ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಮೇಯಿಸೋದು ಹೀಗೆ...

Last Updated 10 ಜುಲೈ 2017, 19:30 IST
ಅಕ್ಷರ ಗಾತ್ರ

ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ, ಹುಲ್ಲು, ಗಿಡ-ಗಂಟಿಗಳು ಚಿಗುರಲು ಆರಂಭಿಸುತ್ತವೆ. ಕೆಲವು ದಿನಗಳಲ್ಲೇ ಎಲ್ಲೆಡೆ ಹಸಿರು ಪಸರಿಸುತ್ತದೆ. ಪ್ರಾಣಿ-ಪಕ್ಷಿಗಳಿಗೆ, ಅದರಲ್ಲೂ ದನಕರುಗಳಿಗೆ, ಕುರಿ-ಮೇಕೆಗಳಿಗೆ ತುಂಬ ಹಿಗ್ಗು. ಬೇಸಿಗೆಯ ಒಣ ಪದಾರ್ಥ ಸೇವನೆಯ ಕಷ್ಟ ಮುಗಿದು ರುಚಿಕರ ಹಸಿರು ಮೇಯುವ ತವಕ. ಈ ಹಸಿರು ಮತ್ತು ತವಕ ಕೆಲವು ಬಾರಿ ಎಡವಟ್ಟು ಮಾಡೀತು ಜೋಕೆ!

ಒಂದು ದಿನ ನಾನು ದನಗಳು ಎಲ್ಲಿ ಮೇಯುತ್ತಿವೆ ಎಂದು ನೋಡಲು ಹೋಗಿದ್ದೆ. ಆಗ ಕಂಡ ದೃಶ್ಯ– ಒಂದು ವಾಹನ ರಿಪೇರಿ ಮಾಡುವ ಗ್ಯಾರೇಜ್. ಅದರ ಸುತ್ತ ವಿವಿಧ ಗ್ರೀಸ್, ಎಣ್ಣೆ ಮೊದಲಾದ ರಾಸಾಯನಿಕಗಳು, ಕಬ್ಬಿಣದ ಚೂರುಗಳು ಹರಡಿಕೊಂಡಿದ್ದವು. ನೋಡಿದ ತಕ್ಷಣ- ಕೆಲವು ಸಮಯದ ಹಿಂದೆ ಗೊತ್ತಾಗದೇ ಕಬ್ಬಿಣದ ತಂತಿಯನ್ನು ತಿಂದು ಸಾವನ್ನಪ್ಪಿದ ಹಸುವೊಂದರ ಚಿತ್ರ ನೆನಪಾಯಿತು.

ದನಗಳು ಮೇಯಲು ಹೋದಾಗ ಅವುಗಳ ಸ್ವಾಭಾವಿಕ ಗುಣಧರ್ಮದಂತೆ ಬೇಗ ಬೇಗನೆ ಹುಲ್ಲನ್ನು ಮೇಯ್ದು ಬಿಡುತ್ತವೆ. ಸರಿಯಾಗಿ ನುರಿಸುವ ಗೋಜಿಗೆ ಹೋಗುವುದಿಲ್ಲ. ನಂತರ ವಿಶ್ರಾಂತಿಯ ಸಮಯದಲ್ಲಿ ಹೀಗೆ ಅರೆ ಜಗೆದ ಆಹಾರ ಪದಾರ್ಥಗಳನ್ನು ಮೆಲುಕು ಹಾಕುತ್ತ ಪುನಃ ಬಾಯಿಗೆ ತಂದು ಚೆನ್ನಾಗಿ ಜಗಿದು ನುಂಗುತ್ತವೆ.

ಜಾನುವಾರುಗಳು ಹೀಗೆ ಮೇಯುವಾಗ ಹುಲ್ಲಿನ ಜೊತೆಗೇ ಕೆಲವು ಬೇಡವಾದ, ಹಾನಿಕಾರಕವಾದ ವಸ್ತುಗಳೂ ಅವುಗಳ ದೇಹವನ್ನು ಸೇರಬಹುದು. ಉದಾಹರಣೆಗೆ ಸೂಜಿ, ಮೊಳೆ, ಕಬ್ಬಿಣದ ಚೂರು, ಪ್ಲಾಸ್ಟಿಕ್, ರೆಕ್ಸಿನ್, ಚಪ್ಪಲಿ, ವಿಷ ಪದಾರ್ಥ, ರಾಸಾಯನಿಕ. ಕೆಲವು ಬಾರಿ ಇಂತಹ ಸಾಮಗ್ರಿಗಳು ಜಾನುವಾರುಗಳ ದೇಹ ಪ್ರವೇಶಿಸಿ ಅಷ್ಟೇನೂ ತೊಂದರೆಯಾಗದಿದ್ದರೂ ಹಲವಾರು ಬಾರಿ ಅಪಾಯ ತಂದೊಡ್ಡಿ ಪ್ರಾಣಿಗಳ ಜೀವಕ್ಕೆ ಕುತ್ತಾಗಲೂಬಹುದು. ಆದ್ದರಿಂದ ಪ್ರಾಣಿಗಳನ್ನು ಮೇಯಿಸುವಾಗ ಜಾಗ್ರತೆಯಿಂದಿರಬೇಕು. ಈ ಕೆಳಗಿನ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡಿರಬೇಕು.

1. ಒಳ್ಳೆಯ ಗುಣಮಟ್ಟದ ಹುಲ್ಲು ಬೆಳೆದಿರುವ ಕಡೆ ಮೇಯಿಸಬೇಕು. ರೈತರು, ಜಾನುವಾರುಗಳು ಸಾಮಾನ್ಯವಾಗಿ ಮೇಯುವ ಮತ್ತು ಇಷ್ಟಪಡುವ ಸಸ್ಯಗಳನ್ನು ಗುರುತು ಇಟ್ಟುಕೊಳ್ಳುವುದು ಒಳ್ಳೆಯದು. ಹಾಗೆಯೇ ಜಾನುವಾರುಗಳು ಮೇಯುವ ಸ್ಥಳದಲ್ಲಿರುವ ಅಪಾಯಕಾರಿಯಾದ, ವಿಷಕಾರಿಯಾದ ಸಸ್ಯಗಳ (ಉದಾಹರಣೆಗೆ ದತ್ತೂರ, ಔಡಲ, ಬಸರಿ ಸೊಪ್ಪು) ಬಗ್ಗೆ ಮತ್ತು ಔಷಧೀಯ ಮತ್ತು ಇತರೆ ಪ್ರಯೋಜನಕಾರಿ ಗುಣ ಹೊಂದಿರುವ ಸಸ್ಯಗಳ (ಉದಾಹರಣೆಗೆ ನೆಲಬೇವು, ಶತಾವರಿ, ಬೇವು, ಬಿಲ್ವಪತ್ರೆ, ಮುತ್ತುಗ, ಬನ್ನಿಸೊಪ್ಪು, ತುಂಬಿಸೊಪ್ಪು, ಮುಟ್ಟಿದರೆ ಮುನಿ ಇತ್ಯಾದಿ) ಬಗ್ಗೆಯೂ ತಿಳಿದುಕೊಂಡಿರುವುದೂ ಒಳ್ಳೆಯದು. ಎಳೆಯ ಜೋಳದ ಸಸ್ಯಗಳು ವಿಷಯುಕ್ತ ಪದಾರ್ಥ ಹೊಂದಿರುವುದರಿಂದ ಜಾನುವಾರುಗಳು ಅಲ್ಲಿ ಮೇಯದಂತೆ ನಿಗಾ ವಹಿಸಬೇಕು.

2. ಜಾನುವಾರುಗಳನ್ನು ಒಂದೆಡೆ ಮೇಯಲು ಬಿಟ್ಟು ಸುಮ್ಮನೇ ಕೂರದೇ, ಗಮನಿಸುತ್ತಿರಬೇಕು.

3. ಕಾರ್ಖಾನೆ, ಆಸ್ಪತ್ರೆ, ಪಶು ಆಸ್ಪತ್ರೆ, ಉದ್ಯಮಗಳು, ಗ್ಯಾರೇಜ್‌ಗಳು, ಕಬ್ಬಿಣದ ಸಾಮಗ್ರಿಗಳನ್ನು ತಯಾರಿಸುವ ಮತ್ತು ರಿಪೇರಿ ಮಾಡುವ ಸ್ಥಳಗಳಲ್ಲಿ ಮತ್ತು ಅವುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದನಗಳನ್ನು ಮೇಯಲು ಬಿಡಬಾರದು.

4. ಪ್ಲಾಸ್ಟಿಕ್, ರೆಕ್ಸಿನ್, ಚಪ್ಪಲಿ ಮೊದಲಾದ ಪದಾರ್ಥಗಳು ಗಂಟಲಿಗೆ ಸಿಕ್ಕಿ ಹಾಕಿಕೊಳ್ಳಬಹುದು, ಹೊಟ್ಟೆಯೊಳಕ್ಕೆ ಹೋಗಿ ಜಾನುವಾರುಗಳಿಗೆ ಜೀರ್ಣಕ್ರಿಯೆ ತೊಂದರೆ ಉಂಟು ಮಾಡಬಹುದು. ಹಲವಾರು ಬಾರಿ ಮಾರಣಾಂತಿಕವಾಗಲೂಬಹುದು. ಆದ್ದರಿಂದ ಜಾನುವಾರುಗಳನ್ನು ಇಂತಹ ಸ್ಥಳಗಳಲ್ಲಿ ಮೇಯಲು ಬಿಡಬಾರದು. ಮೇಯಲು ಬಿಟ್ಟರೂ, ಮೇಯುವಾಗ ಇಂತಹ ಪದಾರ್ಥಗಳನ್ನು ತಿನ್ನದಂತೆ ಜಾಗ್ರತೆ ವಹಿಸಬೇಕು.

5. ವಿಪರೀತ ಕೀಟನಾಶಕ ಮತ್ತು ಗೊಬ್ಬರಗಳನ್ನು ಬಳಸಿದ ಹೊಲಗಳಲ್ಲಿ ಜಾನುವಾರುಗಳನ್ನು ಮೇಯಲು ಬಿಡಬಾರದು. ಕೆಲವು ಕೆರೆಗಳಲ್ಲಿ ಕೀಟನಾಶಕ, ಗೊಬ್ಬರ ಸಿಂಪರಣೆಯ ನಂತರ ಸಲಕರಣೆಗಳನ್ನು ತೊಳೆಯುವುದು, ಕೈ ತೊಳೆದುಕೊಳ್ಳುವುದನ್ನು ಮಾಡುತ್ತಾರೆ. ಇಂತಹ ಕೆರೆಗಳಲ್ಲಿ ಜಾನುವಾರುಗಳನ್ನು ನೀರು ಕುಡಿಯಲು ಬಿಡಬಾರದು.

6. ಜಾನುವಾರುಗಳನ್ನು ಮೇಯಲು ಬಿಡುವ ಸ್ಥಳದಲ್ಲಿ ಕೀಟನಾಶಕ ಮೊದಲಾದ ವಿಷಪದಾರ್ಥಗಳನ್ನೂ ಯಾರೂ ಹಾಕಿಲ್ಲ ಮತ್ತು ಆ ಪ್ರದೇಶದಲ್ಲಿ ಅಂತಹ ವಸ್ತುಗಳು ಇಲ್ಲವೆಂದು ಖಾತ್ರಿಪಡಿಸಿಕೊಳ್ಳಬೇಕು. ನಂತರವೇ ಜಾನುವಾರುಗಳನ್ನು ಮೇಯಲು ಬಿಡಬೇಕು. ಇಲ್ಲವಾದಲ್ಲಿ ಜಾನುವಾರುಗಳು ಮೇವಿನ ಜೊತೆಗೇ ಇಂತಹ ಅಪಾಯಕಾರಿ ಪದಾರ್ಥಗಳನ್ನು ಸೇವಿಸಿ ಸಾವಿಗೀಡಾಗಬಹುದು.

7. ಮುಳ್ಳು, ಕಂಟಿ, ಬೇಲಿ ಮೊದಲಾದ ಸ್ಥಳಗಳಲ್ಲಿ ಜಾನುವಾರುಗಳನ್ನು ಮೇಯಿಸಲು ಬಿಡುವಾಗ ಗಾಯವಾಗದಂತೆ ಎಚ್ಚರಿಕೆ ವಹಿಸಬೇಕು. ಜೌಗು ಹಾಗೂ ತಗ್ಗು ಪ್ರದೇಶಗಳಲ್ಲಿ ಜಾನುವಾರುಗಳನ್ನು ಮೇಯಿಸಲು ಬಿಡಬಾರದು.

8. ರಸ್ತೆ ಬದಿಯಲ್ಲಿ, ಹಳ್ಳ-ಕೊಳ್ಳಗಳಲ್ಲಿ ತೀರಾ ತಗ್ಗು ದಿನ್ನೆಗಳಿರುತ್ತವೆ. ಇಂತಹ ಕಡೆಗಳಲ್ಲಿ ಜಾನುವಾರುಗಳನ್ನು ಮೇಯಿಸುವಾಗ ಅವು ತಗ್ಗಿನಲ್ಲಿ ಬಿದ್ದು ಕಾಲು ಮುರಿಯುವ ಸಂಭವವಿರುತ್ತದೆ. ಈ ಬಗ್ಗೆಯೂ ಎಚ್ಚರಿಕೆ ವಹಿಸುವುದು ಅಗತ್ಯ. ರಸ್ತೆ ಬದಿ ಜಾನುವಾರುಗಳನ್ನು ತೆಗೆದುಕೊಂಡು ಹೋಗುವಾಗ ಸುತ್ತಮುತ್ತ ಸರಿಯಾಗಿ ನೋಡಿಕೊಂಡು, ಅಪಘಾತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಿಕೊಂಡು ಹೋಗಬೇಕು. ತೀರ ವಾಹನ ದಟ್ಟಣೆ ಇರುವ ರಸ್ತೆ ಕಡೆಗಳಲ್ಲಿ ಜಾನುವಾರುಗಳನ್ನು ಮೇಯಿಸಲು ಬಿಡಲೇಬಾರದು.

9. ಸಾಂಕ್ರಾಮಿಕ ರೋಗಗಳು ಹರಡುವ ಸಂದರ್ಭಗಳಲ್ಲಿ ಕಲುಷಿತವಾದ ಹುಲ್ಲುಗಾವಲು ಅಥವಾ ಕೆರೆ ಕಟ್ಟೆಗಳಲ್ಲಿ ಮೇಯಲು, ನೀರು ಕುಡಿಯಲು ಬಿಡಬಾರದು.

10. ಹಲವು ಬಾರಿ, ದನಗಳು ಹುಲ್ಲು ಬೆಳೆದ ನೆಲದ ಮೇಲೆ ಬಿದ್ದ ವಿದ್ಯುತ್ ತಂತಿಗಳನ್ನು ಹುಲ್ಲಿನೊಂದಿಗೆ ತಿಂದು ಸಾವನ್ನಪ್ಪಿರುವ ಘಟನೆಗಳು ಜರುಗಬಹುದು. ಆದ್ದರಿಂದ ವಿದ್ಯುತ್ ಕಂಬಗಳು, ಕೆಳಮಟ್ಟದಲ್ಲಿ ಹರಿಬಿದ್ದ ತಂತಿಗಳ ಹತ್ತಿರ ದನಗಳನ್ನು ಮೇಯಲು ಬಿಡಬಾರದು.
(ಲೇಖಕ: ಶಿಗ್ಗಾವಿ ಪಶುಸಂಗೋಪನಾ ಪಾಲಿಟೆಕ್ನಿಕ್‌ ಪ್ರಾಚಾರ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT