ಶನಿವಾರ, ಡಿಸೆಂಬರ್ 7, 2019
16 °C

ಹುಷಾರ್‌! ಸಂಜನಾ ಬದಲಾಗಿದ್ದಾಳೆ...

Published:
Updated:
ಹುಷಾರ್‌! ಸಂಜನಾ ಬದಲಾಗಿದ್ದಾಳೆ...

* ಸಂಜನಾ ಬದಲಾಗಿದ್ದಾರೆ ಅಂತಾರೆ. ಹೌದಾ?

ನಿಜ, ಬಿಗ್‌ಬಾಸ್‌ನಿಂದ ಹೊರಗೆ ಬಂದ ನಂತರ ನಾನು ಸಾಕಷ್ಟು ಬದಲಾಗಿದ್ದೇನೆ. ಬದುಕನ್ನು ಪರಿಚಯಿಸಿದ ಪಾಠಶಾಲೆ ಅದು. ಬದುಕನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬುದು ಹೊರಗೆ ಬಂದ ಮೇಲೆ ಅರ್ಥವಾಗಿದ್ದು. ಯಾರು ಕಾಲೆಳೆದರೂ, ಜತೇಲೇ ಕುಳಿತು ನನ್ನ ಬಗ್ಗೆಯೇ ಟಾಂಗ್ ಕೊಟ್ಟರೂ ಅರ್ಥ ಅಗ್ತಿರಲಿಲ್ಲ. ಒಂದೋ ನಗ್ತಿದ್ದೆ ಇಲ್ಲವೇ ಎದ್ದುಹೋಗ್ತಿದ್ದೆ.

*ಈಗ ಹಾಗೆ ಮಾಡಿದರೆ?

ಹೇಗೆ ವಾಪಸ್ ಕೊಡ್ತೀನಿ ಗೊತ್ತಾ? ಯಾವ ಮಾತಿನ ಹಿಂದೆ ಏನು ನಿಗೂಢ ಇದೆ ಎಂಬುದನ್ನು ಈಗ ಸುಲಭವಾಗಿ ಅರ್ಥ ಮಾಡಿಕೊಳ್ಳಬಲ್ಲೆ. ಈ ಸಂಜನಾ ಬದಲಾಗಿದ್ದಾಳೆ ಹುಷಾರ್!

*ಭುವನ್ ಜತೆ ತುಂಬಾ ಆತ್ಮೀಯವಾಗಿದ್ರಿ. ಸಂಜು ಮತ್ತು ನಾನು ಧಾರಾವಾಹಿಯಲ್ಲಿ ನಿಮ್ಮ ಮದುವೆ ಸನ್ನಿವೇಶವೂ ನಡೆದಿದೆ. ಈಗ ಭುವನ್ ಬಗ್ಗೆ ನಿಮ್ಮ ಅಭಿಪ್ರಾಯ ಏನಿದೆ?

ನಿಜ ಹೇಳ್ಲಾ? ಅವನು ಮತ್ತು ನಾನು ಒಳ್ಳೆಯ ಸ್ನೇಹಿತರಾಗಿದ್ದಿದ್ದು ನಿಜ. ಪ್ರೀತಿ ಪ್ರೇಮ ಅಂತೆಲ್ಲಾ ಮಾತೂ ಬಂದಿದ್ದು ನಿಜ. ಆದರೆ ಅಂಥಾದ್ದು ಏನೂ ಇಲ್ಲ. ನಾವೀಗ ಸ್ನೇಹಿತರಾಗಿಯೂ ಉಳಿದಿಲ್ಲ.

*ಸಂಜು ಮತ್ತು ನಾನು ಅದೇ ರಿಯಾಲಿಟಿ ಶೋದ ಮುಂದುವರಿದ ಭಾಗ. ಸಹಕಲಾವಿದರೂ ಅವರೇ...

ಆ ಶೋ ಇರೋದೇ ಹಾಗೆ. ಅದರಲ್ಲಿ ಭುವನ್ ಮತ್ತು ಪ್ರಥಮ್ ಕೂಡಾ ಕಲಾವಿದರು ಅಷ್ಟೇ. ಯಾವುದೇ ಸನ್ನಿವೇಶದಲ್ಲಾದರೂ ಜತೆಯಾಗಿ ನಟಿಸಬೇಕು, ನಟಿಸ್ತೇನೆ ಅಷ್ಟೇ.

*ನಿಮ್ಮ ‘ಬಾರ್ಬಿ ಡಾಲ್‌’ ನೋಟವೂ ಮುಂದುವರಿದಿದೆ!

ಹ್ಹಿಹ್ಹಿಹ್ಹಿ.. ಹೌದು... ನಂಗೂ ಅದೇ ಡ್ರೆಸ್‌ಗಳು ಇಷ್ಟ. ನನ್ನಲ್ಲಿ ಇರೋದೂ ಅಂಥವೇ ಉಡುಪುಗಳು.ಅದಕ್ಕಿಂತ ಮುಖ್ಯವಾಗಿ ‘ಸಂಜು ಮತ್ತು...’ ಕನ್ನಡ ಕಿರುತೆರೆಯಲ್ಲಿ ಮೊದಲ ಪ್ರಯತ್ನ. ಹಾಗಾಗಿ ಅದನ್ನು ಟ್ರೆಂಡ್‌ ಸೆಟ್ಟರ್‌ ಅಂತಾರಲ್ಲ ಹಾಗೆ ಚಿತ್ರೀಕರಣ ಮಾಡುತ್ತಿದ್ದಾರೆ. ನನ್ನ ಪಾತ್ರವನ್ನೂ ಹಾಗೇ ವಿಲಾಸಿಯಾಗಿ ಕಟ್ಟಿಕೊಟ್ಟಿದ್ದಾರೆ. ನನ್ನ ಉಡುಗೆ ತೊಡುಗೆ ಎಲ್ಲವನ್ನೂ ಅವರೇ ಒದಗಿಸುತ್ತಿದ್ದಾರೆ.

*ಲಿಪ್‌ಸ್ಟಿಕ್‌ ಸ್ವಲ್ಪ ಜಾಸ್ತಿಯಾಗಿಲ್ವೇ?

ಅಯ್ಯೋ ಈ ಮೇಕಪ್‌ಗೆ ಕೂರೋದಂದ್ರೆ ನಂಗೆ ದೊಡ್ಡ ಕಿರಿಕಿರಿ. ಮಾಯಿಶ್ಚರೈಸರ್‌, ಕಾಜಲ್‌ ಮತ್ತು ಲಿಪ್‌ಸ್ಟಿಕ್‌ ಇದ್ದರೆ ನನ್ನ ಮೇಕಪ್‌ ಮುಗೀತಿತ್ತು. ಈಗ ಗಂಟೆಗಟ್ಟಲೆ ಮೇಕಪ್‌ಮ್ಯಾನ್‌ ಮುಂದೆ ಕೂರಬೇಕು. ಇಡೀ ದಿನ ಚಿತ್ರೀಕರಣದಲ್ಲಿ ಪಾಲ್ಗೊಂಡರೂ ಸುಸ್ತು ಅನಿಸೋದಿಲ್ಲ. ಮೇಕಪ್‌ಗೆ ಕೂರೋಕ್ಕೂ ಮೊದಲೇ ಸುಸ್ತಾಗುತ್ತದೆ ಹ್ಹಹ್ಹಹ್ಹ...

*ನೀವು ಬೇಬಿ ಲೋಶನ್‌ ಮಾತ್ರ ಬಳಸೋದಂತೆ?

ಹೌದು! ಅದರಲ್ಲಿ ಹೆಚ್ಚು ರಾಸಾಯನಿಕ ಇರುವುದಿಲ್ಲ ಎಂಬ ಕಾರಣಕ್ಕೆ ವೈದ್ಯರೂ ಅದನ್ನೇ ಹಚ್ಚಿ ಅಂದ್ರಪ್ಪಾ ಮೇಕಪ್‌ ಹಾಕೋಕ್ಕೂ ಮುಂಚೆ ಪ್ರಿ ಮೇಕಪ್‌ ಲೋಷನ್‌ ಹಚ್ಚಿಕೊಂಡ್ರೆ ಆಮೇಲೆ ತೆಗೆಯಲು ಕ್ಲೆನ್ಸಿಂಗ್‌ ಮಿಲ್ಕ್‌ ಬಳಸ್ತೀನಿ. ನಂತರ ಬೇಬಿ ಲೋಶನ್‌ ಹಚ್ಕೋತೀನಿ.

*‘ಸಂಜೂ’ನಲ್ಲಿ ಮೂವರು ನಿಮ್ಮ ಬೆನ್ನು ಬಿದ್ದಿದ್ದಾರಲ್ಲ? ಈ ಮೂವರಲ್ಲಿ ಯಾವ ವ್ಯಕ್ತಿತ್ವ ನಿಜ ಜೀವನದ ಹೀರೊ ಆಗಬೇಕು ಅಂತೀರಿ?

ಅಯ್ಯೋ ಯಾರೂ ಬೇಡಪ್ಪಾ.. ಅದೆಲ್ಲಾ ತೆರೆಯಲ್ಲಿ ನೋಡಲು ಚಂದ. ಭುವನ್‌ ಅನ್ನೋ ಪಾತ್ರ ಪ್ರೀತಿಯಲ್ಲಿ ಸ್ವಲ್ಪವೂ ಪ್ರೌಢವಾಗಿಲ್ಲ. ಪ್ರಥಮ್‌ ಅಂತೂ... ನೋ ವೇ... ಕಾರ್ತಿಕ್‌ ಇನ್ನಿಬ್ಬರನ್ನು ಕೊಲೆ ಮಾಡಿಯಾದರೂ ನನ್ನನ್ನು ಪಡೆಯಬೇಕು ಎಂಬಷ್ಟು ಕ್ರೂರಿಯಾಗಿರ್ತಾನೆ. ಆ ರೀತಿಯೆಲ್ಲಾ ನಿಜಜೀವನದಲ್ಲಿ ಆದರೆ ಬದುಕಿಗೆ ಏನೂ ಅರ್ಥ ಇರೋದಿಲ್ಲ.

* ಹಾಗಿದ್ದರೆ ನೀವು ಮದುವೆಯಾಗುವ ಹುಡುಗ ಹೇಗಿರಬೇಕು?

ನನ್ನನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಅಷ್ಟೇ. ಯಾವ ರೀತಿಯ ಹೀರೊಯಿಸಂ ಕೂಡಾ ನಿಜಜೀವನಕ್ಕೆ ಅಗತ್ಯವಿಲ್ಲ.

* ಬಿಗ್‌ಬಾಸ್‌ನಿಂದ ಹೊರಬಂದ ಮೇಲೆ ನಿಮ್ಮ ಬಗ್ಗೆ ಬಂದ ಟ್ರೋಲ್‌ಗಳನ್ನು ನೋಡಿದ್ರಾ?

ಹೌದು ನೋಡಿದ್ದೆ. ಅವುಗಳೆಲ್ಲವೂ ಆ ಶೋನಲ್ಲಿ ನೋಡಿದ ಸಂಜನಾ ಮೇಲಿನ ಅಪಹಾಸ್ಯಗಳು. ಅವುಗಳಿಗೆ ನಾನು ಪ್ರತಿಕ್ರಿಯಿಸಲಿಲ್ಲ. ಬದಲಾಗಿ ನನ್ನನ್ನು ನಾನು ಬದಲಾಯಿಸಿಕೊಂಡೆ. ಅದಕ್ಕೇ ಹೇಳಿದ್ದು ನಾನು ಈಗ ಹೊಸ ಸಂಜನಾ ಅಂತ.

* ಹಾಗಿದ್ದರೆ ಅಮ್ಮನ ತೋಳಿನಿಂದಲೂ ಹೊರಬಂದಿದ್ದೀರಿ.

ಈಗ ಅಮ್ಮನನ್ನು ಎಷ್ಟು ಬೇಕೋ ಅಷ್ಟು ಮಾತ್ರ ಅವಲಂಬಿಸ್ತೀನಿ. ಮುಂಚಿನ ಹಾಗೆ ಇಲ್ಲ. ಅಡುಗೆಯೂ ಅಲ್ಪಸ್ವಲ್ಪ ಕಲಿತಿದ್ದೀನಿ.

*ಟಾಲಿವುಡ್‌ಗೆ ಹೋಗ್ತೀರಿ ಅಂತ ಸುದ್ದಿಯಿದೆ?

ಬಾಲಿವುಡ್‌ನಿಂದಲೂ ಅವಕಾಶಗಳು ಬಂದಿವೆ. ತಮಿಳು ಮತ್ತು ತೆಲುಗಿನಿಂದ ಧಾರಾವಾಹಿಗಳಿಗೆ ಮತ್ತು ಸಿನಿಮಾಗಳಿಗೆ ಕರೆ ಬಂದಿದೆ. ಆದರೆ ನನ್ನ ಆಯ್ಕೆ ಕನ್ನಡ.

ಪ್ರತಿಕ್ರಿಯಿಸಿ (+)