ಶುಕ್ರವಾರ, ಡಿಸೆಂಬರ್ 6, 2019
18 °C

ವಿವಾಹ ನೋಂದಣಿ ಕಡ್ಡಾಯ ಸ್ವಾಗತಾರ್ಹ: ಪಾರದರ್ಶಕವಾಗಿರಲಿ

Published:
Updated:
ವಿವಾಹ ನೋಂದಣಿ ಕಡ್ಡಾಯ ಸ್ವಾಗತಾರ್ಹ: ಪಾರದರ್ಶಕವಾಗಿರಲಿ

ದೇಶದಲ್ಲಿ ನಡೆಯುವ ಎಲ್ಲ ಮದುವೆಗಳೂ ಕಡ್ಡಾಯವಾಗಿ ನೋಂದಣಿಯಾಗಬೇಕು ಎಂದು ಕಾನೂನು ಆಯೋಗವು ಕೇಂದ್ರ ಸರ್ಕಾರಕ್ಕೆ ಇತ್ತೀಚೆಗೆ ಸಲ್ಲಿಸಿರುವ ಶಿಫಾರಸು ಅತ್ಯಂತ ಮಹತ್ವಪೂರ್ಣ ಮತ್ತು ಸ್ವಾಗತಾರ್ಹ. ಈ ಹಿನ್ನೆಲೆಯಲ್ಲಿ 1969ರ ಜನನ ಮತ್ತು ಮರಣ ಕಾಯ್ದೆಗೆ ತಿದ್ದುಪಡಿ ತರಬೇಕು ಮತ್ತು ಜನನ– ಮರಣಗಳನ್ನು ನೋಂದಣಿ ಮಾಡುವಂತೆಯೇ, ಇನ್ನು ಮುಂದೆ ವಿವಾಹಗಳನ್ನೂ ನೋಂದಣಿ ಮಾಡಿಸಬೇಕು ಎಂದು ಆಯೋಗ ಸೂಚಿಸಿದೆ. ಲಂಗುಲಗಾಮಿಲ್ಲದಂತೆ ಹೆಚ್ಚುತ್ತಿರುವ ವಿವಾಹ ವಿಚ್ಛೇದನಗಳನ್ನು ತಡೆಯುವಲ್ಲಿ ಮತ್ತು ಮಹಿಳೆಯರಿಗೆ ಆಗಬಹುದಾದ ಅನ್ಯಾಯವನ್ನು ತಪ್ಪಿಸುವಲ್ಲಿ ವಿವಾಹದ ಕಡ್ಡಾಯ ನೋಂದಣಿ ನೆರವಾಗಲಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಜತೆಗೆ ಬಾಲ್ಯವಿವಾಹ, ಅಕ್ರಮ ಬಹುಪತ್ನಿತ್ವ, ಮಾನವ ಕಳ್ಳಸಾಗಣೆ ಮತ್ತು ಲಿಂಗತಾರತಮ್ಯವನ್ನು ತಡೆಗಟ್ಟಲೂ ಇದರಿಂದ ಸಹಾಯವಾಗಲಿದೆ. ವಿವಾಹ ನೋಂದಣಿಯನ್ನು ಕಡ್ಡಾಯಗೊಳಿಸುವ ವಿಚಾರವನ್ನು ರಾಷ್ಟ್ರೀಯ ಮಹಿಳಾ ಆಯೋಗ ಆರಂಭದಿಂದಲೂ ಪ್ರತಿಪಾದಿಸುತ್ತಿದೆ. ಈ ನಿಟ್ಟಿನಲ್ಲಿ 2005ರಲ್ಲೇ ಮಾದರಿ ಮಸೂದೆಯೊಂದನ್ನು ಸಿದ್ಧಪಡಿಸಿತ್ತು. 2006ರಲ್ಲಿ ಸುಪ್ರೀಂ ಕೋರ್ಟ್‌ ಕೂಡಾ ತೀರ್ಪೊಂದರಲ್ಲಿ ಇದರ ಅಗತ್ಯದ ಬಗ್ಗೆ ಸ್ಪಷ್ಟ ಸೂಚನೆ ನೀಡಿತ್ತು. ಆ ತೀರ್ಪಿನ ಹಿನ್ನೆಲೆಯಲ್ಲೇ ಕರ್ನಾಟಕ ಸಹಿತ ಹಲವು ರಾಜ್ಯಗಳು ಮದುವೆ ಕಡ್ಡಾಯ ನೋಂದಣಿಗೆ ಕಾನೂನು ತಿದ್ದುಪಡಿ ಮಾಡಿದ್ದವು. 15ನೇ ಲೋಕಸಭೆಯಲ್ಲಿ  ಈ ವಿಷಯದ ಕುರಿತು ಮಸೂದೆಯೊಂದು ಮಂಡನೆಯಾಗಿತ್ತು. ಆದರೆ ಅದು ಕಾನೂನಾಗಲಿಲ್ಲ.

ವಿವಾಹವನ್ನು ಕಡ್ಡಾಯವಾಗಿ ನೋಂದಣಿ ಮಾಡುವುದರಿಂದ ದೇಶದ ಎಲ್ಲೆಡೆ ನಡೆಯುವ ವಿವಾಹಗಳ ಕ್ರಮಬದ್ಧ ದಾಖಲೆಯನ್ನು ಇಟ್ಟುಕೊಳ್ಳಲು ಸಾಧ್ಯವಾಗಲಿದೆ. ಧರ್ಮ, ಪ್ರದೇಶ ಮತ್ತು ವಿವಿಧ ಸಂಪ್ರದಾಯಗಳ ಹೊರತಾಗಿಯೂ ವಿವಾಹಗಳ ಬಗ್ಗೆ ಪಾರದರ್ಶಕ ದಾಖಲೆಗಳನ್ನು ಒದಗಿಸಬಹುದು. ಬಹಳ ಮುಖ್ಯವಾಗಿ ಅನಿವಾಸಿ ಭಾರತೀಯರು ಮತ್ತು ವಿದೇಶಿಯರು ಮದುವೆಗಳ ವಿಷಯದಲ್ಲಿ ನಡೆಸಲಾಗುವ ವಂಚನೆಗಳನ್ನು ತಡೆಗಟ್ಟಬಹುದು. ಅನಿವಾಸಿ ಭಾರತೀಯರು ಮದುವೆಯಾಗುವಾಗ ನೋಂದಣಿ ಕಡ್ಡಾಯ ಮಾಡುವುದರ ಮೂಲಕ ವಿವಾಹಕ್ಕೆ ಕಾನೂನು ಭದ್ರತೆ ಒದಗಿಸಬಹುದು. ಭಾರತದಂತಹ ಬಹುಧರ್ಮೀಯ, ಬಹುಸಂಸ್ಕೃತಿಯ ದೇಶದಲ್ಲಿ ವಿವಾಹವು ಆಯಾ ಧರ್ಮದ ವೈಯಕ್ತಿಕ ಕಾನೂನುಗಳ ಪ್ರಕಾರ, ವಿಭಿನ್ನ ಸಂಪ್ರದಾಯಗಳಂತೆ ನಡೆಯುತ್ತದೆ. ಮುಸ್ಲಿಮರ ವೈಯಕ್ತಿಕ ಕಾನೂನಿನ ಕೆಲವು ನಿಯಮಗಳ ಕುರಿತು ಬಿರುಸಿನ ಚರ್ಚೆಯೂ ನಡೆಯುತ್ತಿದೆ. ವಿವಾಹ ನೋಂದಣಿ ಕಡ್ಡಾಯದ ಹಿಂದೆ ಯಾರದೇ ವೈಯಕ್ತಿಕ ಕಾನೂನಿನಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ಇಲ್ಲ ಎಂದು ಕಾನೂನು ಆಯೋಗವು ಈಗಾಗಲೇ ಸ್ಪಷ್ಟನೆ ನೀಡಿದೆ. ‘ಯಾವ ವೈಯಕ್ತಿಕ ಕಾನೂನಿನ ಅನ್ವಯ ಬೇಕಿದ್ದರೂ ಮದುವೆ ನಡೆಯಲಿ, ಆದರೆ ಅದು ನೋಂದಣಿಯಾಗಬೇಕು ಎನ್ನುವುದಷ್ಟೇ ನಮ್ಮ ಉದ್ದೇಶ’ ಎಂದು ಆಯೋಗದ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಕಾನೂನು ತಿದ್ದುಪಡಿ ಒಂದು ಸಹಜ ವಿದ್ಯಮಾನ. ಕಾನೂನು ಆಯೋಗದ ಈ ಸಲಹೆಯ ಹಿಂದಿನ ಸದುದ್ದೇಶವನ್ನು ಅನುಮಾನಿಸುವ ಅಗತ್ಯವಿಲ್ಲ. ಆದರೆ ಕಾನೂನಿನ ಜಾರಿ ಸಮರ್ಪಕವಾಗಿ ಆಗುವಂತೆ ಆಯೋಗವು ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಅದರ ಉದ್ದೇಶ ಸಾರ್ಥಕವಾಗದು. ರಾಜ್ಯದ ಎಲ್ಲ ಪ್ರದೇಶಗಳಲ್ಲೂ ನೋಂದಣಿ ಕಚೇರಿಗಳು ಇರುವಂತೆ ರಾಜ್ಯ ಸರ್ಕಾರಗಳು ನೋಡಿಕೊಳ್ಳಬೇಕು.  ಸರ್ಕಾರಿ ಕಚೇರಿಗಳಲ್ಲಿ ಸಾಮಾನ್ಯವಾಗಿ ಇರುವ ಕೆಂಪುಪಟ್ಟಿ, ಭ್ರಷ್ಟಾಚಾರ, ಸಿಬ್ಬಂದಿ ಕೊರತೆ ಈ ಕಚೇರಿಗಳನ್ನು ಬಾಧಿಸಬಾರದು. ಹೆಚ್ಚಿನ ಖರ್ಚು ಇಲ್ಲದೆ, ಹೆಚ್ಚು ಪಾರದರ್ಶಕವಾಗಿ ಈ ಕಚೇರಿಗಳು ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ವಿವಾಹಕ್ಕೆ ಸಂಬಂಧಿಸಿ ವಿವಿಧ ವೈಯಕ್ತಿಕ ಕಾನೂನುಗಳ ಮಧ್ಯೆ ಮಾತ್ರ ಭಿನ್ನತೆ ಇರುವುದಲ್ಲ, ಈಗ ಇರುವ ವಿವಿಧ ಕಾನೂನುಗಳ ನಡುವೆಯೂ ವೈರುಧ್ಯಗಳಿವೆ ಎನ್ನುವುದನ್ನು ಸರ್ಕಾರ ಗಮನಿಸಬೇಕು. ಉದಾಹರಣೆಗೆ, ಲೈಂಗಿಕ ಸಂಪರ್ಕಕ್ಕೆ ಸಮ್ಮತಿ ನೀಡಲು 16 ವರ್ಷ, ಮದುವೆಗೆ ಹುಡುಗಿಗೆ 18 ವರ್ಷ ಆಗಿರಬೇಕು ಎಂದು ಈಗಿರುವ ಕಾನೂನುಗಳಲ್ಲಿ ಇದೆ. ಅದೇ ವೇಳೆ, 15ರ ಹರೆಯದಲ್ಲೇ ಗಂಡನೊಬ್ಬ ಹೆಂಡತಿಯ ಜತೆ ದೈಹಿಕ ಸಂಪರ್ಕ ಬೆಳೆಸಿದರೆ ಅದು ಅತ್ಯಾಚಾರ ಕಾನೂನಿನ ಅಡಿಯಲ್ಲಿ ಬರುವುದಿಲ್ಲ. ಇಂತಹ ವೈರುಧ್ಯಗಳನ್ನು ಇಲ್ಲವಾಗಿಸುವ ನಿಟ್ಟಿನಲ್ಲೂ ಸರ್ಕಾರ ತಿದ್ದುಪಡಿ ತರಬೇಕಿದೆ.

ಪ್ರತಿಕ್ರಿಯಿಸಿ (+)