ಬುಧವಾರ, ಡಿಸೆಂಬರ್ 11, 2019
25 °C

‘ಸ್ಮೃತಿ’ ಪಟಲ!

Published:
Updated:
‘ಸ್ಮೃತಿ’ ಪಟಲ!

ಸಾಂಗ್ಲಿಯು ಗುಣಮಟ್ಟದ ಅರಿಶಿನಕ್ಕೆ ಹೆಸರುವಾಸಿ. ಮಹಾರಾಷ್ಟ್ರದ ಈ ಪಟ್ಟಣದಲ್ಲಿ ಮರಾಠಿ ಹೆಣ್ಣುಮಕ್ಕಳು ಕೆನ್ನೆಗೆ ಅರಿಶಿನ ಸವರಿಕೊಂಡು, ಮೂಗಿಗೆ ನತ್ತು ಹಾಕಿಕೊಂಡು ಮಿಂಚುತ್ತಾರೆ. ಆ ಊರಿನ ಹೆಣ್ಣುಮಕ್ಕಳೂ ತನ್ನನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ ಸ್ಮೃತಿ ಮಂದಾನ ಅನೇಕರಂತೆ ಅರಿಶಿನ ಹಚ್ಚಿಕೊಂಡವರಲ್ಲ. ಅವರು ಕ್ರಿಕೆಟ್ ಕಣ್ಮಣಿ. 'ಹೆಣ್ಮಣಿ' ಎಂದರೆ ಉರಿದು ಬೀಳುತ್ತಾರೆ.

ಸ್ಮೃತಿ ಅಪ್ಪ ಶ್ರೀನಿವಾಸ್ ಮಂದಾನ ಸಾಂಗ್ಲಿ ಜಿಲ್ಲಾ ಮಟ್ಟದ ಕ್ರಿಕೆಟ್ ನಲ್ಲಿ ಹೆಸರುವಾಸಿ ಆಟಗಾರ. ಅಣ್ಣ ಶ್ರವಣ್ ರಣಜಿ ಆಡುವ ಕನಸು ಕಂಡ ಬ್ಯಾಟ್ಸ್‌ಮನ್. ಅವರು ಒಂದು ಕಾಲದಲ್ಲಿ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳ 19 ವರ್ಷದೊಳಗಿನವರ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ತನ್ನ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಯಶೋಗರಿಯನ್ನು ಸಿಕ್ಕಿಸಿಕೊಂಡಿದ್ದವರು. ಆದರೆ ಅಂದುಕೊಂಡಷ್ಟು ಎತ್ತರಕ್ಕೆ ಕ್ರಿಕೆಟ್‌ನಲ್ಲಿ ಬೆಳೆಯಲು ಆಗದೆ, ಬ್ಯಾಂಕ್ ವ್ಯವಸ್ಥಾಪಕರಾಗಿ ಕೆಲಸದ ನಿತ್ಯ ವ್ಯಾಪಾರಕ್ಕೆ ಒಗ್ಗಿಕೊಂಡರು. ತಾನು ಮಾಡಲು ಸಾಧ್ಯವಾಗದೇ ಹೋದದ್ದನ್ನು ತಂಗಿಯಿಂದ ಮಾಡಿಸಿದರು.

ಸ್ಮೃತಿ ಮೊದಲು ಅಪ್ಪ-ಅಣ್ಣನ ಜತೆ ಆಡಲು ಮೈದಾನಕ್ಕೆ ಹೋಗುತ್ತಿದ್ದಳು. ಚಿಕ್ಕ ಮಕ್ಕಳಿಗೆ ಹಾಕುವಂತೆ ಅಪ್ಪ ಆಗ ಅಂಡರ್ ಆರ್ಮ್ ಎಸೆತ ಹಾಕಿದರು. ಅಣ್ಣನಿಗೆ ಹಾಕುವಂತೆ ತನಗೂ ಜೋರಾಗಿ ಬೌಲಿಂಗ್ ಮಾಡುವಂತೆ ಬಾಲಕಿ ಪಟ್ಟು ಹಿಡಿದಳು. ಆಗ ಹದಿನೈದು ಯಾರ್ಡ್ ದೂರದಿಂದ ಶ್ರೀನಿವಾಸ್ ಬೌಲಿಂಗ್ ಮಾಡಿದರು. ಊಟ ಮಾಡುವಾಗ ಮನೆಯಲ್ಲಿ ಮಗಳ ನಿರ್ಭಿಡೆಯ ಬ್ಯಾಟಿಂಗ್‌ನದ್ದೇ ಮಾತು.

