ಮಂಗಳವಾರ, ಡಿಸೆಂಬರ್ 10, 2019
18 °C
ವ್ಯಾಪಾರಿಗಳ ನಡೆಗೆ ಗ್ರಾಹಕರ ಆಕ್ಷೇಪ: ಕೋಡ್‌ ಜನರೇಟ್‌ ಆಗಿಲ್ಲ ಎನ್ನುತ್ತಿರುವ ಮಾಲೀಕರು

ಔಷಧ ಖರೀದಿಸಿದರೂ ಬಿಲ್‌ ಕೊಡುತ್ತಿಲ್ಲ

Published:
Updated:
ಔಷಧ ಖರೀದಿಸಿದರೂ ಬಿಲ್‌ ಕೊಡುತ್ತಿಲ್ಲ

ಬೆಂಗಳೂರು: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಂಡ ಬಳಿಕ, ನಗರದ ಕೆಲವು ಔಷಧ ಮಳಿಗೆಗಳಲ್ಲಿ ಖರೀದಿಸಿದ ಔಷಧಗಳಿಗೆ ಬಿಲ್‌ ನೀಡುತ್ತಿಲ್ಲ. ಬಿಲ್‌ ಕೇಳಿದರೆ, ಮೂರು ದಿನ ಬಿಟ್ಟು ಬನ್ನಿ ಎಂದು ಹೇಳುತ್ತಿದ್ದಾರೆ...’ ಎಂದು ಕೆಲವು ಗ್ರಾಹಕರು ‘ಪ್ರಜಾವಾಣಿ’ ಬಳಿ ದೂರಿದ್ದಾರೆ.

‘ಹಳೇ ಬಿಲ್‌ ಪುಸ್ತಕಗಳನ್ನು ಬಳಸುವಂತಿಲ್ಲ. ಜಿಎಸ್‌ಟಿ ಅನ್ವಯ ಬಿಲ್‌ ಕೊಡಬೇಕು. ಆದರೆ, ಕೋಡ್‌ ಜನರೇಟ್‌ ಆಗದ ಕಾರಣ ಬಿಲ್‌ ಕೊಡಲು ಸಾಧ್ಯವಾಗುತ್ತಿಲ್ಲ’ ಎಂದು ಔಷಧ ಮಳಿಗೆಗಳ ಮಾಲೀಕರು ಸಬೂಬು ಹೇಳುತ್ತಿದ್ದಾರೆ.

‘ನಾವು ಕೊಳ್ಳುವ ಔಷಧಕ್ಕೆ ಮಳಿಗೆಯವರು ಬಿಲ್‌ ಕೊಡಲೇಬೇಕು.  ಬಿಲ್‌ ಕೊಡದಿದ್ದರೆ  ಗ್ರಾಹಕರಿಗೆ ತೊಂದರೆ ಉಂಟಾಗುತ್ತದೆ.  ಔಷಧ ಬಳಕೆಯಿಂದ ಅಡ್ಡ ಪರಿಣಾಮ ಉಂಟಾದರೆ ಅಥವಾ ಪ್ರಾಣಕ್ಕೆ ಹಾನಿ ಉಂಟಾದರೆ ಯಾರು ಜವಾಬ್ದಾರರು. ಇಂತಹದ್ದೇ ಮಳಿಗೆಯಲ್ಲಿ ಖರೀದಿ ಮಾಡಿದ್ದೇವೆ ಎಂದು ಹೇಳಲು ನಮ್ಮ ಬಳಿ ಯಾವ ಆಧಾರ ಇದೆ’ ಎಂದು  ಜಕ್ಕಸಂದ್ರದ ನಿವಾಸಿ ಕೆ.ಗಿರೀಶ್‌ ಪ್ರಶ್ನಿಸಿದರು.

‘ಔಷಧಿ ಖರೀದಿಗೆ ಮಾಡುವ ವೆಚ್ಚವನ್ನು ನಾನು ಕೆಲಸ ಮಾಡುವ ಕಂಪೆನಿ ಮರುಪಾವತಿಸುತ್ತದೆ. ಅದಕ್ಕೆ ಬಿಲ್‌ ಕಡ್ಡಾಯ. ಮೆಡಿಕಲ್‌ ಶಾಪ್‌ನಲ್ಲಿ ಬಿಲ್‌ ನೀಡದಿದ್ದರೆ ನಾವು ಔಷಧಿಯ ವೆಚ್ಚವನ್ನು ಹಿಂದೆ ಪಡೆಯಲು ಕಷ್ಟ ಆಗುತ್ತದೆ’ ಎಂದು ಸಂಜಯನಗರದ ಕೃಷ್ಣಕುಮಾರ್‌ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ‘ಬೆಂಗಳೂರು ಕೆಮಿಸ್ಟ್‌  ಆ್ಯಂಡ್‌ ಡ್ರಗಿಸ್ಟ್‌ ಅಸೋಸಿಯೇಷನ್‌’ ಅಧ್ಯಕ್ಷ ಎಂ.ಕೆ.ಮಾಯಣ್ಣ, ‘ನಗರದಲ್ಲಿ 8,900 ಔಷಧ ಮಳಿಗೆಗಳಿವೆ. ಜಿಎಸ್‌ಟಿ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ಇತ್ತೀಚೆಗೆ ಸಭೆ ಹಮ್ಮಿಕೊಂಡಿದ್ದೆವು. ಈ ಸಭೆಗೆ ಕೇವಲ 1,500 ಮಂದಿ ಬಂದಿದ್ದರು. ಉಳಿದವರಿಗೆ ಜಿಎಸ್‌ಟಿ ಬಗ್ಗೆ ಸರಿಯಾದ ಮಾಹಿತಿ ಇಲ್ಲ’ ಎಂದರು.

‘ಹಳೇ ಪದ್ಧತಿಯಲ್ಲಿ ಬಿಲ್‌ ನೀಡುವಂತಿಲ್ಲ. ಆದರೆ, ಜಿಎಸ್‌ಟಿ ಅನ್ವಯ ಹೇಗೆ ಬಿಲ್‌ ಕೊಡಬೇಕು ಎಂಬುದರ ಕುರಿತೂ ಔಷಧ ವ್ಯಾಪಾರಿಗಳಿಗೆ ತಿಳಿವಳಿಕೆ ಇಲ್ಲ. ಈ ಗೊಂದಲದಿಂದಾಗಿ ಕೆಲವರು ಬಿಲ್‌ ಕೊಡಲು ಹಿಂದೇಟು ಹಾಕುತ್ತಿರಬಹುದು’ ಎಂದು  ಹೇಳಿದರು.

‘ದಾಸ್ತಾನು ಇರುವ ಔಷಧಗಳನ್ನು ಆರು ತಿಂಗಳವರೆಗೂ ಹಳೆಯ ದರದಲ್ಲೇ ಮಾರಾಟ ಮಾಡಬಹುದು. ಆದರೆ, ಬಿಲ್ಲಿಂಗ್‌ ಮಾತ್ರ ಜಿಎಸ್‌ಟಿ ಅನ್ವಯ ಮಾಡಬೇಕು. ಔಷಧಗಳಿಗೆ ಶೇ 5 ಹಾಗೂ ಶೇ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಯಾವ್ಯಾವ ಔಷಧಕ್ಕೆ ಎಷ್ಟು ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ ಹಾಕಬೇಕು ಎಂಬುದರ ಬಗ್ಗೆ ಒಂದು ಸೂತ್ರ ಇದೆ. ಅದರ ಅನುಸಾರ ಬಿಲ್ಲಿಂಗ್‌ ಮಾಡುತ್ತಿದ್ದೇವೆ’ ಎಂದರು.

‘ದಾಸ್ತಾನು ಇರುವ ಔಷಧಕ್ಕೆ ಶೇ 5.5ರಷ್ಟು ತೆರಿಗೆ ಕಟ್ಟಿದ್ದೇವೆ. ಆದರೆ, ಈಗ ಜಿಎಸ್‌ಟಿಯನ್ನು ಔಷಧ ವ್ಯಾಪಾರಿಗಳು ಕಟ್ಟುತ್ತಾರೆ. ಇದರಿಂದ ಗ್ರಾಹಕರಿಗೆ ಯಾವುದೇ ಹೊರೆ ಬೀಳುತ್ತಿಲ್ಲ’ ಎಂದು ತಿಳಿಸಿದರು.

ಬಿಲ್‌ ನೀಡುವುದು ಕಡ್ಡಾಯ’

‘ಬಿಲ್‌ ಕೊಡದೆ ಔಷಧಗಳನ್ನು ಮಾರಾಟ ಮಾಡುವಂತಿಲ್ಲ. ಇದು ಅಪರಾಧವೂ ಆಗುತ್ತದೆ. ಹೀಗಾಗಿ ನಗರದಲ್ಲಿರುವ ಎಲ್ಲ ಮಳಿಗೆಗಳೂ ಕಡ್ಡಾಯವಾಗಿ ಬಿಲ್‌ ಕೊಡಬೇಕು’ ಎಂದು ಸಂಘದ ಉಪಾಧ್ಯಕ್ಷ ಗಣೇಶ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)