ಶುಕ್ರವಾರ, ಡಿಸೆಂಬರ್ 13, 2019
21 °C

ಗುರುಪೂರ್ಣಿಮೆ: ಭಕ್ತಿಯಲ್ಲಿ ಮಿಂದೆದ್ದ ಭಕ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುರುಪೂರ್ಣಿಮೆ: ಭಕ್ತಿಯಲ್ಲಿ ಮಿಂದೆದ್ದ ಭಕ್ತರು

ವಿಜಯಪುರ: ಸೂರ್ಯೋದಯಕ್ಕೂ ಮುನ್ನ ನಗರದ ವಿವಿಧ ರಸ್ತೆಗಳಲ್ಲಿ ಜನಸಾಗರ. ಹೊತ್ತೇರಿದಂತೆ ಜನಪ್ರವಾಹ ಹೆಚ್ಚಿತು. ವಿವಿಧಡೆಯಿಂದ ನಗರ ಸಂಪರ್ಕಿಸುತ್ತಿದ್ದ ರಸ್ತೆಗಳಲ್ಲಿ ಬಂದ ವಾಹನಗಳೆಲ್ಲವೂ ಜ್ಞಾನಯೋಗಾಶ್ರಮ ತಲುಪಿದವು. 

ನಸುಕಿನ ನಾಲ್ಕರಿಂದ ಆರರವರೆಗೆ ನಡೆದ ಜಪಯಜ್ಞ, ಬಳಿಕ ಮಲ್ಲಿಕಾರ್ಜುನ ಶಿವಯೋಗಿಗಳ ಪ್ರವಚನದ ಧ್ವನಿ ಸುರುಳಿ ಪ್ರಸಾರ, 8ರಿಂದ 9ರವರೆಗೆ ಪ್ರಣವ ಮಂಟಪ ದಲ್ಲಿ ಮಹಾಪೂಜೆ ಅಸದಳ ಸಂಖ್ಯೆಯ ಜನಸ್ತೋಮ, ಸಾಧು ಸಂತರ ಸಮಕ್ಷಮ, ಧಾರ್ಮಿಕ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಜಪ ಯಜ್ಞ, ಪ್ರಣವ ಮಂಟಪ ಪೂಜೆಗಾಗಿ ದೂರದ ಊರುಗಳಿಂದ ಶನಿವಾರ ಮುಸ್ಸಂಜೆಯೇ ಆಶ್ರಮಕ್ಕೆ ಬಂದ ಭಕ್ತ ಸಮೂಹ, ಪೂಜೆ ಬಳಿಕ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ದುಗೆಯ ದರ್ಶನಾ ಶೀರ್ವಾದ ಪಡೆದು ಧನ್ಯತಾಭಾವ ಹೊಂದಿತು.

ಮುಂಜಾನೆಯಿಂದ ದರ್ಶನಕ್ಕೆ ಆರಂಭಗೊಂಡ ಸರತಿ ಸಾಲು ಮುಸ್ಸಂಜೆವರೆಗೂ ಗೋಚರಿಸಿತು. ರಾತ್ರಿಯೂ ನಗರದ ಭಕ್ತ ಸಮೂಹ ಆಶ್ರಮಕ್ಕೆ ಭೇಟಿ ನೀಡಿ ಶಿವಯೋಗಿಗಳ ಗದ್ದುಗೆಗೆ ನಮಿಸಿ ಕೃಪಾಶಿರ್ವಾದ ಪಡೆಯಿತು. ಮುಂಜಾನೆ 9ಕ್ಕೆ ಆರಂಭಗೊಂಡ ದಾಸೋಹ ತಡರಾತ್ರಿ 11 ಗಂಟೆಯಾದರೂ ನಡೆಯಿತು. ಕನಿಷ್ಠ 60 ಸಾವಿರ ಜನತೆ ಸಜ್ಜಕ, ಅನ್ನ, ಸಾಂಬರಿನ ಪ್ರಸಾದ ಸವಿದಿದ್ದಾರೆ ಎಂದು ಆಶ್ರಮದ ಭಕ್ತ ಮಹಾದೇವ ಬೆಳ್ಳುಂಡಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಾತ್ರೆಯ ಮೆರಗು: ಭಾನುವಾರ ನಸುಕಿನಿಂದ ರಾತ್ರಿವರೆಗೂ ಆಶ್ರಮದ ಸುತ್ತಮುತ್ತ ಎತ್ತ ನೋಡಿದರೂ ಜನಸಾಗರ. ಆವರಣದಲ್ಲಿ ಕಾಲಿಡಲು ಸ್ಥಳವಿಲ್ಲದಷ್ಟು ಜನದಟ್ಟಣೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರು ನೆರೆದಿದ್ದರೂ ಸ್ವಚ್ಛತೆಗೆ ಮಾತ್ರ ಕುಂದು ಬರಲಿಲ್ಲ. ಆಶ್ರಮ ಭಕ್ತರು, ಅಸಂಖ್ಯಾತ ಸ್ವಯಂ ಸೇವಕರು ದಾಸೋಹ ಸೇವೆಯಲ್ಲಿ ತೊಡಗಿದ್ದರು.

ಬಸ್ ವ್ಯವಸ್ಥೆ: ಜ್ಞಾನ ಯೋಗಾಶ್ರಮಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಈಶಾನ್ಯ ಸಾರಿಗೆ ಸಂಸ್ಥೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿತ್ತು. ಪ್ರಮುಖವಾಗಿ ಗಾಂಧಿವೃತ್ತದಿಂದ ಆಶ್ರಮಕ್ಕೆ 150 ಬಸ್‌ಗಳ ಸೇವೆ ಒದಗಿಸಲಾಗಿತ್ತು.

ಪ್ರತಿಕ್ರಿಯಿಸಿ (+)