ಶುಕ್ರವಾರ, ಡಿಸೆಂಬರ್ 6, 2019
19 °C

ಜಾಧವ್‌ ತಾಯಿಯ ವೀಸಾ ಬಗ್ಗೆ ಪಾಕ್‌ ಮೌನ ಪ್ರಶ್ನಿಸಿದ ಸುಷ್ಮಾ ಸ್ವರಾಜ್‌

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಜಾಧವ್‌ ತಾಯಿಯ ವೀಸಾ ಬಗ್ಗೆ ಪಾಕ್‌ ಮೌನ ಪ್ರಶ್ನಿಸಿದ ಸುಷ್ಮಾ ಸ್ವರಾಜ್‌

ನವದೆಹಲಿ: ಪಾಕಿಸ್ತಾನದ ಸೇನಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್‌ ಜಾಧವ್‌ ಭೇಟಿಗೆ ಅವರ ತಾಯಿ ಆವಂತಿಕಾ ಜಾಧವ್‌ ಅವರು ಸಲ್ಲಿಸಿರುವ ವೀಸಾ ಅರ್ಜಿಯ ಬಗ್ಗೆ ಪಾಕಿಸ್ತಾನ ವಹಿಸಿರುವ ಮೌನವನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಪ್ರಶ್ನಿಸಿದ್ದಾರೆ.

ಸೋಮವಾರ ಸರಣಿ ಟ್ವೀಟ್‌ ಮಾಡಿರುವ ಸುಷ್ಮಾ, ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥ ಸರ್ತಾಜ್‌ ಅಜೀಜ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಭಾರತದಲ್ಲಿ ಚಿಕಿತ್ಸೆ ಪಡೆಯಬೇಕೆಂದು ಬಯಸುವ ಪಾಕಿಸ್ತಾನದ ಎಲ್ಲಾ ನಾಗರಿಕರ ಬಗ್ಗೆ ನನಗೆ ಅನುಕಂಪವಿದೆ. ತಮ್ಮ ದೇಶದ ನಾಗರಿಕರ ಬಗ್ಗೆ ಸರ್ತಾಜ್‌ ಅಜೀಜ್‌ ಅವರಿಗೂ ಕಾಳಜಿ ಇದೆ ಎಂದುಕೊಳ್ಳುತ್ತೇನೆ. ಪಾಕಿಸ್ತಾನದ ನಾಗರಿಕರಿಗೆ ವೈದ್ಯಕೀಯ ವೀಸಾ ಸಿಗಬೇಕಾದರೆ ಸರ್ತಾಜ್‌ ಅಜೀಜ್‌ ಅವರ ಶಿಫಾರಸು ಅಗತ್ಯ. ತಮ್ಮ ದೇಶದ ನಾಗರಿಕರ ವೀಸಾಗೆ ಶಿಫಾರಸು ಮಾಡಲು ಅವರೇಕೆ ಹಿಂದುಮುಂದು ನೋಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಸುಷ್ಮಾ ಟ್ವೀಟ್‌ನಲ್ಲಿ ಹೇಳಿದ್ದಾರೆ.

‘ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್‌ ಜಾಧವ್‌ ಭೇಟಿಗೆ ಅವರ ತಾಯಿ ಆವಂತಿಕಾ ಜಾಧವ್‌ ಅವರು ಸಲ್ಲಿಸಿರುವ ವೀಸಾ ಅರ್ಜಿಯನ್ನು ಪಾಕಿಸ್ತಾನ ಇನ್ನೂ ಇತ್ಯರ್ಥಪಡಿಸಿಲ್ಲ. ಆವಂತಿಕಾ ಜಾಧವ್‌ ಅವರಿಗೆ ವೀಸಾ ನೀಡುವಂತೆ ನಾನು ಖುದ್ದು ಸರ್ತಾಜ್‌ ಅಜೀಜ್‌ ಅವರಿಗೆ ಪತ್ರ ಬರೆದಿದ್ದೆ. ಸರ್ತಾಜ್‌ ಅಜೀಜ್‌ ಅವರು ನನ್ನ ಪತ್ರ ತಲುಪಿದೆ ಎಂಬ ಕನಿಷ್ಠ ಸೌಜನ್ಯದ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಆದರೆ, ಸರ್ತಾಜ್‌ ಅಜೀಜ್‌ ಅವರ ಶಿಫಾರಸು ಇರುವ ಪಾಕಿಸ್ತಾನದ ನಾಗರಿಕರಿಗೆ ತಕ್ಷಣವೇ ವೈದ್ಯಕೀಯ ವೀಸಾ ನೀಡುತ್ತೇವೆ’ ಎಂದಿದ್ದಾರೆ.


 

ಇದನ್ನೂ ಓದಿ...
ವೀಸಾ: ನೆರವು ಕೋರಿದ ಪಾಕ್ ಮಹಿಳೆ

ಪ್ರತಿಕ್ರಿಯಿಸಿ (+)