ಶನಿವಾರ, ಡಿಸೆಂಬರ್ 7, 2019
24 °C
ತಿಪಟೂರು ತಾಲ್ಲೂಕಿನ ಹಾಲ್ಕುರಿಕೆಯಲ್ಲಿ ಬಿ.ಎಸ್‌.ಯಡಿಯೂರಪ್ಪ ಮನೆ ಮನೆಗೆ ಭೇಟಿ

ತೆಂಗು ಬೆಳೆಗಾರರ ಪರ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆಂಗು ಬೆಳೆಗಾರರ ಪರ ಹೋರಾಟ

ತಿಪಟೂರು: ಜಿಲ್ಲೆಯಲ್ಲಿ ಬರದಿಂದ ತೆಂಗಿನ ತೋಟಗಳು ಒಣಗಿ ಹೋಗಿವೆ. ರೈತರು ಆತ್ಮಹತ್ಯೆ ಹಾದಿ ತುಳಿಯವ ಪರಿಸ್ಥಿತಿ ಎದುರಾಗಿದೆ. ರಾಜ್ಯ ಸರ್ಕಾರ ಈವರೆಗೂ ಯಾವುದೇ ಪರಿಹಾರ ನೀಡಿಲ್ಲ. ಸರ್ಕಾರದ  ನಡೆ ನೋಡಿಕೊಂಡು ತೆಂಗು ಬೆಳೆಗಾರರ ಪರ ಪಕ್ಷ ಹೋರಾಟಕ್ಕಿಳಿಯಲಿದೆ  ಎಂದು ಬಿಜೆಪಿ  ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಭಾನುವಾರ ತಾಲ್ಲೂಕಿನ ಹಾಲ್ಕುರಿಕೆ ಗ್ರಾಮಕ್ಕೆ ಪಕ್ಷದ ವಿಸ್ತಾರಕರಾಗಿ ಮನೆ-ಮನೆಗೆ ತೆರಳುವ ಮುನ್ನ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ನೊಣವಿನಕೆರೆಯಿಂದ ತಿಪಟೂರಿಗೆ ನೀರು ತರುವ ಯೋಜನೆಯನ್ನು ಆ ವ್ಯಾಪ್ತಿಯ ರೈತರನ್ನು ಮನವೊಲಿಸಿ ಕೈಗೊಳ್ಳುವ ಬದಲು ಗೂಂಡಾಗಿರಿ ಮಾಡಲಾಗುತ್ತಿದೆ. ಪ್ರತಿಭಟನೆ ನಡೆಸಿದ ರೈತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಇದು ಖಂಡನೀಯ’ ಎಂದರು.

‘ಬಿಜೆಪಿ ಸರ್ಕಾರ ₹ 5 ಸಾವಿರ ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದ ಭದ್ರಾಮೇಲ್ಡಂಡೆ ಯೋಜನೆಯ ಸಾಕಾರಕ್ಕೆ ಯಾವ ಪ್ರಯತ್ನವನ್ನೂ ಈ ಸರ್ಕಾರ ಮಾಡಿಲ್ಲ. ಭದ್ರಾಮೇಲ್ಡಂಡೆ ಮತ್ತು ಎತ್ತಿನಹೊಳೆ ಯೋಜನೆಗಳ ಮೂಲಕ ಈ ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಬೇಕು. ತಿಪಟೂರು ತಾಲ್ಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಸರ್ವಾಂಗೀಣ ಪ್ರಗತಿ ಕಡೆ ಕೊಂಡೊಯ್ಯುತ್ತಿರುವುದಕ್ಕೆ ವಿಶ್ವ ಮಾನ್ಯತೆ ದೊರೆಯುತ್ತಿದೆ. ಬಲಿಷ್ಠ ರಾಷ್ಟ್ರವಾಗಿ ರೂಪಿಸಲು ಮೋದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ದೇಶದ ಆದಾಯ ದುಪ್ಪಟ್ಟಾಗಿದೆ. ಜಿಎಸ್‌ಟಿ ತೆರಿಗೆ ಜಾರಿಯಿಂದ ದೇಶದ ಆರ್ಥಿಕ ಪರಿಸ್ಥಿತಿ ವ್ಯಾಪಕವಾಗಿ ಸುಧಾರಿಸಲಿದೆ. ಮೋದಿ ಅವರು ನೀರಾವರಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಆದರೆ ವಿವಿಧ ಮುಖಂಡರು ಮೋದಿ ಅವರನ್ನು ಅನಗತ್ಯವಾಗಿ ಟೀಕಿಸಿ ಮೈ ಪರಚಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಈ ವರ್ಷ ಕೇಂದ್ರ ಸರ್ಕಾರ ರಾಜ್ಯಕ್ಕೆ ₹ 5690 ಕೋಟಿ ನೆರವು ನೀಡಿದೆ.  ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ಬಂದಿದ್ದ ಕೇಂದ್ರದ ನೆರವಿಗಿಂತ ಹೆಚ್ಚು ಹಣವನ್ನು ಮೋದಿ ಸರ್ಕಾರ ಮೂರೇ ವರ್ಷದಲ್ಲಿ ನೀಡಿದೆ. ಆದರೆ ರಾಜ್ಯದ ಮುಖ್ಯಮಂತ್ರಿ ಅದನ್ನು ಸಮರ್ಪಕವಾಗಿ ಬಳಸುವುದನ್ನು ಬಿಟ್ಟು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಹೇಳಿದರು.

