ಶುಕ್ರವಾರ, ಡಿಸೆಂಬರ್ 13, 2019
20 °C

ಕೇಂದ್ರ ನೌಕರರ ಭತ್ಯೆಗಳಿಗೆ ಕತ್ತರಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ನೌಕರರ ಭತ್ಯೆಗಳಿಗೆ ಕತ್ತರಿ?

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಇಲ್ಲಿಯವರೆಗೆ ಪಡೆಯುತ್ತಿದ್ದ ಕೆಲವು ಭತ್ಯೆಗಳು ಮತ್ತು ಸೌಲಭ್ಯಗಳಿಗೆ ಇನ್ನು ಮುಂದೆ ಕತ್ತರಿ ಬೀಳಲಿದೆ.

ಕೇಂದ್ರ ನೌಕರರು ಇಲ್ಲಿಯವರೆಗೆ ಪಡೆಯುತ್ತಿದ್ದ ಕುಟುಂಬ ಯೋಜನೆ ಭತ್ಯೆ, ಆಹಾರ ಭತ್ಯೆ, ಆಯ್ದ ಕೆಲವು ನೌಕರ ವರ್ಗದವರಿಗೆ ನೀಡಲಾಗುತ್ತಿದ್ದ ಕ್ಷೌರ ಮತ್ತು ಸಾಬೂನು ಭತ್ಯೆಯಂತಹ ಹಲವು ಸೌಲಭ್ಯ ರದ್ದಾಗಲಿವೆ.

ಅಷ್ಟೇ ಅಲ್ಲದೆ, ದೇಶದ ಅತ್ಯಂತ ಹಿರಿಯ ಅಧಿಕಾರಿಯಾಗಿರುವ ಸಂಪುಟ ಕಾರ್ಯದರ್ಶಿಗೆ  ನೀಡಲಾಗುತ್ತಿದ್ದ ಮಾಸಿಕ ₹10,000 ಅತಿಥಿ ಭತ್ಯೆಯನ್ನೂ ನಿಲ್ಲಿಸುವಂತೆ ಹಣಕಾಸು ಕಾರ್ಯದರ್ಶಿ ಅಶೋಕ್‌ ಲವಾಸಾ ನೇತೃತ್ವದ ಭತ್ಯೆಗಳ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.  ಸಮಿತಿಯ ಹೆಚ್ಚಿನ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಯಥಾವತ್ತಾಗಿ  ಜಾರಿಗೆ ತರಲು ಮುಂದಾಗಿದೆ. ಕೆಲವು ಶಿಫಾರಸುಗಳನ್ನು ಪರಿಷ್ಕರಿಸಿದೆ ಎಂದು

ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಆದರೆ, ಏಳನೇ ವೇತನ ಆಯೋಗ ರದ್ದು ಮಾಡುವಂತೆ ಶಿಫಾರಸು ಮಾಡಿದ್ದ ಅಂತ್ಯಸಂಸ್ಕಾರ ಭತ್ಯೆ (₹6,000) ಮತ್ತು ಸೈಕಲ್‌ ಭತ್ಯೆಗಳನ್ನು (₹90)  ಪರಿಷ್ಕರಣೆಯೊಂದಿಗೆ ಹಾಗೆಯೇ ಉಳಿಸಿ ಕೊಳ್ಳಲಾಗಿದೆ. 

ಪ್ರಧಾನಿ ನೇತೃತ್ವದಲ್ಲಿ ಕಳೆದ ತಿಂಗಳ ಅಂತ್ಯದಲ್ಲಿ ನಡೆದ ಸಚಿವ ಸಂಪುಟ ಸಭೆ ಲವಾಸಾ ಸಮಿತಿಯ ಶಿಫಾರಸುಗಳಿಗೆ ಒಪ್ಪಿಗೆ ನೀಡಿದ್ದು, ಈ ಕುರಿತು ಇದೇ 6ರಂದು ಆದೇಶವನ್ನೂ  ಹೊರಡಿಸಿದೆ.  ಅರೆ ಸೇನಾಪಡೆ ಸಿಬ್ಬಂದಿಗೆ  ಮಾಸಿಕ ₹5 ಹಾಗೂ ಅಸ್ಸಾಂ ರೈಫಲ್ಸ್‌ನ ಗ್ರೂಪ್‌ ‘ಬಿ’ ಮತ್ತು ’ಸಿ’ ದರ್ಜೆ ಸಿಬ್ಬಂದಿಗೆ  ₹90   ಕ್ಷೌರ ಭತ್ಯೆ ನೀಡಲಾಗುತ್ತಿತ್ತು. ಇನ್ನು ಆ ಭತ್ಯೆ ನಿಲ್ಲಲಿದೆ.

ಯಾವ ಮಾಸಿಕ ಭತ್ಯೆಗೆ ಕತ್ತರಿ?

 ಸಂಪುಟ ಸಚಿವಾಲಯದ ಅಧಿಕಾರಿಗಳಿಗೆ ನೀಡುತ್ತಿದ್ದ ಗೋಪ್ಯ ಭತ್ಯೆ

 ಚಿಕ್ಕ ಕುಟುಂಬ ಉತ್ತೇಜಿಸಲು  ನೀಡುತ್ತಿದ್ದ ₹210ರಿಂದ ₹1,000  ಭತ್ಯೆ  

 ಮಾಸಿಕ ಆಹಾರ ಭತ್ಯೆ ₹200,   ಕ್ಷೌರ ಭತ್ಯೆ ₹5–₹90

ಯಾವ ಭತ್ಯೆ ಹೆಚ್ಚಳ?

  ರೈಲ್ವೆ ಮತ್ತು ಅಂಚೆ ಇಲಾಖೆ ಸಿಬ್ಬಂದಿಗೆ ನೀಡಲಾಗುತ್ತಿದ್ದ ಸೈಕಲ್‌ ಭತ್ಯೆ ₹90ರಿಂದ ₹180ಕ್ಕೆ ಹೆಚ್ಚಳ.

 ಅಂತ್ಯಸಂಸ್ಕಾರ ಭತ್ಯೆ ₹6,000ದಿಂದ ₹9,000ಕ್ಕೆ ಹೆಚ್ಚಳ

ಪ್ರತಿಕ್ರಿಯಿಸಿ (+)