ಗುರುವಾರ , ಡಿಸೆಂಬರ್ 12, 2019
17 °C

ಚಿತ್ರದುರ್ಗ: ಸಾಲ‌ಮನ್ನಾಕ್ಕೆ ಆಗ್ರಹಿಸಿ ರೈತರ ಪತ್ರಚಳವಳಿ, ಅರ್ಜಿ ಸಲ್ಲಿಕೆಗೆ ನೂಕು ನುಗ್ಗಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಸಾಲ‌ಮನ್ನಾಕ್ಕೆ ಆಗ್ರಹಿಸಿ ರೈತರ ಪತ್ರಚಳವಳಿ, ಅರ್ಜಿ ಸಲ್ಲಿಕೆಗೆ ನೂಕು ನುಗ್ಗಲು

ಚಿತ್ರದುರ್ಗ: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಸಂಘಟನೆ ಸರ್ಕಾರವನ್ನು ಸಾಲಮನ್ನಾ ಮಾಡುವಂತೆ ಆಗ್ರಹಿಸಿ ಸೋಮವಾರ ಆಯೋಜಿಸಿದ್ದ ‘ಪತ್ರಚಳವಳಿ’ಯಲ್ಲಿ ಸಾವಿರಾರು ರೈತರು ಭಾಗವಹಿಸಿದ್ದರು.

ಸಮಾವೇಶದ ನಂತರ ಜಿಲ್ಲಾಧಿಕಾರಿ ಕಚೇರಿ ಟಪಾಲು ವಿಭಾಗಕ್ಕೆ ಅರ್ಜಿ ಸಲ್ಲಿಸಿ, ಸ್ವೀಕೃತಿ ಪತ್ರ ಪಡೆಯಬೇಕೆಂಬ ಮುಖಂಡರ ಸಲಹೆಯಂತೆ ರೈತರು ಮಧ್ಯಾಹ್ನ 2ರ ಸುಮಾರಿಗೆ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಜಮಾಯಿಸಿದರು.

ಅರ್ಜಿ ಹಿಡಿದು ಒಮ್ಮೆಲೇ ಕಚೇರಿ ಆವರಣಕ್ಕೆ ಬಂದಿದ್ದರಿಂದ ನೂಕು ನುಗ್ಗಲು ಉಂಟಾಯಿತು. ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು, ಕಚೇರಿ ಆವರಣದಲ್ಲಿ ನಾಲ್ಕೈದು ಕೌಂಟರ್‌ಗಳನ್ನು ತೆರೆದು ಅರ್ಜಿ ಸ್ವೀಕಾರಕ್ಕೆ ವ್ಯವಸ್ಥೆ ಮಾಡಿದರು.

ಆರು ತಾಲ್ಲೂಕುಗಳ ಐದಾರು ಸಾವಿರ ರೈತರು ಅರ್ಜಿ ಸಲ್ಲಿಸಲು ಸಾಲುಗಟ್ಟಿದ್ದರು. ವೃದ್ಧರು, ಮಹಿಳೆಯರು ಕೈಯಲ್ಲಿ ಅರ್ಜಿ ಹಿಡಿದು, ಎಲ್ಲಿಗೆ ಸಲ್ಲಿಸಬೇಕು, ಕಚೇರಿಯ ಮೊಹರೆ ಒತ್ತಿದ ಸ್ವೀಕೃತಿ ಪತ್ರವನ್ನು ಯಾರಿಂದ ಪಡೆಯಬೇಕೆಂದು ಪರದಾಡುತ್ತಿದ್ದರು.

ಪರಿಣಾಮವಾಗಿ ಪುನಃ ಕೌಂಟರ್‌ಗಳನ್ನು ಹೆಚ್ಚಿಸಲಾಯಿತು. ‘ಅರ್ಜಿ ಸಲ್ಲಿಸಿ ಪಡೆಯುವ ಸ್ವೀಕೃತಿ ಪತ್ರವನ್ನು ತೋರಿಸಿದರೆ ಯಾರೂ ಸಾಲ ವಸೂಲಿ ಮಾಡುವುದಿಲ್ಲ. ಅದಕ್ಕೆ ಅರ್ಜಿ ಸಲ್ಲಿಸುತ್ತಿದ್ದೇವೆ’ ಎಂದು ರೈತರೊಬ್ಬರು ‘ಪತ್ರಿಕೆ’ಗೆ ತಿಳಿಸಿದರು.

ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಯತ್ತ ನುಗ್ಗುತ್ತಿದ್ದ ರೈತರು.

ಒಂದು ತಿಂಗಳಿನಿಂದ ರೈತರು ರೈತ ಸಂಘದ ಕಾರ್ಯಕರ್ತರಿಂದ ₹25 ಹಣ ನೀಡಿ ಅರ್ಜಿ ಪಡೆದಿದ್ದರು. ಸೋಮವಾರ ಅರ್ಜಿ ಭರ್ತಿ ಮಾಡಿ, ಕೆಲವರು ಪಹಣಿ ಪತ್ರ ಜೋಡಿಸಿದ್ದರೆ, ಇನ್ನು ಕೆಲವರು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಅರ್ಜಿಯೊಂದಿಗೆ ಸೇರಿಸಿದ್ದರು.

ಇಷ್ಟೆಲ್ಲ ಅರ್ಜಿ ಸಲ್ಲಿಸಿದ ಮೇಲೆ ನಿಜಕ್ಕೂ ‘ನಿಮ್ಮ ಕೃಷಿ ಸಾಲ ಮನ್ನಾ ಆಗುತ್ತಾ’ ಎಂದು ರೈತರನ್ನು ಕೇಳಿದರೆ, ‘ನಮ್ಗೇನು ಗೊತ್ತು ಸ್ವಾಮಿ. ಅವರು ಅರ್ಜಿ ಹಾಕಿ ಅಂದರು. ಹಾಕುತ್ತಿದ್ದೇವೆ. ಸೀಲು ಹಾಕಿಸಿ, ಸ್ವೀಕೃತಪತಿ ಪಡೆಯುತ್ತಿದ್ದೇವೆ. ಯಾವುದೇ ಬ್ಯಾಂಕ್‌ ನವರು ಸಾಲ ವಸೂಲಿಗೆ ಬಂದರೆ, ಜಿಲ್ಲಾಧಿಕಾರಿ ಕಚೇರಿ ಸೀಲ್ ಹಾಕಿ ಕೊಟ್ಟಿರುವ ಸ್ವೀಕೃತಿ ಪತ್ರ ತೋರಿಸುತ್ತೇವೆ’ ಎಂದು ಅಮಾಹಕರಂತೆ ಮಾತನಾಡುತ್ತಾರೆ.

ಒಟ್ಟಾರೆ ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಆವರಣ ಇಂದು ಮಧ್ಯಾಹ್ನ ರೈತ ಸಮಾವೇಶದ ಮೈದಾನದಂತಾಗಿತ್ತು.

ಪ್ರತಿಕ್ರಿಯಿಸಿ (+)