ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯ ನೆನದು; ಜಲದ ಕಣ್ಣು ತೆರೆದು

ಕೃಷ್ಣನಗರದ ನಾಗರಾಜರಾವ್ ಕುಟುಂಬದಿಂದ ಮುಚ್ಚಿದ್ದ ಬಾವಿ ಮರುಪೂರಣ
Last Updated 10 ಜುಲೈ 2017, 6:35 IST
ಅಕ್ಷರ ಗಾತ್ರ

ತುಮಕೂರು: ‘ನಾಗರಿಕರು ಮಳೆ ನೀರು ಸಂಗ್ರಹಿಸಿ, ಭವಿಷ್ಯದ ಜಲದ ಹಾಹಾಕಾರಕ್ಕೆ ಪರಿಹಾರ ಕಂಡುಕೊಳ್ಳಿ’ ಎಂದು ವಿವಿಧ ಸಂಘ ಸಂಸ್ಥೆಗಳು ನಗರದಲ್ಲಿ ಜನ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿವೆ. ಈ ನಡುವೆಯೇ ಕೆಲವು ನಾಗರಿಕರು ಸ್ವಯಂ ಜಾಗೃತರಾಗಿ ತಮ್ಮ ಮನೆ ಅಂಗಳದಲ್ಲಿ ಮಳೆ ನೀರು ಸಂಗ್ರಹಕ್ಕೆ ಮುಂದಾಗುತ್ತಿದ್ದಾರೆ. ಬತ್ತಿದ ಬಾವಿಗಳನ್ನು ಮರು ಪೂರಣಗೊಳಿಸುತ್ತಿದ್ದಾರೆ. ಮುಚ್ಚಿದ್ದ ಜಲದ ಕಣ್ಣುಗಳನ್ನು ತೆರೆಸುತ್ತಿದ್ದಾರೆ.

ಎಸ್‌ಐಟಿ ಬಡಾವಣೆಯ ಕೃಷ್ಣ ನಗರದ 1ಬಿ ಅಡ್ಡರಸ್ತೆಯ ವಾಸಿ ನಿವೃತ್ತ ಪ್ರಾಂಶುಪಾಲ ನಾಗರಾಜರಾವ್ ಈ ದಿಸೆಯಲ್ಲಿ ಪ್ರಶಂಸೆಗೆ ಅರ್ಹವಾದ ಕೆಲಸ ಮಾಡಿದ್ದಾರೆ. ತಮ್ಮ ಮನೆ ಅಂಗಳದಲ್ಲಿ 20 ವರ್ಷಗಳಿಂದ ಮುಚ್ಚಿದ್ದ ಬಾವಿಯನ್ನು ಎರಡು ತಿಂಗಳ ಹಿಂದೆ ಮರು ಪೂರ್ಣಗೊಳಿಸಿದ್ದಾರೆ. ಬಾವಿ ಪಕ್ಕದಲ್ಲಿಯೇ 14 ಅಡಿ ಆಳದ ಗುಂಡಿ ತೆಗೆಸಿ ಮಳೆ ನೀರು ಸಂಗ್ರಹಿಸಿದ್ದಾರೆ. ಇಲ್ಲಿ ಸಂಗ್ರಹವಾದ ನೀರು ಬಸಿದು ಬಾವಿ ಸೇರುತ್ತದೆ.

ಮನೆಯ ಚಾವಣಿಯ ನೀರು ಗುಂಡಿ ಸೇರಲು ಪೈಪ್ ಅಳವಡಿಸಿದ್ದಾರೆ. ಅಂಗಳದಲ್ಲಿ ಬಿದ್ದ ನೀರು ಸರಾಗವಾಗಿ ಗುಂಡಿಗೆ ಹರಿಯುವ ವ್ಯವಸ್ಥೆ ಮಾಡಿದ್ದಾರೆ. ಅವರ ಈ ಪ್ರಯತ್ನ ಸಫಲವಾಗಿದೆ. ಬಾವಿ ಸೋಸಿದ ಎರಡು ವಾರಕ್ಕೆ ತಳಮಟ್ಟದಲ್ಲಿ ನೀರು ತುಂಬಿಕೊಂಡಿತ್ತು. ನಾಗರಾಜರಾವ್ ಅವರ ಕುಟುಂಬದ ಈ ನಡೆ ಪಕ್ಕದ ಮನೆಯ ನಿವೃತ್ತ ಪ್ರಾಂಶುಪಾಲ ಸುಬ್ಬರಾವ್ ಅವರಿಗೂ ಸ್ಫೂರ್ತಿ ನೀಡಿದೆ. ತಮ್ಮ ಮನೆ ಬಳಿಯ ಕೊಳವೆ ಬಾವಿಯ ಬಳಿ ಅವರೂ 20 ಅಡಿ ಆಳದ ಇಂಗು ಗುಂಡಿ ನಿರ್ಮಿಸಿದ್ದಾರೆ. 

‘1979ರಲ್ಲಿ ನಮ್ಮ ತಂದೆ ಬಾವಿಯನ್ನು ತೆಗೆಸಿದ್ದರು. 1995ರಲ್ಲಿ ನಾನು ಒಂಬತ್ತನೇ ತರಗತಿ ಓದುತ್ತಿದ್ದೆ. ಆಗ ಬಾವಿಯನ್ನು ಪೂರ್ಣವಾಗಿ ಮುಚ್ಚಿದರು. ಮನೆ ಮುಂದೆ ಸಿಮೆಂಟ್ ರಸ್ತೆ ನಿರ್ಮಾಣವಾಯಿತು. ನೀರು ಇಂಗದ ಸ್ಥಿತಿ ಎದುರಾಯಿತು. ನೀರು ಚರಂಡಿ ಸೇರುತ್ತಿತ್ತು. ಈ ಬರಗಾಲದಲ್ಲಿ ನೀರಿನ ಸಮಸ್ಯೆ ತಟ್ಟಿತು. ಭವಿಷ್ಯದಲ್ಲಿ ನಮಗೆ ನೀರಿನ ಸಮಸ್ಯೆ ಮತ್ತಷ್ಟು ಎದುರಾಗುತ್ತದೆ ಎನ್ನುವುದು ಸ್ಪಷ್ಟವಾಗಿ ಅರಿವಾಯಿತು. ತಕ್ಷಣ ಮುಚ್ಚಿದ್ದ ಬಾವಿಯನ್ನು ಸೋಸಿದೆವು’ ಎನ್ನುತ್ತಾರೆ ನಾಗರಾಜರಾವ್ ಅವರ ಪುತ್ರ ರಾಘವೇಂದ್ರರಾವ್. 

ಬೆಂಗಳೂರಿನ ಯಲ್ಲಪ್ಪ ಅವರಿಗೆ  ಬಾವಿಯನ್ನು ಮರುಪೂರಣಗೊಳಿಸುವ ಜವಾಬ್ದಾರಿ ನೀಡಲಾಗಿತ್ತು. ಮೂರು ದಿನಗಳಲ್ಲಿ ಅವರು ಕೆಲಸ ಪೂರ್ಣಗೊಳಿಸಿದರು. ಬಾವಿ ಸೋಸಿದ್ದು ಬೇಸಿಯಲ್ಲಿ. ಆಗಲೇ ಜಲದ ಕಣ್ಣುಗಳು ತೆರೆದು ಮೂರ್ನಾಲ್ಕು ಅಡಿ  ನೀರು ಸಂಗ್ರಹವಾಗಿತ್ತು. ಈಗ ಬಾವಿಯಲ್ಲಿ ನೀರು ಇಲ್ಲ. ಆದರೆ ಸ್ವಲ್ಪ ಪ್ರಮಾಣದ ಮಳೆ ಬಿದ್ದರೂ ನೀರು ಬರುವ ಲಕ್ಷಣಗಳು ಸ್ಪಷ್ಟವಾಗಿ ಇವೆ ಎಂದರು.

‘ಬಾವಿ ನೀರು ಕುಡಿದರೆ ಮಂಡಿ ನೋವು, ಕಾಲು ನೋವು ಬರುವುದಿಲ್ಲ. ನಾವು ಬಾವಿ ಸೋಸಿಸಿದ ಸ್ವಲ್ಪ ದಿನಕ್ಕೆ ನೀರು ಬಂದಿತು. ಮಳೆಗಾಲದಲ್ಲಿ ನೀರು ಬರಬಹುದು ಎಂದು ನಿರೀಕ್ಷಿಸಿದ್ದ ನಮಗೆ ಇದು ಅಚ್ಚರಿ ಮತ್ತು ಸಂತಸ’ ಎಂದು ಖುಷಿಯಲ್ಲಿ ಹೇಳುವರು ರಾಘವೇಂದ್ರರಾವ್.

‘ಬಾವಿಗೆ ಮೋಟಾರ್ ಅಳವಡಿಸಿದರೆ ಜಲದ ಕಣ್ಣುಗಳು ಮುಚ್ಚುತ್ತವೆ. ಗಾಲಿ ಅಳವಡಿಸಿಕೊಡುತ್ತೇನೆ’ ಎಂದು ಬಾವಿ ಸೋಸಿದ ಯಲ್ಲಪ್ಪ ಸಲಹೆ ನೀಡಿದ್ದಾರೆ. ಅವರು ಹೇಳಿದ್ದನ್ನು ಪಾಲಿಸುತ್ತೇವೆ’ ಎಂದರು. ‘ಒಂದು ಹದ ಒಳ್ಳೆಯ ಮಳೆ ಬಿದ್ದರೆ ಸಾಕು. ಬಾವಿಗೆ ನೀರು ಬರುತ್ತದೆ’ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ  ನಾಗರಾಜರಾವ್.

***

ಬಾವಿ ಮರುಪೂರಣಕ್ಕೆ ₹ 60 ಸಾವಿರ ಹಣ ಖರ್ಚಾಗಿದೆ. ಹಣಕ್ಕಿಂತ ಆರೋಗ್ಯ ಮುಖ್ಯ. ನಮ್ಮ ಅಪ್ಪ ಈ ಬಾವಿ ತೋಡಿಸಿದ್ದರು. ನಮ್ಮ ಮುಂದಿನ ಪೀಳಿಗೆಗೂ ಅನುಕೂಲವಾಗಲಿ ಎಂದು ಈ ಕೆಲಸ ಮಾಡಿದ್ದೇವೆ.
ರಾಘವೇಂದ್ರರಾವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT