ಶನಿವಾರ, ಡಿಸೆಂಬರ್ 14, 2019
25 °C
ಎರಡೂವರೆ ಕೆ.ಜಿ ಚಿನ್ನ ದೋಚಿದ ಚೋರ * 20 ದಿನಗಳ ಹಿಂದೆ ಕೊಠಡಿ ಬಾಡಿಗೆ ಪಡೆದಿದ್ದ ಚತುರ...

ಲಾಡ್ಜ್‌ ಚಾವಣಿ ಕೊರೆದ,ಆಭರಣ ಮಳಿಗೆಗೆ ಇಳಿದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಡ್ಜ್‌ ಚಾವಣಿ ಕೊರೆದ,ಆಭರಣ ಮಳಿಗೆಗೆ ಇಳಿದ

ಬೆಂಗಳೂರು: ಕಾಟನ್‌ಪೇಟೆ ಮುಖ್ಯರಸ್ತೆಯ ‘ಪ್ಲಾಟಿನಂ ಡೀಲಕ್ಸ್‌’ ಲಾಡ್ಜ್‌ನಲ್ಲಿ ಕೊಠಡಿ ಬಾಡಿಗೆ ಪಡೆದ ಚಾಲಾಕಿಯೊಬ್ಬ, ಚಾವಣಿ ಕೊರೆದು ನೆಲಮಹಡಿಯಲ್ಲಿರುವ ಆಭರಣ ಮಳಿಗೆಗೆ ಧುಮುಕಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹೊತ್ತೊಯ್ದಿದ್ದಾನೆ.

‘ಕಾಂಚನ್ ಜುವೆಲರ್ಸ್‌’ ಮಳಿಗೆಯಲ್ಲಿ ಶನಿವಾರ ಕಳ್ಳತನ ನಡೆದಿದ್ದು, ಅದರ ಮಾಲೀಕ ಹಿಮ್ಮತ್ ಪ್ರಕಾಶ್  ಭಾನುವಾರ ಬೆಳಿಗ್ಗೆ ಮಳಿಗೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ‘ಎರಡೂವರೆ ಕೆ.ಜಿ.ಚಿನ್ನ ಕಳವಾಗಿದೆ’ ಎಂದು ಅವರು ಹೇಳಿದ್ದಾರೆ.

ಜೂನ್ 19ರಂದು ಲಾಡ್ಜ್‌ಗೆ ಬಂದಿದ್ದ ಆರೋಪಿ, ‘ನನ್ನ ಹೆಸರು ಹುಸೇನ್. ಕಲಬುರ್ಗಿಯವನು. ಇಲ್ಲೇ ಪ್ರಿಂಟಿಂಗ್‌ ಪ್ರೆಸ್‌ವೊಂದರಲ್ಲಿ ಕೆಲಸ ಮಾಡುತ್ತೇನೆ. ಬಾಡಿಗೆಮನೆ ಸಿಗುವವರೆಗೂ ಲಾಡ್ಜ್‌ನಲ್ಲೇ ಇರುತ್ತೇನೆ’ ಎಂದು ವ್ಯವಸ್ಥಾಪಕರಿಗೆ ಹೇಳಿದ್ದ. ಆತನಿಂದ ಮತದಾರರ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ ಹಾಗೂ ₹ 10 ಸಾವಿರ ಮುಂಗಡ ಪಡೆದ ಲಾಡ್ಜ್‌ ವ್ಯವಸ್ಥಾಪಕರು, ಕೊಠಡಿಯನ್ನು  (ಸಂಖ್ಯೆ 102) ನೀಡಿದ್ದರು. ಆದರೆ, ಅದು ನಕಲಿ ಗುರುತಿನ ಚೀಟಿ ಎಂಬುದು ಈಗ ತನಿಖೆಯಿಂದ ಗೊತ್ತಾಗಿದೆ.

ತಾನು ತಂಗಿರುವ ಕೊಠಡಿಯ ನೇರಕ್ಕೇ ನೆಲಮಹಡಿಯಲ್ಲಿ ಆಭರಣ ಮಳಿಗೆ ಇರುವುದನ್ನು  ತಿಳಿದ ಆತ, ಕನ್ನ ಕೊರೆಯಲು ಸಂಚು ರೂಪಿಸಿದ್ದಾನೆ. ನಂತರ ಡ್ರಿಲ್ಲಿಂಗ್ ಯಂತ್ರ ಬಳಸಿ ನಿತ್ಯ ಸ್ವಲ್ಪ ಸ್ವಲ್ಪವೇ ಚಾವಣಿ ಕೊರೆಯುತ್ತ ಬಂದಿದ್ದಾನೆ.

ಹಿಮ್ಮತ್ ಪ್ರಕಾಶ್ ಅವರು ಶನಿವಾರ ಮಳಿಗೆಯ ಬಾಗಿಲು ತೆಗೆದಿರಲಿಲ್ಲ. ಈ ಸಂದರ್ಭ ಬಳಸಿಕೊಂಡ ಆರೋಪಿ, ಒಂದೂವರೆ ಅಡಿ ತಪ್ಪದ ಚಾವಣಿಯನ್ನು ವೃತ್ತಾಕಾರದಲ್ಲಿ ಪೂರ್ತಿ ಕೊರೆದಿದ್ದಾನೆ. ನಂತರ ಒಳಗೆ ಧುಮುಕಿ, ಲಾಕರ್ ಮುರಿದು ಆಭರಣ ಕದ್ದಿದ್ದಾನೆ. ಮೇಜು–ಕುರ್ಚಿಯ ಸಹಾಯದಿಂದ ಮೇಲತ್ತಿ ಪುನಃ ತನ್ನ ಕೊಠಡಿ ಸೇರಿದ್ದಾನೆ.

‘ಕೆಲ್ಸ ಆಯ್ತು ಸರ್’: ಆಭರಣಗಳನ್ನು ಬಟ್ಟೆಯ ಬ್ಯಾಗ್‌ಗೆ ತುಂಬಿಕೊಂಡ ಆರೋಪಿ, ಕೊಠಡಿಯ ಕೀಯನ್ನೂ ಹಿಂದಿರುಗಿಸದೆ ಭಾನುವಾರ ನಸುಕಿನಲ್ಲಿ  (3 ಗಂಟೆ) ಲಾಡ್ಜ್‌ನಿಂದ ಹೊರಟು ಹೋಗಿದ್ದಾನೆ.

ಈ ವೇಳೆ ಎದುರಾದ ಲಾಡ್ಜ್ ನೌಕರನಿಗೆ ‘ನನ್ನ ಕೆಲ್ಸ ಆಯ್ತು ಸರ್. ಇನ್ನೇನು ಬಾಡಿಗೆ ಮನೆ ಹುಡುಕುವುದಿಲ್ಲ. ವಾಪಸ್ ಊರಿಗೆ ಹೊರಡುತ್ತೇನೆ. ಕೀಯನ್ನು ಕೊಠಡಿಯಲ್ಲೇ ಬಿಟ್ಟಿದ್ದೇನೆ. ಮುಂಗಡ ಹಣದಲ್ಲೇ ಬಾಡಿಗೆ ಮುರಿದುಕೊಳ್ಳಲು ವ್ಯವಸ್ಥಾಪಕರಿಗೆ ಹೇಳಿ’ ಎಂದು ಹೇಳಿ ಹೋಗಿದ್ದಾನೆ. ಬೆಳಿಗ್ಗೆ 7 ಗಂಟೆಗೆ ನೌಕರರು ಕೊಠಡಿಗೆ ಹೋದಾಗ ಕೀ ಇಲ್ಲದಿರುವುದು ಗೊತ್ತಾಗಿದೆ. ನಕಲಿ ಕೀ ಮಾಡಿಸಿದರಾಯಿತು ಎಂದು ಅವರೂ ಸುಮ್ಮನಾಗಿದ್ದಾರೆ. ಆದರೆ, ಬೆಳಿಗ್ಗೆ ಆಭರಣ ಮಳಿಗೆ ಮಾಲೀಕ ತಮ್ಮ ಅಂಗಡಿಯ ಷಟರ್ ತೆಗೆದಾಗ ಎಲ್ಲರೂ ನಿಬ್ಬೆರಗಾಗಿದ್ದಾರೆ.

ದೂರಿದರೂ ಎಚ್ಚೆತ್ತುಕೊಳ್ಳಲಿಲ್ಲ: ‘ಕೊಠಡಿ ಸಂಖ್ಯೆ 102ರಿಂದ ಪ್ರತಿ ರಾತ್ರಿ ಏನೋ ಶಬ್ದ ಕೇಳಿಸುತ್ತಿದೆ ಎಂದು ಅಕ್ಕ–ಪಕ್ಕದ ಕೊಠಡಿಗಳಲ್ಲಿ ತಂಗಿದ್ದವರು ಹತ್ತು ದಿನಗಳಿಂದ ಲಾಡ್ಜ್‌ನವರಿಗೆ ದೂರುತ್ತಲೇ ಇದ್ದರು. ಆದರೆ, ಅದನ್ನು ಅವರು ಗಂಭೀರವಾಗಿ ತೆಗೆದುಕೊಂಡಿಲ್ಲ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದರು.

‘ಶ್ವಾನದಳ, ಬೆರಳಚ್ಚು ದಳ ಹಾಗೂ ಎಫ್‌ಎಸ್‌ಎಲ್ ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡ ರಚಿಸಲಾಗಿದೆ. ಲಾಡ್ಜ್‌ನಲ್ಲಿರುವ ಹಾಗೂ ಹೊರಗಿನ ಕಟ್ಟಡಗಳಲ್ಲಿರುವ 15 ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಚಾರಣೆ: ಕನ್ನ ಕೊರೆದ ಕೋಣೆಯ ಪಕ್ಕದ ಕೊಠಡಿಯಲ್ಲಿ ಮೂರು ದಿನಗಳಿಂದ ತಂಗಿರುವ ತಮಿಳುನಾಡಿನ ವ್ಯಕ್ತಿಯೊಬ್ಬರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ‘ನಾನು ಕಂಪ್ಯೂಟರ್ ಖರೀದಿಗೆ ಬಂದಿದ್ದೇನೆ. ಪಕ್ಕದ ಕೊಠಡಿಯಲ್ಲಿದ್ದ ವ್ಯಕ್ತಿಯನ್ನು ನಾನು ನೋಡಿಯೂ ಇಲ್ಲ’ ಎಂದು ಅವರು ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

**

ಒಂದೇ ತಿಂಗಳಲ್ಲಿ ಮೂರು ಪ್ರಕರಣ

ಚಿನ್ನಾಭರಣ ಮಳಿಗೆಗೆ ಕನ್ನ ಕೊರೆಯುತ್ತಿರುವ ಪ್ರಕರಣಗಳು  ಹೆಚ್ಚಾಗುತ್ತಿರುವುದು, ರಾಜಧಾನಿಯ ಆಭರಣ ವ್ಯಾಪಾರಿಗಳನ್ನು ಆತಂಕಕ್ಕೆ ದೂಡುವಂತೆ ಮಾಡಿದೆ. ತಿಂಗಳ ಅವಧಿಯಲ್ಲಿ ನಗರದ ಮೂರು  ಮಳಿಗೆಗಳಲ್ಲಿ ಕಳ್ಳತನ ನಡೆದಿದೆ.

ಜೂನ್ 15: ಕೆ.ಆರ್.ಪುರ ಸಮೀಪದ ದೇವಸಂದ್ರ ಮುಖ್ಯರಸ್ತೆಯ ‘ಬಾಲಾಜಿ ಜ್ಯುವೆಲರ್ಸ್‌’ನಲ್ಲಿ ದುಷ್ಕರ್ಮಿಗಳು ₹ 20 ಲಕ್ಷ ಮೌಲ್ಯದ ಆಭರಣ ದೋಚಿದ್ದರು. ಆರೋಪಿಗಳು ಸಮೀಪದ ಚರಂಡಿಯಿಂದ ಸುರಂಗ ಕೊರೆದು, ಮಳಿಗೆಗೆ ನುಗಿದ್ದರು.ಜೂ

ಜೂನ್ 30: ಹೊಂಗಸಂದ್ರ ಮುಖ್ಯರಸ್ತೆಯಲ್ಲಿರುವ ‘ಪವನ್ ಜ್ಯುವೆಲರ್ಸ್‌’ನಲ್ಲಿ ಕಳ್ಳತನ ನಡೆದಿತ್ತು. ಆ ಮಳಿಗೆಗೆ ಹೊಂದಿಕೊಂಡಿದ್ದ ಮನೆಯನ್ನು ಬಾಡಿಗೆ ಪಡೆದಿದ್ದ ಉತ್ತರ ಪ್ರದೇಶದ ಐವರು ದುಷ್ಕರ್ಮಿಗಳು, ರಾತ್ರೋರಾತ್ರಿ ಮನೆ–ಮಳಿಗೆ ನಡುವಿನ ಗೋಡೆಯನ್ನು ಕೊರೆದು 350 ಗ್ರಾಂ ಚಿನ್ನಾಭರಣ ದೋಚಿಕೊಂಡು ಹೋಗಿದ್ದರು.

**

ಒಂದೇ ಗ್ಯಾಂಗ್‌ನ ಕೃತ್ಯ: ಶಂಕೆ

‘ವರ್ಷದಲ್ಲಿ ಒಂದು ಸಲ ಮಾತ್ರ ನಗರಕ್ಕೆ ಬರುವ ನೇಪಾಳ ಹಾಗೂ ಉತ್ತರ ಪ್ರದೇಶದ ಗ್ಯಾಂಗ್‌ಗಳ ಸದಸ್ಯರು, ನಗರದ ಹೊರವಲಯದಲ್ಲಿ ಮನೆ ಬಾಡಿಗೆ ಪಡೆದು ವಾಸವಾಗುತ್ತಾರೆ. ಬೈಕ್‌ಗಳಲ್ಲಿ ನಗರ ಸುತ್ತುವ ಇವರು, ಸುಲಭವಾಗಿ ಕಳ್ಳತನ ಮಾಡಬಹುದಾದಂಥ ಆಭರಣ ಮಳಿಗೆಗಳನ್ನು ಗುರುತಿಸಿಕೃತ್ಯ ಎಸಗುತ್ತಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ‘3 ಆಭರಣ ಮಳಿಗೆಗಳಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲೂ ತುಂಬ ಸಾಮ್ಯತೆಗಳಿವೆ.

ಮಳಿಗೆಗೆ ಹೊಂದಿಕೊಂಡಂತೆಯೇ ಇರುವ ಮನೆ ಹಾಗೂ ಲಾಡ್ಜ್‌ನಲ್ಲಿ ಆಶ್ರಯ ಪಡೆದು ಆಭರಣ ದೋಚಲಾಗಿದೆ. ಒಂದೇ ಗ್ಯಾಂಗ್‌ನ ಸದಸ್ಯರು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ’ ಎಂದು ಶಂಕಿಸಿದ್ದಾರೆ.

ಪ್ರತಿಕ್ರಿಯಿಸಿ (+)