ಬುಧವಾರ, ಡಿಸೆಂಬರ್ 11, 2019
25 °C

ಮಲೆನಾಡಿನ ಈ ಹೆಗ್ಗಡತಿಗೆ 75!

Published:
Updated:
ಮಲೆನಾಡಿನ ಈ ಹೆಗ್ಗಡತಿಗೆ 75!

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಆವರಣಕ್ಕೆ, ಬೆಳಗಿನಲ್ಲಾಗಲಿ, ಬೈಗಿನಲ್ಲಾಗಲಿ, ನೀವೊಮ್ಮೆ ಬರಬೇಕು. ಈ ಕಾಲೇಜಿನ ಕ್ಲಾಸ್‌ ರೂಮುಗಳು, ಅಂಗಳದಲ್ಲಿ ಬೆಳೆದು ನಿಂತ ಮರಗಳು ಮುಂಗಾರಿನ ‘ಖಡ್‌ ಖಡ್‌ ಖಡಲ್‌’ ಮಳೆಯ ಸದ್ದಿನ ನಡುವೆಯೂ ಬಲು ರಸವತ್ತಾದ ಕಥೆಗಳನ್ನು ಹೇಳಲು ಸಜ್ಜಾಗಿ ನಿಂತಿರುತ್ತವೆ, ಗೊತ್ತೆ?

ಈ ಕಥೆಗಳಾದರೂ ಎಂಥವು ಅಂತೀರಿ. ‘ಹುಡುಗ’ ಪೂರ್ಣಚಂದ್ರ ತೇಜಸ್ವಿ ಮನೆಯಿಂದ ಟೀ ಡಿಕಾಕ್ಷನ್‌ ಕದ್ದು ಹಾಸ್ಟೆಲ್‌ಗೆ ತಂದ ಕಥೆ, ಕ್ಯಾಂಪಸ್‌ನಲ್ಲಿ ಕುಳಿತು ಕಡಿದಾಳು ಶಾಮಣ್ಣ ಬರೆದ ಹೆಸರಿಲ್ಲದ ಕಥೆಯೊಂದು ತುಂಗಾ ನದಿಯಲ್ಲಿ ಮುಳುಗಿದ ಕಥೆ, ಲಂಕೇಶ್‌ ನೋಟ್‌ ಪುಸ್ತಕದ ಯಾವುದೋ ಹಾಳೆಯಲ್ಲಿ ತಟ್ಟನೆ ಅರಳಿ ನಿಲ್ಲುತ್ತಿದ್ದ ಹನಿಗವನಗಳ ಕಥೆ, ಕೋಣಂದೂರು ಲಿಂಗಪ್ಪ ಬರೆದ ನಾಟಕದ ಕಥೆ, ಅನಂತಮೂರ್ತಿ ಮೇಷ್ಟ್ರು ಇಂಗ್ಲಿಷ್‌ ಪಾಠಗಳನ್ನು ಕನ್ನಡದಲ್ಲಿ ಹೇಳಿದ ಕಥೆ...

ಹೌದು, ಈ ಕ್ಯಾಂಪಸ್‌ನಲ್ಲಿ ಕುವೆಂಪು ಅವರ ಕಥೆ ಏಕೆ ಮಿಸ್‌ ಆಗಿದೆ ಎನ್ನುವುದು ನಿಮ್ಮ ಪ್ರಶ್ನೆಯೇ? ಸ್ವಲ್ಪ ತಾಳಿ ಸ್ವಾಮಿ, ಕುವೆಂಪು ಪದವೀಧರರಾಗುವ ಹೊತ್ತಿಗೆ ಈ ಕಾಲೇಜು ಇನ್ನೂ ಕಣ್ಣನ್ನೇ ಬಿಟ್ಟಿರಲಿಲ್ಲ. ಆದರೆ, ಈ ಕಾಲೇಜು ಕಣ್ಣುಬಿಟ್ಟಾಗ ಅದಕ್ಕೆ ‘ಸಹ್ಯಾದ್ರಿ’ ಎಂದು ನಾಮಕರಣ ಮಾಡಿ ದವರೂ ಇದೇ ರಾಷ್ಟ್ರಕವಿಯಲ್ಲವೆ ಮತ್ತೆ? ಅಂದಹಾಗೆ, ಈ ಕಾಲೇಜು ಈಗ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ.

ಸಹ್ಯಾದ್ರಿ ಗಿರಿಶ್ರೇಣಿಯ ಜೀವವೈವಿಧ್ಯದಂತೆಯೇ ಶಿಕ್ಷಣ, ಕಲೆ, ಸಾಹಿತ್ಯ, ಸಂಸ್ಕೃತಿ, ರಂಗಭೂಮಿ, ವಿಜ್ಞಾನ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಿಗೆ ಈ ಕಾಲೇಜಿನ ಕೊಡುಗೆಯಲ್ಲಿ ಅದೆಂತಹ ವೈವಿಧ್ಯ ತುಂಬಿದೆ!

ಕಾಲೇಜುಗಳ ಸಂಖ್ಯೆ ಕಡಿಮೆ ಇದ್ದ ಆ ದಿನಗಳಲ್ಲಿ ಶಿವಮೊಗ್ಗ ನಗರ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಮಕ್ಕಳ ವಿದ್ಯಾಭ್ಯಾಸದ ಕನಸು ನನಸು ಮಾಡಿದ ಹಿರಿಮೆ ಈ ಸಂಸ್ಥೆಗಿದೆ. ಅಂದಿಗೂ ಇಂದಿಗೂ ‘ಹಳ್ಳಿಮಕ್ಕಳ ಕಾಲೇಜು’ ಎಂದೇ ಜನ ಕರೆಯುತ್ತಾರೆ. ಈಗಲೂ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಬೀರೂರು–ಶಿವಮೊಗ್ಗ ನಡುವೆ ರೈಲು ಸಂಚರಿಸುತ್ತದೆ. ಇದು ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎನ್ನುವ ವಿಷಯ ಬಹಳ ಜನರಿಗೆ ತಿಳಿದಿಲ್ಲ. ಕಾಲೇಜಿನ ಎದುರಿಗಿದ್ದ ರೈಲು ನಿಲ್ದಾಣ ಈಗಿಲ್ಲ.

1941ರಲ್ಲಿ ಇಂಟರ್‌ ಮೀಡಿಯೆಟ್‌ ಕಾಲೇಜಾಗಿ ಆರಂಭಗೊಂಡ ಸಂಸ್ಥೆಗೆ ಮೈಸೂರಿನ ಅಂದಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ ಶಂಕುಸ್ಥಾಪನೆ ನೆರವೇರಿಸಿದ್ದರು. 1956ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಾಗಿ ಪರಿವರ್ತನೆ ಹೊಂದಿತು. 1984ರಲ್ಲಿ ಕಲಾ ಮತ್ತು ವಿಜ್ಞಾನ ಕಾಲೇಜುಗಳಾಗಿ ವಿಭಜನೆಗೊಂಡಿತು. 1991ರಲ್ಲಿ ಪ್ರಾರಂಭವಾದ ಕುವೆಂಪು ವಿಶ್ವವಿದ್ಯಾಲಯ ಈ ಎರಡೂ ಕಾಲೇಜುಗಳನ್ನು ತನ್ನ ಘಟಕ ಕಾಲೇಜುಗಳಾಗಿ ಪರಿಗಣಿಸಿತು.

ಸಹ್ಯಾದ್ರಿ ಕಲಾ ಕಾಲೇಜು ಯುಜಿಸಿ ನ್ಯಾಕ್‌ ನಿಂದ ಎರಡು ಸಲ ‘ಎ’ ಗ್ರೇಡ್‌ ಪಡೆದಿದೆ. ವಿಜ್ಞಾನ ಕಾಲೇಜು ಸ್ವಾಯತ್ತ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎರಡೂ ಕಾಲೇಜುಗಳಿಗೆ ಯುಜಿಸಿಯ ‘potential for excellence’ ಎಂಬ ಮಾನ್ಯತೆ ಪಡೆದಿವೆ. ಕುವೆಂಪು ವಿಶ್ವವಿದ್ಯಾಲಯವು 2012ರಲ್ಲಿ ಈ ಸಂಸ್ಥೆಯನ್ನು ‘ಸಂಶೋಧನಾ ಕೇಂದ್ರ’ವೆಂದು ಪರಿಗಣಿಸಿದೆ. ಭಾಷಾ ಮತ್ತು ಐಚ್ಛಿಕ ವಿಷಯಗಳೊಂದಿಗೆ ವರ್ತಮಾನಕ್ಕೆ ಸರಿಹೊಂದುವ ಹೊಸ ಕೋರ್ಸ್‌ಗಳು ಇಲ್ಲಿ ಲಭ್ಯ. ಪ್ರಸಕ್ತ ವರ್ಷದಿಂದ ಸಹ್ಯಾದ್ರಿ ವಾಣಿಜ್ಯ ಕಾಲೇಜು ಆರಂಭವಾಗಿದೆ.

ಸುಮಾರು 80 ಎಕರೆ ಪ್ರದೇಶದಲ್ಲಿ ಹರಡಿರುವ ಈ ವಿದ್ಯಾ ಸಂಸ್ಥೆ ಮಲೆನಾಡಿನ ವಿದ್ಯಾರ್ಥಿಗಳ ಪಾಲಿಗೆ ‘ಕೇಂಬ್ರಿಜ್‌’ ಎನಿಸಿದೆ. ಅಲ್ಲವೆ ಮತ್ತೆ, ಜಿ.ಎಸ್‌. ಶಿವರುದ್ರಪ್ಪ, ಕೆ.ಎಸ್‌.ನಿಸಾರ್‌ ಅಹಮದ್‌, ಸಾ.ಶಿ. ಮರುಳಯ್ಯ ಅವರಂತಹ ಘಟಾನುಘಟಿಗಳು ಇಲ್ಲಿ ಪಾಠ ಮಾಡಿದ್ದಾರೆ.

‘ನಾನು ಓದುವಾಗ ಇಂಟರ್‌ ಮೀಡಿಯೆಟ್‌ ಮಾತ್ರ ಇತ್ತು. ವಿಜ್ಞಾನದಲ್ಲಿ ಫೇಲ್‌ ಆಗಿದ್ದ ತೇಜಸ್ವಿ ಕೂಡ ಇದೇ ಕಾಲೇಜಿಗೆ ಬಂದು ಸೇರಿದ್ದರು.

ಶಿವಮೊಗ್ಗ ಸುಬ್ಬಣ್ಣ, ಕೋಣಂದೂರು ಲಿಂಗಪ್ಪ, ಸೈಯದ್‌ ಅಬ್ದುಲ್‌ ರಜಾಕ್‌ ನನ್ನ ಸಹಪಾಠಿಗಳು. ತೇಜಸ್ವಿ, ಅವರ ಮಾವನ ಮನೆಯಲ್ಲಿದ್ದರು. ನಾನು ಒಕ್ಕಲಿಗರ ಹಾಸ್ಟೆಲ್‌ನಲ್ಲಿದ್ದೆ. ಆಗ ಬಸ್ಸುಗಳ ವ್ಯವಸ್ಥೆ ಇರಲಿಲ್ಲ. ನಡೆದು ಇಲ್ಲವೇ ಸೈಕಲ್‌ನಲ್ಲಿ ಹೋಗಬೇಕಿತ್ತು. ನಾನು, ತೇಜಸ್ವಿ ಡಬಲ್‌ ರೈಡ್‌ ಹೋಗುತ್ತಿದ್ದೆವು’ ಎಂದು ನೆನೆಯುತ್ತಾರೆ ಕಡಿದಾಳು ಶಾಮಣ್ಣ.

‘ತೇಜಸ್ವಿಗೆ ಅವರ ‘ಲಿಂಗಬಂಧ’ ಕಥೆಗೆ ಬಹುಮಾನ ಬಂದಿತ್ತು. ನನಗೂ ಬಹುಮಾನ ಪಡೆಯುವ ಆಸೆ. ನಾನು ಬರೆದಿದ್ದನ್ನು ತೇಜಸ್ವಿಗೆ ನೋಡಲು ಕೊಟ್ಟಿದ್ದೆ. ‘ನೀನು ಕಾನೂರು ಹೆಗ್ಗಡತಿ’ ಓದಿದ್ದೀಯಾ ಎಂದು ಅವರು ಕೇಳಿದರು. ಇಲ್ಲ ಎಂದೆ. ‘ಮೊದಲು ಓದು. ನಂತರ ಬರೆಯುವಂತೆ’ ಎಂದು ಹೇಳಿ ಪರ ಪರ ಹಾಳೆಗಳನ್ನು ಹರಿದು ತುಂಗಾ ನದಿಗೆ ಎಸೆದಿದ್ದರು’ ಎಂದು ನೆನೆಯುತ್ತಾರೆ ಶಾಮಣ್ಣ.

ತೇಜಸ್ವಿ ಅವರು ಮನೆಯಿಂದ ಟೀ ಡಿಕಾಕ್ಷನ್‌ ಕದ್ದು ಹಾಸ್ಟೆಲ್‌ಗೆ ತರುತ್ತಿದ್ದುದು, ಅದಕ್ಕೆ ಹಾಸ್ಟೆಲ್‌ನಲ್ಲಿ ಹಾಲು ಬೆರೆಸಿ ಕುಡಿಯುತ್ತಿದ್ದುದು, ದಢೂತಿ ಸಹಪಾಠಿಗೆ ಚುಡಾಯಿಸುತ್ತಿದ್ದುದು ಈ ಗೆಳೆಯರ ಕಾಲೇಜು ಬದುಕಿನ ಕಚಗುಳಿ ಇಡುವ ಕ್ಷಣಗಳು.

‘ಕಾಲೇಜಿನ ವಾತಾವರಣದಿಂದಲೇ ನಮ್ಮಲ್ಲಿ ಜಾತಿ ಮುಕ್ತ, ಜೀವಪರ ವಿಚಾರಗಳು ನೆಲೆಗೊಂಡವು. ಇತ್ತೀಚಿನ ಬುರ್ಖಾ ವಿವಾದ ಕಿಡಿಗೇಡಿಗಳ ಕೃತ್ಯ’ ಎನ್ನುತ್ತಾರೆ ಶಾಮಣ್ಣ.

ಶಾಮಣ್ಣ ಅವರಂತೆಯೇ ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ, ದಲಿತ ಮುಖಂಡ ಎಂ.ಗುರುಮೂರ್ತಿ, ಗಾಯಕರಾದ, ಶಿವಮೊಗ್ಗ ಸುಬ್ಬಣ್ಣ ಮತ್ತು ಬಿ.ಕೆ. ಸುಮಿತ್ರಾ ಅವರಿಗೂ ಕಾಲೇಜಿನ ಕುರಿತು ಹೇಳಿಕೊಳ್ಳಲು ಹಲವು ಕಥೆಗಳಿವೆ.

‘ಒಂದು ಸಲ ಕುವೆಂಪು ಅವರು ಕಾಲೇಜಿಗೆ ಬಂದಿದ್ದರು. ಅವರನ್ನು ಸ್ವಾಗತಿಸಲು ಸ್ಕೌಟ್‌ ಬ್ಯಾಂಡ್‌ ಸೆಟ್‌ ತಂಡ ಸಿದ್ಧವಾಗಿತ್ತು. ತಂಡದ ಸದಸ್ಯನೊಬ್ಬ ಡ್ರಮ್‌ ಬಾರಿಸಿದ ಕೂಡಲೇ ಮರದಲ್ಲಿ ಕಟ್ಟಿದ್ದ ಜೇನುಗಳು ಒಮ್ಮೆಲೆ ಮೇಲೆದ್ದವು. ಎಲ್ಲರೂ ದಿಕ್ಕಾಪಾಲಾಗಿ ಓಡಿದ್ದರು. ಕುವೆಂಪು ಅವರೂ ಅಡಗಿಕೊಂಡಿದ್ದರು. ಒಬ್ಬ ಹುಡುಗ ಮಾತ್ರ ಓಡಲಾಗದೆ ಮೈದಾನದಲ್ಲಿ ಕುಳಿತುಬಿಟ್ಟಿದ್ದ. ಅದನ್ನು ಗಮನಿಸಿದ ಸ್ನೇಹಿತ ಸೀತಾರಾಮ್‌ ಅಯ್ಯರ್‌ ಕೂಡಲೇ ತನ್ನ ಪಂಚೆ ಬಿಚ್ಚಿ ಆ ಹುಡುಗನಿಗೆ ಹೊದಿಸಿದ್ದ. ಅಂತೂ ಅವನ ಜೀವ ಉಳಿದಿತ್ತು’ ಎಂದು ಸ್ಮರಿಸುತ್ತಾರೆ ಶಂಕರಮೂರ್ತಿ. ಈ ಘಟನೆ ಅವರ ಬದುಕಿನ ಶ್ರೀಮಂತ ನೆನಪು.

‘ಪಿ.ಟಿ ಟೀಚರ್‌ ಆಟಗಳಿಗೆ ನನ್ನ ಹೆಸರು ಕೊಡುತ್ತಿದ್ದರು. ಬೇರೆ ರಾಜ್ಯಗಳಿಂದ ಬರುತ್ತಿದ್ದ ಹುಡುಗಿಯರು ಚಡ್ಡಿ ಹಾಕಿಕೊಂಡು ಬರುತ್ತಿದ್ದರು. ನಮ್ಮದು ಲಂಗ–ದಾವಣಿ. ಹಿಂದೆ ಉಳಿಯುತ್ತಿದ್ವಿ. ಗೊತ್ತೆ? ಎಸ್‌.ಎಂ.ಕೃಷ್ಣ ಅವರ ಪತ್ನಿ ಪ್ರೇಮಾ ಕೂಡ ನನ್ನ ಸಹಪಾಠಿ’ ಎಂದು ಸುಮಿತ್ರಾ ಮೆಲುಕು ಹಾಕುತ್ತಾರೆ.

‘ತರಗತಿಯ ಬಿಡುವಿನ ವೇಳೆಯಲ್ಲಿ ತೇಜಸ್ವಿ ನನಗೆ ಹಾಡುವಂತೆ ಹೇಳುತ್ತಿದ್ದ. ಆಗ ಅವನ ಅಪ್ಪ ಕುವೆಂಪು ಅವರ ‘ದೂರಕೆ ದೂರಕೆ ಬಹು ಬಹು ದೂರಕೆ ಹಾರುವೆ ಗಾನ ವಿಮಾನದಲಿ’ ಹಾಡು ಹಾಡುತ್ತಿದ್ದೆ’ ಎಂದು ಸ್ಮರಿಸುತ್ತಾರೆ ಶಿವಮೊಗ್ಗ ಸುಬ್ಬಣ್ಣ. ದಲಿತ ಚಳವಳಿಯಲ್ಲಿ ತೊಡಗಿಸಿಕೊಳ್ಳಲು ಕಾಲೇಜು ನೀಡಿದ ಕಸುವನ್ನು ಗುರುಮೂರ್ತಿ ನೆನೆಯುತ್ತಾರೆ.

ಕಾಲೇಜಿನ ಕ್ಯಾಂಪಸ್‌, ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಸುತ್ತಮುತ್ತಲಿನ ನಾಗರಿಕರಿಗೂ ಅಚ್ಚುಮೆಚ್ಚಿನ ತಾಣ. ಬೆಳಗು ಮತ್ತು ಬೈಗಿನ ಬಹುತೇಕರ ವಿಹಾರ, ಮಕ್ಕಳ ಆಟ–ಪಾಠದ ತಾಣ. ಕಾಲೇಜಿನ ಉದ್ಯಾನದಲ್ಲಿ ಕುಳಿತು ನೋವು ಮರೆಯುವವರ ಸಂಖ್ಯೆಯೂ ಸಾಕಷ್ಟಿದೆ.

ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಕೆ.ಎಚ್‌. ಪಾಂಡು ರಂಗನ್‌, ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಜಿ.ಶಕುಂತಲಾ ಅವರಿಗೆ ಕಾಲೇಜನ್ನು ಇನ್ನೂ ಎತ್ತರಕ್ಕೆ ಒಯ್ಯುವ ಕನಸು. ಅಮೃತ ಮಹೋತ್ಸವವನ್ನು ವರ್ಷದುದ್ದಕ್ಕೂ ಅರ್ಥಪೂರ್ಣವಾಗಿ ಆಚರಿಸುವ ಉತ್ಸಾಹದಲ್ಲೂ ಅವರಿದ್ದಾರೆ.

‘ಮಲೆನಾಡಿನ ಐಕಾನಿನಂತಿರುವ ಕಾಲೇಜು, ಒಂದು ವಿದ್ಯಾಸಂಸ್ಥೆಯಾಗಿ ಮಾತ್ರ ಕಾಣಿಸುತ್ತಿಲ್ಲ. ಬದಲಾಗಿ ಕರ್ನಾಟಕದ ಸಾಮಾಜಿಕ ಚರಿತ್ರೆಯನ್ನು ಕಂಡರಿಸುವ ಒಂದು ವಿಶ್ವವಿದ್ಯಾಲಯವಾಗಿ ನೆಲೆನಿಂತಿದೆ. ಯಾವುದೇ ಒಂದು ಶೈಕ್ಷಣಿಕ ಸಂಸ್ಥೆ ಏಕಕಾಲಕ್ಕೆ ಭೂತ, ಭವಿಷ್ಯತ್ತು ಹಾಗೂ ವರ್ತಮಾನವನ್ನು ಜೀವಿಸುತ್ತಿದ್ದರೆ, ಅದಕ್ಕೆ ಜ್ವಲಂತ ಉದಾಹರಣೆ ನಮ್ಮ ವಿದ್ಯಾಸಂಸ್ಥೆ’ ಎನ್ನುತ್ತಾರೆ ಕಾಲೇಜಿನ ಭಾಷಾಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಮೇಟಿ ಮಲ್ಲಿಕಾರ್ಜುನ.

ಪಶ್ಚಿಮಘಟ್ಟದ ನಿತ್ಯಹರಿದ್ವರ್ಣದ ಕಾಡಿನಂತೆಯೇ ಈ ಕಾಲೇಜಿನ ರಸಪ್ರಸಂಗಗಳು ಕೂಡ ಸದಾ ಹಸಿರು.

ಪ್ರತಿಕ್ರಿಯಿಸಿ (+)