ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿ ರೈತ

ಸೊರಬ: ಮಳೆಯ ಕಣ್ಣಾಮುಚ್ಚಾಲೆ: ಮತ್ತೆ ಎದುರಾದ ಬರಗಾಲ
Last Updated 10 ಜುಲೈ 2017, 5:37 IST
ಅಕ್ಷರ ಗಾತ್ರ

ಸೊರಬ:  ತಾಲ್ಲೂಕಿನಲ್ಲಿ ಮುಂಗಾರು ಮಳೆ ಕ್ಷೀಣಿಸಿದೆ. ಜುಲೈ ತಿಂಗಳ ಮೊದಲ ವಾರದವರೆಗೆ ಶೇ 38ರಷ್ಟು ಮಳೆಯ ಕೊರತೆಯಾಗಿದೆ. ಇದು ಭತ್ತದ ನಾಟಿ ಮಾಡುವ ನಿರೀಕ್ಷೆಯಲ್ಲಿದ್ದ ರೈತರಲ್ಲಿ ಆತಂಕ ಮೂಡಿಸಿದೆ.

ಕಳೆದ ವರ್ಷ ಈ ಹೊತ್ತಿಗೆ ಆರಿದ್ರಾ ಮಳೆ ಚೆನ್ನಾಗಿ ಬಿದ್ದಿದ್ದರಿಂದ ತರಿ ಜಮೀನಿನಲ್ಲಿ (ನೀರಾವರಿ) ನಾಟಿ ಮಾಡಲು ಪ್ರಾರಂಭಿಸಿದ್ದರು. ಆದರೆ, ಈ ವರ್ಷ ವಾಡಿಕೆಗಿಂತ ಮಳೆ ಕಡಿಮೆ ಬಿದ್ದಿರುವುದರಿಂದ ಹಾಗೂ ಕೆಸರು ಮಾಡಲು ಹೊಲದಲ್ಲಿ ನೀರು ಇಲ್ಲದಿರುವುದರಿಂದ ಅನಿವಾರ್ಯವಾಗಿ ರೈತರು ತಮ್ಮ ಜಮೀನಿನಲ್ಲಿ ದನಕರುಗಳನ್ನು ಬಿಟ್ಟು ಮೇಯಿಸುತ್ತಿದ್ದಾರೆ.

ಸತತ ಬರಗಾಲದಿಂದ ಕಂಗೆಟ್ಟಿದ್ದ ರೈತರು, ಈ ಬಾರಿಯಾದರೂ ಉತ್ತಮ ಮಳೆ ಬೀಳಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಜಮೀನಿನಲ್ಲಿ ಹೂಟಿ ಮಾಡಿಸಿ ಮಳೆಗಾಗಿ ಕಾಯುತ್ತಿದ್ದರು. ಆದರೆ, ಜುಲೈ ಎರಡನೇ ವಾರ ಎರಡು ದಿನ ಮಳೆ ಸುರಿದು ಮಾಯವಾಗಿದೆ.

‘ಯಾವುದೇ ಕೆರೆ– ಕಟ್ಟೆಗಳೂ ತುಂಬಿಲ್ಲ. ನದಿಯಲ್ಲೂ ನೀರು ಹರಿದಿಲ್ಲ. ಕಳೆದ ಒಂದು ವಾರದಿಂದ ಒಂದೇ ಒಂದು ಹನಿ ಮಳೆಯಾಗಿಲ್ಲ. ಏನು ಮಾಡಬೇಕು ಎಂದು ದಿಕ್ಕು ತೋಚುತ್ತಿಲ್ಲ’ ಎಂದು ಶಾಂತಗೇರಿ ಗ್ರಾಮದ ಮಂಜಪ್ಪ ಅಳಲು ತೋಡಿಕೊಂಡರು.

ಕೊಳವೆಬಾವಿ ಆಶ್ರಯಿಸಿ ಕೆಲವು ರೈತರು ಸಸಿಮಡಿಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಇನ್ನು ಕೆಲವು ರೈತರು ಒಂದೆರೆರಡು ದಿನ ಬಿದ್ದ ಮಳೆಯ ಒರತೆ ನೀರಿನಲ್ಲಿ ಸಸಿಮಡಿಗಳನ್ನು ಸಿದ್ಧಮಾಡಿಕೊಂಡಿದ್ದಾರೆ. ಈಗ ಹೊಲದಲ್ಲಿ ನೀರಿಲ್ಲದೇ ಇರುವುದರಿಂದ ಬಿತ್ತಿದ ಬೀಜವನ್ನೂ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಮೊದಲೇ ಸಾಲ ಮಾಡಿ ಬೀಜ, ರಸಗೊಬ್ಬರ ತಂದು ಕಾಯುತ್ತಿರುವ ರೈತರಿಗೆ ಮಳೆಯ ಕಣ್ಣಾ ಮುಚ್ಚಾಲೆ ಆಟ ನಿರಾಸೆ ಮೂಡಿಸಿದೆ. ಈ ವರ್ಷವೂ ಬರಗಾಲ ಮುಂದುವರಿಯುವ ಲಕ್ಷಣ ಕಂಡು ಬರುತ್ತಿದೆ ಎಂಬ ಮಾತು ರೈತರಿಂದ ಕೇಳಿ ಬರುತ್ತಿದೆ.

‘ಜುಲೈ ಮೊದಲ ವಾರದಲ್ಲಿ ನಾಟಿ ಮಾಡು ತ್ತಿದ್ದ ರೈತರು ಮಳೆಯ ಅಭಾವದಿಂದ ನೀರಿಲ್ಲದ ಹೊಲದಲ್ಲಿ ದನಕರುಗಳನ್ನು ಮೇಯಿಸುತ್ತಿದ್ದಾರೆ. ಜೋಳ ಬಿತ್ತಿರುವ ರೈತರು ಗೊಬ್ಬರ ಹಾಕಿದ್ದಾರೆ. ಆದರೆ, ಒಂದು ವಾರದಿಂದ ಬಿಸಿಲು ಹೆಚ್ಚಾಗಿರುವುದರಿಂದ ಗೊಬ್ಬರದ ಉರಿಗೆ ಜೋಳದ ಸಸಿ ಒಣಗಲಾರಂಭಿಸಿದೆ. ಮಳೆಯರಾಯ ಕೃಪೆ ತೋರದಿದ್ದರೆ ಜೋಳದ ಬೆಳೆಯೂ ರೈತರ ಕೈಸೇರುವುದು ಅನುಮಾನ’ ಎಂದು ಪ್ರಗತಿಪರ ಕೃಷಿಕ ಕಲ್ಲಪ್ಪ ಚಿತ್ರಟ್ಟೆಹಳ್ಳಿ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ಆನವಟ್ಟಿ ಭಾಗದಲ್ಲಿ ಮಳೆಯ ಪ್ರಮಾಣ ಇನ್ನೂ ಕಡಿಮೆ ಆಗಿರುವುದರಿಂದ ಭತ್ತ ಬೆಳೆಯುವ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಆದರೂ, ಮಳೆ ಬರದಿದ್ದರೆ ಈ ಬೆಳೆಯೂ ಬೆಳೆಯದೇ ನಮ್ಮ ಬದುಕು ಮೂರಾಬಟ್ಟೆಯಾಗಲಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.
***

ಮುಂಬರುವ ದಿನಗಳಲ್ಲಿ ಮಳೆ ಬೀಳುವ ಲಕ್ಷಣಗಳಿವೆ. ಹೀಗಾಗಿ ಪರ್ಯಾಯ ಬೆಳೆ ಬೆಳೆಯಲು ಇಲಾಖೆಯಿಂದ ಮಾಹಿತಿ ನೀಡಲಾಗುವುದು
– ಮಂಜುಳಾ, ಸಹಾಯಕ ಕೃಷಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT