ಭಾನುವಾರ, ಡಿಸೆಂಬರ್ 15, 2019
23 °C
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಆಶಯ

ಇಲಾಖೆಗಳ ಯೋಜನೆ ಮಾದರಿಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಲಾಖೆಗಳ ಯೋಜನೆ ಮಾದರಿಯಾಗಲಿ

ಚಾಮರಾಜನಗರ: ‘ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ವಿವಿಧ ಇಲಾಖೆಗಳಿಂದ ಜಾರಿಗೊಳಿಸುತ್ತಿರುವ ಯೋಜನೆಗಳು ರಾಜ್ಯದ ಇತರೆ ಜಿಲ್ಲೆಗಳಿಗೆ ಮಾದರಿಯಾಗಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಆಶಯ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ‘ಸ್ಟೆಪ್‌’, ಕೃಷಿ ಇಲಾಖೆಯ ‘ಬದು ಸಂಜೀವಿನಿ’ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ‘ಸತ್ವ’ ಯೋಜನೆಯ ಕಿರು ಹೊತ್ತಿಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಹೆರಿಗೆ ಒಂದು ರೋಗವಲ್ಲ. ಈ ಸಂದರ್ಭದಲ್ಲಿ ಯಾವುದೇ ಮಗು ಅಥವಾ ತಾಯಿ ಮರಣ ಹೊಂದ ಬಾರದು. ಆರೋಗ್ಯವಾದ ತಾಯಿ ಮತ್ತು ಆರೋಗ್ಯವಂತ ಮಗು ಎಂಬ ಪರಿಕಲ್ಪನೆಯೊಂದಿಗೆ ಆರೋಗ್ಯ ಇಲಾಖೆ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಇದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ‘ಸತ್ವ’ ಯೋಜನೆ ರೂಪಿಸಿರುವುದು ಉತ್ತಮ ಕೆಲಸ ಎಂದರು.

ಜೀವನ ಜ್ಯೋತಿ ಸಂಸ್ಥೆಯು ಈ ಯೋಜನೆಗೆ ಸಹಕಾರ ನೀಡಿದೆ. ಅದರಂತೆ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿ ಜನರಿಗೆ ಯೋಜನೆಯ ಬಗ್ಗೆ ಅರಿವು ಮೂಡಿಸಬೇಕು ಎಂದ ಅವರು, ಜಿಲ್ಲೆಯಲ್ಲಿ ವರ್ಷಕ್ಕೆ 15 ಸಾವಿರ ಹೆರಿಗೆಯಾಗುತ್ತಿದೆ. ಇದರಲ್ಲಿ 9 ಸಾವಿರ ಹೆರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಆಗುತ್ತಿದೆ ಎಂದರು.

ಉದ್ಯೋಗ ಖಾತ್ರಿ ಯೋಜನೆಯಡಿ ಮಹಿಳೆಯರಿಗೆ ಪಂಚಾಯಿತಿಗಳು ಕೆಲಸ ನೀಡಬೇಕು.  ಯಾವುದೇ ತಾರತಮ್ಯ ಮಾಡದೆ ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ಯೋಜನೆ ಜಾರಿಗೊಳಿಸಬೇಕು ಎಂದು ತಿಳಿಸಿದರು.

ಒಂದು ಪ್ರದೇಶದ ಅಭಿವೃದ್ಧಿಗೆ ಶಿಕ್ಷಣ ಮುಖ್ಯ. ಶಿಕ್ಷಣದಿಂದ ಸಮಾಜದ ಬದಲಾವಣೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ‘ಸ್ಟೆಪ್‌’ ಯೋಜನೆ ಉತ್ತಮವಾಗಿದ್ದು, ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಗೆ ಇದು ಪೂರಕವಾಗಲಿ ಎಂದರು.

