ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ಗಂಟೆ ಬೇಕಾದಷ್ಟು ತಿನ್ನಿ16 ಗಂಟೆ ಉಪವಾಸವಿರಿ!

Last Updated 10 ಜುಲೈ 2017, 19:30 IST
ಅಕ್ಷರ ಗಾತ್ರ

ತೆಳ್ಳಗೆ ಬಳಕುವ ಬಳ್ಳಿಯಂತಾಗಬೇಕೆನ್ನುವ ಅವಳು, ಬೊಜ್ಜು ಇಲ್ಲದ ಹೊಟ್ಟೆಯ ಸುತ್ತಮುತ್ತ ಸಿಕ್ಸ್‌ಪ್ಯಾಕ್ ಇದ್ದರೆ ಅವಳು ಒಲಿದಾಳು ಎನ್ನುವ ಬಯಕೆ ಅವನದ್ದು. ಇದಾವುದರ ಉಸಾಬರಿ ನಮಗೆ ಬೇಡ, ಒಳ್ಳೆಯ ಆರೋಗ್ಯವಿದ್ದರೆ ಸಾಕು ಎನ್ನುವವರ ಪಾಲಿಗೆ ಇಂಟರ್‌ಮಿಟ್ಟೆಂಟ್ ಉಪವಾಸ ಎಂಬುದು ಈಗ ವರ.

ಹೌದು ಇಂಟರ್‌ಮಿಟ್ಟೆಂಟ್ (ಅನಿರಂತರ) ಉಪವಾಸ ಎನ್ನುವುದು ಈಗ ಭಾರತದಲ್ಲಿ ಟ್ರೆಂಡ್ ಆಗಿ ರೂಪುಗೊಳ್ಳುತ್ತಿದೆ. ನಾಲ್ಕೈದು ವರ್ಷಗಳ ಹಿಂದೆ ಅಮೆರಿಕದಲ್ಲಿ ಟ್ರೆಂಡ್ ಆಗಿ ರೂಪುಗೊಂಡಿದ್ದ ಉಪವಾಸ, ವರ್ಷದಿಂದೀಚೆಗೆ ಮೆಟ್ರೊ ನಗರಿಯಲ್ಲಿ ಟ್ರೆಂಡ್ ಆಗಿದೆ. ಸೆಲೆಬ್ರಿಟಿಗಳಷ್ಟೇ ಸೀಮಿತವಾಗಿದ್ದ ಇಂಥದೊಂದ್ದು ಟ್ರೆಂಡ್ ಅನ್ನು ಜನಸಾಮಾನ್ಯರೂ ಮಾಡುತ್ತಿರುವುದು ವಿಶೇಷ.

ಹಾಗೆ ನೋಡಿದರೆ ಇಂಟರ್‌ಮಿಟ್ಟೆಂಟ್ ಉಪವಾಸ ಭಾರತೀಯರಿಗೆ ಹೊಸದೇನಲ್ಲ. ಈ ಹಿಂದೆ ನಮ್ಮ ಪೂರ್ವಜರು ಹಬ್ಬಹರಿದಿನಗಳಲ್ಲಿ ಇಲ್ಲವೇ ವಾರಾಂತ್ಯಗಳಲ್ಲಿ ಮಾಡುತ್ತಿದ್ದ ಉಪವಾಸವೇ ಇಂಟರ್‌ಮಿಟ್ಟೆಂಡ್ ಉಪವಾಸಕ್ಕೆ ಪ್ರೇರಣೆ.

ಈ ಉಪವಾಸವನ್ನು ಮೂರು ಬಗೆಗಳಲ್ಲಿ ಆಚರಿಸಲಾಗುತ್ತದೆ. ಮೊದಲನೆಯದು 16/8 ವಿಧಾನ. ಇದರಲ್ಲಿ ಪ್ರತಿನಿತ್ಯದ ಆಹಾರಸೇವನೆಯ ಅವಧಿಯನ್ನು 8 ಗಂಟೆಗಳಿಗೆ ಸೀಮಿತಗೊಳಿಸಿ ಉಳಿದ 16 ತಾಸುಗಳನ್ನು ಉಪವಾಸ ಮೀಸಲಿಡುವುದಾಗಿದೆ.

ಉದಾಹರಣೆಗೆ ನೀವು ರಾತ್ರಿ 9 ಗಂಟೆಗೆ ಊಟ ಮಾಡಿದಲ್ಲಿ, ಮರುದಿನ ಮಧ್ಯಾಹ್ನ 1 ಗಂಟೆಯವರೆಗೆ ಏನನ್ನೂ ತಿನ್ನಬಾರದು. ಮತ್ತೆ ಮಧ್ಯಾಹ್ನ 1ರಿಂದ ರಾತ್ರಿ 9 ಗಂಟೆಯೊಳಗೆ (8 ತಾಸುಗಳ ಅವಧಿ) ಏನನ್ನಾದರೂ ಸೇವಿಸಬಹುದು. ಇದಕ್ಕೆ ಯಾವುದೇ ಡಯೆಟ್ ಪಟ್ಟಿ ಇಲ್ಲ. ಒಟ್ಟಾರೆ 16 ತಾಸುಗಳ ಉಪವಾಸದ ಬಳಿಕ ಉಳಿವ 8 ಗಂಟೆಗಳ ಅವಧಿಯಲ್ಲಿ  ಮಾತ್ರ ಆಹಾರ ಸೇವಿಸುವುದು 16/8 ಉಪವಾಸದ ವಿಧಾನ.

ಎರಡನೇ ವಿಧಾನದಲ್ಲಿ ವಾರದ ಐದು ದಿನ ಸಾಮಾನ್ಯ ಆಹಾರ ಸೇವಿಸಿ ಉಳಿದ ಎರಡು ದಿನಗಳಲ್ಲಿ 500ರಿಂದ 600 ಕ್ಯಾಲೊರಿಗಳಷ್ಟು ಆಹಾರ ಸೇವಿಸುವುದು.

ಮೂರನೆಯ ವಿಧಾನದಲ್ಲಿ ವಾರದಲ್ಲಿ ಒಂದು ದಿನ ಮಾತ್ರ 24 ಗಂಟೆಗಳ ಉಪವಾಸ ಮಾಡುವುದು.ಈ ಮೂರು ವಿಧಾನಗಳ ಉಪವಾಸದಲ್ಲಿ ನೀರು, ನಿಂಬೆರಸ, ಸಕ್ಕರೆ ರಹಿತ ಗ್ರೀನ್ ಟೀ, ಕಾಫಿ, ಟೀ ಸೇವಿಸಬಹುದು. ಆದರೆ, ಒಣ ಉಪವಾಸ ಮಾಡಲೇಬಾರದು ಎನ್ನುತ್ತಾರೆ ಸಾಗರ ಆಸ್ಪತ್ರೆಯ ಮಧುಮೇಹತಜ್ಞ ಮತ್ತು ವೆಲೆನೆಸ್ ಪರಿಣತ  ಡಾ.ಬಿ.ಎಲ್. ವಿಶ್ವನಾಥ್.

ದ್ರವಾಹಾರ ಸೇವಿಸದೆ ಮಾಡುವ ಒಣ ಉಪವಾಸದಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಒಣ ಉಪವಾಸದಿಂದ ನಿಮ್ಮ ಒತ್ತಡ ಹೆಚ್ಚಾಗಿ ನಿದ್ರಾಹೀನತೆಯೂ ಆಗಬಹುದು. ಕೆಲವರಲ್ಲಿ ತಲೆನೋವು ಕಾಣಿಸಿಕೊಳ್ಳಬಹುದು. ಹಾಗಾಗಿ, ಉಪವಾಸದ ಸಮಯದಲ್ಲಿ ಕಡ್ಡಾಯವಾಗಿ ದ್ರವಾಹಾರ ಸೇವಿಸುವುದು ಒಳ್ಳೆಯದು ಎನ್ನುತ್ತಾರೆ ವೈದ್ಯರು.

ಇಂಟರ್‌ಮಿಟ್ಟೆಂಟ್‌ ಉಪವಾಸದಿಂದ ಹಲವು ಉಪಯೋಗಗಳಿವೆ. ದೇಹತೂಕ ಇಳಿಸುವವರಿಗೆ ಇದು ಅದ್ಭುತ ವಿಧಾನ. ಉಪವಾಸದಿಂದ ದೇಹದಲ್ಲಿರುವ ಕೊಬ್ಬಿನಂಶ ಕಡಿಮೆಯಾಗುವುದಲ್ಲದೇ ದೇಹದಲ್ಲಿ ಲವಲವಿಕೆ, ಚಟುವಟಿಕೆ ಮೂಡುತ್ತದೆ. 2014ರಲ್ಲಿ ನಡೆಸಲಾದ ಅಧ್ಯಯನವೊಂದರ ಪ್ರಕಾರ ಇಂಟರ್‌ಮಿಟ್ಟೆಂಟ್‌ ಉಪವಾಸದಿಂದ 3ರಿಂದ24 ವಾರಗಳಲ್ಲಿ ಶೇ. 3ರಿಂದ ಶೇ.8ರಷ್ಟು ದೇಹದ ತೂಕ ಇಳಿಯುತ್ತದೆ. ಸೊಂಟದ ಸುತ್ತಳತೆ ಶೇ.4ರಿಂದ ಶೇ.7ರಷ್ಟು ಕಡಿಮೆಯಾಗುತ್ತದೆ.

ಈ ಉಪವಾಸ ಮಧುಮೇಹ ರೋಗಿಗಳಲ್ಲಿ ಸಕ್ಕರೆ ಅಂಶವನ್ನು ಸಾಮಾನ್ಯ ಸ್ಥಿತಿಗೆ ತರಲು ಅತ್ಯುತ್ತಮ ವಿಧಾನ ಮತ್ತು ಗ್ಲೂಕೋಸ್‍ನ ಏರಿಳಿತವನ್ನೂ ಸುಧಾರಿಸುತ್ತದೆ. ಇನ್ಸುಲಿನ್ ಸೆನ್ಸಿಟಿವಿಟಿ ಹೆಚ್ಚಿಸಲು ಪ್ರಯತ್ನಿಸುವವರು ಈ ಉಪವಾಸವನ್ನು ಪ್ರಯತ್ನಿಸಬಹುದು. ಆದರೆ ಮಧುಮೇಹ ರೋಗವುಳ್ಳವರು ವೈದ್ಯರ ಸಲಹೆ ಪಡೆದು ಉಪವಾಸ ಆಚರಿಸುವುದು ಉತ್ತಮ ಎನ್ನುತ್ತಾರೆ ಡಾ.ವಿಶ್ವನಾಥ್.

ಇಂಟರ್‌ಮಿಟ್ಟೆಂಟ್‌ ಉಪವಾಸದ ಪ್ರಯೋಜನಗಳು
ನಮಗೆ ಹಸಿವಾಗಿದೆ ಎಂದು ಗೊತ್ತಾಗುವುದು ಗ್ರೆಲಿನ್ ಎಂಬ ಹಾರ್ಮೋನ್‌ ಮೂಲಕ. ಹಸಿವಿಲ್ಲದಿದ್ದರೂ ಆಹಾರ ಸೇವಿಸಿದಾಗ ಈ ಹಾರ್ಮೋನ್‌ಗೆ ಕೆಲಸ ಇರುವುದಿಲ್ಲ. ಆದರೆ, ಉಪವಾಸ ಮಾಡಿದಾಗ ಈ ಹಾರ್ಮೋನ್ ಸಹಜ ಸ್ಥಿತಿಗೆ ಬರುತ್ತದೆ. ಅಷ್ಟೇ ಅಲ್ಲ ನಿತ್ಯವೂ ಜೀರ್ಣಾಂಗ ಕ್ರಿಯೆ ಮಾಡಿ ಸುಸ್ತಾಗಿರುವ ಚಯಾಪಚಯ (ಮೆಟಬಾಲಿಸಂ) ಕ್ರಿಯೆಗೆ ತುಸು ಬಿಡುವು ದೊರೆಯುವುದರಿಂದ ದೇಹ ಚೈತನ್ಯಶೀಲವಾಗುತ್ತದೆ. ಇದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ. ಈ ಉಪವಾಸ ದೇಹದ ಕೆಟ್ಟ ಕೊಲೆಸ್ಟರಾಲ್‌ನ್ನು ಕಡಿಮೆ ಮಾಡುತ್ತದೆ. ಉಪವಾಸದಿಂದ ಬರೀ ದೈಹಿಕ ಲಾಭವಷ್ಟೇ ಅಲ್ಲ ಮಾನಸಿಕವಾಗಿಯೂ ಲಾಭ ತರುತ್ತದೆ ಎನ್ನುತ್ತಾರೆ ಅವರು.

’ಆರು ತಿಂಗಳಿನಿಂದ 16/8 ವಿಧಾನದ ಇಂಟರ್‌ಮಿಟ್ಟೆಂಟ್ ಉಪವಾಸ ಮಾಡುತ್ತಿದ್ದೇನೆ. ದೇಹದ ತೂಕ ಹೆಚ್ಚಳವಾಗಿಲ್ಲ. ಕೆಲಸದಲ್ಲೂ ಲವಲವಿಕೆಯಿಂದ ಇದ್ದೇನೆ’ ಎಂದು ತಮ್ಮ ಅನುಭವ ಬಿಚ್ಚಿಡುತ್ತಾರೆ ಡಾ.ವೀರೇಶ್.

’ವೈದ್ಯರ ಸಲಹೆಯ ಮೇರೆಗೆ ಎರಡು ತಿಂಗಳಿನಿಂದ ಇಂಟರ್‌ಮಿಟ್ಟೆಂಟ್ ಉಪವಾಸ ಮಾಡುತ್ತಿರುವೆ. ದೇಹದಲ್ಲಿ ಶೇ 6ರಷ್ಟು ಕೊಬ್ಬಿನಂಶ ಕಡಿಮೆ ಆಗಿದೆ. ಆರು ಕೆಜಿ ತೂಕ ಕಳೆದುಕೊಂಡಿದ್ದೇನೆ. ಇದು ನನ್ನ ಸ್ನಾಯುಗಳ ಬೆಳವಣಿಗೆಗೆ ಪೂರಕವಾಗಿದೆ’ ಎನ್ನುತ್ತಾರೆ ಪ್ರಮಾಣೀಕೃತ ಫಿಟ್‌ನೆಸ್‌ ತಜ್ಞ ಮತ್ತು ಪವರ್‌ಲಿಫ್ಟಿಂಗ್ ವೇಯ್ಟ್ ಲಿಫ್ಟಿಂಗ್ ರಾಷ್ಟ್ರೀಯ ಚಾಂಪಿಯನ್ ಬಿ.ಜಿ. ಆದರ್ಶ.

ಇಂಟರ್‌ಮಿಟ್ಟೆಂಟ್ ಉಪವಾಸ ಎಲ್ಲರಿಗೂ ಸೂಕ್ತವಲ್ಲ. ಮಕ್ಕಳು, ಗರ್ಭಿಣಿಯರು ಮತ್ತು ಹಾಲೂಡಿಸುವ ಅಮ್ಮಂದಿರು ಉಪವಾಸ ಮಾಡಬಾರದು. ಮಧುಮೇಹ ರೋಗಿಗಳು ವೈದ್ಯರ ಮಾರ್ಗದರ್ಶನ ಪಡೆದು ಉಪವಾಸ ಮಾಡಬೇಕು. ಹೆಚ್ಚಿನ ಮಾಹಿತಿಗೆ blvishwa@gmail.com

*
ಕೊಬ್ಬು ಕರಗಿಸಲು ಟಿಪ್ಸ್‌ 
1. ದಿನಕ್ಕೆ 15 ಗ್ರಾಂಗಿಂತ ಕಡಿಮೆ ಕಾರ್ಬೋಹೈಡ್ರೇಡ್ ಇರುವ ಆಹಾರ ಸೇವಿಸುವುದು ಒಳ್ಳೆಯದು.
2. ಬಿಯರ್ ಸೇವನೆ ಬಿಡಿ, ಹೆಣ್ಣುಮಕ್ಕಳು ಅಗತ್ಯಕ್ಕಿಂತ ಹೆಚ್ಚಾಗಿ ಹಣ್ಣು ಸೇವಿಸಬಾರದು.
3. ಕೃತಕ ಸಿಹಿಯಿಂದ ದೂರ ಇರಿ. ಕಾಫಿ, ಟೀಯನ್ನು ಸಕ್ಕರೆ ರಹಿತವಾಗಿ ಸೇವಿಸಿ.
4. ಆಗಾಗ ಹಾರ್ಮೋನ್ ಮಟ್ಟ ಪರೀಕ್ಷೆ ಮಾಡಿಸಿ.
5. ವಾರದಲ್ಲಿ ಕನಿಷ್ಠ ನಾಲ್ಕು ದಿನ ವ್ಯಾಯಾಮ ಮಾಡಿ.

*


ವಾರಾಂತ್ಯದ ರಜೆ ಪಡೆದು ಮತ್ತೆ ಹೇಗೆ ಕೆಲಸಕ್ಕೆ ಸಜ್ಜಾಗುತ್ತೇವೆಯೋ, ದೇಹವೂ ಆದೇ ರೀತಿ ಒಂದು ದಿನ ಉಪವಾಸ ಮಾಡಿ, ಸಕ್ರಿಯವಾಗಿರಲು ಅನಿರಂತರ ಉಪವಾಸ ಮಾಡುವುದು ಅಗತ್ಯ.
–ಡಾ. ಬಿ.ಎಲ್‌. ವಿಶ್ವನಾಥ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT