ಶುಕ್ರವಾರ, ಡಿಸೆಂಬರ್ 6, 2019
17 °C

ವಿಲಾಸಿ ಪಿಂಗಾಣಿ ಪರಿಕರ

Published:
Updated:
ವಿಲಾಸಿ ಪಿಂಗಾಣಿ ಪರಿಕರ

ಬೆಂಗಳೂರು ಮೂಲದ ನಿಶಿತಾ ಠಾಕೂರ್‌ದಾಸ್‌ ಅವರು ವೈಭವೋಪೇತ ಟೇಬಲ್‌ವೇರ್‌ಗಳ ವಿನ್ಯಾಸಕಿ. ಅವರ ವಿನ್ಯಾಸದ ಏಳನೇ ಸರಣಿಯ  ಸಂಗ್ರಹ ‘ಸ್ಪ್ರಿಂಗ್ಸ್‌ ಇನ್‌ ಉದಯ್‌ಪುರ್‌’ ವನ್ನು ಕಲಾವಿದ ಪರೇಶ್‌ ಮೈತಿ ಅವರು ಇತ್ತೀಚೆಗೆ ನಗರದಲ್ಲಿ ಬಿಡುಗಡೆ ಮಾಡಿದರು.

ಹೊಸ ಸರಣಿಯ ಪರಿಕರಗಳ ವಿನ್ಯಾಸ ಉದಯಪುರದ ಕಲಾತ್ಮಕತೆಯಿಂದ ಪ್ರೇರಣೆ ಪಡೆದಿವೆ. ಅಲ್ಲಿನ ಸರೋವರದಿಂದ ಆವೃತವಾದ ನಗರ, ಅರಮನೆಯ ಕಲಾವೈಭವವನ್ನು ಪಿಂಗಾಣಿ ತಟ್ಟೆ, ಟೀ ಕಪ್‌, ಸಾಸರ್‌ಗಳ ಮೇಲೆ ಮೂಡಿಸಲಾಗಿದೆ. ವಿನ್ಯಾಸವನ್ನು ಚಿನ್ನದ ಗೆರೆಗಳಿಂದ ಅಂದಗಾಣಿಸಲಾಗಿದೆ.

ಇದಕ್ಕೆ ಬಳಸಿದ್ದು 24 ಕ್ಯಾರೆಟ್‌ ಶುದ್ಧ ಚಿನ್ನ ಮತ್ತು ಪ್ಲಾಟಿನಂ ಎಂಬುದು ವಿಶೇಷ. ಹಾಗಾಗಿ ಇದು ದುಬಾರಿ ಕೂಡಾ. ಸಂಗ್ರಹದಲ್ಲಿರುವ ಪ್ರತಿ ಪರಿಕರಗಳು ವೈಭವೋಪೇತ ಜೀನವ ಶೈಲಿಯ ಪ್ರತಿಬಿಂಬವಾಗಿ, ಪರಂಪರೆಯ ಮುಂದುವರಿಕೆಯ ವಿನ್ಯಾಸವಾಗಿ ಗಮನ ಸೆಳೆಯುತ್ತವೆ.

‘ಸ್ಪ್ರಿಂಗ್ಸ್‌ ಆಫ್‌ ಉದಯಪುರ’ ಸಂಗ್ರಹದಲ್ಲಿ ಜೋಧ್‌ಪುರ್‌ ಇವಿನಿಂಗ್‌ ಕಾಫಿ ಮಗ್‌ ಮತ್ತು ಟ್ರೇ ಸೆಟ್‌, ದೇವನಗರಿ ಕಾಫಿ ಕಪ್‌, ಉದಯಪುರ ಕಾಫಿ ಮಗ್‌ ಮತ್ತು ಟ್ರೇ, ಬನಾರಸ್‌ ಟೀ ಸೆಟ್‌ ಮತ್ತು ಕಾಫಿ ಮಗ್‌ ಮತ್ತು ಟ್ರೇ, ಫತೇಪುರ್ ಟೀ ಸೆಟ್‌, ಫತೇಪುರ್‌ ಕೇಕ್‌ ಸ್ಟ್ಯಾಂಡ್‌ ಮತ್ತು ಕೇಕ್‌ ಪ್ಲೇಟ್‌, ಇಂದಿರಾ ಕಾಫಿ ಮಗ್‌ ಮತ್ತು ಟ್ರೇ ಸೆಟ್‌ಗಳು ಕಲಾತ್ಮಕ ವಿನ್ಯಾಸದಿಂದ ಆಕರ್ಷಿಸುತ್ತವೆ.

‘ನಿಶಿತಾ ಫೈನ್‌ ಟೇಬಲ್‌ವೇರ್‌’ ಸಂಸ್ಥಾಪಕಿ ನಿಶಿತಾ ಅವರಿಗೆ ಭಾರತೀಯ ಕಲಾ ಪರಂಪರೆ ಬಗ್ಗೆ ಅತೀವ ಆಸಕ್ತಿಯಿದೆ ಎಂಬುದು ಅವರ ವಿನ್ಯಾಸಗಳಿಂದ ತಿಳಿಯುತ್ತದೆ. ಭಾರತದ ರಾಜ ಮನೆತನಗಳ ಕಲಾ ಪಂರಂಪರೆಯ ಜೊತೆಗೆ ಪ್ಯಾರಿಸ್‌ನ ಕಲೆಯಿಂದಲೂ ಅವರು ಪ್ರೇರಣೆ ಪಡೆದಿದ್ದಾರೆ. ಹಳೆಯ ಕಲೆಗೆ ಆಧುನಿಕತೆಯ ಸ್ಪರ್ಶವನ್ನೂ ನೀಡುವುದರಲ್ಲಿ ಅವರು ನಿಪುಣರು.

‘ಅತ್ಯುತ್ತಮ ಗುಣಮಟ್ಟದ ಪಿಂಗಾಣಿ ಹಾಗೂ ನಯವಾದ ಮತ್ತು ದೋಷರಹಿತ ಗ್ಲಾಸ್‌ ಬಳಸಲಾಗಿದೆ. ಇದರಿಂದಾಗಿ ತಟ್ಟೆ, ಕಪ್‌ಗಳಲ್ಲಿ ಗೀರು ಬೀಳುವುದಿಲ್ಲ. ಬಿರುಕು ಮೂಡುವುದಿಲ್ಲ. ಮೇಲ್ಮೈಯಲ್ಲಿ ಚಿಪ್ಪುಗಳು ಏಳುವುದಿಲ್ಲ’ ಎಂದು ನಿಶಿತಾ ಗುಣಮಟ್ಟದ ಖಾತರಿ ನೀಡುತ್ತಾರೆ.

ನಿಶಿತಾ ಸಂಪರ್ಕಕ್ಕೆ: www.nishitadesign.com/ 98860 56665.

ಪ್ರತಿಕ್ರಿಯಿಸಿ (+)