ಅಣ್ಣ ಎಲ್ಲಿ ಉತ್ತಮ ಸ್ಕೋರ್ ಗಳಿಸಿದರೂ ಮರುದಿನ ಸ್ಥಳೀಯ ಪತ್ರಿಕೆಗಳಲ್ಲಿ ಸುದ್ದಿಯಾಗುತ್ತಿತ್ತು. ಅಂಥ ಸುದ್ದಿ ತುಣುಕುಗಳನ್ನೆಲ್ಲ ಕತ್ತರಿಸಿ, ಒಪ್ಪವಾಗಿ ಅಂಟಿಸಿಡುವುದು ಸ್ಮೃತಿ ಹವ್ಯಾಸ. ಅವನ್ನು ನೋಡಿದಾಗಲೆಲ್ಲ ತಾನೂ ಕ್ರಿಕೆಟ್ ಆಡಿ ದೊಡ್ಡ ಸ್ಕೋರ್ ಮಾಡಬೇಕು ಎಂದು ಕನಸು ಕಟ್ಟಿಕೊಳ್ಳುತ್ತಿದ್ದಳು.

ಒಂದು ದಿನ ಅಪ್ಪನ ಬಳಿ ತನ್ನ ಆಸೆ ಹೇಳಿಕೊಂಡಾಗ ಅವರು ಬೆನ್ನು ತಟ್ಟಿದರು. ರಾಸಾಯನಿಕಗಳ ವಿತರಕರಾಗಿದ್ದ ಅಪ್ಪ ವಾರಾಂತ್ಯವನ್ನು ಮಗಳ ಕ್ರಿಕೆಟ್ ಅಭ್ಯಾಸಕ್ಕೆ ಮುಡಿಪಾಗಿಟ್ಟರು. ಮಹಾರಾಷ್ಟ್ರ ಜೂನಿಯರ್ ಕೋಚ್ ಆಗಿ ಜನಪ್ರಿಯರಾಗಿದ್ದ ಅನಂತ್ ತಾಂಬ್ ವೇಕರ್ ಅವರಿಂದ ಮಗಳಿಗೆ ಸಲಹೆಗಳನ್ನು ಕೊಡಿಸಿದರು. ದಿನವೂ ಬೆಳಿಗ್ಗೆ ಅಭ್ಯಾಸ ಮಾಡಿ ಶಾಲೆಗೆ ಹೋಗುವುದು, ಮತ್ತೆ ಸಂಜೆ ಅಭ್ಯಾಸ ಮುಂದುವರಿಸುವುದು ಸ್ಮೃತಿ ದಿನಚರಿ. ಶಾಲೆ ಬೇಗ ‘ಲೆಟ್ ಆಫ್’ ಆದರೂ ಮೈದಾನದತ್ತ ಮುಖಮಾಡುವುದು ಹುಡುಗಿಯ ಜಾಯಮಾನ.

ಕ್ರಿಕೆಟ್ ಆಟವನ್ನು ಇಷ್ಟು ಹಚ್ಚಿಕೊಂಡಿದ್ದರಿಂದಲೇ 9ರ ವಯಸ್ಸಿನಲ್ಲೇ 15 ವರ್ಷದೊಳಗಿನವರ ತಂಡಕ್ಕೆ ಆಯ್ಕೆಯಾದದ್ದು. 19 ವರ್ಷದೊಳಗಿನವರ ತಂಡ ಸೇರುವ ಅವಕಾಶ ಸಿಕ್ಕಾಗ ಇನ್ನೂ 11ರ ಹುಡುಗಿ.

ಎರಡು ವರ್ಷ 19 ವರ್ಷದೊಳಗಿನವರ ತಂಡದಲ್ಲಿ ಆಡುವ 11 ಹುಡುಗಿಯರಲ್ಲಿ ಒಬ್ಬಳಾಗುವ ಅದೃಷ್ಟ ಸಿಗದೇ ಇದ್ದಾಗಲೂ ಸ್ಮೃತಿ ಧೃತಿಗೆಡಲಿಲ್ಲ. ಅಂತರರಾಜ್ಯ ಕ್ರಿಕೆಟ್ ಟೂರ್ನಿಯಲ್ಲಿ ಗುಜರಾತ್ ಎದುರು ಏಕದಿನ ಪಂದ್ಯವೊಂದರಲ್ಲಿ 224 ರನ್ ದೋಚಿದ ಹುಡುಗಿ, ಕನಸು ಕಂಡಂತೆಯೇ ಸ್ಥಳೀಯ ಪತ್ರಿಕೆಗಳಲ್ಲಿ ಸುದ್ದಿಯಾದಳು.

ಸ್ಮೃತಿ ಬದುಕಿಗೆ ತಿರುವು ಸಿಕ್ಕ ವರ್ಷ 2014. ಎಸ್‌ಎಸ್‌ಎಲ್‌ಸಿ ಮುಗಿಸಿ ಅಮ್ಮನ ಬಯಕೆಯಂತೆ ವಿಜ್ಞಾನ ಓದಬೇಕು ಎಂದುಕೊಳ್ಳುತ್ತಿ ದ್ದಾಗಲೇ ಭಾರತ ಅಂತರರಾಷ್ಟ್ರೀಯ ತಂಡದ ಪರ ಆಡುವ ಅವಕಾಶ ಬಂತು. ಬಾಂಗ್ಲಾದೇಶದಲ್ಲಿ ಟಿ20 ವಿಶ್ವಕಪ್ ಆಡಿ ಅನುಭವ ಪಡೆದು ಬಂದ ಸ್ಮೃತಿ, ಇಂಗ್ಲೆಂಡ್ ಎದುರು ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಪಡೆದರು.

2014ರ ಆಗಸ್ಟ್ ನಲ್ಲಿ ಬಕಿಂಗ್‌ಹ್ಯಾಮ್ ಷೈರ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 51 ರನ್ ಕಲೆಹಾಕಿದ ಮಹಾರಾಷ್ಟ್ರದ ಎಡಗೈ ಬ್ಯಾಟ್ಸ್‌ವುಮನ್ ತಂಡದ ಗೆಲುವಿಗೆ ಕಾರಣರಾದರು. 8 ವರ್ಷದ ನಂತರ ಭಾರತಕ್ಕೆ ಸಿಕ್ಕ ಟೆಸ್ಟ್ ಆಡುವ ಅವಕಾಶ ಅದಾಗಿತ್ತು. ಸ್ಮೃತಿ ಚೊಚ್ಚಲ ಟೆಸ್ಟ್ ಸ್ಮರಣೀಯವಾಗಲು ಇವೆಲ್ಲ ಕಾರಣಗಳು.

ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಿ ಅಲ್ಲೂ ಒಂದು ಶತಕ ದಾಖಲಿಸಿದ್ದು ಇನ್ನೊಂದು ಸಾಧನೆ. ಅಲ್ಲಿಗೆ ಹೋಗುವ ಮೊದಲು ಅಭ್ಯಾಸ ಮಾಡಿದ ರೀತಿಯೂ ಆಸಕ್ತಿಕರ. ಟೆನಿಸ್ ಬಾಲ್‌ಗಳನ್ನು ನೀರಿನಲ್ಲಿ ನೆನೆಸಿ, ಬೌಲರ್‌ಗಳಿಗೆ ಎಸೆತಗಳನ್ನು ಹಾಕುವಂತೆ ಸ್ಮೃತಿ ತಾಕೀತು ಮಾಡಿದ್ದರು. ತಾನು ಉಳಿಸಿದ ಹಣದಲ್ಲಿ ಕಾಂಕ್ರೀಟ್ ಪಿಚ್ ನಿರ್ಮಿಸಿಕೊಂಡು ಅಭ್ಯಾಸ ಮಾಡಿದ್ದು ಇನ್ನೊಂದು ಕಥೆ.

ಈಗ ನಡೆಯುತ್ತಿರುವ ಮಹಿಳೆಯರ ವಿಶ್ವಕಪ್ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಔಟಾಗದೆ ಶತಕ ಗಳಿಸಿದ ಸ್ಮೃತಿ, ಇಷ್ಟೆಲ್ಲ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದರು.

ಪ್ರತಿಕ್ರಿಯಿಸಿ (+)