ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವ ಸುಡಲು ಗ್ರಾ.ಪಂ. ಕಚೇರಿ ಎದುರು ಕಟ್ಟಿಗೆ ಒಟ್ಟಿದ ಗ್ರಾಮಸ್ಥರು!

Last Updated 10 ಜುಲೈ 2017, 19:30 IST
ಅಕ್ಷರ ಗಾತ್ರ

ಗುಳೇದಗುಡ್ಡ (ಬಾಗಲಕೋಟೆ ಜಿಲ್ಲೆ): ದಲಿತ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಗೆ ಜಾಗ ಸಿಗದೇ, ಸಮೀಪದ ಲಾಯಲಗುಂದಿ ಗ್ರಾಮದ ದಲಿತರು ಸೋಮವಾರ ಗ್ರಾಮ ಪಂಚಾಯ್ತಿ ಕಚೇರಿ ಎದುರು ಶವಸಂಸ್ಕಾರ ನಡೆಸಲು ಕಟ್ಟಿಗೆ ರಾಶಿ ಹಾಕಿ ಪ್ರತಿಭಟಿಸಿದರು.

ಗ್ರಾಮದ ಪಾಂಡಪ್ಪ ದುರಗಪ್ಪ ಮಾದರ (40) ಸೋಮವಾರ ಮೃತಪಟ್ಟಿದ್ದರು. ಆದರೆ ಅವರ ಅಂತ್ಯಕ್ರಿಯೆ ನೆರವೇರಿಸಲು ಸ್ಮಶಾನ ಇಲ್ಲದೇ ಪರದಾಡಿದ ಸಂಬಂಧಿಕರು, ಕೊನೆಗೆ ಪ್ರತಿಭಟನೆಗೆ ಮುಂದಾದರು.

‘ಗ್ರಾಮದಲ್ಲಿ ಯಾರೇ ಮೃತಪಟ್ಟರೂ ಅವರ ಅಂತ್ಯಕ್ರಿಯೆಗಾಗಿ ಸ್ಮಶಾನವಿಲ್ಲ. ಕೆಲವು ಸಮಾಜದವರು ತಮ್ಮ ತಮ್ಮ ಹೊಲದಲ್ಲಿ ಅಂತ್ಯಸಂಸ್ಕಾರ ಮಾಡುತ್ತ ಬಂದಿದ್ದಾರೆ. ದಲಿತರಿಗೆ, ಅಮರೇಶ್ವರ ಕೊಳ್ಳದ ಹತ್ತಿರ ಇರುವ ಲಚ್ಚೆವ್ವ ಗೊರವರ ಎಂಬುವವರ ಜಮೀನನ್ನು ಗುರುತಿಸಿ ಅಲ್ಲಿ ಅಂತ್ಯಸಂಸ್ಕಾರ ಮಾಡಲು ವ್ಯವಸ್ಥೆ ಮಾಡಲಾಗಿತ್ತು.

12 ವರ್ಷಗಳಿಂದ ಇದೇ ಪದ್ಧತಿ ಇದೆ. ಆದರೆ, ಹೊಲದ ಮಾಲೀಕರು ಇದೀಗ ತಕರಾರು ತೆಗೆದಿದ್ದರಿಂದ ಎಲ್ಲಿಯೂ ಜಾಗವಿಲ್ಲದಂತಾಗಿದೆ. ಸ್ಮಶಾನ ಭೂಮಿಗಾಗಿ ಆಗ್ರಹಿಸಿ ಹಲವಾರು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಕಚೇರಿ ಮುಂದೆಯೇ ಮೃತನ ಅಂತ್ಯಸಂಸ್ಕಾರ ನಡೆಸಲು ಕಟ್ಟಿಗೆ ಜೋಡಿಸಿದ್ದೇವೆ’ಎಂದು ಯಮನಪ್ಪ ಮಾದರ, ಚಂದ್ರಶೇಖರ ಮಾದರ ಹೇಳಿದರು.

ಗ್ರಾಮದ ಬಳಿ ಇರುವ ಅರಣ್ಯ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸುವಂತೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಂಗಾಧರ ಜೋಗಳದ ಮನವಿ ಮಾಡಿದರು. ಆದರೆ, ಇದಕ್ಕೊಪ್ಪದ ಪ್ರತಿಭಟನಾಕಾರರು ಶಾಶ್ವತ ಪರಿಹಾರಕ್ಕೆ ಪಟ್ಟು ಹಿಡಿದರು.

ಗ್ರಾಮಕ್ಕೆ ಭೇಟಿ ನೀಡಿದ ಉಪ ತಹಶೀಲ್ದಾರ್‌ ಎನ್‌.ಜಿ. ದೊಡಮನಿ, ಕಂದಾಯ ನಿರೀಕ್ಷಕ ಮಹಾಂತೇಶ ಅಂಗಡಿ ಅವರು, ಈ ಹಿಂದೆ ಸ್ಮಶಾನಕ್ಕೆ ಜಾಗ ನೀಡಿದ ಲಚ್ಚೆವ್ವ ಅವರನ್ನು  ಕರೆಯಿಸಿ, ಮನವೊಲಿಸಲು ಯತ್ನಿಸಿದರು. ಆದರೆ ಅವರು ಸಮ್ಮತಿಸಲಿಲ್ಲ.
ಪರಿಹಾರ ಕಾಣದ ಅಧಿಕಾರಿಗಳು, ಮಲಪ್ರಭಾ ನದಿ ದಂಡೆಯ ಮೇಲೆಯೇ ಅಂತ್ಯಕ್ರಿಯೆ ನಡೆಸುವಂತೆ ಸೂಚಿಸಿ ಮುಂದಿನ ತಿಂಗಳು ಜಾಗ ಗೊತ್ತು ಮಾಡುವುದಾಗಿ  ಲಿಖಿತ ಆಶ್ವಾಸನೆ ನೀಡಿದರು.ಆ ಬಳಿಕವಷ್ಟೇ ಪ್ರತಿಭಟನೆಯನ್ನು ಕೈಬಿಟ್ಟ ದಲಿತರು, ಮೃತನ ಅಂತ್ಯಕ್ರಿಯೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT