ಶನಿವಾರ, ಡಿಸೆಂಬರ್ 7, 2019
16 °C

ರದ್ದಾದ ₹500 ಹಾಗೂ ₹1000 ಮುಖಬೆಲೆಯ ನೋಟು ವಿನಿಮಯ ಜಾಲ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರದ್ದಾದ ₹500 ಹಾಗೂ ₹1000 ಮುಖಬೆಲೆಯ ನೋಟು ವಿನಿಮಯ ಜಾಲ ಪತ್ತೆ

ಬೆಳಗಾವಿ: ಚಲಾವಣೆ ರದ್ದಾಗಿರುವ ₹500 ಹಾಗೂ ₹1000 ಮುಖಬೆಲೆಯ ಹಳೆಯ ನೋಟುಗಳನ್ನು ವಿನಿಮಯ ಮಾಡಿ ಹೊಸ ನೋಟುಗಳನ್ನು ಕೊಡಿಸುವುದಾಗಿ ಭರವಸೆ ನೀಡಿ ಹಣ ಸಂಗ್ರಹಿಸುತ್ತಿದ್ದ ಜಾಲವನ್ನು ಬೇಧಿಸಿರುವ ಸಿಸಿಬಿ ಪೊಲೀಸರು, ಆರು ಮಂದಿ ಆರೋಪಿಗಳನ್ನು ಸೋಮವಾರ ಬಂಧಿಸಿ ₹ 3.11 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಇಲ್ಲಿನ ಎಪಿಎಂಸಿ ಠಾಣೆ ವ್ಯಾಪ್ತಿಯ ರೋಹನ್‌ ರೆಸಿಡೆನ್ಸಿ ಹೋಟೆಲ್‌ ಕೊಠಡಿ ಸಂಖ್ಯೆ 204ರಲ್ಲಿ ಸಂಗ್ರಹಿಸಿದ್ದ ನೋಟುಗಳಲ್ಲಿ ಶೇ 80ರಷ್ಟು ₹ 500 (ಹಳೆಯ) ಹಾಗೂ ಶೇ  20ರಷ್ಟು ₹ 1000 ಮುಖಬೆಲೆಯವು.

ಗೋವಾದ ಅರವಿಂದ ತಳವಾರ (33), ಪುಣೆಯ ಸುಹಾಸ ಪಾಟೀಲ (31), ಬೆಳಗಾವಿ ತಾಲ್ಲೂಕು ಹಲಗಾ ಬಸ್ತವಾಡದ ರಾಮಬೈರು ಪಾಟೀಲ (28), ಮೀರಜ್‌ನ ಸದ್ದಾಂ ಶೇಖ್‌ (28), ಗುಜರಾತ್‌ನ ಅನಿಲ್‌ ಪಟೇಲ (29) ಹಾಗೂ ಭಟ್ಕಳದ ಅಬ್ದುಲ್‌ನಾಸೀರ್‌ (52) ಬಂಧಿತ ಆರೋಪಿಗಳು. ಇವರಲ್ಲಿ ಅನಿಲ್‌ ಪಾಟೀಲ ನಗದು ಪಡೆದ ಪ್ರಮುಖ ಆರೋಪಿಯಾಗಿದ್ದು, ಉಳಿದವರು ವಿನಿಮಯದ ಆಸೆಯಿಂದ ಹಣ ತಂದುಕೊಟ್ಟವರು.

‘ಗುಜರಾತ್‌ನ ಅನಿಲ್‌ ಪಟೇಲ ಇಲ್ಲಿನ ಮಹಾಂತೇಶನಗರದ ನಿವಾಸಿಯಾಗಿದ್ದು, ಪೀಠೋಪಕರಣ ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ. ಇವರು ‘ನನಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ನಲ್ಲಿ ಸಂಪರ್ಕವಿದ್ದು, ಹಳೆಯ ನೋಟುಗಳನ್ನು ವಿನಿಮಯ ಮಾಡಿಸಿಕೊಡುತ್ತೇನೆ’ ಎಂದು ಭರವಸೆ ನೀಡಿ ಹಣ ಸಂಗ್ರಹಿಸಿರುವುದು ಗೊತ್ತಾಗಿದೆ. ಸಂಜೆ ಅವರು ಹೋಟೆಲ್‌ನಲ್ಲಿ ವ್ಯವಹಾರ ನಡೆಸುತ್ತಿದ್ದಾಗ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಡಿಸಿಪಿ ಸೀಮಾ ಲಾಟಕರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಐವರು ಆರೋಪಿಗಳು ಹಣ ಕೊಟ್ಟವರಾಗಿದ್ದಾರೆ. ಒಬ್ಬೊಬ್ಬರು ₹ 20 ಲಕ್ಷ, ₹ 60 ಲಕ್ಷ, ₹ 1 ಕೋಟಿ... ಹೀಗೆ ಅನಿಲ್‌ ಪಟೇಲಗೆ ತಂದುಕೊಟ್ಟಿದ್ದಾರೆ.

ಇದೆಲ್ಲವೂ ನಮ್ಮದೇ ಹಣ. ಸರ್ಕಾರ ನೀಡಿದ್ದ ಗಡವು ಪ್ರಕಾರ ವಿನಿಮಯ ಮಾಡಿಕೊಳ್ಳುವುದಕ್ಕೆ ಆಗಿರಲಿಲ್ಲ. ಈಗ ಹೊಸ ನೋಟು ಪಡೆದುಕೊಳ್ಳಲು ಹಳೆಯವನ್ನು ತಂದಿದ್ದೆವು ಎಂದು ಆರೋಪಿಗಳು ತಿಳಿಸಿದ್ದಾರೆ. ಅಕ್ರಮವಾಗಿ ಹಣ ಸಂಗ್ರಹಿಸುತ್ತಿರುವ ವ್ಯವಸ್ಥಿತ ಜಾಲ ಸಕ್ರಿಯವಾಗಿರುವ ಬಗ್ಗೆ ಶಂಕೆ ಇದೆ. ಅನಿಲ್‌ಗೆ ಯಾರ್ಯಾರ ಜತೆ ಸಂಪರ್ಕವಿದೆ ಎನ್ನುವುದನ್ನು ತನಿಖೆ ನಡೆಸಲಾಗುತ್ತಿದೆ. ನಗದನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಸಿಸಿಬಿ ಇನ್‌ಸ್ಪೆಕ್ಟರ್‌ ಬಿ.ಆರ್‌. ಗಡ್ಡೇಕರ ನೇತೃತ್ವದ ತಂಡ ಈ ಪತ್ತೆ ಕಾರ್ಯಾಚರಣೆ ನಡೆಸಿದೆ. ಅವರಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಡಿಸಿಪಿ ಹೇಳಿದರು.

ಡಿಸಿಪಿ ಅಮರನಾಥರೆಡ್ಡಿ, ಎಸಿಪಿ ಶಿವಕುಮಾರ್‌, ಎಪಿಎಂಸಿ ಠಾಣೆ ಇನ್‌ಸ್ಪೆಕ್ಟರ್‌ ಜೆ.ಎಂ. ಕಾಲಿಮಿರ್ಚಿ ಇದ್ದರು.

 

ಪ್ರತಿಕ್ರಿಯಿಸಿ (+)