ಶುಕ್ರವಾರ, ಡಿಸೆಂಬರ್ 6, 2019
19 °C
ಬೀರೂರು: ಜಾಕ್‌ವೆಲ್‌ ಬಳಿ ಸುಟ್ಟುಹೋದ ವಿದ್ಯುತ್‌ ಪರಿವರ್ತಕ, ದುರಸ್ತಿಗೆ ಆಗ್ರಹ

ಮಳೆಗಾಲದಲ್ಲೇ ನೀರಿಗೆ ಪರದಾಟ!

Published:
Updated:
ಮಳೆಗಾಲದಲ್ಲೇ ನೀರಿಗೆ ಪರದಾಟ!

ಬೀರೂರು: ಬೀರೂರಿನಲ್ಲಿ ಹಲವು ವರ್ಷಗಳಿಂದ ಬರ ಪರಿಸ್ಥಿತಿಯಿದ್ದರೂ ಜನರಿಗೆ ಕುಡಿಯುವ ನೀರಿಗೆ ಹೆಚ್ಚಿನ ಸಮಸ್ಯೆಯಾಗಿರಲಿಲ್ಲ. ಆದರೆ, ಈ ಬಾರಿ ಮಳೆಗಾಲದಲ್ಲಿಯೇ ಕುಡಿಯುವ ನೀರಿಗೆ ಪರದಾಡುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಭದ್ರಾ ಕುಡಿಯುವ ನೀರು ಪೂರೈಕೆ ಬೀರೂರು ಪಟ್ಟಣದಲ್ಲಿ ಆರಂಭವಾಗಿ ಸುಮಾರು ನಾಲ್ಕು ವರ್ಷಗಳು ಕಳೆದಿವೆ. ಆಗೀಗ ಸಣ್ಣಪುಟ್ಟ ಸಮಸ್ಯೆಗಳು, ಪೈಪ್‌ಲೈನ್‌ ದುರಸ್ತಿ, ವಿದ್ಯುತ್‌ ಸಮಸ್ಯೆ ಹೊರತುಪಡಿಸಿದರೆ ನೀರು ಪೂರೈಕೆ ಬಹುತೇಕ ಸಮರ್ಪಕವಾಗಿಯೇ ಆಗಿದೆ.

ಆದರೆ, ಕಳೆದ ಒಂದು ದಶಕದಿಂದಲೂ ಬಹುತೇಕ ಬರವನ್ನೇ ಎದುರಿಸಿರುವ ಈ ಪ್ರದೇಶದಲ್ಲಿ ಜನರು ‘ನೀರು ಹೊರುವುದು ತಪ್ಪಿದರೆ ಸಾಕು’ ಎಂದು ಪರಿತಪಿಸಿದ ಸಂದರ್ಭದಲ್ಲಿ, ಅನಿವಾರ್ಯವಾಗಿ ಫ್ಲೋರೈಡ್‌ಯುಕ್ತ ನೀರನ್ನೇ ಕುಡಿಯಬೇಕಾಯಿತು. ಆದರೆ, ಬಳಿಕ ಭದ್ರೆ ಜನರ ದಾಹ ತಣಿಸಿದೆ.

ಆದರೆ, ಈ ಬಾರಿ ಒಮ್ಮೆಯೂ ಮಳೆ ಸರಿಯಾಗಿ ಸುರಿಯದೆ, ಜನರಲ್ಲಿ ರೋಗಭೀತಿ ಆವರಿಸಿದೆ. ಈ ಸಂದರ್ಭದಲ್ಲಿ ಕುಡಿಯುವ ನೀರಿಗೆ ತತ್ವಾರ ಬಂದಿದೆ. ಸಾಂಕ್ರಾಮಿಕ ರೋಗ ಭೀತಿಯನ್ನು ಇನ್ನಷ್ಟು ಹೆಚ್ಚಿಸಿದೆ  ಎನ್ನುವುದು ಜನರ ಆತಂಕ. ಅಷ್ಟಕ್ಕೂ ಭದ್ರಾ ಜಲಾಶಯದಲ್ಲಿ ನೀರಿದ್ದರೂ ಅದನ್ನು ಪೂರೈಸಲು ತಾಂತ್ರಿಕತೆಯ ಕೊರತೆಯಿಂದಾಗಿ ನೀರಿನ ಸಮಸ್ಯೆ ಎದುರಾಗಿದೆ. ಕಳೆದ ವಾರ ಜಾಕ್‌ವೆಲ್‌ ಬಳಿ ಸುಟ್ಟುಹೋದ ವಿದ್ಯುತ್‌ ಪರಿವರ್ತಕ ದುರಸ್ತಿಯಾಗದೆ ಈ ಸ್ಥಿತಿ ಎದುರಾಗಿದೆ.

ಈ ಕುರಿತು ಪುರಸಭೆ ಮುಖ್ಯಾಧಿಕಾರಿಯನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಈ ಸಮಸ್ಯೆ ಬಗೆಹರಿಸಲು ನಿತ್ಯವೂ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ವಹಿಸಲಾಗಿದೆ. ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡಲೂ ಸಲಹೆ ನೀಡಲಾಗಿದೆ. ಅದರ ಅಂಗವಾಗಿ ತೀವ್ರ ಸಮಸ್ಯೆ ಇರುವ ಕಡೆ ಟ್ಯಾಂಕರ್‌ ಮೂಲಕ ನೀರು ಒದಗಿಸಲಾಗಿದೆ.

ಈ ಹಿಂದೆ ಮುಚ್ಚಿದ್ದ ಕೊಳವೆಬಾವಿಗಳನ್ನು ತೆರೆಸಿ ಅದರ ಮೂಲಕವೂ ನೀರು ಪೂರೈಸುವ ಪ್ರಯತ್ನ ನಡೆಸಲಾಗಿದೆ. ಇನ್ನು ಒಂದೆರಡು ದಿನಗಳಲ್ಲಿ ದುರಸ್ತಿಕಾರ್ಯ ಮುಗಿದು ನೀರು ಪೂರೈಸುವ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರೂ ಆವರೆಗೆ ಸಹಕರಿಸಬೇಕು’ ಎಂದರು.

ಪಟ್ಟಣದಲ್ಲಿ ಡೆಂಗಿ, ಚಿಕೂನ್‌ಗುನ್ಯ ರೋಗಭೀತಿ ಎದುರಾಗಿದ್ದು ಸ್ವಚ್ಛತೆಯ ಮೇಲೆ ಕೂಡಾ ಪರಿಣಾಮ ಬೀರುವ ನೀರಿನ ಕೊರತೆ ನೀಗಲು ಸಂಬಂಧಪಟ್ಟವರು ಬೇಗ ಕ್ರಮ ವಹಿಸಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

***

ಇನ್ನೆರಡು ದಿನಗಳಲ್ಲಿ ನೀರು

ಪುರಸಭೆಯು ಪಟ್ಟಣದಲ್ಲಿ ಭದ್ರಾ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಿದ್ದು ಬಹುತೇಕ ವಾರ್ಡ್‌ಗಳಿಗೆ ನೀರು ಪೂರೈಕೆ ಆಗುತ್ತಿದೆ. ತರೀಕೆರೆ ಬಳಿ ಜಾಕ್‌ವೆಲ್‌ನಲ್ಲಿ ವಿದ್ಯುತ್‌ ಪರಿವರ್ತಕ ಸುಟ್ಟು ದುರಸ್ತಿ ಮಾಡಬೇಕಾದ ಕಾರಣ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ಇನ್ನು ಒಂದೆರಡು ದಿನಗಳಲ್ಲಿ ನೀರು ಪೂರೈಕೆ ಆಗುವ ಭರವಸೆ ಇದೆ. ತಾತ್ಕಾಲಿಕವಾಗಿ ಟ್ಯಾಂಕರ್‌ ಮತ್ತು ಕೊಳವೆ ಬಾವಿಗಳ ಮೂಲಕ ನೀರು ಪೂರೈಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಜಿ.ಕಾಂತರಾಜು ಹೇಳಿದರು.

ಪ್ರತಿಕ್ರಿಯಿಸಿ (+)