ಸೋಮವಾರ, ಡಿಸೆಂಬರ್ 16, 2019
25 °C
ಬಿಬಿಎಂಪಿ, ಬಿಎಂಆರ್‌ಸಿಎಲ್‌ನಿಂದ ಅನುಷ್ಠಾನ: 2020ರೊಳಗೆ ಕಾಮಗಾರಿ ಪೂರ್ಣಗೊಳಿಸಲು ನಿರ್ಧಾರ

ರಾಗಿಗುಡ್ಡದಿಂದ ಸಿಲ್ಕ್‌ ಬೋರ್ಡ್‌ಗೆ ಮೇಲ್ಸೇತುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಗಿಗುಡ್ಡದಿಂದ ಸಿಲ್ಕ್‌ ಬೋರ್ಡ್‌ಗೆ ಮೇಲ್ಸೇತುವೆ

ಬೆಂಗಳೂರು: ನಗರದ ರಾಗಿಗುಡ್ಡ ಜಂಕ್ಷನ್‌ನಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ವರೆಗೆ ನಿರ್ಮಿಸಲಿರುವ ರಸ್ತೆ ಮತ್ತು ಮೆಟ್ರೊ ರೈಲು ಮೇಲ್ಸೇತುವೆಗೆ ಬಿಬಿಎಂಪಿ ಮತ್ತು ಮೆಟ್ರೊ ರೈಲು ನಿಗಮ ಜಂಟಿಯಾಗಿ ಹಣ ಹೂಡಲು ಒಪ್ಪಿವೆ.

ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಯೋಜನೆ ಅನುಷ್ಠಾನಕ್ಕೆ ಹಣ ಹೂಡುವುದಾಗಿ ಪಾಲಿಕೆ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಮತ್ತು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ಪ್ರದೀಪ್‌ ಸಿಂಗ್‌ ಖರೋಲ ಒಪ್ಪಿಗೆ ಸೂಚಿಸಿದ್ದಾರೆ.

ಸಿಲ್ಕ್‌ ಬೋರ್ಡ್‌ ಮಾರ್ಗದಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಜಯನಗರದ 9ನೇ ಬ್ಲಾಕ್‌ನಿಂದ ಸಿಲ್ಕ್‌ ಬೋರ್ಡ್‌ವರೆಗೆ ಜಯದೇವ ಆಸ್ಪತ್ರೆಯ ಜಂಕ್ಷನ್‌ನಲ್ಲಿ ‘ರಸ್ತೆ ಮತ್ತು ಮೆಟ್ರೊ ರೈಲು ಮೇಲ್ಸೇತುವೆ’ ಯೋಜನೆ ಅನುಷ್ಠಾನಗೊಳಿಸುವುದಾಗಿ ರಾಜ್ಯ ಸರ್ಕಾರ 2016–17ನೇ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಿತ್ತು.

ಬೆಂಗಳೂರು ಮೆಟ್ರೊ ರೈಲು ಅಭಿವೃದ್ಧಿ ನಿಗಮ (ಬಿಎಂಆರ್‌ಸಿಎಲ್‌) ಎರಡನೇ ಹಂತದ ಮೆಟ್ರೊ ಕಾಮಗಾರಿ ಕೈಗೆತ್ತಿಕೊಂಡಿದೆ. ಇದರಲ್ಲಿ ಆರ್‌.ವಿ. ರಸ್ತೆಯಿಂದ ಸಿಲ್ಕ್‌ಬೋರ್ಡ್‌ವರೆಗಿನ 19 ಕಿ.ಮೀ. ಉದ್ದದ ಮೆಟ್ರೊ ಮೇಲ್ಸೇತುವೆ ನಿರ್ಮಾಣ ಯೋಜನೆಯೂ ಸೇರಿದೆ. ಜಯನಗರದ 9ನೇ ಬ್ಲಾಕ್‌ನಿಂದ ಸಿಲ್ಕ್‌ ಬೋರ್ಡ್‌ವರೆಗೆ ವಾಹನ ಸಂಚಾರಕ್ಕೆ 4 ಕಿ.ಮೀ. ಉದ್ದದ ಮೇಲ್ಸೇತುವೆ ಚತುಷ್ಪಥ ರಸ್ತೆ ನಿರ್ಮಿಸಲಾಗುತ್ತಿದೆ.

ಅಂದಾಜು ₹800 ಕೋಟಿ ವೆಚ್ಚದ ಮೆಟ್ರೊ ಮೇಲ್ಸೇತುವೆ ಕಾಮಗಾರಿಯಲ್ಲಿ 4 ಕಿ.ಮೀ. ಉದ್ದದ ರಸ್ತೆ ಮತ್ತು ಮೆಟ್ರೊ ರೈಲು ಮೇಲ್ಸೇತುವೆಗೆ ₹330 ಕೋಟಿ ವೆಚ್ಚವಾಗಲಿದೆ. ಪಾಲಿಕೆ ತನ್ನ ಪಾಲಿನ ₹100 ಕೋಟಿ ಹಣ ಭರಿಸಲಿದ್ದು, ಉಳಿದ ₹220 ಕೋಟಿಯನ್ನು ಮೆಟ್ರೊ ನಿಗಮವೇ ಭರಿಸಲಿದೆ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

8 ಮೀಟರ್‌ ಎತ್ತರದಲ್ಲಿ ವಾಹನ ಸಂಚಾರಕ್ಕೆ ಚತುಷ್ಪಥದ ಎಲಿವೇಟರ್‌ ರಸ್ತೆ (ಎತ್ತರಿಸಿದ ಮಾರ್ಗ) ನಿರ್ಮಾಣವಾದರೆ, 16  ಮೀಟರ್‌ ಎತ್ತರದ ಎರಡನೇ ಅಂತಸ್ತಿನ ಮೇಲ್ಸೇತುವೆ ಮೇಲಿನ ಹಳಿ ಮೇಲೆ ಮೆಟ್ರೊ ರೈಲು ಸಂಚರಿಸಲಿದೆ. ಇಂತಹ ಯೋಜನೆ ಬೆಂಗಳೂರಿಗೆ ಹೊಸತು. ಆದರೆ, ನಾಲ್ಕೈದು ಅಂತಸ್ತಿನ ಮೇಲ್ಸೇತುವೆ

ಗಳು ಮುಂದುವರಿದ ದೇಶಗಳಲ್ಲಿ ಬಳಕೆಯಲ್ಲಿವೆ ಎನ್ನುತ್ತಾರೆ ಮೆಟ್ರೊ ನಿಗಮದ ತಾಂತ್ರಿಕ ಅಧಿಕಾರಿಗಳು.

ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಮೇಲ್ಸೇತುವೆ ನಿರ್ಮಾಣಕ್ಕೆ ಸದ್ಯ ಜಯನಗರ ಈಸ್ಟ್‌ ಎಂಡ್‌ ಜಂಕ್ಷನ್‌ ಬಳಿ ಇರುವ ಜಯದೇವ ಮೇಲ್ಸೇತುವೆ ನೆಲಸಮಗೊಳಿಸಲು ಯೋಜಿಸಲಾಗಿತ್ತು. ಆದರೆ ಜಯದೇವ ಮೇಲ್ಸೇತುವೆ ಉಳಿಸಿ, ಹೊಸದಾಗಿ ನಿರ್ಮಿಸುತ್ತಿರುವ ‘ರಸ್ತೆ ಮತ್ತು ಮೆಟ್ರೊ ರೈಲು ಮೇಲ್ಸೇತುವೆ’ ಮಾರ್ಗಕ್ಕೂ ಬಳಸಿಕೊಳ್ಳಲಾಗುವುದು. ರಾಗಿಗುಡ್ಡ ಜಂಕ್ಷನ್‌ನಿಂದ ಸಿಲ್ಕ್‌ ಬೋರ್ಡ್‌ವರೆಗೆ ಹೊಸ ಮೇಲ್ಸೇತುವೆ ನಿರ್ಮಾಣವಾದರೆ  ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಅಲ್ಲದೆ, ಈ ಮಾರ್ಗವನ್ನು ‘ಸಿಗ್ನಲ್‌ ಮುಕ್ತ’ಗೊಳಿಸುವ ಉದ್ದೇಶವೂ ಇದೆ ಎಂದು ಆಯುಕ್ತರು ತಿಳಿಸಿದರು.

**

ಮೇಲ್ಸೇತುವೆ ನಿರ್ಮಾಣಕ್ಕೆ ಪಾಲಿಕೆ  ಭರಿಸಬೇಕಿರುವ ಹಣವನ್ನು ನಗರೋತ್ಥಾನ ಯೋಜನೆಯ ಅನುದಾನದಲ್ಲಿ ಒದಗಿಸುತ್ತೇವೆ

–ಎನ್‌.ಮಂಜುನಾಥ್ ಪ್ರಸಾದ್, ಪಾಲಿಕೆ ಆಯುಕ್ತ

*

ವಿಶೇಷತೆ ಏನು?

* ಎರಡು ಅಂತಸ್ತಿನ ಮೇಲ್ಸೇತುವೆ ನಿರ್ಮಾಣ

* 8 ಮೀಟರ್‌ ಎತ್ತರದಲ್ಲಿ ವಾಹನ ಸಂಚಾರಕ್ಕೆ ರಸ್ತೆ

* 18 ಮೀಟರ್ ಎತ್ತರದಲ್ಲಿ ಮೆಟ್ರೊ ರೈಲು ಮಾರ್ಗ

* ವಾಹನ ಸಂಚಾರಕ್ಕೆ 4 ಪಥದ ರಸ್ತೆ

* ಸೈಕಲ್‌ ಸವಾರಿಗೂ ಪ್ರತ್ಯೇಕ ಪಥ

ಪ್ರತಿಕ್ರಿಯಿಸಿ (+)