ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ 69 ಅಂಗನವಾಡಿಗಳಿಗೆ ಸ್ವಂತ ಸೂರಿಲ್ಲ

‘ಬಾಡಿಗೆ ಮಾಫಿಯಾ’ ಜತೆ ಕೈ ಜೋಡಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು: ಆರೋಪ
Last Updated 10 ಜುಲೈ 2017, 6:22 IST
ಅಕ್ಷರ ಗಾತ್ರ

ಕೋಲಾರ: ನಗರಸಭೆ ವ್ಯಾಪ್ತಿಯ 69 ಅಂಗನವಾಡಿ ಕೇಂದ್ರಗಳು ಆರಂಭವಾಗಿ ವರ್ಷಗಳೇ ಕಳೆದರೂ ಕೇಂದ್ರಗಳಿಗೆ ಸ್ವಂತ ಸೂರಿನ ಭಾಗ್ಯವಿಲ್ಲ. ‘ಬಾಡಿಗೆ ಮಾಫಿಯಾ’ ಜತೆ ಕೈ ಜೋಡಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಅಂಗನವಾಡಿಗಳಿಗೆ ಸೂರು ಕಲ್ಪಿಸುವ ಮನಸು ಮಾಡಿಲ್ಲ.

ಹೀಗಾಗಿ ಅಂಗನವಾಡಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದು, ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಸರ್ಕಾರಿ ಹಣ ಬಾಡಿಗೆ ರೂಪದಲ್ಲಿ ಕಟ್ಟಡ ಮಾಲೀಕರ ಜೇಬು ಸೇರುತ್ತಿದೆ. ಬಹುತೇಕ ಅಂಗನವಾಡಿ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಕೇಂದ್ರದಲ್ಲಿನ ಮಕ್ಕಳು ಹಾಗೂ ಸಿಬ್ಬಂದಿ ಜೀವ ಭಯದಲ್ಲಿ ದಿನ ದೂಡುವಂತಾಗಿದೆ.

ಸರ್ಕಾರದ ಮಾರ್ಗಸೂಚಿ ಪ್ರಕಾರ ನಗರಸಭೆ ವ್ಯಾಪ್ತಿಯಲ್ಲಿ ಪ್ರತಿ 600 ಜನಸಂಖ್ಯೆಗೆ ಒಂದು ಅಂಗನವಾಡಿ ಕೇಂದ್ರವಿರಬೇಕು. ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲದ ಕಡೆ ಕಟ್ಟಡ ಬಾಡಿಗೆಗೆ ಪಡೆಯಬಹುದು. ಬಾಡಿಗೆ ಕಟ್ಟಡದಲ್ಲಿ ಅಡುಗೆ ಮನೆ, ಆಹಾರ ಪದಾರ್ಥಗಳ ಸಂಗ್ರಹಣೆಗೆ ದಾಸ್ತಾನು ಕೊಠಡಿ, ಮಕ್ಕಳ ಕಲಿಕೆಗೆ ದೊಡ್ಡ ಕೊಠಡಿ, ಶೌಚಾಲಯ, ನೀರಿನ ಟ್ಯಾಂಕ್‌, ಫ್ಯಾನ್‌, ನೀರು ಮತ್ತು ವಿದ್ಯುತ್‌ ಸಂಪರ್ಕ ಕಡ್ಡಾಯವಾಗಿ ಇರಬೇಕೆಂಬ ನಿಯಮವಿದೆ.

ಈ ಎಲ್ಲಾ ಸೌಕರ್ಯಗಳನ್ನು ಹೊಂದಿರುವ ಕಟ್ಟಡಕ್ಕೆ ತಿಂಗಳಿಗೆ ₹ 3 ಸಾವಿರ ಬಾಡಿಗೆ ಕೊಡಲು ಇಲಾಖೆಗೆ ಅವಕಾಶವಿದೆ. ಆದರೆ, ಅಧಿಕಾರಿಗಳು ಹಂದಿ ಗೂಡಿಗಿಂತಲೂ ಕಡೆಯಾಗಿರುವ ಹಳೆ ಕಟ್ಟಡಗಳನ್ನು ಬಾಡಿಗೆಗೆ ಪಡೆದು ಅಂಗನವಾಡಿ ನಡೆಸುತ್ತಿದ್ದಾರೆ. ಕೆಲ ಬಡಾವಣೆಗಳಲ್ಲಿ ಶೆಡ್‌, ಸಮುದಾಯ ಭವನಗಳಲ್ಲಿ ಅಂಗನವಾಡಿಗಳಿವೆ.