ವರ್ಷಾಂತ್ಯಕ್ಕೆ ಫಲಿತಾಂಶ: ಪ್ರಭಾರ ಜಿಲ್ಲಾಧಿಕಾರಿ ಕೆ. ಹರೀಶ್‌ ಕುಮಾರ್ ಮಾತನಾಡಿ, ಜಿಲ್ಲಾ ಪಂಚಾಯಿತಿ ಕಳೆದ ವರ್ಷ ‘ಸ್ಮಾರ್ಟ್‌’ ಹಾಗೂ ‘ಉಷಾ’ ಕಾರ್ಯಕ್ರಮಗಳನ್ನು ಜಾರಿಗೊಳಿಸ ಲಾಗಿತ್ತು. ಈ ಯೋಜನೆಯ ನ್ಯೂನತೆ ಗುರುತಿಸಿ ಕೃಷಿ, ಆರೋಗ್ಯ ಹಾಗೂ ಶಿಕ್ಷಣ ಇಲಾಖೆಯಿಂದ ಸುಧಾರಿತ ಕಾರ್ಯಕ್ರಮ ರೂಪಿಸ ಲಾಗಿದೆ. ಎಲ್ಲ ಕಾರ್ಯಕ್ರಮಗಳ ಫಲಿತಾಂಶ ವರ್ಷದ ಕೊನೆಯಲ್ಲಿ ಅಂಕಿ, ಅಂಶದ ಮೂಲಕ ತಿಳಿಯುತ್ತದೆ ಎಂದು ತಿಳಿಸಿದರು.

ಮಹಿಳೆಯರಿಗೆ ನರೇಗಾದಲ್ಲಿ ಹೆಚ್ಚಿನ ಸೌಲಭ್ಯ ದೊರೆಯಬೇಕು ಎಂಬ ಉದ್ದೇಶದಿಂದ ಅಭಿಯಾನ ಆರಂಭಿಸಲಾಗಿದೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸ್ತ್ರೀಶಕ್ತಿಗಳ ಗುಂಪಿನ ಸಹಕಾರದಿಂದ ಎಲ್ಲ ಮಹಿಳೆಯರಿಗೂ ಜಾಬ್‌ ಕಾರ್ಡ್‌ ನೀಡಲಾಗುವುದು ಎಂದು ತಿಳಿಸಿದರು.

ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡಲು ಆರೋಗ್ಯ ಇಲಾಖೆಯಿಂದ ‘ಸತ್ವ’ ಯೋಜನೆ ಜಾರಿಗೊಳಿಸಲಾಗಿದೆ. ಯೋಜನೆಯಿಂದ ಗರ್ಭಿಣಿಯರು ಹಾಗೂ ಮಗುವಿನ ಆರೋಗ್ಯದ ಮೇಲೆ 5 ವರ್ಷಗಳವರೆಗೆ ನಿಗಾವಹಿಸಲಾಗು ವುದು. ಅಗತ್ಯಕ್ಕೆ ತಕ್ಕಂತೆ ಚಿಕಿತ್ಸೆ ನೀಡಲಾಗುವುದು ಎಂದರು.

ಸಂಸದ ಆರ್. ಧ್ರುವನಾರಾಯಣ, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಆರ್. ನರೇಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ, ಉಪಾಧ್ಯಕ್ಷ ಎಸ್. ಬಸವರಾಜು, ಸದಸ್ಯರಾದ ಕೆ.ಪಿ. ಸದಾ ಶಿವಮೂರ್ತಿ, ಬೊಮ್ಮಯ್ಯ, ಕೆರೆಹಳ್ಳಿ ನವೀನ, ಚೂಡಾ ಅಧ್ಯಕ್ಷ ಸುಹೇಲ್‌ ಆಲಿಖಾನ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ. ಚಂದ್ರು ಹಾಜರಿದ್ದರು.

***

ಸರ್ಕಾರದ ಕಾರ್ಯಕ್ರಮ ಬಲಗೊಳಿಸಲು ಜಿಲ್ಲಾಮಟ್ಟ ದಲ್ಲಿ ಯೋಜನೆ ರೂಪಿಸುತ್ತಿರುವುದು ಶ್ಲಾಘನೀಯ. ಅಧಿಕಾರಿಗಳು ಯೋಜನೆಗಳ ಯಶಸ್ವಿಗೆ ಶ್ರಮಿಸಬೇಕು

ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ

ಪ್ರತಿಕ್ರಿಯಿಸಿ (+)