ಒದಗಿಸಬೇಕೆಂದು  ಪಾಕಿಸ್ತಾನದ ಫೈಜಾ ತನ್ವೀರ್‌ ಎಂಬ ಮಹಿಳೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಮನವಿ ಮಾಡಿದ್ದಾರೆ.

ವೈದ್ಯಕೀಯ ವೀಸಾಕ್ಕಾಗಿ ಕೋರಿ  ಕೆಲ ದಿನಗಳ ಹಿಂದೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿನ ಭಾರತದ ರಾಯಭಾರ ಕಚೇರಿ ತಿರಸ್ಕರಿಸಿತ್ತು.

ಫೈಜಾ ಅವರು ದವಡೆ ಕ್ಯಾನ್ಸರ್‌ನಿಂದ ನರಳುತ್ತಿದ್ದಾರೆ. ಗಾಜಿಯಾಬಾದ್‌ನಲ್ಲಿರುವ ಇಂದ್ರಪ್ರಸ್ಥ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವರು ನಿರ್ಧರಿಸಿದ್ದು, ಈಗಾಗಲೇ  ₹ 10 ಲಕ್ಷ ಮುಂಗಡ ಹಣ ಪಾವತಿಸಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದೆ. 

ಉಭಯ ದೇಶಗಳ ನಡುವೆ ಸಂಬಂಧ ಹದಗೆಟ್ಟಿರುವುದು ವೀಸಾ ನಿರಾಕರಿಸಲು ಕಾರಣ ಎಂದು ಫೈಜಾ ಅವರ ತಾಯಿ ದೂರಿದ್ದಾರೆ. ತಮ್ಮ ಅರ್ಜಿಗೆ ಸಂಬಂಧಿಸಿದಂತೆ ಸುಷ್ಮಾ ಅವರು ಮಧ್ಯಪ್ರವೇಶಿಸಬೇಕು ಎಂದು ಕೋರಿ ಫೈಜಾ  ಕೆಲದಿನಗಳಿಂದ ಟ್ವೀಟ್‌ ಮಾಡುತ್ತಿದ್ದಾರೆ. ತಮ್ಮ  ಕ್ಯಾನ್ಸರ್‌ ಗಡ್ಡೆಯ ಚಿತ್ರ ಹಾಗೂ ವಿಡಿಯೊಗಳನ್ನು ಅವರು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ನನ್ನ ಪ್ರಾಣ ಉಳಿಸಿಕೊಳ್ಳಲು ನೆರವು ನೀಡಿ ಮ್ಯಾಡಮ್‌’ ಎಂಬಂತಹ ಟ್ವೀಟ್‌ಗಳನ್ನು ಅವರು ಸಚಿವೆಗೆ ಟ್ಯಾಗ್‌ ಮಾಡಿದ್ದಾರೆ. ಇದೇ ರೀತಿ, ಮಗುವೊಂದರ ತುರ್ತು ಹೃದಯ ಚಿಕಿತ್ಸೆಗಾಗಿ ವೀಸಾ ನೀಡುವಂತೆ  ಸುಷ್ಮಾ ಅವರಿಗೆ ಮನವಿ ಮಾಡಿದ್ದ ಪಾಕಿಸ್ತಾನದ ಕುಟುಂಬಕ್ಕೆ ಕಳೆದ ತಿಂಗಳು ವೀಸಾ ಸೌಲಭ್ಯ ಒದಗಿಸಲಾಗಿತ್ತು.

ಪ್ರತಿಕ್ರಿಯಿಸಿ (+)