ಅಂಗನವಾಡಿ ಕಟ್ಟಡಗಳು ತುಂಬಾ ಕಿರಿದಾಗಿದ್ದು, ಈ ಜಾಗದಲ್ಲೇ ಮಕ್ಕಳ ಆಟ, ಪಾಠ, ನಿದ್ದೆ, ಅಡುಗೆ ಸಿದ್ಧತೆ ಎಲ್ಲಾ ಚಟುವಟಿಕೆಗಳು ನಡೆಯುಬೇಕು. ಜತೆಗೆ ಆಹಾರ ಪದಾರ್ಥಗಳನ್ನು ಚಿಕ್ಕ ಕೊಠಡಿಗಳಲ್ಲೇ ದಾಸ್ತಾನು ಮಾಡಲಾಗಿದೆ. ಇಲಾಖೆಯಿಂದ ಕೇಂದ್ರಗಳಿಗೆ ಕೊಟ್ಟಿರುವ ಆಟಿಕೆಗಳನ್ನು ಸ್ಥಳಾವಕಾಶದ ಕೊರತೆಯಿಂದಾಗಿ ಆಟವಾಡಲು ಕೊಡದೆ ಅಲ್ಮೇರಾದಲ್ಲಿ ಇಡಲಾಗಿದೆ.

ಹಾಜರಾತಿ ಕುಸಿತ: ಬಹುಪಾಲು ಅಂಗನವಾಡಿ ಕಟ್ಟಡಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಯಾವುದೇ ಕ್ಷಣದಲ್ಲಿ ಬೀಳುವ ಸ್ಥಿತಿಯಲ್ಲಿವೆ. ಕಟ್ಟಡಗಳ ಚಾವಣಿ ಹೆಂಚುಗಳು ಹಾಳಾಗಿದ್ದು, ಮಳೆಗಾಲದಲ್ಲಿ ನೀರು ಸೋರುವುದು ಸಾಮಾನ್ಯವಾಗಿದೆ.

ಮಳೆಗಾಲದಲ್ಲಿ ಕೆಲ ಅಂಗನವಾಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ. ಮಳೆಗಾಲ ಮುಗಿದ ಬಳಿಕ ಅಂಗನವಾಡಿಗಳು ಪುನರಾರಂಭವಾಗುತ್ತವೆ. ಕಟ್ಟಡಗಳು ಶಿಥಿಲಗೊಂಡಿರುವ ಕಾರಣ ಪೋಷಕರು ಮಕ್ಕಳನ್ನು ಅಂಗನವಾಡಿಗಳಿಗೆ ಕಳುಹಿಸಲು ಭಯ ಪಡುವರು. ಇದರಿಂದ ವರ್ಷದಿಂದ ವರ್ಷಕ್ಕೆ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಕುಸಿಯುತ್ತಿದೆ.

ಬಾಡಿಗೆ ಭರಿಸುತ್ತಿದ್ದಾರೆ: ಹಲವು ಕಟ್ಟಡಗಳ ಮಾಲೀಕರಿಗೆ ಅಧಿಕಾರಿಗಳು ಮುಂಗಡ ಕೊಟ್ಟಿಲ್ಲ. ಹೀಗಾಗಿ ಆಯಾ ಕೇಂದ್ರಗಳ ಕಾರ್ಯಕರ್ತರೇ ಮಾಲೀಕರಿಗೆ ಮುಂಗಡ ಹಣ ಕೊಟ್ಟಿದ್ದಾರೆ.

ಅಧಿಕಾರಿಗಳು ಪ್ರತಿ ಕೇಂದ್ರಕ್ಕೆ ತಿಂಗಳ ಬಾಡಿಗೆಯಾಗಿ ₹ 500 ಮಾತ್ರ ಪಾವತಿಸುತ್ತಿದ್ದಾರೆ. ಆದರೆ, ಬಾಡಿಗೆ ಮೊತ್ತ ₹ 500ಕ್ಕಿಂತ ಹೆಚ್ಚಿರುವ ಕಡೆ ಅಂಗನವಾಡಿ ಕಾರ್ಯಕರ್ತೆಯರೇ ಹೆಚ್ಚುವರಿ ಬಾಡಿಗೆ ಭರಿಸುತ್ತಿದ್ದಾರೆ.

ಅಧಿಕಾರಿಗಳು ಕೆಲ ಕೇಂದ್ರಗಳಿಗೆ ವಿದ್ಯುತ್‌ ಬಿಲ್‌ ಸಹ ಪಾವತಿಸುತ್ತಿಲ್ಲ. ಅಂತಹ ಕೇಂದ್ರಗಳಲ್ಲಿ ಕಾರ್ಯಕರ್ತೆಯರೇ ತಮ್ಮ ಗೌರವಧನದ ಹಣದಲ್ಲಿ ವಿದ್ಯುತ್‌ ಬಿಲ್‌ ಕಟ್ಟುತ್ತಿದ್ದಾರೆ. ಕುಡಿಯುವ ನೀರಿನ ಸೌಕರ್ಯ ಇಲ್ಲದ ಕೇಂದ್ರಗಳಲ್ಲಿ ಕಾರ್ಯಕರ್ತೆಯರು ಸ್ವಂತ ಹಣದಲ್ಲಿ ಕುಡಿಯುವ ನೀರು ಖರೀದಿಸುತ್ತಿದ್ದಾರೆ.

***

ಅಧಿಕಾರಿಗಳಿಗೆ ಕಮಿಷನ್‌
ಅಧಿಕಾರಿಗಳು ಕೆಲ ಬಡಾವಣೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮನೆಗಳಲ್ಲೇ ಸ್ವಲ್ಪ ಭಾಗವನ್ನು ಅಂಗನವಾಡಿಗಳಿಗೆ ಬಾಡಿಗೆಗೆ ಪಡೆದಿದ್ದಾರೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಈ ಮನೆಗಳಲ್ಲಿ ಎಲ್ಲಾ ಮೂಲಸೌಕರ್ಯಗಳು ಇಲ್ಲದಿದ್ದರೂ ಹೆಚ್ಚಿನ ಬಾಡಿಗೆ ಪಾವತಿಸಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಅಧಿಕಾರಿಗಳು ಮನೆ ಮಾಲೀಕರಾದ ಅಂಗನವಾಡಿ ಕಾರ್ಯಕರ್ತೆಯರಿಂದ ಕಮಿಷನ್‌ ಪಡೆಯುತ್ತಿದ್ದಾರೆ. ಕದ್ದು ಮುಚ್ಚಿ ನಡೆಯುತ್ತಿರುವ ಈ ಅಕ್ರಮದಿಂದ ಸರ್ಕಾರದ ಹಣ ಪೋಲಾಗುತ್ತಿದೆ ಎಂದು ಗ್ರಾಮಸ್ಥರೊಬ್ಬರು ಆರೋಪಿಸಿದರು.

***

ನಗರದಲ್ಲಿ ನಿವೇಶನ ಸಮಸ್ಯೆಯಿಂದಾಗಿ ಕಟ್ಟಡ ನಿರ್ಮಾಣ ಸಾಧ್ಯವಾಗುತ್ತಿಲ್ಲ. ನಿವೇಶನ ಮಂಜೂರು ಮಾಡುವಂತೆ ನಗರಸಭೆಗೆ ಪತ್ರ ಬರೆದಿದ್ದೇವೆ
ಕೆ.ಎಚ್‌.ಭಾಸ್ಕರ್‌, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

***

ಅಧಿಕಾರಿಗಳಿಗೆ ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳು ಹಾಗೂ ಸಿಬ್ಬಂದಿಯ ಸುರಕ್ಷತೆ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ
ಎಂ. ಮುನಿರಾಜಮ್ಮ, ಜಿಲ್ಲಾ ಸಮಿತಿ ಅಧ್ಯಕ್ಷೆ, ಅಂಗನವಾಡಿ ನೌಕರರ ಸಂಘ

***

ಕೇಂದ್ರದಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲದ ಕಾರಣ ನನ್ನ ಗೌರವಧನದ ಹಣದಲ್ಲಿ ನೀರು ಖರೀದಿಸುತ್ತಿದ್ದೇನೆ
ಎಂ.ಚೇತನಾ, ಅಂಗನವಾಡಿ ಕಾರ್ಯಕರ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT