ಮಂಗಳವಾರ, ಡಿಸೆಂಬರ್ 10, 2019
18 °C
₹ 500, ₹ 1,000 ಮುಖಬೆಲೆಯ ನೋಟು ಅಮಾನ್ಯದ ಪರಿಣಾಮ

ಹೆಚ್ಚಿನ ಎಟಿಎಂಗಳಲ್ಲಿ ‘ನೋ ಕ್ಯಾಶ್‌’ ಫಲಕ

ಎನ್. ನಾಗರಾಜ್ Updated:

ಅಕ್ಷರ ಗಾತ್ರ : | |

ಹೆಚ್ಚಿನ ಎಟಿಎಂಗಳಲ್ಲಿ ‘ನೋ ಕ್ಯಾಶ್‌’ ಫಲಕ

ದಾವಣಗೆರೆ: ಅರ್ಧ ಮುಚ್ಚಿರುವ ಬಾಗಿಲು... ‘ನೋ ಕ್ಯಾಶ್‌’ ಫಲಕ... ಇವು ಎಂಟು ತಿಂಗಳಿನಿಂದ ದಾವಣಗೆರೆಯ ಬಹುತೇಕ ಎಟಿಎಂ(ಆಟೊಮ್ಯಾಟಿಕ್‌ ಟಿಲ್ಲರ್‌ ಮಷಿನ್‌)ಗಳಲ್ಲಿ ಕಾಣಸಿಗುತ್ತಿರುವ ಸಾಮಾನ್ಯ ದೃಶ್ಯಗಳು.

ದೊಡ್ಡ ಮುಖಬೆಲೆಯ ನೋಟು ಅಮಾನ್ಯದ ಪರಿಣಾಮವು ಎಟಿಎಂ ವ್ಯವಸ್ಥೆಯನ್ನು ಇನ್ನೂ ಕಾಡುತ್ತಿದೆ. ಹೀಗಾಗಿ ತುರ್ತು ಸಂದರ್ಭದಲ್ಲಿ ಹಣ ಪಡೆಯಲು ನಾಗರಿಕರು ಎಟಿಎಂಗಳನ್ನು ಹುಡುಕಿಕೊಂಡು ಅಲೆಯುವಂತಾಗಿದೆ.

₹ 500 ಹಾಗೂ ₹ 1,000 ಮುಖಬೆಲೆಯ ನೋಟುಗಳನ್ನು ರದ್ದು ಗೊಳಿಸಿದಾಗ ಎಟಿಎಂಗಳಿಗೆ ತುಂಬಲು ನೋಟುಗಳ ಅಭಾವ ಸೃಷ್ಟಿಯಾಗಿತ್ತು. ಸದ್ಯ ಸಮಸ್ಯೆ ಸಾಧಾರಣ ಮಟ್ಟಿಗೆ ಸುಧಾರಣೆಯಾಗಿದ್ದರೂ ನೋಟುಗಳ ಕೊರತೆ ಇನ್ನೂ ಮುಂದುವರಿದಿದೆ. ಹೀಗಾಗಿ ಬಹುತೇಕ ಎಟಿಎಂಗಳು ಬಂದ್‌ ಆಗಿರುತ್ತವೆ.

‘ಖಾಸಗಿ ಮತ್ತು ರಾಷ್ಟ್ರೀಕೃತ ಹಾಗೂ ಸಹಕಾರ ಸೇರಿ ಒಟ್ಟು 244 ಬ್ಯಾಂಕ್‌ ಶಾಖೆಗಳು ನಗರದಲ್ಲಿವೆ. ದಿನದ 24 ತಾಸೂ ಬ್ಯಾಂಕಿಂಗ್‌ ಸೇವೆ ಒದಗಿಸುವುದಕ್ಕಾಗಿ 258 ಎಟಿಎಂ ಗಳನ್ನು ಸ್ಥಾಪಿಸಲಾಗಿದೆ. ಆದರೆ, ಇವುಗಳಲ್ಲಿ ಅರ್ಧದಷ್ಟು ಎಟಿಎಂಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದಕ್ಕೆ ನೋಟುಗಳ ಕೊರತೆ ಪ್ರಮುಖ ಕಾರಣ ಇರಬಹುದು’ ಎನ್ನುತ್ತಾರೆ ಲೀಡ್‌ ಬ್ಯಾಂಕ್‌ ವಿಭಾಗೀಯ ಪ್ರಬಂಧಕ ಎನ್‌.ಟಿ.ಎರ್ರಿಸ್ವಾಮಿ.

ಖಾಸಗಿ ಬ್ಯಾಂಕ್‌ಗಳಿಗೆ ಸಮಸ್ಯೆಯಾಗಿಲ್ಲ:  ‘ಖಾಸಗಿ ಬ್ಯಾಂಕ್‌ಗಳ ಶಾಖೆಗಳು ಕಡಿಮೆ ಇವೆ. ನಗರದಲ್ಲಿ ಒಂದೇ ಶಾಖೆ ಹೊಂದಿರುವ ಬ್ಯಾಂಕ್‌ಗಳು 30ಕ್ಕೂ ಹೆಚ್ಚಿವೆ. ಈ ಬ್ಯಾಂಕ್‌ಗಳಿಗೆ ನೋಟುಗಳ ಕೊರೆತೆಯಾಗಿಲ್ಲ. ಅಲ್ಲದೇ ಈ ಶಾಖೆಗಳಿಗೆ ಸಂಬಂಧಪಟ್ಟ ಎಟಿಎಂಗಳನ್ನು ಆಯಾ ಬ್ಯಾಂಕ್‌ ಸಿಬ್ಬಂದಿಯೇ ನಿರ್ವಹಣೆ ಮಾಡುತ್ತಾರೆ. ಹೀಗಾಗಿ, ಅವುಗಳ ಕಾರ್ಯನಿರ್ವಹಣೆ ಉತ್ತಮವಾಗಿದೆ’ ಎನ್ನುತ್ತಾರೆ ಅವರು.

‘ರಾಷ್ಟ್ರೀಕೃತ ಬ್ಯಾಂಕ್‌ಗಳ ಶಾಖೆಗಳ ಪಾಲು ದೊಡ್ಡದಿದೆ. ಈ ಬ್ಯಾಂಕ್‌ಗಳ ವಹಿವಾಟು ಸಹ ಸಹಜವಾಗಿಯೇ ಅಧಿಕ ಪ್ರಮಾಣದಲ್ಲಿದೆ. ಇದರಿಂದ ನೋಟಿನ ಅಭಾವ ಈ ಬ್ಯಾಂಕ್‌ಗಳನ್ನು ಕಾಡುತ್ತಿದೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿರುವ ಎಟಿಎಂಗಳನ್ನು ನಿರ್ವಹಣೆ ಮಾಡು ವುದು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಕಷ್ಟವಾಗುತ್ತಿದೆ’ ಎಂದು ತಿಳಿಸುತ್ತಾರೆ ಅವರು.

‘ಅರ್ಧದಷ್ಟು ಎಟಿಎಂಗಳ ಕಾರ್ಯ ನಿರ್ವಹಣೆಯಲ್ಲಿ ಅಡಚಣೆಯಿದ್ದರೂ ದೈನಂದಿನ ವ್ಯವಹಾರಕ್ಕೆ ದೊಡ್ಡ ಸಮಸ್ಯೆಯಾಗಿಲ್ಲ. ‘ಭೀಮ್‌’ ಮಾದರಿಯ ಆ್ಯಪ್‌ಗಳನ್ನು ಬಳಸಿಕೊಂಡು ಇ–ವ್ಯವಹಾರ ನಡೆಸುವಲ್ಲಿ ಜನರು ನಿಧಾನ ವಾಗಿ ಒಗ್ಗಿಕೊಳ್ಳುತ್ತಿದ್ದಾರೆ. ಆನ್‌ಲೈನ್‌ ನಲ್ಲಿ ಹಣ ವರ್ಗಾವಣೆ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಎಟಿಎಂಗಳ ಮೇಲಿನ ಅವಲಂಬನೆ ಕಡಿಮೆ ಯಾಗುತ್ತಿದೆ’ ಎನ್ನುತ್ತಾರೆ ಎರ್ರಿಸ್ವಾಮಿ.

‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಎಟಿಎಂ ಸೆಲ್‌ಗಳು ಇರುತ್ತವೆ. ಈ ಸೆಲ್‌ಗಳು ಖಾಸಗಿ ಸಂಸ್ಥೆಗಳ ಮೂಲಕ ಎಟಿಎಂಗಳ ನಿರ್ವಹಣೆ ಮಾಡಿಸುತ್ತವೆ. ಎಟಿಎಂ ಸೆಲ್‌ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದರೆ ಸಮಸ್ಯೆ ಸ್ವಲ್ಪ ಬಗೆಹರಿಯಬಹುದು’ ಎನ್ನುತ್ತಾರೆ ರಾಷ್ಟ್ರೀಕೃತ ಬ್ಯಾಂಕ್‌ನ ಒಬ್ಬರು ಸಿಬ್ಬಂದಿ.

‘ಖಾಸಗಿ ಬ್ಯಾಂಕ್‌ಗಳಿಗಿಂತ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೇ ಹೆಚ್ಚಿನ ಗ್ರಾಹಕರಿದ್ದಾರೆ. ಹೀಗಾಗಿ ಬ್ಯಾಂಕ್‌ಗಳಿಗೆ ಆದಾಯವೂ ಹೆಚ್ಚಿರುತ್ತದೆ. ಮೇಲಾಗಿ ಬ್ಯಾಂಕ್‌ಗಳು ಎಟಿಎಂ ಬಳಕೆಗೆ ಸೇವಾ ಶುಲ್ಕವನ್ನೂ ವಸೂಲಿ ಮಾಡುತ್ತವೆ. ಆದ್ದರಿಂದ ಎಟಿಎಂಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಬೇಕು’ ಎಂದು ಆಗ್ರಹಿಸುತ್ತಾರೆ ಕೆ.ಬಿ. ಬಡಾವಣೆ ನಿವಾಸಿ ಶಿಕ್ಷಕ ಸುರೇಶ್‌.

‘ಬಸ್‌ನಿಲ್ದಾಣ, ರೈಲು ನಿಲ್ದಾಣ, ಶಾಲಾ, ಕಾಲೇಜುಗಳು, ಸರ್ಕಾರಿ ಕಚೇರಿಗಳು ಇರುವ ಸ್ಥಳಗಳಲ್ಲಾದರೂ ಎಟಿಎಂಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಗ್ರಾಹಕರಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕು’ ಎಂದು ಆಗ್ರಹಿಸುತ್ತಾರೆ ಅವರು.

ಪ್ರತಿಕ್ರಿಯಿಸಿ (+)