ಭಾನುವಾರ, ಡಿಸೆಂಬರ್ 8, 2019
21 °C
ರಸ್ತೆ ಮೇಲೆ ಹರಿದು ಬಾವಿಗಳಿಗೆ ಸೇರುತ್ತಿರುವ ಹೊಲಸು ನೀರು

ಸೌಲಭ್ಯ ವಂಚಿತ ರಾಮನಗರ ಕಾಲೊನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೌಲಭ್ಯ ವಂಚಿತ ರಾಮನಗರ ಕಾಲೊನಿ

ಬೀದರ್: ಅರೆ ಇದೇನಿದು. ರಸ್ತೆಯೋ, ಚರಂಡಿಯೋ...ನಗರಸಭೆಯ ವಾರ್ಡ್‌ ಸಂಖ್ಯೆ 23ರ ರಾಮನಗರ ಕಾಲೊನಿಯ ರಸ್ತೆಯ ಅವ್ಯವಸ್ಥೆ ಕುರಿತು ನಾಗರಿಕರೊಬ್ಬರು ಉದ್ಗಾರ ತೆಗೆದಿದ್ದು ಹೀಗೆ.

ನಗರದ ಚಿದ್ರಿ ರಸ್ತೆಯಲ್ಲಿನ ಕೇಂದ್ರೀಯ ವಿದ್ಯಾಲಯ ಪಕ್ಕದಲ್ಲಿ ರಾಮನಗರ ಕಾಲೊನಿ ಇದೆ. ಕಾಲೊನಿಯ ಬಹುತೇಕ ಕಡೆ ಉತ್ತಮ ರಸ್ತೆ ಹಾಗೂ ಚರಂಡಿ ಸಂಪರ್ಕ ಇಲ್ಲ.

ನಗರದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆಗಳು ನಿರ್ಮಾಣಗೊಳ್ಳುತ್ತಿದ್ದರೂ, ಈ ಕಾಲೊನಿಯಲ್ಲಿ ಏಳು ಪ್ರಮುಖ ರಸ್ತೆಗಳಲ್ಲಿ ಒಂದು ಕಡೆ ಮಾತ್ರ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಇನ್ನುಳಿದವು ಕಚ್ಚಾ ರಸ್ತೆಗಳೇ ಆಗಿವೆ.

ಉತ್ತಮವಾದ ರಸ್ತೆಗಳು ಇಲ್ಲದೇ ಇರುವುದರಿಂದ ವಾಹನಗಳು ನಿಧಾನಗತಿಯಲ್ಲಿ ಸಾಗುವ ಸ್ಥಿತಿ ಇದೆ. ಮಳೆ ನೀರು ಸಂಗ್ರಹವಾದಾಗ ರಸ್ತೆಗಳ ಮಧ್ಯೆದಲ್ಲಿನ ತಗ್ಗುಗಳು ಕಾಣಿಸದೆ ಅಪಘಾತಗಳು ಸಂಭವಿಸಿದ ಉದಾಹರಣೆಗಳು ಇವೆ ಎಂದು ಹೇಳುತ್ತಾರೆ ರಾಮನಗರ ಕಾಲೊನಿಯ ನಿವಾಸಿಗಳು.

ಇನ್ನು ಚರಂಡಿಗಳ ಕತೆ ಇದಕ್ಕಿಂತ ಭಿನ್ನವಾಗಿಲ್ಲ. ಬಹುತೇಕ ಕಡೆಗಳಲ್ಲಿ ಚರಂಡಿಗಳೇ ಇಲ್ಲ. ಒಂದೆರಡು ಕಡೆ ನಿರ್ಮಾಣ ಮಾಡಲಾಗಿದ್ದರೂ ಅವುಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಹೀಗಾಗಿ ಚರಂಡಿಗಳ ನೀರು ರಸ್ತೆಗಳ ಮೇಲೆಯೇ ಹರಿದಾಡುವಂತಹ ಸನ್ನಿವೇಶ ಆಗಾಗ್ಗೆ ನಿರ್ಮಾಣವಾಗುತ್ತಿದೆ. ಮಳೆ ಬಂದಾಗೊಮ್ಮೆ ರಸ್ತೆಗಳು ಸಂಪೂರ್ಣ ಕೆಸರುಮಯವಾಗುತ್ತದೆ. ವಾಹನಗಳು ಅಲ್ಲದೇ ಪಾದಚಾರಿಗಳಿಗೂ ಓಡಾಡಲು ಕಷ್ಟವಾಗುತ್ತಿದೆ ಎಂದು ನಾಗರಿಕರು ವಿವರಿಸುತ್ತಾರೆ.

ಕೇಂದ್ರೀಯ ವಿದ್ಯಾಲಯ ಪಕ್ಕದಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ ಚರಂಡಿ ಹೂಳಿನಿಂದ ತುಂಬಿಕೊಂಡು ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ಓಡಾಟಕ್ಕೆ ತೀವ್ರ ಸಮಸ್ಯೆಯಾಗಿದೆ.

ಚರಂಡಿ ಒಡೆದು ಹಾಳಾದ ಕಾರಣ ಹೊಲಸು ನೀರು ಸಿದ್ದರಾಮಯ್ಯ ಐಟಿಐ ಕಾಲೇಜಿಗೆ ಸಂಪರ್ಕ ಕಲ್ಪಿಸುವ ಕಾಲೊನಿಯ ಮುಖ್ಯ ರಸ್ತೆ ಮೇಲೆಯೇ ಹರಿಯುತ್ತಿದೆ. ಮಳೆ ಸುರಿದಾಗ ಚರಂಡಿಯೊಳಗಿನ ತ್ಯಾಜ್ಯ ವಸ್ತುಗಳು ರಸ್ತೆಯ ಮೇಲೆ ಹರಡಿ ಗಬ್ಬು ವಾಸನೆ ಬರುತ್ತಿದೆ. ಹೊಲಸು ನೀರು ರಸ್ತೆ ಮೇಲೆ ಹರಿದಾಡುತ್ತಿರುವ ಕಾರಣ ಸಾರ್ವಜನಿಕರು ಕಿರಿಕಿರಿ ಅನುಭವಿಸಬೇಕಾಗಿದೆ. ಇದರಿಂದ ಸೊಳ್ಳೆ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಉಂಟಾಗಿದೆ.

ಇಳಿಜಾರು ಪ್ರದೇಶದಲ್ಲಿರುವ ಕಾಲೊನಿಯಲ್ಲಿ ಮಳೆ ಬಂದಾಗ ಬೇರೆ ಪ್ರದೇಶದಿಂದ ಬರುವ ನೀರು ಮನೆಗಳಿಗೆ ನುಗ್ಗುತ್ತಿದೆ. ಅಲ್ಲದೇ ಕೊಳಚೆ ನೀರು ಕೆಲ ಬಾವಿಗಳನ್ನೂ ಸೇರುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ನಿವಾಸಿ ಕಲ್ಯಾಣರಾವ್ ಅಡಸಾರೆ.

ಕಾಲೊನಿಯಲ್ಲಿ ರಸ್ತೆ ಬದಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ನಿರ್ಮಿಸದೇ ಇರುವುದರಿಂದ ಮಳೆ ನೀರು ಮನೆಗಳಿಗೆ ನುಗ್ಗಲು ಕಾರಣವಾಗಿದೆ ಎಂದು ನುಡಿಯುತ್ತಾರೆ. ರಸ್ತೆ, ಚರಂಡಿ ಸೇರಿದಂತೆ ಕಾಲೊನಿಯ ಸಮಸ್ಯೆಗಳ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟವರ ಗಮನ ಸೆಳೆಯಲಾಗಿದೆ. ಆದರೂ, ಈವರೆಗೆ ಯಾವುದೇ ಪ್ರಯೋಜನ ಆಗಿಲ್ಲ ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈಗಲಾದರೂ ಎಚ್ಚೆತ್ತುಕೊಂಡು ಕಾಲೊನಿಯ ಎಲ್ಲೆಡೆ ಸಿಸಿ ರಸ್ತೆ, ಚರಂಡಿ ನಿರ್ಮಿಸಬೇಕು. ಕುಡಿಯುವ ನೀರಿನ ಬವಣೆ ತಪ್ಪಿಸಲು ವಿವಿಧೆಡೆ ಕಿರು ನೀರು ಸಂಗ್ರಹ ಟ್ಯಾಂಕ್ ನಿರ್ಮಿಸಬೇಕು. ಮಳೆಗಾಲ ಆರಂಭವಾಗಿರುವ ಕಾರಣ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇರುತ್ತದೆ. ಆದ್ದರಿಂದ ಇರುವ ಒಂದೆರಡು ಚರಂಡಿಗಳನ್ನು ಕೂಡಲೇ ಸ್ವಚ್ಛಗೊಳಿಸಬೇಕು. ಹೊಲಸು ನೀರು ಹರಿದಾಡುತ್ತಿರುವ ರಸ್ತೆಯಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು ಎಂದು ಒತ್ತಾಯಿಸುತ್ತಾರೆ.

ಲೋಕೇಶ್‌ ಪಾಟೀಲ

ಪ್ರತಿಕ್ರಿಯಿಸಿ (+)