ಬುಧವಾರ, ಡಿಸೆಂಬರ್ 11, 2019
20 °C

ತಿಂಗಳಲ್ಲಿ ಸಾವಿರ ಜನರಿಗೆ ಡೆಂಗಿ

ವಿಜಯಕುಮಾರ್‌ ಸಿಗರನಹಳ್ಳಿ Updated:

ಅಕ್ಷರ ಗಾತ್ರ : | |

ತಿಂಗಳಲ್ಲಿ ಸಾವಿರ ಜನರಿಗೆ ಡೆಂಗಿ

ಬೆಂಗಳೂರು: ರಾಜ್ಯದಲ್ಲಿ ಡೆಂಗಿ ಜ್ವರ ಪ್ರಕರಣ ಹೆಚ್ಚುತ್ತಿದ್ದು, ಜೂನ್‌ ತಿಂಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ಈ ಜ್ವರದಿಂದ ಬಳಲಿದ್ದಾರೆ.

ಜನವರಿಯಿಂದ ಮೇ ಅಂತ್ಯದವರೆಗೆ 759 ಪ್ರಕರಣ ಮಾತ್ರ ಪತ್ತೆಯಾಗಿತ್ತು. ಜೂನ್‌ನಲ್ಲಿ 1,033 ಜನ ಡೆಂಗಿ ಜ್ವರದಿಂದ ನರಳಿದ್ದಾರೆ. ಮೈಸೂರು, ಮಂಡ್ಯ, ಉಡುಪಿ,  ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲೇ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಜುಲೈನಲ್ಲೂ ಈವರೆಗೆ 546 ಜನರಲ್ಲಿ ಡೆಂಗಿ ಜ್ವರ ಕಾಣಿಸಿಕೊಂಡಿದೆ. ಈ ವರ್ಷ ಒಟ್ಟು  10,240 ಜನರ ರಕ್ತ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ  2,338 ಜನರಿಗೆ ಡೆಂಗಿ ಜ್ವರ ಇರುವುದು  ಖಚಿತವಾಗಿದೆ.

ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ‘ಈಡಿಸ್‌ ಈಜಿಪ್ಟಿ’ ಎಂಬ ಸೊಳ್ಳೆಯಿಂದ  ಡೆಂಗಿ ಹರಡುತ್ತದೆ. ಜೂನ್ ಮತ್ತು ಜುಲೈ ತಿಂಗಳಿನ ವಾತಾವರಣ ಇದಕ್ಕೆ ಪೂರಕವಾಗಿದೆ. ಹೀಗಾಗಿ ಡೆಂಗಿ ಪ್ರಕರಣ ಹೆಚ್ಚಾಗಿದೆ ಎಂದು ಆರೋಗ್ಯ ಇಲಾಖೆ ನಿರ್ದೇಶಕ ಡಾ. ಪಿ.ಎಲ್‌. ನಟರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ಅಧಿಕಾರಿಗಳ ತಂಡ ರಚನೆ: ಸೊಳ್ಳೆಗಳು ಉತ್ಪತ್ತಿ ಆಗುವುದನ್ನು ತಡೆಯುವುದರಿಂದ ಡೆಂಗಿ ನಿಯಂತ್ರಿಸಲು ಸಾಧ್ಯ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಪ್ರತಿ ಜಿಲ್ಲೆಗೆ ಭೇಟಿ ನೀಡಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ರಾಜ್ಯ ಮಟ್ಟದ 3 ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ ಎಂದೂ ಅವರು ತಿಳಿಸಿದರು.

ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿ ಹಳ್ಳಿಗೂ ತೆರಳಿ ಸರ್ವೆ ನಡೆಸುತ್ತಿದ್ದಾರೆ. ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ಗುರುತಿಸಿ ನಾಶಪಡಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಸಿಬ್ಬಂದಿ ಕೊರತೆ ಇರುವ ಕಾರಣ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿ ಮತ್ತು ನರ್ಸಿಂಗ್‌ ವಿದ್ಯಾರ್ಥಿಗಳ ಸಹಕಾರ ಪಡೆದು ಎಲ್ಲಾ ವಾರ್ಡ್‌ಗಳಿಗೂ ಭೇಟಿ ನೀಡಲಾಗುತ್ತಿದೆ ಎಂದೂ ಅವರು ವಿವರಿಸಿದರು.

ರಕ್ತನಿಧಿ ಕೇಂದ್ರಗಳಿಗೂ ಸೂಚನೆ: ಡೆಂಗಿ ಜ್ವರಕ್ಕೆ ತುತ್ತಾದವರಿಗೆ ಬಿಳಿ ರಕ್ತ ಕಣಗಳನ್ನು ಪೂರೈಸಬೇಕಾಗುತ್ತದೆ. ರಕ್ತನಿಧಿ ಕೇಂದ್ರಗಳಲ್ಲಿ ಹೆಚ್ಚಿನ ದಾಸ್ತಾನು ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ದರ ಪಟ್ಟಿಯ ಫಲಕ ಅಳವಡಿಸಲಾಗಿದ್ದು, ನಿಗದಿಗಿಂತ ಹೆಚ್ಚಿನ ದರ ಪಡೆದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ ಎಂದು ಅವರು ಹೇಳಿದರು.

ಸಾವು ಖಚಿತ ಆಗಿಲ್ಲ

ಈ ವರ್ಷ ಡೆಂಗಿ ಜ್ವರದಿಂದ ಯಾರೊಬ್ಬರೂ ಸತ್ತಿರುವುದು  ಖಚಿತ ಆಗಿಲ್ಲ. ಮಾಧ್ಯಮಗಳ ವರದಿ ಮತ್ತು ಸಂಬಂಧಿಕರು ಶಂಕಿಸಿರುವ ಪ್ರಕರಣಗಳ ಮರು ಪರಿಶೀಲನೆಗೆ ಸಮಿತಿ ರಚಿಸಲಾಗಿದೆ. ಎರಡು ದಿನದಲ್ಲಿ ಈ ಸಮಿತಿ ಸಭೆ ನಡೆಯಲಿದ್ದು,  ನಂತರ ಖಚಿತವಾಗಲಿದೆ ಎಂದು ನಟರಾಜ್ ತಿಳಿಸಿದರು.

ಪ್ರತಿಕ್ರಿಯಿಸಿ (+)