ಶುಕ್ರವಾರ, ಡಿಸೆಂಬರ್ 6, 2019
17 °C
ಗಬ್ಬೆದ್ದು ನಾರುತ್ತಿರುವ ಕಟ್ಟಪ್ಪಕೇರಿಯ ಸಮುದಾಯ ಶೌಚಾಲಯ

ದಯಮಾಡಿ ಈ ದೊಡ್ಡಿ ಎತ್ತಿಬಿಡ್ರೀ...

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ದಯಮಾಡಿ ಈ ದೊಡ್ಡಿ ಎತ್ತಿಬಿಡ್ರೀ...

ಬಳ್ಳಾರಿ: ‘ಮಕ್ಕಳಿಗೆ ಕಾಯಿಲೆ, ಕಸಾಲೆ ಜಾಸ್ತಿ ಆಗೈತೆ. ಈ ದೊಡ್ಡಿ ನಮ್ಗೆ ಬೇಡ. ದಯಮಾಡಿ ಎತ್ತಿಬಿಡ್ರೀ...’

ನಗರದ 26 ಮತ್ತು 27ನೇ ವಾರ್ಡಿಗೆ ಸೇರಿದ ಕಟ್ಟೆಯ ಮಹಿಳೆಯರು ಹಲವು ತಿಂಗಳಿಂದ ಹೀಗೆ ಮುಖ್ಯ ರಸ್ತೆಯ ದೊಡ್ಡಿ–ಸಮುದಾಯ ಶೌಚಾಲ ಯದ ಕಟ್ಟಡವನ್ನು ಮುಚ್ಚಿಬಿಡಿ ಎಂದು ಅಲವತ್ತುಕೊಳ್ಳುತ್ತಲೇ ಇದ್ದಾರೆ. ಆದರೆ ಅವರ ಮಾತಿಗೆ ಯಾರೂ ಕಿವಿಗೊಟ್ಟಿಲ್ಲ.

ಎಲ್ಲರೂ ಶೌಚಾಲಯ ಬೇಕು ಎಂದರೆ ಈ ಮಹಿಳೆಯರು ಬೇಡ ಎನ್ನು ತ್ತಿರುವುದಕ್ಕೆ ಕಾರಣ ಸ್ಪಷ್ಟವಾಗಿದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಕೊಠಡಿಗಳಿರುವ ಸಂಕೀರ್ಣ ನಿರ್ವಹಣೆ ಇಲ್ಲದೆ ಗಬ್ಬೆದ್ದು ನಾರುತ್ತಿದೆ.

‘ಜನರ ಬಳಕೆಗೆ ಅನುಕೂಲಕರವಾಗಿ ಅದನ್ನು ನಿರ್ವಹಿಸುವ ಕಾರ್ಯ ಪಾಲಿಕೆ ವತಿಯಿಂದ ನಡೆಯುತ್ತಿಲ್ಲ. ಕಟ್ಟಡದ ಹೊರಗೆ ಇರುವ ತೊಟ್ಟಿಗೆ ನೀರು ಹರಿಸು ವುದನ್ನು ಬಿಟ್ಟರೆ ಬೇರೆ ಕಾರ್ಯವೂ ಅಲ್ಲಿ ನಡೆಯುತ್ತಿಲ್ಲ. ಹೀಗಾಗಿ ಸುತ್ತಮುತ್ತ ಇರುವ ಜನರಿಗೆ ದುರ್ವಾಸನೆ ಸಹಿಸಲು ಆಗುತ್ತಿಲ್ಲ. ಮಕ್ಕಳ ಆರೋಗ್ಯ  ಕೆಡುತ್ತಿದೆ’ ಎಂಬುದು ಮಹಿಳೆಯರ ಅಳಲು.

ಕೌಲ್‌ಬಜಾರ್‌ ಮುಖ್ಯರಸ್ತೆಯ ಲ್ಲಿರುವ ಪೊಲೀಸ್‌ ಠಾಣೆಯಿಂದ ಕೆಲವು ನೂರು ಮೀಟರ್‌ನಿಂದ ನಡೆದು ಎಡಭಾಗಕ್ಕೆ ತಿರುಗಿ ಕೆಲವು ನೂರು ಮೀಟರ್‌ ನಡೆದರೆ ಈ ಶೌಚಾಲಯ ಕಾಣುತ್ತದೆ. ಅಲ್ಲಿ ಬಾಗಿಲುಗಳಿಲ್ಲ. ಅದೇ ಕಾರಣಕ್ಕೆ ಅದು ಬಯಲು ಬಹಿರ್ದೆಸೆಯ ತಾಣವಾಗಿಯೂ ಮಾರ್ಪಟ್ಟಿದೆ.

ಇನ್ನು ಅದನ್ನು ಬಳಸಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾದ ಬಳಿಕ ಸ್ಥಳೀಯರು ಅದನ್ನು ಬಳಸುವುದನ್ನು ಬಿಟ್ಟಿದ್ದಾರೆ, ಪಾಲಿಕೆಯೂ ಸುಮ್ಮನಿದೆ. ಹೀಗಾಗಿ ಅಲ್ಲಿ ಈಗ ಕಟ್ಟಡವಿದ್ದರೂ ಶೌಚಕ್ಕೆ ಬಳಸಲು ಆಗುತ್ತಿಲ್ಲ.

ಮೂರು ವರ್ಷದ ಹಿಂದೆ: ಮೂರು ವರ್ಷದ ಹಿಂದೆ ಈ ಕಟ್ಟಡವನ್ನು ನಿರ್ಮಿ ಸಿದಾಗ ವೈಯಕ್ತಿಕ ಶೌಚಾಲಯ ಸೌಕರ್ಯ ವೇ ಇಲ್ಲದ ಆಶ್ರಯ ಕಾಲೊನಿ ನಿವಾಸಿ ಗಳೂ ಸೇರ ಸ್ಥಳೀಯರು ಸಂತಸಪಟ್ಟಿ ದ್ದರು, ಆದರೆ ಆ ಸಂತಸ ಕೆಲವು ದಿನ ವಷ್ಟೇ ಉಳಿಯಿತು. ಉಳಿದಿದ್ದು ಬೇಸರದ ಪಾಲು. ಪಾಲಿಕೆಯ ನಿರ್ವ ಹಣೆಯ ಕೊರತೆ ಒಂದೆಡೆ ಇದ್ದರೆ, ಮತ್ತೊಂದೆಡೆ ಸೌಲಭ್ಯವನ್ನು ನಿರಂತರ ವಾಗಿ ಸದ್ಬಳಕೆ ಮಾಡಿಕೊಳ್ಳಲು ಆಗದ ಪರಿಸ್ಥಿತಿಯೂ ಇಲ್ಲಿದೆ.

ಕೂಡಲೇ ಪಾಲಿಕೆ ಅಧಿಕಾರಿಗಳು ಶೌಚಾಲಯ ನಿರ್ವಹಣೆ ಮಾಡಿ, ಜನರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಸ್ಥಳೀಯರು ಆಗ್ರಹ.

***

ಸ್ವಚ್ಛ ಭಾರತ ಮಿಷನ್‌ ಎಲ್ಲಿ?

ಹಲವು ವರ್ಷಗಳ ಹಿಂದೆ ಇಲ್ಲಿ ರೂಪುಗೊಂಡ ಆಶ್ರಯ ಕಾಲೊನಿಯಲ್ಲಿ ಯಾರೊಬ್ಬರ ಮನೆಯಲ್ಲೂ ವೈಯಕ್ತಿಕ ಶೌಚಾಲಯವಿಲ್ಲ. ಮಹಿಳೆಯರು, ಮಕ್ಕಳಾದಿಯಾಗಿ ಎಲ್ಲರೂ ಬಯಲು ಶೌಚವನ್ನೇ ನೆಚ್ಚಿಕೊಂಡಿದ್ದಾರೆ,

ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಆರ್‌.ವೆಂಕಟೇಶ್‌ ಅವರು ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಈ ಸಂಗತಿ ಬೆಳಕಿಗೆ ಬಂದು ಅವರು ವಿಷಾದಿಸಿದರು. ಸ್ಥಳದಲ್ಲೇ, ಸ್ವಚ್ಛ ಭಾರತ ಮಿಷನ್‌ ಅಡಿಯಲ್ಲಿ ನಿವಾಸಿಗಳ ಪಟ್ಟಿ ತಯಾರಿಸಿ, ಅಗತ್ಯವುಳ್ಳವರಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಅನುವು ಮಾಡಿಕೊಡಿ ಎಂದು ಪಾಲಿಕೆ ಆಯುಕ್ತ ಎಂ.ಕೆ.ನಲ್ವಡಿ ಅವರಿಗೆ ಸೂಚಿಸಿದರು.

ಶನಿವಾರ ಈ ಪ್ರದೇಶಕ್ಕೆ ಮತ್ತೆ ‘ಪ್ರಜಾವಾಣಿ’ ಭೇಟಿ ನೀಡಿದ ವೇಳೆ ಸ್ಥಳೀಯರು ಅಧಿಕಾರಿಗಳಿಗಾಗಿ ಕಾಯುತ್ತಿದ್ದರು.

***

ಈ ದೊಡ್ಡಿಯಿಂದ ನಮ್ಮ ಮಕ್ಕಳಿಗೆ ಕಾಯಿಲೆ ಹೆಚ್ಚಾಗಿದೆ. ಅದನ್ನು ತೆಗೆದು ಇಲ್ಲಿ ಅಂಗನವಾಡಿಯನ್ನಾದರೂ ಆರಂಭಿಸಿದರೆ ಒಳ್ಳೆಯದಾಗುತ್ತದೆ ಹನುಮಕ್ಕ

ಕಟ್ಟಪ್ಪಕೇರಿ ನಿವಾಸಿ

***

ಕೇರಿಯ ಎಲ್ಲ ನಿವಾಸಿಗಳು ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವವರೆಗೂ ಸಮುದಾಯ ಶೌಚಾಲಯವನ್ನು ಮುಚ್ಚುವುದಿಲ್ಲ

ಎಂ.ಕೆ.ನಲ್ವಡಿ, ಪಾಲಿಕೆ ಆಯುಕ್ತ

ಪ್ರತಿಕ್ರಿಯಿಸಿ (+)