ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನಕ್ಕೇರಿದ ಟೊಮೆಟೊ ದರ: ಜನ ಕಂಗಾಲು

ಸಂತೆಯಲ್ಲಿ ಒಂದು ಕೆ.ಜಿ.ಗೆ ₹ 70ರಂತೆ ಮಾರಾಟ: ಗ್ರಾಹಕರಿಗೆ ಹೆಚ್ಚಿನ ಹೊರೆ, ಬೆಳೆಗಾರರಲ್ಲಿ ಮಂದಹಾಸ
Last Updated 10 ಜುಲೈ 2017, 11:26 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಮಾರುಕಟ್ಟೆಯಲ್ಲಿ ಟೊಮೆಟೊ ದರ ತೀವ್ರ ಏರಿಕೆ ಕಂಡಿದೆ. ಬೆಳೆಗಾರರ ಮೊಗದಲ್ಲಿ ಇದು ಮಂದ­ಹಾಸ ಮೂಡಿಸಿದ್ದರೆ, ಬೆಲೆ ಹೆಚ್ಚಳದಿಂದ ಗ್ರಾಹಕರು ಮಾತ್ರ ಕಂಗಾಲಾಗಿದ್ದಾರೆ.

ಕಳೆದ ಭಾನುವಾರದ ಸಂತೆಯಲ್ಲಿ ಟೊಮೆಟೊ ಒಂದು ಕೆ.ಜಿ.ಗೆ ₹ 50ರಂತೆ ಮಾರಾಟವಾಗಿತ್ತು. ಆದರೆ ಈ ವಾರ ₹ 70ರ ಗಡಿ ತಲುಪಿದೆ. ಇದು ಬಡ ಹಾಗೂ ಮಧ್ಯಮ ವರ್ಗದ ಜನರನ್ನು ಕಂಗೆಡಿ­ಸಿದೆ. ಇಲ್ಲಿನ ಸಂತೆಗೆ ಹಾವೇರಿ, ಬಾಗಲ­ಕೋಟೆ, ಧಾರವಾಡ ಜಿಲ್ಲೆಗಳಿಂದ ಹಣ್ಣು, ಸೊಪ್ಪು ಹಾಗೂ ತರಕಾರಿಗಳು ಬರುತ್ತವೆ. ಆದರೆ ಈ ಬಾರಿ ಟೊಮೆಟೊ ಆವಕವೂ ಕಡಿಮೆಯಾಗಿದ್ದು, ಬೆಲೆಯೂ ದುಬಾರಿ­ಯಾಗಿದೆ. ಹೀಗಾಗಿ ಹೋಟೆಲ್‌ಗಳ ಮಾಲೀಕರು ಆಹಾರ ಪದಾರ್ಥಗಳಿಗೆ ಟೊಮೆಟೊ ಬಳಕೆಯನ್ನು ಕಡಿಮೆ ಮಾಡಿ­ದ್ದಾರೆ. ಇನ್ನು ಮನೆಗಳಲ್ಲೂ ಟೊಮೆಟೊ ಬದಲಾಗಿ ಹುಣಸೆ ಹಣ್ಣು ಹೆಚ್ಚಾಗಿ ಬಳಕೆಯಾಗುತ್ತಿದೆ.

ಖರೀದಿಗೆ ಹಿಂದೇಟು!: ಬೆಲೆ ಏರಿಕೆ­ಯಿಂದಾಗಿ ಟೊಮೆಟೊ ಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಆಹಾರ ಪದಾರ್ಥಗಳ ತಯಾರಿಕೆಗೆ ಟೊಮೆಟೊ ಅಗತ್ಯವಾಗಿರುವುದರಿಂದ ಜನರು ಸ್ವಲ್ಪ ಪ್ರಮಾಣದಲ್ಲಿ ಖರೀದಿ­ಸುತ್ತಿದ್ದಾರೆ. ಸಾಮಾನ್ಯವಾಗಿ 2–3 ಕೆ.ಜಿ. ಖರೀದಿಸುತ್ತಿದ್ದ ಜನರು, ಇದೀಗ ಕಾಲು, ಅರ್ಧ ಕೆ.ಜಿ. ಖರೀದಿಗೆ ಸೀಮಿತವಾಗಿದ್ದಾರೆ.

ಇಳುವರಿ ಕಡಿಮೆ: ‘ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಈ ಬಾರಿ ಮಳೆ ಕೊರತೆ ತೀವ್ರವಾಗಿದೆ. ಹೀಗಾಗಿ ಟೊಮೆಟೊ ಇಳುವರಿ ಕುಸಿದಿದೆ. ಕೊಳವೆಬಾವಿ ನೀರಿನಲ್ಲಿ ಬೆಳೆದ ಟೊಮೆಟೊ ಮಾತ್ರ ಮಾರುಕಟ್ಟೆಗೆ ಬರುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ನಾವೇ ಕೆ.ಜಿ. ₹ 60 ಕೊಟ್ಟು ಖರೀದಿಸಿದ್ದು, ಇಲ್ಲಿ ಕೆ.ಜಿ.ಗೆ ₹ 70ರಂತೆ ಮಾರಾಟ ಮಾಡುತ್ತಿದ್ದೇವೆ. ದೂರದ ಊರುಗಳಿಂದ ವ್ಯಾಪಾರ ಮಾಡಲು ಬಂದ ನಮಗೆ ಕನಿಷ್ಠ ₹ 10 ಲಾಭ ಬೇಡವೇ?’ ಎನ್ನುತ್ತಾರೆ ವ್ಯಾಪಾರಿ ಕುಷ್ಟಗಿಯ ವೆಂಕಟೇಶ.

ಸ್ವಲ್ಪ ಖರೀದಿ: ‘ಟೊಮೆಟೊ ಬೆಲೆಯನ್ನು ಕೇಳಿ ಬೆಚ್ಚಿಬೀಳುವಂತಾಗಿದೆ. ಕಳೆದ ವರ್ಷವೂ ಇದರ ದರ ₹ 100ರ ಆಸುಪಾಸಿನಲ್ಲಿತ್ತು. ಚೌಕಾಸಿ ಮಾಡಿ­ದರೂ ವ್ಯಾಪಾರಸ್ಥರು ಕಡಿಮೆ ಮಾಡ­ಲಿಲ್ಲ. ಸಾಂಬಾರು ಹಾಗೂ ಇನ್ನಿತರ ಆಹಾರ ಪದಾರ್ಥಗಳಿಗೆ ಹಿಂದಿನಿಂದಲೂ ಟೊಮೆಟೊ ಬಳಸು­ತ್ತಿದ್ದೇವೆ. ಹೀಗಾಗಿ ಅನಿವಾರ್ಯದಿಂದ ಸಂತೆಯಲ್ಲಿ ಒಂದು ಕೆ.ಜಿ. ಮಾತ್ರ ಖರೀದಿಸಿದೆ’ ಎನ್ನುತ್ತಾರೆ ಸಂಕ್ರಿವಾಡದ ನಿವಾಸಿ ಪದ್ಮಾ.

***

ತರಕಾರಿಗಳ ಬೆಲೆಯಲ್ಲಿ ತುಸು ಏರಿಕೆ
ಸಂತೆಯಲ್ಲಿ ತರಕಾರಿಗಳ ಬೆಲೆ ತುಸು ಏರಿಕೆಯಾಗಿದೆ. ಬೀನ್ಸ್‌ ಒಂದು ಕೆ.ಜಿ.ಗೆ ₹ 60, ಬದನೆಕಾಯಿ ₹ 60, ದೊಡ್ಡ ಮೆಣಸಿನಕಾಯಿ ₹ 80, ಬೆಂಡೆಕಾಯಿ ₹ 40 ಹೀಗೆ ಹಲವು ತರಕಾರಿಗಳ ದರ ಹೆಚ್ಚಳವಾಗಿದ್ದರೆ, ಸೊಪ್ಪುಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT