ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತಿ ಮೀರಿದ ಬೀದಿನಾಯಿ ಕಾಟ

ತಿಂಗಳಲ್ಲಿ ಸರಾಸರಿ 130 ಜನರಿಗೆ ಕಚ್ಚುವ ಶ್ವಾನ ಸಂಕುಲ, ಭೀತಿಯಲ್ಲಿ ನಾಗರಿಕರು
Last Updated 10 ಜುಲೈ 2017, 6:53 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದಲ್ಲಿ ದಿನೇ ದಿನೇ ಬೀದಿ ನಾಯಿಗಳ ಸಂಖ್ಯೆ ವಿಪರೀತ ಹೆಚ್ಚಳವಾಗುತ್ತಿದ್ದು, ಕಂಡ ಕಂಡಲ್ಲಿ ಹಿಂಡುಗಟ್ಟಿ ತಿರುಗುವ ನಾಯಿಗಳ ಉಪಟಳದಿಂದ ತಿಂಗಳಿಗೆ ಜಿಲ್ಲಾಸ್ಪತ್ರೆಗೆ ಸುಮಾರು 130 ಜನರು ಚಿಕಿತ್ಸೆಗೆ ಬರುತ್ತಿದ್ದಾರೆ.

ನಗರದಾದ್ಯಂತ ಸುಮಾರು 600 ಅಧಿಕ ಬೀದಿ ನಾಯಿಗಳು ಬೀಡು ಬಿಟ್ಟಿದ್ದು, ಇವು ನಗರವೊಂದರಲ್ಲೇ ಪ್ರತಿ ತಿಂಗಳು 80 ಅಧಿಕ ಜನರಿಗೆ ಕಚ್ಚಿ ಗಾಯಗೊಳಿಸುತ್ತಿವೆ. ಮೂರು ತಿಂಗಳ ಹಿಂದಷ್ಟೇ ಒಂದೇ ದಿನಕ್ಕೆ 21 ಜನರು ಶ್ವಾನ ಕಚ್ಚಿದ ಗಾಯಕ್ಕೆ ಚಿಕಿತ್ಸೆ ಪಡೆದಿರುವ ಉದಾಹರಣೆ ಕೂಡ ಇದೆ.

ಬೀದಿ ನಾಯಿ­ಗಳ ಹಾವಳಿಯಿಂದ ಮಕ್ಕಳು, ಸಾರ್ವಜನಿಕರು ಭಯದಿಂದ ಓಡಾ­ಡುವಂತಾಗಿದೆ. ವಿದ್ಯಾರ್ಥಿಗಳು ಆತಂಕದ ನಡುವೆಯೇ ಶಾಲಾ, ಕಾಲೇಜಿಗೆ ಹೋಗಿ ವಾಪಸ್‌ ಮನೆ ತಲುಪಬೇಕಾಗಿದೆ. ಕೆಲ ಪ್ರದೇಶಗಳಲ್ಲಿ ಈ ಶ್ವಾನ ಸಂಕುಲದ ದಾಳಿಗೆ ಬೆಚ್ಚಿ ಪಾಲಕರು ಮಕ್ಕಳನ್ನು ಆಟವಾಡಲು ಮನೆಯಿಂದ ಹೊರಗೆ ಬಿಡದ ಸ್ಥಿತಿ ನಿರ್ಮಾಣವಾಗಿದೆ ಎಂಬು­ದು ಸ್ಥಳೀಯರ ಆರೋಪ.

‘ವರ್ಷದಿಂದ ವರ್ಷಕ್ಕೆ ಬೀದಿ ನಾಯಿಗಳ ಕಾಟ ಮಿತಿ ಮೀರುತ್ತಿದೆ. ನಗರದ ಅನೇಕ ಬೀದಿಗಳಲ್ಲಿ ಜನರು ನಾಯಿಗಳಿಗೆ ಹೆದರಿ ಬದುಕುವಂ ತಾಗಿದೆ. ಬೀದಿ ನಾಯಿಗಳನ್ನು ಹಿಡಿದು ಬೇರೆಡೆ ಸಾಗಿಸಿ, ಇಲ್ಲವೇ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿ ಎಂದು ನಗರಸಭೆಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಾಯಿಗಳಿಂದ ಅಮಾಯಕರ ಜೀವಹಾನಿಯಾದರೆ ಯಾರು ಹೊಣೆ’ ಎಂದು ಪ್ರಶ್ನಿಸುತ್ತಾರೆ ಕೆಳಗಿನ ತೋಟದ ನಿವಾಸಿ ಶಿವಾನಂದ್.

ಈ ಕುರಿತು ನಗರಸಭೆ ಆಯುಕ್ತ ಉಮಾಕಾಂತ್‌ ಅವರನ್ನು ಪ್ರಶ್ನಿಸಿದರೆ, ‘ನಗರದಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗಿ, ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವ ದೂರುಗಳು ಬರುತ್ತಿರುವುದು ನಿಜ. ನಾವು ನಾಯಿಗಳನ್ನು ಹಿಡಿದು ಬೇರೆಡೆ ಸಾಗಿಸಲು ಅಧಿಕಾರವಿಲ್ಲ. ಪ್ರಾಣಿ ಜನನ ನಿಯಂತ್ರಣ (ಎಬಿಸಿ) ಕಾರ್ಯಕ್ರಮದಡಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಬಹುದಷ್ಟೇ’ ಎಂದು ಹೇಳಿದರು.

‘ನಾನು ಆಯುಕ್ತನಾಗಿ ಬಂದ ಕಳೆದ ಎಂಟು ತಿಂಗಳಲ್ಲಿ ಮೂರು ಬಾರಿ ಎಬಿಸಿ ಕಾರ್ಯಕ್ರಮಕ್ಕಾಗಿ ಟೆಂಡರ್‌ ಕರೆಯಲಾಗಿದೆ. ಆದರೆ ಪ್ರಾಣಿದಯಾ ಸಂಘದವರಿಗೆ ಹೆದರಿ ಯಾರು ಕೂಡ ಟೆಂಡರ್‌ನಲ್ಲಿ ಭಾಗವಹಿಸಲು ಮುಂದೆ ಬರುತ್ತಿಲ್ಲ. ಹಿಂದೊಮ್ಮೆ ನಗರದಲ್ಲಿ ನಗರಸಭೆ ನಾಯಿಗಳ ನಿಯಂತ್ರಣಕ್ಕೆ ಮುಂದಾಗಿದ್ದ ಸಂದರ್ಭದಲ್ಲಿ ಪ್ರಾಣಿದಯಾ ಸಂಸ್ಥೆಯೊಂದು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು ಎನ್ನಲಾಗಿದೆ. ಹೀಗಾಗಿ ಯಾರು ಕೂಡ ಟೆಂಡರ್‌ನಲ್ಲಿ ಭಾಗವಹಿಸುತ್ತಿಲ್ಲ. ಪುನಃ ಟೆಂಡರ್‌ ಕರೆಯುತ್ತೇವೆ. ಇದು ಇವತ್ತು ಇಡೀ ರಾಜ್ಯದ ಸಮಸ್ಯೆ ಕೂಡ ಆಗಿ ಬೆಳೆದಿದೆ’ ಎಂದು ತಿಳಿಸಿದರು.

‘ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ನಗರದಲ್ಲಿ ನಿತ್ಯ ಸುಮಾರು 3–4 ಜನರಾದರೂ ಕಚ್ಚಿಸಿಕೊಂಡು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಾರೆ. ನಾಯಿ ಕಚ್ಚಿಸಿಕೊಂಡ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ನಾಲ್ಕು ಚುಚ್ಚುಮದ್ದು ನೀಡಲೇಬೇಕು. ಚಿಕ್ಕಮಕ್ಕಳ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಬೀದಿ ನಾಯಿಗಳ ಕಾಟಕ್ಕೆ ತಡೆಹಾಕಬೇಕಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್ ಹೇಳಿದರು.

‘ಪ್ರಾಣಿದಯಾ ಸಂಘದವರು ಆಕ್ಷೇಪ ಎತ್ತುತ್ತಾರೆ ಎಂದು ನಗರಸಭೆಯವರು ಸುಮ್ಮನಿದ್ದರಾಗದು. ತಿಂಗಳಿಗೆ ನೂರಾರು ಜನರು ನಾಯಿಗಳಿಂದ ಕಚ್ಚಿಸಿಕೊಂಡು ತೊಂದರೆ ಅನುಭವಿಸುತ್ತಿದ್ದಾರೆ ಇದಕ್ಕೆ ಯಾರು ಹೊಣೆ? ಪ್ರಾಣಿಗಳ ಮೇಲೆ ದಯೆ ತೋರುವವರಿಗೆ ಮನುಷ್ಯರ ಮೇಲೆ ದಯೆ ಬೇಡವೆ? ತುರ್ತಾಗಿ ನಗರಸಭೆ ಬೀದಿನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕು’ ಎಂದು ಚಾಮರಾಜಪೇಟೆ ನಿವಾಸಿ ರಾಮಚಂದ್ರ ಅವರು ಆಗ್ರಹಿಸಿದರು.

***

ಪ್ರಾಣಿದಯಾ ಸಂಘದವರ ಭಯಕ್ಕೆ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡುವವರು ಟೆಂಡರ್‌ನಲ್ಲಿ ಭಾಗವಹಿಸಲು ಮುಂದೆ ಬರುತ್ತಿಲ್ಲ.
ಉಮಾಕಾಂತ್, ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT