ಶುಕ್ರವಾರ, ಡಿಸೆಂಬರ್ 6, 2019
19 °C

ತತ್ವಪದಕ್ಕೆ ರಾಗ ಸಂಯೋಜಿಸುವ ಮೋಡಿಗಾರ

ಮಲ್ಲೇಶ್ ನಾಯಕನಹಟ್ಟಿ . Updated:

ಅಕ್ಷರ ಗಾತ್ರ : | |

ತತ್ವಪದಕ್ಕೆ ರಾಗ ಸಂಯೋಜಿಸುವ ಮೋಡಿಗಾರ

ಯಾದಗಿರಿ: ‘ಚಿಂತ್ಯಾಕ ಮಾಡುತಿ ಎಲೆ ಮನವೆ

ನೀ ಯಾದರ ಸುಖವಿಲ್ಲ ಎಲೆ ಮನವೆ;

ಲೋಕನಾಥನ ಧ್ಯಾನವ ಮಾಡಿ

ಸಾಕಾರ ಮಾಡಿಕೊ ಎಲೆ ಮನವೇ...’

ನಗರದಲ್ಲಿ  ಯಾವುದೇ ಕಾರ್ಯಕ್ರಮ ನಡೆಯಲಿ, ಅಲ್ಲಿ ಕಡಕೋಳ ಮಡಿವಾಳಪ್ಪ ಅವರ ಪ್ರಸಿದ್ಧ ಈ ತತ್ವಪದ ಕೇಳುಗರನ್ನು ಸೆಳೆಯುತ್ತದೆ. ತತ್ವಪದದಲ್ಲಿನ ತಾತ್ವಿಕ ಮತ್ತು ಆಧ್ಯಾತ್ಮಿಕ ಶಕ್ತಿ ಒಂದೆಡೆಯಾದರೆ, ಜನರ ಮನಸ್ಸು ಲೀನಕ್ಕೆ ಇನಿದನಿಯ ಇಂಪೂ ಸಹ ಕಾರಣವಾಗಿರುತ್ತದೆ. ನಗರಕ್ಕೆ ಚಿರಪರಿಚಿತವಾಗಿರುವ ಈ ಇನಿದನಿ ಚಂದ್ರಶೇಖರ ಗೋಗಿ ಅವರದ್ದು.

ಬರೀ ತತ್ವಪದಗಳಷ್ಟೇ ಅಲ್ಲ, ಜನಪದ, ವಚನ ಸಾಹಿತ್ಯ, ಸುಗಮ ಸಂಗೀತವನ್ನೂ ಸಹ ಚಂದ್ರಶೇಖರ ಗೋಗಿ ಹಾಡಲು ಕುಳಿತರೆ ಜನರು ಮಂತ್ರಮುಗ್ಧರಾಗಿ ಬಿಡುತ್ತಾರೆ. ಈ ಕಾರಣಕ್ಕಾಗಿಯೇ ನಗರದಲ್ಲಿ ಎಲ್ಲೇ ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳು ನಡೆದರೂ ಕಾರ್ಯಕ್ರಮ ಆಯೋಜಕರಿಂದ ಚಂದ್ರಶೇಖರ ಗೋಗಿ ಅವರಿಗೊಂದು ಆಹ್ವಾನ ಹೋಗುತ್ತದೆ.

ಕಾರ್ಯಕ್ರಮ ಚಾಲನೆ ಪಡೆಯಲು ಒಂದೆರಡು ಗಂಟೆ ತಡವಾದರೂ ಜನರು ಎದ್ದು ಹೋಗುವುದಿಲ್ಲ. ಜನರನ್ನು ಹಿಡಿದಿಡುವ ಶಕ್ತಿ ಚಂದ್ರಶೇಖರ ಗೋಗಿ ಅವರ ಕಂಠಸಿರಿಗೆ ಒಲಿದಿದೆ ಎಂಬುದಾಗಿ ಕಾರ್ಯಕ್ರಮ ಆಯೋಜಕರು ಅವರ ಬಗ್ಗೆ ಒಲವು ವ್ಯಕ್ತಪಡಿಸುತ್ತಾರೆ.

ಸಿರಿಕಂಠದ ಗಾಯಕ ಚಂದ್ರಶೇಖರ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದವರು. ಗುಲ್ಬರ್ಗಾ ವಿವಿಯಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕರ್ನಾಟಕ ಎಸ್ಸೆಸ್ಸೆಲ್ಸಿ ಬೋರ್ಡ್‌ ನಡೆಸುವ ತಬಲ ವಿದ್ವತ್‌ ಪರೀಕ್ಷೆಯಲ್ಲೂ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಸದ್ಯ ಲಿಂಗೇರಿ ಸ್ಟೇಷನ್ನಿನ ಮೊರಾರ್ಜಿ ದೇಸಾಯಿ ಸಂಗೀತ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿರುವ ಅವರು, ನಗರದಲ್ಲಿ ಉಚಿತ ಸಂಗೀತ ಶಾಲೆಯನ್ನು ನಡೆಸುತ್ತಾ ಮಕ್ಕಳಲ್ಲಿ ಸಂಗೀತ ಅಭಿರುಚಿ ತುಂಬುತ್ತಿದ್ದಾರೆ.

‘ಊರ ಮುಂದಿನ ಬಾವಿ

ಯಾರ ತೋಡಿದರೇನು

ಕಾಲು ಜಾರಿದರೆ ಕೈಲಾಸ;

ನಾರಿಯ ಮನಸು ಜಾರಿದರೆ ವನವಾಸ...’

ಹೀಗೆ ಜನಪದವೊಂದು ಚಂದ್ರಶೇಖರ ಗೋಗಿ ಅವರ ಕಂಠಸಿರಿಯಲ್ಲೇ ಕೇಳಿದರೆ ಬದುಕಿಗೆ ಬೇಕಾಗಿರುವ ನಾನಾ ತಾತ್ವಿಕ ಅರ್ಥಗಳು ಇನಿದನಿಯಲ್ಲಿ ಅನಾವರಣವಾಗುತ್ತಾ ಹೋಗುತ್ತದೆ.

‘ಉಳ್ಳವರು ಶಿವಾಲಯವ ಮಾಡುವರಯ್ಯಾ; ನಾನೇನು ಮಾಡಲಿ ಬಡವನಯ್ಯಾ...’ ಬಸವಣ್ಣನವರ ಈ ವಚನವನ್ನು ಮಧುವಂತಿ ರಾಗದಲ್ಲಿ ಚಂದ್ರಶೇಖರ ಗೋಗಿ ಹಾಡಲು ಕುಳಿತರೆ ನಗರದ ಅನೇಕ ಸಂಗೀತಾಸಕ್ತರು ತಲೆದೂಗುತ್ತಾರೆ.

ಅಪೂರ್ವ ಕಲಾವಿದ:  ಚಂದ್ರಶೇಖರ ಗೋಗಿ ಹೈ.ಕ ಭಾಗದ ಅಪೂರ್ವ ಸಂಗೀತ ಕಲಾವಿದ. ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಅವರಂತಹ ವಿನಯಶೀಲ ಕಲಾವಿದರು ಅಪರೂಪ. ಬಡ ಮಕ್ಕಳಿಗೆ ಉಚಿತವಾಗಿ ಸಂಗೀತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಕಾರ್ಯ. ಅವರನ್ನು ರಾಜ್ಯಮಟ್ಟದಲ್ಲಿ ಗುರುತಿಸುವ ಕಾರ್ಯ ಆಗಬೇಕಿದೆ’ ಎಂದು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ದತ್ತಪ್ಪ ಹೇಳುತ್ತಾರೆ.

**

800ಕ್ಕೂ ಹೆಚ್ಚು ಶಿಷ್ಯವೃಂದ

ಇಲ್ಲಿನ ಬಸವೇಶ್ವರ ಬಡಾವಣೆಯಲ್ಲಿನ ಸಣ್ಣಕೊಠಡಿಯಲ್ಲಿ 18ವರ್ಷಗಳಿಂದ ಅವರು ನಗರದ ಮಕ್ಕಳಿಗೆ ಸಂಗೀತ ಪಾಠ ಹೇಳಿ ಕೊಡುತ್ತಿದ್ದಾರೆ. ಇದುವರೆಗೂ 800 ಕ್ಕೂ ಹೆಚ್ಚು ಶಿಷ್ಯ ವೃಂದ ಅವರ ಬೆನ್ನಿಗಿದ್ದಾರೆ. ಬಡ ಮಕ್ಕಳಿಗೆ ಸಂಗೀತ ಪಾಠ ಹೇಳುವುದರಲ್ಲಿ ಹೆಚ್ಚು ಆಸಕ್ತಿ ತೋರುವ ಅವರು ಮಕ್ಕಳು ಸಂಗೀತ ಪೋಷಿಸಬೇಕು ಎನ್ನುತ್ತಾರೆ. ಸದ್ಯ 40 ಮಕ್ಕಳು ಸಂಗೀತ ಶಾಲೆಯಲ್ಲಿ ಸಂಗೀತ ಕಲಿಯುತ್ತಿದ್ದಾರೆ. ಚಂದ್ರಶೇಖರ ಬರೀ ಗಾಯಕರಷ್ಟೇ ಅಲ್ಲ.  ಕೊಳಲು ವಾದಕರೂ ಹೌದು. ಹಾರ್ಮೋನಿಯಂ, ತಬಲವನ್ನು ಅಷ್ಟೇ ಪ್ರಬುದ್ಧರಾಗಿ ನುಡಿಸುತ್ತಾರೆ.

***

ಪ್ರಶಸ್ತಿಗಳು

ಡಾ.ಪಂಡಿತ್‌ ಪುಟ್ಟರಾಜ ಸೇವಾ ಸಮಿತಿಯಿಂದ ‘ಪುಟ್ಟರಾಜ ಯುವರತ್ನ’ ಮತ್ತು ‘ಪುಟ್ಟಶ್ರೀ’ ಕೊಂಚೂರು ಮಠದಿಂದ ‘ಕವಿತಾ ಶ್ರೀ’ ಸಗರನಾಡು ಸೇವಾ ಪ್ರತಿಷ್ಠಾನದಿಂದ ‘ಸಗರನಾಡು ಸಂಗೀತ ಕಲಾರತ್ನ’ ಪ್ರಶಸ್ತಿಗಳಿಗೆ ಚಂದ್ರಶೇಖರ ಗೋಗಿ ಭಾಜನರಾಗಿದ್ದಾರೆ.

ಪ್ರತಿಕ್ರಿಯಿಸಿ (+)