‘ಕೇಂದ್ರದಿಂದ ಬಂದ ಹಣವನ್ನು ಏನು ಮಾಡಿದರು ಎಂಬ ಮಾಹಿತಿಯೇ ಇಲ್ಲ. ಆ ಹಣ ದುರ್ಬಳಕೆಯಾಗಿರುವ ಸಾಧ್ಯತೆಗಳಿವೆ. ಇಷ್ಟಲ್ಲದೆ ರಾಜ್ಯ ಸರ್ಕಾರ ಹಿಂದೆಂದೂ ಮಾಡದಷ್ಟು ಸಾಲ ಮಾಡಿ ಅರ್ಥಿಕ ಪರಿಸ್ಥಿತಿಯನ್ನು ದುರ್ಗತಿಗೆ ತಳ್ಳಿದೆ. ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಟೀಕಿಸಿದರು.

ಸಹಕಾರ ಬ್ಯಾಂಕ್‌ಗಳಲ್ಲಿದ್ದ ರೈತರ ಕೇವಲ ₹ 50 ಸಾವಿರ ಸಾಲ ಮನ್ನಾ ಮಾಡಿ ರಾಜ್ಯ ಸರ್ಕಾರ ಕಣ್ಣೊರೆಸುವ ತಂತ್ರ ಅನುಸರಿಸಿದೆ. ಕನಿಷ್ಠ ಒಂದು ಲಕ್ಷ ಸಾಲ ಮನ್ನಾ ಮಾಡಬೇಕೆಂಬುದು ಬಿಜೆಪಿ ಒತ್ತಾಯವಾಗಿದೆ ಎಂದರು.

‘ನಾವು ದಲಿತರ ಮನೆಗಳಿಗೆ ಭೇಟಿ ನೀಡುತ್ತಿರುವುದನ್ನು ಟೀಕಿಸಿರುವ ಕಾಂಗ್ರೆಸ್ ಮುಖಂಡರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ದಲಿತರು, ಹಿಂದುಳಿದವರು ಸೇರಿದಂತೆ ಎಲ್ಲರ ವರ್ಗದವರ ಮನೆಗೆ ನಾವು ಭೇಟಿ ನೀಡುತ್ತಿದ್ದು, ಎಲ್ಲಡೆ ಸಂಭ್ರಮದ ಸ್ವಾಗತ ಸಿಕ್ಕಿದೆ. ಇದನ್ನು ಸಹಿಸದ ಕಾಂಗ್ರೆಸ್ ಮುಖಂಡರು ಟೀಕಿಸುತ್ತಿದ್ದಾರೆ’ ಎಂದರು.

‘ದಲಿತರ ಬಗ್ಗೆ ಮಾತನಾಡಲು ಅವರಿಗೆ ನೈತಿಕ ಹಕ್ಕಿಲ್ಲ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು, ಅವರ ಶವಸಂಸ್ಕಾರ ಸಂದರ್ಭದಲ್ಲಿ ಗೌರವ ನೀಡದ, ಬಾಬು ಜಗಜೀವನರಾಂಗೆ ಪ್ರಧಾನಿ ಹುದ್ದೆ ತಪ್ಪಿಸಿದ ಕಾಂಗ್ರೆಸ್‌ನಿಂದ ಬಿಜೆಪಿ ದಲಿತರ ಬಗ್ಗೆ ಪಾಠ ಕಲಿಯಬೇಕಿಲ್ಲ’ ಎಂದು ಟೀಕಿಸಿದರು.

ಪ್ರತಿಕ್ರಿಯಿಸಿ (+)