ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರು ನಿರಂಕುಶಮತಿಗಳಾಗುವುದು ಕಷ್ಟ

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು
Last Updated 10 ಜುಲೈ 2017, 5:47 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಮಾಧ್ಯಮಗಳು ಉದ್ಯಮ ಸ್ವರೂಪ ಪಡೆದ ಮೇಲೆ ಪತ್ರಕರ್ತರು ಹಲವು ರೀತಿಯ ಅಂಕುಶಗಳನ್ನು ಎದುರಿಸಿಕೊಂಡೇ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ’ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್‌ಮಟ್ಟು ಅಭಿಪ್ರಾಯಪಟ್ಟರು.

ನಗರದ ಕ್ರೀಡಾಭವನದಲ್ಲಿ ಭಾನುವಾರ ‘ನಾವು–ನಮ್ಮಲ್ಲಿ’, ಚಿತ್ರದುರ್ಗದ ಗೆಳೆಯರ ಬಳಗ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ  ಆಯೋಜಿಸಿದ್ದ ‘ನಿರಂಕುಶಮತಿತ್ವದೆಡೆಗೆ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಪ್ರಸ್ತುತ ಪತ್ರಕರ್ತರು ನೋಡಿದ್ದನ್ನು, ಕೇಳಿದ್ದನ್ನು, ತಿಳಿದಿದ್ದನ್ನು ಬರೆಯಲು ಸಾಧ್ಯವಿಲ್ಲದಂತಹ ವಾತಾವರಣವಿದೆ. ಇದಕ್ಕೆ  ಮಾಲೀಕರು, ಸಂಪಾದಕರಷ್ಟೇ ಅಲ್ಲದೇ ಬೇರೆ ಬೇರೆ ತೊಡಕುಗಳೂ ಕಾರಣವಾಗಿವೆ. ಪರಿಣಾಮವಾಗಿ ಸೂಕ್ಷ್ಮ ವಿಷಯಗಳಿಗಿಂತ ಅಸೂಕ್ಷ್ಮ ವಿಷಯಗಳನ್ನೇ ಬರೆಯುವ ಪರಿಸ್ಥಿತಿ ಇದೆ. ಈ ಮೂಲಕ ಪತ್ರಕರ್ತನೊಬ್ಬ ನಿರಂಕುಶ ಮತಿಯಾಗುವುದು ಕಷ್ಟವಾಗಿದೆ’ ಎಂದು ವಿಶ್ಲೇಷಿಸಿದರು.

‘ಮೂರು ವರ್ಷಗಳಿಂದ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಅನೇಕ ವಿದ್ಯಮಾನಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿಲ್ಲ. ಈ ವಿಷಯದಲ್ಲಿ ಪತ್ರಕರ್ತರ ಆಫ್ ದ ರೆಕಾರ್ಡ್ ಕಪಾಟುಗಳು ಭರ್ತಿಯಾಗಿವೆ. ಅಂಥ ವಿಷಯಗಳನ್ನು ಬರೆಯಬೇಕೆಂದರೂ ಅದಕ್ಕೆ ಅಂಕುಶಗಳು ಬೀಳುತ್ತಿವೆ’ ಎಂದು ನುಡಿದರು.

‘ಪತ್ರಕರ್ತ ತನ್ನ ವೃತ್ತಿ ಉಳಿಸಿಕೊಳ್ಳಬೇಕು. ಆ ಜವಾಬ್ದಾರಿ ಪತ್ರಕರ್ತರಿಗಿರುವಷ್ಟೇ ಓದುಗರಿಗೂ ಇದೆ. ಜಾಗೃತ ಸಮಾಜವಿದ್ದರೆ ಮಾತ್ರ ಮಾಧ್ಯಮ ಯಶಸ್ವಿಯಾಗುತ್ತದೆ. ಸತ್ತುಹೋದ ಸಮಾಜದಲ್ಲಿ ಮಾಧ್ಯಮ ಹೇಗೆ ಕೆಲಸ ಮಾಡಿದರೂ ಪ್ರಯೋಜನವಾಗುವುದಿಲ್ಲ’ ಎಂದರು.

‘ಪತ್ರಿಕೋದ್ಯಮದಲ್ಲಿ ಮೊದಲೇ ಜಾತಿ ಇತ್ತು. ಅದರ ಜತೆಗೆ ಹಣ ಸೇರಿಕೊಂಡಿತು. ಈಗ ಧರ್ಮವೂ ಅಧಿಕಾರ ನಡೆಸಲು ಮುಂದಾಗಿದೆ. ಈ ಮೂಲಕ ಎಲ್ಲ ರೀತಿಯಿಂದಲೂ ಮಾಧ್ಯಮದ ಮೇಲೆ ಅಂಕುಶ ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ’ ಎಂದರು.

ಹಿರಿಯ ಪತ್ರಕರ್ತ ಅಜಿತ್ ಪಿಳ್ಳೆ ಅವರ ಅನುವಾದಿತ ಕೃತಿ ‘ಇದು ಯಾವ ಸೀಮೆಯ ಚರಿತ್ರೆ’ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸ ರಾಜು, ‘ಪ್ರಸ್ತುತ ಪತ್ರಿಕೆ ಹಾಕುವ ಹುಡುಗರು, ಏಜೆಂಟರು, ಪ್ರಸರಣ ವಿಭಾಗದವರು ಸುದ್ದಿಗಳನ್ನು ನಿರ್ಧಾರ ಮಾಡುವಂತಹ ಪರಿಸ್ಥಿತಿ ಇದೆ. ಇದರಿಂದ ಸಂಪಾದಕೀಯ ವಿಭಾಗದ ಮೇಲೆ ಒತ್ತಡ ಉಂಟಾಗಿ ಅದು ಅಶಕ್ತಗೊಳ್ಳುವಂತಾಗಿದೆ’ ಎಂದರು.

‘ಮುಖಪುಟ, ಸಂಪಾದಕೀಯ ಸೇರಿದಂತೆ ಎಲ್ಲ ಪುಟಗಳು ಒಂದು ರೀತಿ ಕಳೆಗುಂದಿದಂತೆ ಕಾಣುತ್ತಿವೆ’ ಎಂದು ವಿಶ್ಲೇಷಿಸಿದರು. ‘ಇಂದಿನ ಮಾಧ್ಯಮದವರನ್ನು ಕಾಡುತ್ತಿರುವುದೇನು?’ ವಿಷಯ ಕುರಿತು ಹಿರಿಯ ಪತ್ರಕರ್ತ ಅಜಿತ್ ಪಿಳ್ಳೆ ಮಾತನಾಡಿದರು. ವೇದಿಕೆಯಲ್ಲಿ ಕೃತಿ ಅನುವಾದಿಸಿರುವ ಪತ್ರಕರ್ತ ಜಿ.ಟಿ.
ಸತೀಶ್, ಕೊಟ್ಟೂರು ಬಯಲು ಸಾಹಿತ್ಯ ವೇದಿಕೆಯ ನಿರ್ಮಲಾ ಶಿವನಗುತ್ತಿ ಹಾಜರಿದ್ದರು.

***

‘ನಿರಂಕುಶ ವಾತಾವರಣ ನಿರ್ಮಾಣ ಅವಶ್ಯ’
‘ಜಾನಪದದ ನೆಲೆಗಟ್ಟಿನ ಸಮಾಜದಲ್ಲಿ ಇಂದು ಸಿದ್ಧಾಂತಗಳ ಗೊಂದಲ ಸೃಷ್ಟಿಯಾಗುತ್ತಿದ್ದು, ಈ ಕುರಿತು ಮುಕ್ತ ಮನಸ್ಸಿನ ಚಿಂತನೆ ನಡೆಸುವವರ ಅವಶ್ಯಕತೆಯಿದೆ’ ಎಂದು ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

‘ನಿರಂಕುಶ ಮತಿತ್ವದೆಡೆಗೆ’ ಕಾರ್ಯಕ್ರಮದ ಬೆಳಗಿನ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಲಂಪಂಥೀಯ ಶಕ್ತಿಗಳು ದೇಶದಲ್ಲಿ ಅಧಿಕಾರ ಹಿಡಿದಿವೆ. ಬಂಡವಾಳ ಶಾಹಿಗಳು ಇದಕ್ಕೆ ಕೈ ಜೋಡಿಸಿವೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಪರಮಾಧಿಕಾರ ಹಾಗೂ ಅಸಹನೆಯೂ ತಾಂಡವವಾಡುತ್ತಿವೆ. ಇವೆಲ್ಲದರ ಬಗ್ಗೆ  ನಾವು ಎಚ್ಚರಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಠಿಣ ಸಂದರ್ಭಗಳನ್ನು ಎದುರಿಸಬೇಕಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

‘ತಮಿಳರಿಗೆ ದ್ರೌಪದಿ ಮಹಾಭಾರತದ ಕೇವಲ ಒಂದು ಪಾತ್ರವಲ್ಲ, ಆರಾಧ್ಯ ದೈವವೂ ಹೌದು. ಹಾಗಾಗಿ ತಮಿಳುನಾಡಿನ ಮಹಾಭಾರತಗಳೆಲ್ಲ ದ್ರೌಪದಿ ಕೇಂದ್ರಿತವಾಗಿಯೇ ಬೆಳೆದವು. ಹಾಗೆಯೇ ಮೈಲಾರದ ಕಾರ್ಣಿಕವನ್ನು ಲಕ್ಷಾಂತರ ಜನ ತಮಗೆ ತಿಳಿದಂತೆ ಅರ್ಥೈಸಿಕೊಂಡು ವಿಶ್ಲೇಷಿಸುತ್ತಾರೆ. ಇದಕ್ಕೆ ಯಾವುದೇ ಅಡ್ಡಿಗಳಿಲ್ಲ. ಇಂತಹ ಒಂದು ನಿರಂಕುಶ ವಾತಾವರಣ ಎಲ್ಲ ವಿಷಯದಲ್ಲಿ ನಿರ್ಮಾಣವಾಗಬೇಕಿದೆ’ ಎಂದು ಆಶಿಸಿದರು.

ಕೋಲಾರದ ಸಾಂಸ್ಕೃತಿಕ ಚಿಂತಕ ಕೋಟಗಾನಹಳ್ಳಿ ರಾಮಯ್ಯ ಮಾತನಾಡಿ, ‘ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮೂರು ಕಾಸಿನ ಬೆಲೆಯಿಲ್ಲದಂತಾಗಿದೆ. ಹೊಸ ತಲೆಮಾರು ಎತ್ತ ಸಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ’ ಎಂದು ಹೇಳಿದರು.

‘ಸಾಮಾಜಿಕ ನೆಲೆಯಲ್ಲಿ ಅಸಮಾನತೆ ತಲೆ ಎತ್ತುತ್ತಿದ್ದು, ಬೃಹತ್ ಭಾರತ ಸಂರ್ಕೀಣವಾಗುತ್ತಿದೆ. ಸಮಾನತೆ, ಭ್ರಾತೃತ್ವಕ್ಕೆ ಬೆಲೆ ಇಲ್ಲದಂತಾಗಿದೆ’ ಎಂದು ಹೇಳಿದರು. ಗೆಳೆಯರ ಬಳಗದ ನಿವೃತ್ತ ಪ್ರಾಂಶುಪಾಲ ಜೆ.ಯಾದವರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT