ಶುಕ್ರವಾರ, ಡಿಸೆಂಬರ್ 6, 2019
19 °C

ಬಾಲಿವುಡ್‌ ಮಂದಿಯ ಕೃಷಿ ಪ್ರೀತಿ

Published:
Updated:
ಬಾಲಿವುಡ್‌ ಮಂದಿಯ ಕೃಷಿ ಪ್ರೀತಿ

ಬೇಸರ ಕಳೆಯಲು ಫಾರ್ಮ್‌ ಹೌಸ್‌ ಕಡೆ ಪಯಣ ಬೆಳೆಸುವುದು ಕೆಲವು ಬಾಲಿವುಡ್‌ ನಟ, ನಟಿಯರ ಅಭ್ಯಾಸ. ಮನಕ್ಕೆ ಮುದ ನೀಡುವ ಹಸಿರಿನ ನಡುವೆ ಕಳೆದುಹೋಗುವ ಕೆಲವರು, ಬೆಳೆ ಬೆಳೆಯುವ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ಸಾವಯವ ಕೃಷಿ ಪದ್ಧತಿಯಲ್ಲಿಯೇ ಬೆಳೆ ಬೆಳೆಯುವ ಕೆಲವು ಬಾಲಿವುಡ್‌ ಮಂದಿಯ ಬಗ್ಗೆ ಇಲ್ಲಿದೆ ಮಾಹಿತಿ.

ಅಜಯ್‌ ದೇವಗನ್‌: ಇವರಿಗೆ ಬಿಡುವಿನ ವೇಳೆಯನ್ನು ಫಾರ್ಮ್‌ ಹೌಸ್‌ನಲ್ಲಿ ಕಳೆಯುವುದೆಂದರೆ ತುಂಬಾ ಇಷ್ಟ. 28 ಎಕರೆ ಜಮೀನಿನಲ್ಲಿ ಪಪ್ಪಾಯಿ, ಬಾಳೆಹಣ್ಣು, ಕೇಸರಿ, ಮಾವಿನ ಹಣ್ಣು ಬೆಳೆಯುತ್ತಾರೆ. ರಾಯಘಡ ಜಿಲ್ಲೆಯ ಮಾವಿನ ಹಣ್ಣಿನ ಸ್ಪರ್ಧೆಯಲ್ಲಿ ಅಜಯ್‌ ಬೆಳೆದ ಮಾವಿನ ಹಣ್ಣಿಗೆ ಮೂರು ಬಾರಿ ಪ್ರಶಸ್ತಿ ಲಭಿಸಿದೆ. ಹಲವು ತರಕಾರಿಗಳನ್ನೂ ಬೆಳೆಯುತ್ತಾರೆ. ‘ನಾನು ಬ್ಯುಸಿಯಾಗಿರುವುದರಿಂದ ಪ್ರತಿದಿನ ತೋಟದ ಕಡೆ ಗಮನ ನೀಡಲು ಆಗುವುದಿಲ್ಲ. ಆದರೆ ಬಿಡುವು ಸಿಕ್ಕಾಗಲೆಲ್ಲ ಕೃಷಿ ಭೂಮಿಯಲ್ಲಿ ಕೈಯಾಡಿಸುತ್ತೇನೆ’ ಎನ್ನುತ್ತಾರೆ ಅಜಯ್‌.

ನಾನಾ ಪಾಟೇಕರ್‌: ಇವರು ದಿನದ ಬಹುಪಾಲು ಪುಣೆಯಲ್ಲಿರುವ ತಮ್ಮ ಕೃಷಿ ಭೂಮಿಯಲ್ಲಿಯೇ ಕಳೆಯುತ್ತಾರೆ. ಅಕ್ಕಿ, ಗೋಧಿ, ಕಾಬೂಲ್‌ ಕಡಲೆ ಬೆಳೆಯುತ್ತಾರೆ. ಇದನ್ನು ಮಾರಾಟ ಮಾಡಿ ಬಂದ ಹಣವನ್ನು ಕೃಷಿಕರಿಗೆ ನೀಡುತ್ತಾರೆ. ಇದರ ಜೊತೆಗೆ ಆಡು, ಕೋಣಗಳನ್ನು ಸಾಕುತ್ತಾರೆ.

ಬಾಬಿ ದೇವಲ್‌: ಬಾಬಿ ಸಿನಿಮಾ ಬಿಟ್ಟು ಕೃಷಿಕನಾಗುತ್ತಿದ್ದಾನೆ ಎಂಬ ಸುದ್ದಿ ಕೂಡ ಇತ್ತು. ಅಷ್ಟರ ಮಟ್ಟಿಗೆ ಫಾರ್ಮ್‌ ಹೌಸ್‌ನಲ್ಲಿಯೇ ಇವರು ಕಾಲ ಕಳೆಯುತ್ತಿದ್ದರಂತೆ. ಫಾರ್ಮ್‌ ಹೌಸ್‌ನಲ್ಲಿ ಇವರು ಸುಮ್ಮನೆ ಕುಳಿತುಕೊಳ್ಳುತ್ತಿರಲಿಲ್ಲ. ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದೆಂದರೆ ನನಗೆ ತುಂಬಾ ಇಷ್ಟ. ನಾವೇ ಬೆಳೆದ ಬೆಳೆಯನ್ನು ತಿನ್ನುವುದರ ಸಂಭ್ರಮವೇ ಬೇರೆ ಎಂದು ಇವರು ಹೇಳಿಕೊಂಡಿದ್ದರು. ಇತ್ತೀಚೆಗೆ ಇವರ ಹುಟ್ಟುಹಬ್ಬವನ್ನು ಫಾರ್ಮ್‌ಹೌಸ್‌ನಲ್ಲಿಯೇ ಆಚರಿಸಿಕೊಂಡಿದ್ದರು.

ಸಲ್ಮಾನ್‌ ಖಾನ್‌: ಕೆಲಸ ಒತ್ತಡ ಎನಿಸಿದಾಗಲೆಲ್ಲ ಬಾಲಿವುಡ್‌ ಬಾಯ್‌ ಕಾರನ್ನೇರಿ ಫಾರ್ಮ್‌ ಹೌಸ್‌ಗೆ ಪಯಣ ಬೆಳೆಸುತ್ತಾರೆ. ಇವರು ತಮ್ಮ ಫಾರ್ಮ್‌ ಹೌಸ್‌ನಲ್ಲಿ ಕಿಚನ್‌ ಗಾರ್ಡನಿಂಗ್‌ ಮಾಡಿದ್ದಾರೆ. ಟೊಮೆಟೊ, ಕುಂಬಳಕಾಯಿ ಸೇರಿದಂತೆ ಹಲವು ತರಕಾರಿಗಳನ್ನು ಅವರು ಇಲ್ಲಿ ಬೆಳೆಯುತ್ತಾರೆ. ತರಕಾರಿ ಬೆಳೆಯುವುದರ ಜೊತೆಗೆ ಸ್ನೇಹಿತರಿಗೆ ಇದರಿಂದ ತಯಾರಿಸಿದ ಆಹಾರವನ್ನು ಉಣಬಡಿಸುವುದೆಂದರೆ ಇವರಿಗೆ ಬಲು ಇಷ್ಟ.

ಇರ್ಫಾನ್‌ ಖಾನ್‌: ಅದ್ಭುತ ನಟನೆಯಿಂದಲೇ ಜನಪ್ರಿಯರಾಗಿರುವ ಇರ್ಫಾನ್‌ಗೆ ಹಸಿರಿನ ಒಡನಾಟ ಪ್ರಿಯವಂತೆ. ಈ ಕಾರಣಕ್ಕೆ ಚಿಕ್ಕ ವಯಸ್ಸಿನಿಂದಲೇ ಇವರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಸ್ವಂತ ಊರಿನ ಸಮೀಪವೇ ಇವರು ಸುಂದರವಾದ ಫಾರ್ಮ್‌ ಹೌಸ್‌ ಖರೀದಿಸಿದ್ದಾರೆ. ಇಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಇವರು ಬೆಳೆಯುತ್ತಾರೆ.

ಕತ್ರೀನಾ ಕೈಫ್‌: ಸಿನಿ ರಂಗದಲ್ಲಿ ಬ್ಯುಸಿಯಾಗಿರುವ ಕತ್ರೀನಾಗೆ ಪುಟ್ಟ ತೋಟ ಮಾಡುವ ಆಸೆಯಿದೆಯಂತೆ. ಇತ್ತೀಚೆಗಷ್ಟೇ ಕತ್ರೀನಾ ಕೈಯಲ್ಲಿ ಕ್ಯಾರೆಟ್‌ ಹಿಡಿದುಕೊಂಡ ಚಿತ್ರವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ‘ನೀವೂ ಕ್ಯಾರೆಟ್‌ ಬೆಳೆಯಿರಿ’ ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ. ತಮ್ಮ ಮನೆಯ ಬಾಲ್ಕನಿಯ ಕೈತೋಟದಲ್ಲಿ ಇವರು ಕ್ಯಾರೆಟ್‌ ಬೆಳೆದಿದ್ದಾರೆ.

ಶಿಲ್ಪಾ ಶೆಟ್ಟಿ: ಸಾವಯವ ಗೊಬ್ಬರದಿಂದ ತರಕಾರಿಗಳನ್ನು ಹಾಗೂ ಹಣ್ಣುಗಳನ್ನು ಹೇಗೆ ಬೆಳೆಯಬೇಕು ಎಂಬುದನ್ನು ಶಿಲ್ಪಾ ಕಲಿಯುತ್ತಿದ್ದಾರಂತೆ. ಶಿಲ್ಪಾ ತನ್ನ ನಿವಾಸದ ಉದ್ಯಾನದಲ್ಲಿ ಇವರು ಬೆಳೆಯುತ್ತಾರೆ. ಶಿಲ್ಪಾ ಸಹೋದರಿ ಶಮಿತಾ ಕೂಡ ತರಕಾರಿ ಬೆಳೆಯಲು ಇವರಿಗೆ ನೆರವಾಗುತ್ತಾರೆ.

ಪ್ರತಿಕ್ರಿಯಿಸಿ (+)