ಬುಧವಾರ, ಡಿಸೆಂಬರ್ 11, 2019
24 °C
ಅಕ್ರಮ ಸಕ್ರಮ ಹಕ್ಕುಪತ್ರ ವಿತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಹೇಳಿಕೆ

ಸಹಕಾರಿ ಸಂಘಗಳಿಗೆ ಶೀಘ್ರ ಸಾಲ ಮನ್ನಾ ಮೊತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಹಕಾರಿ ಸಂಘಗಳಿಗೆ ಶೀಘ್ರ ಸಾಲ ಮನ್ನಾ ಮೊತ್ತ

ಶಿರಸಿ: ರಾಜ್ಯ ಸರ್ಕಾರ ₹ 50,000 ವರೆಗಿನ ರೈತರ ಬೆಳೆ ಸಾಲ ಮನ್ನಾ ಮಾಡಿರುವುದರಿಂದ ಸಹಕಾರಿ ಸಂಘ ಗಳಿಗೆ ಉಂಟಾಗಿರುವ ಆರ್ಥಿಕ ಹೊರೆ ನಿವಾರಿಸಲು ಮನ್ನಾ ಮಾಡಿರುವ ಮೊತ್ತ ವನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸಲು ಕ್ರಮವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಕಂದಾಯ ಇಲಾಖೆ ಮತ್ತು ಆರೋಗ್ಯ ಇಲಾಖೆ ಜಂಟಿ ಆಶ್ರಯದಲ್ಲಿ ಭಾನುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಭಾಗಗಳ ₹ 13.76 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ನಂತರ 94ಸಿ, 94ಸಿಸಿ ಅಡಿಯಲ್ಲಿ ಫಲಾನುಭವಿಗಳಿಗೆ ಅಕ್ರಮ ಸಕ್ರಮ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

ಸಾಲ ಮನ್ನಾ ಸೌಲಭ್ಯದಿಂದ ಜಿಲ್ಲೆಯ 82ಸಾವಿರ ರೈತರ ₹ 323 ಕೋಟಿ ಮೊತ್ತದ ಸಾಲ ಮನ್ನಾ ಆಗಲಿದೆ. ರೈತರು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮಾಡಿರುವ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕು ಎಂದರು.

ಹೊಸದಾಗಿ ನಿರ್ಮಿಸಿರುವ ರಸ್ತೆಗಳನ್ನು ಗುತ್ತಿಗೆದಾರರು ಐದು ವರ್ಷಗಳವರೆಗೆ ನಿರ್ವಹಣೆ ಮಾಡ ಬೇಕು. ಕೆಲವೊಮ್ಮೆ ಗುತ್ತಿಗೆದಾರರು ಮೋಸ ಮಾಡುತ್ತಾರೆ. ರಸ್ತೆ ನಿರ್ಮಿಸು ವಾಗ ಸ್ಥಳೀಯ ಜನರು, ಜನ ಪ್ರತಿನಿಧಿಗಳು ಗುಣಮಟ್ಟದ ಬಗ್ಗೆ ನಿಗಾವಹಿಸಬೇಕು ಎಂದು ಹೇಳಿದರು.

‘50ಸಾವಿರಕ್ಕೂ ಮಿಕ್ಕಿ ಜನಸಂಖ್ಯೆ ಇರುವ ನಗರಗಳಿಗೆ ಆರೋಗ್ಯ ಕೇಂದ್ರ ಮಂಜೂರು ಮಾಡಲಾಗಿದೆ. ಶಿರಸಿ ಯಲ್ಲೂ ಇಂತಹುದೊಂದು ಕೇಂದ್ರ ಆರಂಭಗೊಂಡಿದೆ. ಇದು ಕಾಂಗ್ರೆಸ್‌ ಸರ್ಕಾರದ ಕಾರ್ಯಕ್ರಮವಾಗಿದೆ. ಜನರಿಗೆ ತಪ್ಪು ಮಾಹಿತಿ ನೀಡಿ ಅವರನ್ನು ಕತ್ತಲೆಯಲ್ಲಿರುವ ಕೆಲಸ ಆಗಬಾರದು. ಸರ್ಕಾರ ಒಳ್ಳೆಯ ಕೆಲಸ ಮಾಡಿದಾಗ ಅಭಿಮಾನದಿಂದ ಹೇಳಬೇಕು’ ಎಂದು ಪರೋಕ್ಷವಾಗಿ ಬಿಜೆಪಿಯನ್ನು ಟೀಕಿಸಿದರು.

