ಭಾನುವಾರ, ಡಿಸೆಂಬರ್ 15, 2019
17 °C

ಉತ್ತರ ಭಾರತದಲ್ಲಿ ಮಳೆ, ಪ್ರವಾಹ, ಜೀವಹಾನಿ

ಪಿಟಿಐ Updated:

ಅಕ್ಷರ ಗಾತ್ರ : | |

ಉತ್ತರ ಭಾರತದಲ್ಲಿ ಮಳೆ, ಪ್ರವಾಹ, ಜೀವಹಾನಿ

ಪಟ್ನಾ/ ಇಟಾನಗರ/ ಇಂಫಾಲ/ ಲಖನೌ /ಗುವಾಹಟಿ: ಅರುಣಾಚಲ ಪ್ರದೇಶ, ಉತ್ತರ ಪ್ರದೇಶ, ಬಿಹಾರ ಮತ್ತು ಮಣಿಪುರಗಳಲ್ಲಿ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಜೀವಹಾನಿ ಉಂಟಾಗಿದೆ. ಕೆಲವು ಕಡೆಗಳಲ್ಲಿ ಪ್ರವಾಹ, ಭೂಕುಸಿತದಿಂದಾಗಿ ಜನ ನಿರಾಶ್ರಿತರಾಗಿದ್ದಾರೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಹಲವು ಭಾಗಗಳಲ್ಲಿ ಭೂ ಸಂಪರ್ಕ ಕಡಿತಗೊಂಡಿದೆ.

ಬಿಹಾರದ ಬೇರೆ ಬೇರೆ ಭಾಗಗಳಲ್ಲಿ ಭಾನುವಾರದಿಂದ ಗುಡುಗು ಸಹಿತ ಮಳೆ ಸುರಿಯುತ್ತಿದ್ದು,  32 ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ. ರೋಹ್ತಾಸ್ ಮತ್ತು ವೈಶಾಲಿ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿಯ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮೃತರ ಕುಟುಂಬಕ್ಕೆ ಉದಾರವಾಗಿ ತಲಾ ₹ 4 ಲಕ್ಷ ಪರಿಹಾರ ನೀಡಲಾಗಿದ್ದು, ಈ ಮೊತ್ತವನ್ನು ಸಂತ್ರಸ್ತರ ಕುಟುಂಬಕ್ಕೆ ತಲುಪಿಸಲಾಗಿದೆ’ ಎಂದು ವಿಪತ್ತು ನಿರ್ವಹಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರತ್ಯಯ್ ಅಮೃತ್ ಹೇಳಿದ್ದಾರೆ.

‘ಸರ್ಕಾರವು ಶೀಘ್ರವೇ ಸಿಡಿಲನ್ನು ಗುರುತಿಸುವ ಆ್ಯಪ್ ಬಿಡುಗಡೆ ಮಾಡಲಿದೆ. ಇದರಿಂದ ಸಿಡಿಲು ಮತ್ತು ಗುಡುಗಿನ ಮುನ್ಸೂಚನೆ ಸಿಗಲಿದೆ’ ಎಂದೂ ಅವರು ತಿಳಿಸಿದರು.

ಪ್ರವಾಹದಲ್ಲಿ ಕೊಚ್ಚಿಹೋದ ಮಗು: ಕಳೆದ ಮೂರು ದಿನಗಳಿಂದ ಅರುಣಾಚಲ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು ಮೂರು ವರ್ಷದ ಮಗುವೊಂದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಹಲವೆಡೆ ಭೂಕುಸಿತ ಉಂಟಾಗಿದೆ. ಕೆಲ ಭಾಗಗಳು ಜಲಾವೃತವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯದ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪ್ರಮುಖ ನಗರಗಳಿಗೆ ಭೂ ಸಂಪರ್ಕ ಕಡಿತಗೊಂಡಿದೆ. ಜನರಿಗೆ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ತಿಳಿಸಲಾಗಿದೆ.

ಸಾರಿಗೆ–ಸಂಪರ್ಕ ವ್ಯತ್ಯಯ: ಮಣಿಪುರದಲ್ಲೂ ಧಾರಾಕಾರ ಮಳೆಗೆ ಭೂಮಿ ಕುಸಿದಿದೆ. ಪರಿಣಾಮವಾಗಿ ಇಂಧನ, ಸರಕು ಸಾಗಣೆ ಮೇಲೆ ಗಂಭೀರ ಪರಿಣಾಮ ಬೀರಿದೆ.

ಇಂಫಾಲ ಮತ್ತು ಜಿರಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 37, ಇಂಫಾಲ ಮತ್ತು ಸೇನಾಪತಿ ಜಿಲ್ಲೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 39ರಲ್ಲಿ ಭೂಮಿ ಕುಸಿದಿದೆ. ಇದರಿಂದಾಗಿ ರಾಜಧಾನಿ ಇಂಫಾಲ, ನಾಗಾಲ್ಯಾಂಡ್ ಮತ್ತು ಅಸ್ಸಾಂ ನಡುವೆ ಸಂಪರ್ಕದಲ್ಲಿ ವ್ಯತ್ಯಯವಾಗಿದೆ. 5,000ಕ್ಕೂ ಅಧಿಕ ಮಂದಿಯನ್ನು ತಾತ್ಕಾಲಿಕ ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಪ್ರವಾಹಪೀಡಿತ ಪ್ರದೇಶದ ಪರಿಶೀಲನೆ ನಡೆಸಿದ  ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಿಕೊಡುವ ಭರವಸೆ ನೀಡಿದ್ದಾರೆ.

ಹೆಚ್ಚುತ್ತಿರುವ ಗಂಗೆಯ ಹರಿವು: ಉತ್ತರಪ್ರದೇಶದ ಹಲವೆಡೆ ತೀವ್ರ ಮಳೆಯಾಗುತ್ತಿದೆ. ಘಾಘ್ರಾ ಮತ್ತು ಶಾರದಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಗಂಗಾ ನದಿಯಲ್ಲೂ ನೀರಿನ ಹರಿವು ಹೆಚ್ಚಳವಾಗಿದೆ.

‘ಗೋರಖ್‌ಪುರದ ಬಿರ್ದ್‌ಘಾಟ್‌ನಲ್ಲಿ 130.4 ಮಿ.ಮೀ., ಬಸ್ತಿಯಲ್ಲಿ 90 ಮಿ.ಮೀ., ಮಹಾರಾಜ್‌ಗಂಜ್‌ನಲ್ಲಿ 78.2 ಮಿ.ಮೀಗಳಷ್ಟು ದಾಖಲೆಯ ಮಳೆ ಬಿದ್ದಿದೆ’ ಎಂದು ಕೇಂದ್ರ ಜಲ ಆಯೋಗ ತಿಳಿಸಿದೆ.

ಅಸ್ಸಾಂನಲ್ಲಿ ಏಳು ಸಾವು, 12.55 ಲಕ್ಷ ಜನರಿಗೆ ತೊಂದರೆ: ಅಸ್ಸಾಂನ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಬಿಗಡಾಯಿಸಿದ್ದು, ಸೋಮವಾರ ಒಂದೇ ದಿನ ಏಳು ಮಂದಿ   ಮೃತಪಟ್ಟಿದ್ದಾರೆ. 12.55 ಲಕ್ಷಕ್ಕೂ ಹೆಚ್ಚು   ಜನರಿಗೆ ತೊಂದರೆಯಾಗಿದೆ.

ಈ ವರ್ಷ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 33ಕ್ಕೆ ಏರಿದೆ. 2,053 ಗ್ರಾಮಗಳು ಪ್ರವಾಹದಿಂದಾಗಿ ತೊಂದರೆಗೊಳಗಾಗಿವೆ. 1.05 ಲಕ್ಷ ಹೆಕ್ಟೇರ್‌ಗಳಲ್ಲಿ ಬೆಳೆದ ಬೆಳೆಗೆ ಹಾನಿಯಾಗಿದೆ.

ಪ್ರಧಾನಿ ವಿಚಾರಣೆ: ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ  ಪರಿಸ್ಥಿತಿಯ ವಿವರ ಪಡೆದ ಪ್ರಧಾನಿ ನರೇಂದ್ರ ಮೋದಿ, ನೆರವಿನ ಭರವಸೆ ನೀಡಿದ್ದಾರೆ.

**

ಕೇಂದ್ರದ ನೆರವು

ನವದೆಹಲಿ:
ಪ್ರವಾಹ, ಭೂಕುಸಿತ ಎದುರಿಸುತ್ತಿರುವ ಈಶಾನ್ಯ ರಾಜ್ಯಗಳಿಗೆ ಕೇಂದ್ರ ನೆರವಿನ ಹಸ್ತ ಚಾಚಲಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

‘ಈಶಾನ್ಯ ರಾಜ್ಯಗಳ ಹೆಚ್ಚಿನ ಭಾಗ ಭೂಕುಸಿತ ಮತ್ತು ಪ್ರವಾಹಕ್ಕೆ ನಲುಗಿದೆ. ಪರಿಹಾರ ಮತ್ತು ಪುನಃಸ್ಥಾಪನೆಗಾಗಿ ಕೇಂದ್ರವು ಮಾನವ ಸಂಪನ್ಮೂಲ ಹಾಗೂ ಇತರೆ ಸಹಾಯ ನೀಡಲಿದೆ’ ಎಂದು ಅವರು ಸೋಮವಾರ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)