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ‘ತಾಲ್ಲೂಕಿನಲ್ಲಿ 1750 ಕಿ.ಮೀ ಗ್ರಾಮೀಣ ರಸ್ತೆ ನಿರ್ವಹಣೆಗೆ ವಾರ್ಷಿಕವಾಗಿ ₹ 1 ಕೋಟಿ ಮಾತ್ರ ಸಿಗು ತ್ತಿದೆ. ಈ ಅನುದಾನದ ಮೊತ್ತವನ್ನು ಹೆಚ್ಚಿಸಬೇಕು. ಶಿರಸಿಗೆ ಮಂಜೂರು ಆಗಿರುವ ಹೆರಿಗೆ ಆಸ್ಪತ್ರೆ ಕಾಮ ಗಾರಿಯನ್ನು ಶೀಘ್ರ ಪ್ರಾರಂಭಿಸಬೇಕು’ ಎಂದರು.

ಜಿಲ್ಲಾ ಪಂಚಾಯ್ತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಟಿ.ಪಾಟೀಲ, ಸದಸ್ಯರಾದ ಉಷಾ ಹೆಗಡೆ, ಜಿ.ಎನ್.ಹೆಗಡೆ, ರೂಪಾ ನಾಯ್ಕ, ಬಸವರಾಜ ದೊಡ್ಮನಿ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹೆಗಡೆ, ಸದಸ್ಯರಾದ ನಾಗರಾಜ ಶೆಟ್ಟಿ, ರತ್ನಾ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಾಧವ ರೇವಣಕರ, ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ, ಡಿಡಿಪಿಐ ಎಂ.ಎಸ್.ಪ್ರಸನ್ನಕುಮಾರ ಇದ್ದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕಕುಮಾರ್ ಸ್ವಾಗತಿಸಿದರು. ತಹಶೀಲ್ದಾರ್ ಬಸಪ್ಪ ಪೂಜಾರಿ ನಿರೂಪಿಸಿದರು.

***

ನಿರ್ಮಾಣ ಆಗಲಿರುವ ರಸ್ತೆಗಳು

₹ 1.74 ಕೋಟಿ ವೆಚ್ಚದಲ್ಲಿ ಬಿಕ್ನಳ್ಳಿಯಿಂದ ಶಿರಸಿ-–ದೊಡ್ನಳ್ಳಿ ರಸ್ತೆವರೆಗೆ ಅಭಿವೃದ್ಧಿ, ₹ 4.36 ಕೋಟಿ ವೆಚ್ಚದಲ್ಲಿ ಮುದ್ದಿನಪಾಲದಿಂದ ಹುಲೇಕಲ್- –ವಾನಳ್ಳಿ ರಸ್ತೆ ಸಂಪರ್ಕ, ₹ 1.56 ಕೋಟಿ ವೆಚ್ಚದಲ್ಲಿ ಗೋಳಿಕೊಪ್ಪ ರಸ್ತೆಯಿಂದ ಹುಳಗೋಳ ಬಸ್ ತಂಗುದಾಣದವರೆಗೆ ರಸ್ತೆ ಅಭಿವೃದ್ಧಿ, ₹ 1.85 ಕೋಟಿಯಲ್ಲಿ ರೇವಣಕಟ್ಟಾದಿಂದ ಓಡಲಮನೆ -ಬಾಗಿಮನೆ ರಸ್ತೆ, ₹ 1.71 ಕೋಟಿಯಲ್ಲಿ ಕುಳವೆಯಿಂದ ಕೆಂಚಗದ್ದೆ ಬಸ್ ತಂಗುದಾಣದವರೆಗಿನ ರಸ್ತೆ ಹಾಗೂ ₹ 2.57 ಕೋಟಿಯಲ್ಲಿ ಸದಾಶಿವಳ್ಳಿಯಿಂದ ಶಿರಸಿ- ಹುಬ್ಬಳ್ಳಿ ರಸ್ತೆ ಮಾರ್ಗವಾಗಿ ಕೂಗಲಕುಳಿವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.

***

ವಿಶ್ವೇಶ್ವರ ಹೆಗಡೆ ಶಿಕ್ಷಣ ಸಚಿರಾಗಿದ್ದಾಗಲೂ ಇಷ್ಟು ಶಿಕ್ಷಕ ರನ್ನು ಕೊಟ್ಟಿರಲಿಲ್ಲ. ನಾನು ಉತ್ತರ ಕನ್ನಡಜಿಲ್ಲೆಯಲ್ಲಿ ಶೇ 100ರಷ್ಟು ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮಕೈಗೊಂಡಿದ್ದೇನೆ

ಆರ್‌.ವಿ. ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ

ಪ್ರತಿಕ್ರಿಯಿಸಿ (+)